ಮಲೆ ಮಹದೇಶ್ವರ ಬೆಟ್ಟದ ಶಿವರಾತ್ರಿ ಜಾತ್ರೆಗೆ ಲಕ್ಷಾಂತರ ಭಕ್ತರು ಕಾಲ್ನಡಿಗೆಯಲ್ಲಿ ಸಾಗುತ್ತಿದ್ದಾರೆ. ಇತ್ತೀಚಿನ ಚಿರತೆ ದಾಳಿಯ ಹಿನ್ನೆಲೆ ಅರಣ್ಯ ಇಲಾಖೆ ಭಕ್ತರ ಸುರಕ್ಷತೆಗೆ ತಾಳುಬೆಟ್ಟದಿಂದ ಬೆಟ್ಟದವರೆಗೆ 8 ವಿಶೇಷ ಸಶಸ್ತ್ರ ತಂಡ ನಿಯೋಜಿಸಿ, ಡ್ರೋನ್ ಕ್ಯಾಮೆರಾಗಳ ಮೂಲಕ ಹೈಟೆಕ್ ಕಣ್ಗಾವಲು ಇರಿಸಿದೆ.

ಚಾಮರಾಜನಗರ (ಫೆ.6): ಚಾಮರಾಜನಗರ: ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಮಲೆ ಮಹದೇಶ್ವರ ಬೆಟ್ಟದಲ್ಲಿ ಶಿವರಾತ್ರಿ ಜಾತ್ರೆಯ ಸಂಭ್ರಮ ಮನೆಮಾಡಿದೆ. ಮಾದಪ್ಪನ ದರ್ಶನ ಪಡೆಯಲು ಬೆಂಗಳೂರು, ಮಂಡ್ಯ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಲಕ್ಷಾಂತರ ಭಕ್ತರು ಕಾಲ್ನಡಿಗೆಯ ಮೂಲಕ ಬೆಟ್ಟಕ್ಕೆ ಧಾವಿಸುತ್ತಿದ್ದಾರೆ. ಭಕ್ತರ ದಂಡು ಹೆಚ್ಚಾಗುತ್ತಿದ್ದಂತೆ, ಅರಣ್ಯ ಮಾರ್ಗದಲ್ಲಿ ಅವರ ಸುರಕ್ಷತೆಗಾಗಿ ಜಿಲ್ಲಾಡಳಿತ ಮತ್ತು ಅರಣ್ಯ ಇಲಾಖೆ ಸರ್ವಸನ್ನದ್ಧವಾಗಿದೆ.

ಚಿರತೆ ದಾಳಿ ಭೀತಿ: ಎಚ್ಚೆತ್ತುಕೊಂಡ ಅರಣ್ಯ ಇಲಾಖೆ

ಇತ್ತೀಚೆಗಷ್ಟೇ ಪಾದಯಾತ್ರೆ ಕೈಗೊಂಡಿದ್ದ ಭಕ್ತರೊಬ್ಬರು ಚಿರತೆ ದಾಳಿಗೆ ಬಲಿಯಾಗಿದ್ದ ಘಟನೆ ಇಡೀ ಜಿಲ್ಲೆಯನ್ನು ಬೆಚ್ಚಿಬೀಳಿಸಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತುಕೊಂಡಿರುವ ಮಲೆ ಮಹದೇಶ್ವರ ವನ್ಯಧಾಮದ ಅಧಿಕಾರಿಗಳು, ಈ ಬಾರಿ ಯಾವುದೇ ಅವಘಡ ಸಂಭವಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದಾರೆ. ಡಿ.ಸಿ.ಎಫ್ ಭಾಸ್ಕರ್ ಅವರು ಫೆಬ್ರವರಿ 7 ರಿಂದ 20 ರವರೆಗೆ ಭಕ್ತರ ಸುರಕ್ಷತೆಗಾಗಿ ವಿಶೇಷ ಆದೇಶ ಹೊರಡಿಸಿದ್ದಾರೆ.

ತಾಳುಬೆಟ್ಟ ಟು ಮಹದೇಶ್ವರ ಬೆಟ್ಟ: 8 ವಿಶೇಷ ತಂಡಗಳ ನಿಯೋಜನೆ

ಕಾಲ್ನಡಿಗೆ ಹಾದಿಯಲ್ಲಿ ವನ್ಯಮೃಗಗಳ ಹಾವಳಿ ತಡೆಯಲು ತಾಳುಬೆಟ್ಟದಿಂದ ಮಹದೇಶ್ವರ ಬೆಟ್ಟದವರೆಗೂ ಒಟ್ಟು 8 ವಿಶೇಷ ತಂಡಗಳನ್ನು ನಿಯೋಜಿಸಲಾಗಿದೆ. ತಾಳಬೆಟ್ಟದಲ್ಲಿ ಒಂದು ತಂಡವಿದ್ದರೆ, ಉಳಿದ 7 ತಂಡಗಳು ಪ್ರತಿ 1 ಕಿಲೋಮೀಟರ್‌ಗೆ ಒಂದರಂತೆ ಹದ್ದಿನ ಕಣ್ಣಿಡಲಿವೆ. ಪ್ರತಿ ತಂಡದಲ್ಲಿ ಡಿ.ಆರ್.ಎಫ್.ಒ, ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿ, ಪೊಲೀಸ್ ಮತ್ತು ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ಐವರು ಶಸ್ತ್ರಸಜ್ಜಿತವಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಹೈಟೆಕ್ ಕಣ್ಗಾವಲು ಮತ್ತು ಸುರಕ್ಷತಾ ಸಾಧನಗಳು

ವನ್ಯಜೀವಿಗಳ ಚಲನವಲನ ಪತ್ತೆಹಚ್ಚಲು ಡ್ರೋನ್ ಕ್ಯಾಮೆರಾಗಳನ್ನು ಬಳಸಲಾಗುತ್ತಿದ್ದು, ಚಿರತೆ ಕಾರ್ಯಪಡೆ (Leopard Task Force) ನಿರಂತರ ನಿಗಾ ವಹಿಸಿದೆ. ಗಸ್ತು ತಿರುಗಲು ಎರಡು ಹೆಚ್ಚುವರಿ ವಾಹನಗಳನ್ನು ನಿಯೋಜಿಸಲಾಗಿದೆ. ತಂಡದ ಸಿಬ್ಬಂದಿಗೆ 9 ವಾಕಿಟಾಕಿ, ಟಾರ್ಚ್‌ಗಳು, ಪಟಾಕಿ, ಮಚ್ಚು ಮತ್ತು ಗನ್ ಒದಗಿಸಲಾಗಿದ್ದು, ತುರ್ತು ಪರಿಸ್ಥಿತಿ ಎದುರಿಸಲು ಸಜ್ಜುಗೊಳಿಸಲಾಗಿದೆ. ಅರಣ್ಯ ಹಾದಿಯಲ್ಲಿ ವನ್ಯಜೀವಿಗಳ ಬಗ್ಗೆ ಎಚ್ಚರಿಕೆ ನೀಡುವ ನಾಮಫಲಕಗಳನ್ನು ಅಳವಡಿಸಲಾಗಿದೆ.