ಮುಸ್ಲಿಂ ಯುವತಿಯರನ್ನು ಮದುವೆಯಾದ ಹಿಂದೂ ಯುವಕರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡುವ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಆಲಮೇಲದಲ್ಲಿ ಮುಸ್ಲಿಂ ಯುವಕರು ಪ್ರತಿಭಟನೆ ನಡೆಸಿದ್ದಾರೆ. ಕಪ್ಪು ಬಾವುಟ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ವಿಜಯಪುರ (ಆ.17): ಮುಸ್ಲಿಂ ಯುವತಿಯರನ್ನು ಮದುವೆಯಾದ ಹಿಂದೂ ಯುವಕರಿಗೆ ₹5 ಲಕ್ಷ ಪ್ರೋತ್ಸಾಹಧನ ನೀಡುವುದಾಗಿ ಹೇಳಿಕೆ ನೀಡಿದ್ದ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್‌ (Basangouda Patil Yatnal) ಅವರಿಗೆ ವಿಜಯಪುರ ಜಿಲ್ಲೆಯ ಆಲಮೇಲ ಪಟ್ಟಣದಲ್ಲಿ ಮುಸ್ಲಿಂ ಯುವಕರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಕಪ್ಪು ಬಟ್ಟೆ ಪ್ರದರ್ಶಿಸುವ ಮೂಲಕ ಪ್ರತಿಭಟನೆ ನಡೆಸಿದ ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಇದರಿಂದಾಗಿ ಸ್ಥಳದಲ್ಲಿ ಕೆಲ ಕಾಲ ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು. ಅಲ್ಲದೆ, ಶಾಸಕರ ಹೇಳಿಕೆ ವಿರುದ್ಧ ಕಲಬುರಗಿ ನಗರದ ರೋಜಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ಕೂಡ ದಾಖಲಾಗಿದೆ.

ಆಲಮೇಲದಲ್ಲಿ ಪ್ರತಿಭಟನೆ ಮತ್ತು ಆಕ್ರೋಶ:

ಅಲಮೇಲದಲ್ಲಿ ಆಯೋಜನೆ ಮಾಡಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಲಮೇಲ ಪಟ್ಟಣಕ್ಕೆ ಆಗಮಿಸಿದ್ದ ಶಾಸಕ ಯತ್ನಾಳ್ ಅವರ ವಾಹನ ರ್ಯಾಲಿ ಸಾಗುತ್ತಿದ್ದಾಗ, ಬೈಕ್‌ನಲ್ಲಿ ಬಂದ ಮುಸ್ಲಿಂ ಯುವಕರು ವಾಹನದ ಎದುರು ಕಪ್ಪು ಬಟ್ಟೆ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಪ್ರತಿಭಟನಾ ನಿರತ ಯುವಕರನ್ನು ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದರು.

ಇದರಿಂದ ಆಕ್ರೋಶಗೊಂಡ ಯುವಕರ ಕುಟುಂಬದ ಮಹಿಳೆಯರು ಮತ್ತು ಇತರ ಮುಸ್ಲಿಂ ಸಮುದಾಯದ ಸದಸ್ಯರು ಪೊಲೀಸ್ ಠಾಣೆ ಬಳಿ ಜಮಾಯಿಸಿದರು. ಪೊಲೀಸರ ನಡೆ ಖಂಡಿಸಿದ ಮಹಿಳೆಯರು, ಯತ್ನಾಳ್ ಅವರನ್ನು ಭೇಟಿಯಾಗಿ ಮನವಿ ಸಲ್ಲಿಸಲು ಬಂದಿದ್ದರೂ ಅವಕಾಶ ನೀಡಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 'ಬೇಕಿದ್ದರೆ ದೂರು ನೀಡಿ, ಅದನ್ನು ದಾಖಲಿಸಿಕೊಳ್ಳುತ್ತೇನೆ. ಆದರೆ ಗಲಾಟೆ ಮಾಡಿದರೆ ಸುಮ್ಮನಿರಲ್ಲ' ಎಂದು ಪಿಎಸ್‌ಐ ತಿಳಿಸಿದ ಬಳಿಕ ಪರಿಸ್ಥಿತಿ ತಿಳಿಯಾಯಿತು.

ಯತ್ನಾಳ್ ಹೇಳಿಕೆ ಮತ್ತು ಎಫ್‌ಐಆರ್‌:

ಕಳೆದ ಭಾನುವಾರ (ಆ. 10) ಕೊಪ್ಪಳದಲ್ಲಿ ಮುಸ್ಲಿಂ ಯುವಕರಿಂದ ಕೊಲೆಯಾಗಿದ್ದ ಗವಿಸಿದ್ದಪ್ಪ ಅವರ ಮನೆಗೆ ಭೇಟಿ ನೀಡಿದ್ದ ಶಾಸಕ ಯತ್ನಾಳ್, 'ಹಿಂದೂ ಯುವಕರು ಮುಸ್ಲಿಂ ಯುವತಿಯರನ್ನು ಮದುವೆಯಾದರೆ ₹5 ಲಕ್ಷ ಪ್ರೋತ್ಸಾಹಧನ ನೀಡುತ್ತೇವೆ. ಈ ಕುರಿತು ಅಭಿಯಾನ ಆರಂಭಿಸುತ್ತೇವೆ' ಎಂದು ಘೋಷಿಸಿದ್ದರು. ಈ ಸಂದರ್ಭದಲ್ಲಿ ಯಾರೊಬ್ಬರೂ ಕೊಲೆ ತಡೆಯುವ ಕೆಲಸ ಯಾಕೆ ಮಾಡಲಿಲ್ಲ? ರಿಲ್ಸ್‌ನಲ್ಲಿ ಮಚ್ಚು ತೋರಿಸಿದ ಕೊಲೆಗಾರರನ್ನು ಬಂಧಿಸಿದ್ದಾರೆ. ಹಿಂದೂಗಳಿಗೆ ಪ್ರಸ್ತುತ ಸರ್ಕಾರದಲ್ಲಿ ರಕ್ಷಣೆ ಇಲ್ಲ ಎಂದು ಆರೋಪಿಸಿದ್ದ ಅವರು, ಕೊಲೆಗೆ ಕಾರಣವಾದ ಮುಸ್ಲಿಂ ಯುವತಿಯನ್ನು ಬಂಧಿಸಬೇಕೆಂದು ಒತ್ತಾಯಿಸಿದ್ದರು.

ರಾಜ್ಯದಲ್ಲಿ ಮುಸ್ಲಿಂ ಯುವಕರು ಹಿಂದೂ ಯುವತಿಯರನ್ನು ಪ್ರೀತಿ ಹೆಸರಲ್ಲಿ ತಮ್ಮ ಧರ್ಮಕ್ಕೆ ಮತಾಂತರ ಮಾಡಿಕೊಳ್ಳುವ ಲವ್ ಜಿಹಾದ್ (Love Jihad) ಮಾಡಿದಾಗ ಸರ್ಕಾರವೇ ಅಲ್ಪಸಂಖ್ಯಾತರಿಗೆ ರಕ್ಷಣೆ ನೀಡುತ್ತದೆ. ಅಂದರೆ ಇಲ್ಲಿ ಮುಸ್ಲಿಂರಿಗೆ ಮಾತ್ರ ರಕ್ಷಣೆ ಕೊಡಲಾಗುತ್ತದೆ. ಹಿಂದೂಗಳು ಮುಸ್ಲಿಂ ಹುಡುಗಿಯರನ್ನು ಲವ್ ಮಾಡಿದರೆ ರಕ್ಷಣೆ ಸಿಗುವುದಿಲ್ಲ. ಮುಸ್ಲಿಂ ಹುಡುಗಿ ಲವ್ ಮಾಡಿದ ಗವಿಸಿದ್ದಪ್ಪನನ್ನು, ಯುವತಿ ಸಹೋದರರು ಕೊಲೆ ಮಾಡಿದ್ದಾರೆ. ಇನ್ನು ಜಿಲ್ಲಾ ಉಸ್ತುವಾರಿ ಸಚಿವರು ಕೇವಲ ಸಾಂತ್ವಾನ ಹೇಳಿದರೆ ಸಾಲದು, ಕುಟುಂಬದ ನೆರವಿಗೆ ಬರಬೇಕು. ಈ ಕಾಂಗ್ರೆಸ್ ಸರ್ಕಾರದಲ್ಲಿ ಹಿಂದುಗಳಿಗೆ ರಕ್ಷಣೆ ಇಲ್ಲ ಎಂದು ಬಸನಗೌಡ ಪಾಟೀಲ್ ಯುತ್ನಾಳ್ ಕಿಡಿಕಾರಿದ್ದರು.

ಕಲಬುರಗಿಯಲ್ಲಿ ಎಫ್‌ಐಆರ್:

ಶಾಸಕರ ಈ ಹೇಳಿಕೆ ವಿವಾದಕ್ಕೆ ಕಾರಣವಾಗಿದ್ದು, ಇದೀಗ ಕಲಬುರಗಿಯಲ್ಲಿ 'ಖಿದ್ಮತ್ ಎ ಮಿಲ್ಲತ್ ಕಮಿಟಿ' ಅಧ್ಯಕ್ಷ ಜುನೈದ್ ಖುರೇಶಿ ಅವರು ರೋಜಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 'ಯತ್ನಾಳ್ ಅವರ ಹೇಳಿಕೆ ಸಮಾಜದಲ್ಲಿ ದ್ವೇಷ ಬಿತ್ತಿ, ಶಾಂತಿ ಕದಡುವಂತಿದೆ' ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಕಲಂ 196, 299, 353(1)(c), 353(2) ಬಿಎನ್‌ಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.