ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಶ್ತಾಕ್ ಅವರಿಂದ ದಸರಾ ಉದ್ಘಾಟನೆಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧ ವ್ಯಕ್ತಪಡಿಸಿದ್ದಾರೆ. 

ಬೆಂಗಳೂರು: ಬೂಕರ್ ಪ್ರಶಸ್ತಿ ವಿಜೇತೆ ಬಾನು ಮುಶ್ತಾಕ್ ಅವರಿಂದ ದಸರಾ ಉದ್ಘಾಟನೆ ಮಾಡೋದನ್ನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರೋಧಿಸಿದ್ದಾರೆ. ಈ ಬಗ್ಗೆ ಎಕ್ಸ್ ಖಾತೆಯಲ್ಲಿ ತಮ್ಮ ಅಭಿಪ್ರಾಯವನ್ನು ಶಾಸಕ ಯತ್ನಾಳ್ ಹಂಚಿಕೊಂಡಿದ್ದಾರೆ. ಬಾನು ಮುಶ್ತಾಕ್‌ ಅವರನ್ನು ನಾನು ಗೌರವಿಸುತ್ತೇನೆ. ಇಸ್ಲಾಂ ಧರ್ಮಗಳನ್ನು ನಂಬಿರುವ ವ್ಯಕ್ತಿಯಾಗಿರುವ ಕಾರಣ ದಸರಾ ಉದ್ಘಾಟಿಸೋದು ಸರಿಯಲ್ಲ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.

ಬಸನಗೌಡ ಪಾಟೀಲ್ ಯತ್ನಾಳ್ ಪೋಸ್ಟ್

ನಾನು ವೈಯಕ್ತಿಕವಾಗಿ ಶ್ರೀಮತಿ ಬಾನು ಮುಶ್ತಾಕ್ ಅವರನ್ನು ಲೇಖಕಿ ಹಾಗೂ ಹೋರಾಟಗಾರ್ತಿಯಾಗಿ ಗೌರವಿಸುತ್ತೇನೆ. ಆದರೆ, ನಾಡದೇವತೆ ಚಾಮುಂಡೇಶ್ವರಿ ದೇವಿಗೆ ಪುಷ್ಪಾರ್ಚನೆ ಸಲ್ಲಿಸಿ ದೀಪ ಬೆಳಗುವುದರ ಮೂಲಕ ದಸರಾವನ್ನು ಉದ್ಘಾಟಿಸುವುದು, ಅವರ ಸ್ವಂತ ಧಾರ್ಮಿಕ ನಂಬಿಕೆಗಳಿಗೆ ವಿರುದ್ಧವಾಗಿದೆ. ಇಸ್ಲಾಂ ಮೂರ್ತಿ ಪೂಜೆಯನ್ನು ಧಿಕ್ಕರಿಸಿ ಒಂದು ದೇವರು ಹಾಗೂ ಒಂದು ಗ್ರಂಥವನ್ನೇ ಒಪ್ಪಿಕೊಳ್ಳುತ್ತದೆ ಎಂಬ ನಂಬಿಕೆಯಲ್ಲಿ ಅವರು ಇನ್ನೂ ಇದ್ದಾರೆಯೇ, ಅಥವಾ ಎಲ್ಲಾ ಮಾರ್ಗಗಳೂ ಅಂತಿಮವಾಗಿ ಒಂದೇ ಮೋಕ್ಷಕ್ಕೆ ದಾರಿ ಮಾಡಿಕೊಡುತ್ತವೆ ಎಂದು ಅವರು ನಂಬುತ್ತಾರೆಯೇ ಎಂಬುದರ ಬಗ್ಗೆ ಶ್ರೀಮತಿ ಭಾನು ಮುಶ್ತಾಕ್ ಅವರು ಸ್ಪಷ್ಟನೆ ನೀಡುವುದು ಅಗತ್ಯ.

ಈ ಸ್ಪಷ್ಟತೆ ಇಲ್ಲದೆ, ದಸರಾ ಉದ್ಘಾಟಿಸುವುದು ಸರಿಯಲ್ಲ. ಆದರೆ, ದಸರಾ ಉತ್ಸವದ ಅಂಗವಾಗಿ ನಡೆಯುವ ಸಾಂಸ್ಕೃತಿಕ ಅಥವಾ ಕವಿಗೋಷ್ಠಿಯಂತಹ ಸಾಹಿತ್ಯ ಕಾರ್ಯಕ್ರಮಗಳನ್ನು ಉದ್ಘಾಟಿಸುವ ಅತಿಥಿಯಾಗಿ ಅವರು ಭಾಗವಹಿಸುವುದು ತಕ್ಕದ್ದಾಗಿದೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಯತ್ನಾಳ್ ಪೋಸ್ಟ್‌ಗೆ ನೆಟ್ಟಿಗರು ಹೇಳಿದ್ದೇನು?

ಇಸ್ಲಾಂ ಧರ್ಮದವರು ನಾಡದೇವತೆಯನ್ನು ಪೂಜಿಸಬಾರದು ಎಂದು ಏನಾದರು ಕಾನೂನು ಇದೆಯೇ ಗೌಡರೇ ಎಂದು ಕೃಷ್ಣ ಎಂಬವರು ಪ್ರಶ್ನೆ ಮಾಡಿದ್ದಾರೆ. ನಿಮ್ಮ ಪರ ವಿರೋಧ ನಿಮ್ಮ ವೈಯಕ್ತಿಕ ಅಷ್ಟೇ. ಪ್ರತಿದಿನ ನಾಡಿನ ಎಲ್ಲರ ಪ್ರತಿನಿಧಿ ಆಗಿರಬೇಕಾದ ನೀವು ಒಂದು ಸಮುದಾಯವನ್ನು ಗುರಿಯಾಗಿಸಿ ದಾಳಿ ಮಾಡುತ್ತಲೇ ಕೋಮುವ್ಯಾಧಿ ತಲೆಗೆ ಹಟ್ಟಿಸಿಕೊಂಡಿದ್ದೀರಿ. ಮೈಸೂರು ದಸರಾ ಸರ್ಕಾರದ ದುಡ್ಡಲ್ಲಿ ಸರ್ಕಾರವೇ ಆಯೋಜನೆ ಮಾಡುವ ಪರಂಪರೆಯ ಸಾಂಸ್ಕೃತಿಕ ಕಾರ್ಯಕ್ರಮ. ಪೂಜೆ ಬೆಟ್ಟದ ಗುಡಿಯಲ್ಲಿ ನಡೆಯೋದು ಎಂದು ಕೃಶಿಕ್ ಎಂಬವರು ಕಮೆಂಟ್ ಮಾಡಿದ್ದಾರೆ.

Scroll to load tweet…

ನೀವು ಇವಾಗ ದಸರಾ ಉದ್ಘಾಟನೆ ಬಗ್ಗೆ ಮಾತಾಡೋರು ನೀವು ಲಿಂಗಾಯತ ಸಮುದಾಯಕ್ಕೆ ಸೇರಿದವರಗಿದ್ದು ಅನಾದಿ ಕಾಲದಿಂದ ಚಾಮುಂಡೇಶ್ವರಿ ದೇವಿ ಪೂಜೆ ಮಾಡುತ್ತಿದ್ದ ಲಿಂಗಾಯತ ಸಮುದಾಯದಿಂದ ಕಿತ್ತು ಬ್ರಾಹ್ಮಣ ಸಮುದಾಯಕ್ಕೆ ನೀಡಿದ್ದು ಯಾಕೆ? ಮತ್ತೆ ಅಲ್ಲಿಂದ ಸಂಪ್ರದಾಯ ಆಚರಣೆ ಬದಲಾಗಲಿಲ್ಲವಾ? ಮತ್ತೆ ನಮ್ಮ ಸಮುದಾಯಕ್ಕೆ ಪೂಜಾ ಅವಕಾಶ ಕೊಡಲಿ ಅದರ ಬಗ್ಗೆ ಎಂದು ಮತ್ತೊಬ್ರು ಕಮೆಂಟ್ ಹಾಕಿದ್ದಾರೆ. ಪ್ರಜಾಪ್ರತಿನಿಧಿಯ ಕರ್ತವ್ಯ ಜನರ ಹಕ್ಕುಗಳನ್ನು ಕಾಪಾಡುವುದು, ಧರ್ಮದ ಪೊಲೀಸರು ಆಗುವುದು ಅಲ್ಲ. ಭಾನು ಮುಷ್ತಾಕ್ ಮ್ಯಾಡಮ್ ಅವರು ಸಾಹಿತ್ಯ ಕ್ಷೇತ್ರದ ಅಂತರಾಷ್ಟ್ರೀಯ ಬುಕರ್ ಪ್ರಶಸ್ತಿ ವಿಜೇತೆಯರು. ಅವರನ್ನು ಅವಮಾನಿಸಿ “ನೀವು ಯಾವ ಧರ್ಮದವರು” ಎಂದು ಪ್ರಶ್ನಿಸುವುದು ನಮ್ಮ ಸಂವಿಧಾನಕ್ಕೆ ನೇರ ಧಿಕ್ಕಾರ ಎಂದು ಮಂಜುನಾಥ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.