ಶಾಸಕ ಮುನಿರತ್ನಗೆ ಡಬಲ್ ಟ್ರಬಲ್: ಸರ್ಕಾರದ ಅನುದಾನವೂ ಇಲ್ಲ, ವಿದ್ಯಾ ಹಿರೇಮಠ್‌ಳಿಂದ ಮರ್ಯಾದೆಯೂ ಇಲ್ಲ
ಶಾಸಕ ಮುನಿರತ್ನ ಅವರಿಗೆ ಡಬಲ್ ಟ್ರಬಲ್ ಶುರುವಾಗಿದೆ. ಒಂದು ಕಡೆ ಸರ್ಕಾರದ ಅನುದಾನ ಬಿಡುಗಡೆ ಆಗದಿದ್ದರೆ, ಮತ್ತೊಂದೆಡೆ ಧಾರವಾಡ ಮಹಿಳೆ ಬಂದು ಮರ್ಯಾದೆ ತೆಗೆಯುತ್ತಿದ್ದಾರೆ.
ಬೆಂಗಳೂರು (ಅ.11): ಬೆಂಗಳೂರಿನ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಶಾಸಕ ಮುನಿರತ್ನ ಅವರು ತಮ್ಮ ಕ್ಷೇತ್ರದ ಅನುದಾನಕ್ಕಾಗಿ ಸರ್ಕಾರದ ವಿರುದ್ಧ ಪ್ರತಿಭಟನೆ ಮಾಡಿ, ಪರದಾಡುತ್ತಿದ್ದಾರೆ. ಆದರೆ, ಮತ್ತೊಂದೆಡೆ ಶಾಸಕ ಮುನಿರತ್ನ ತನ್ನೊಂದಿಗೆ ಹನಿಟ್ರ್ಯಾಪ್ ಮಾಡಿಸಿದ್ದಾನೆ, ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿದ್ದಾನೆ ಎಂದು ಆರೋಪಿಸಿ ವಿದ್ಯಾ ಹಿರೇಮಠ್ ಎಂಬ ವಿಧಾನಸೌಧ ಗಾಂಧಿ ಪ್ರತಿಮೆ ಎದುರು ಪ್ರತಿಭಟನೆ ಮಾಡುತ್ತಿದ್ದಾರೆ. ಒಟ್ಟಾರೆ ಶಾಸಕ ಮುನಿರತ್ನಗೆ ಅನುದಾನವೂ ಇಲ್ಲ, ಮರ್ಯಾದೆಯೂ ಹಾಳಾಗುತ್ತಿದೆ ಎಂದು ಡಬಲ್ ಟ್ರಬಲ್ ಶುರುವಾಗಿದೆ.
ಬೆಂಗಳೂರಿನ ವಿಧಾನಸೌಧ ಮುಂಭಾಗದ ಗಾಂಧಿ ಪ್ರತಿಮೆ ಮುಂಭಾಗದಲ್ಲಿ ಕುಳಿತು ಪ್ರತಿಭಟನೆ ಮಾಡುವ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 2021ರ ಅಕ್ಟೋಬರ್ 11ರಂದು ಅಂದು ಸಚಿವರಾಗಿದ್ದ ಮುನಿರತ್ನ ಅವರು ನನ್ನ ವಿರುದ್ಧ ಸುಳ್ಳು ಕೇಸ್ ದಾಖಲಿಸಿ ಜೈಲಿಗೆ ಕಳುಹಿಸಿದ್ದರು. ನಾನು ರಾಜಕಾರಣಿ ಆಗಿದ್ದು, ಕಾಂಗ್ರೆಸ್ ಪಕ್ಷದ ಕಾರ್ಯಕರ್ತೆಯಾಗಿದ್ದೇನೆ. ನಂಗೆ ಮುನಿರತ್ನ ಫೇಕ್ ಕೇಸ್ ಹಾಕಿ ಜೈಲಿಗೆ ಹಾಕಿದ್ರು. ನಂಗೆ ಮುನಿರತ್ನ ಅನ್ಯಾಯ ಮಾಡಿದ್ದಾರೆ. ಮುನಿರತ್ನ ಅವರಿಗೆ ಕ್ಷೇತ್ರದಲ್ಲಿ ಅನ್ಯಾಯ ಆಗಿದೆ. ಅದಕ್ಕೆ ಮುನಿರತ್ನಗೆ ನನ್ನ ಬೆಂಬಲ ಇದೆ. ಆದರೆ ಮುನಿರತ್ನ ನನಗೆ ಅನ್ಯಾಯ ಮಾಡಿದ್ದಾರೆ. ಏನು ಅನ್ಯಾಯ ಎನ್ನೋದನ್ನ ಹಾಗೆ ಹೇಳೊಕೆ ಆಗೋದಿಲ್ಲ, ಅದು ದೊಡ್ಡ ಪ್ರಕರಣವಿದೆ. ಹೀಗಾಗಿ ಮುನಿರತ್ನ ವಿರುದ್ಧ ನ್ಯಾಯ ಬೇಕು ಎಂದು ಹೋರಾಟ ಮಾಡುತ್ತಿದ್ದೇನೆ ಎಂದು ಮಹಿಳೆ ವಿದ್ಯಾ ಹಿರೇಮಠ ಆರೋಪಿಸಿದ್ದಾರೆ.
ರಾಜರಾಜೇಶ್ವರಿ ನಗರ ಕ್ಷೇತ್ರದ ಅನುದಾನಕ್ಕಾಗಿ ಡಿಸಿಎಂ ಡಿ.ಕೆ.ಶಿವಕುಮಾರ್ ಕಾಲಿಗೆ ಬಿದ್ದ ಶಾಸಕ ಮುನಿರತ್ನ
ವಿಧಾನಸೌಧ ಗಾಂಧಿ ಪ್ರತಿಮೆ ಮುಂಭಾಗದಿಂದ ತೆರವುಗೊಳಿಸಿದ ಪೊಲೀಸರು: ಇನ್ನು ಶಾಸಕ ಮುನಿರತ್ನ ವಿರುದ್ದವೇ ಪ್ರತಿಭಟನೆಗೆ ಬಂದಿದ್ದ ಮಹಿಳೆ ವಿದ್ಯಾ ಹಿರೇಮಠ್ ಅವರು ಗಾಂಧಿ ಪ್ರತಿಮೆ ಬಳಿ ಏಕಾಂಗಿಯಾಗಿ ಕುಳಿತ ಧರಣಿ ಮಾಡುತ್ತಿದ್ದರು. ಆದರೆ, ಇಲ್ಲಿ ಪ್ರತಿಭಟನೆ ಹಾಗೂ ಧರಣಿ ಮಾಡಲು ಅವಕಾಶವಿಲ್ಲ ಎಂದು ಮಹಿಳೆಯನ್ನು ಪೊಲೀಸರು ಎಬ್ಬಿಸಿ ಕಳುಹಿಸಿದ್ದಾರೆ. ಇಂದು ಬೆಳಗ್ಗೆ ಗಾಂಧಿ ಪ್ರತಿಮೆಗೆ ಪುಷ್ಪ ನಮನ ಮಾಡಿ, ಬಳಿಕ ಏಕಾಂಗಿಯಾಗಿ ಕುಳಿತಿದ್ದ ಮಹಿಳೆಯನ್ನು ಕೆಲ ಹೊತ್ತಿನ ನಂತರ, ಪೊಲೀಸರು ಅಲ್ಲಿಂದ ತೆರವುಗೊಳಿಸಿದ್ದಾರೆ. ಇಲ್ಲಿಂದ ತಾನೂ ಕೂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಳಿ ಹೋಗಿ ನ್ಯಾಯ ಕೊಡಿಸುವಂತೆ ಮನವಿ ಮಾಡುವುದಾಗಿ ಅಲ್ಲಿಂದ ತೆರಳಿದ್ದಾರೆ.