ವಕ್ಫ್ ಹೆಸರಿಗೆ ಮಠ-ಮಂದಿರ, ರೈತರ ಭೂಮಿ ನೋಂದಣಿಗೆ 6 ತಿಂಗಳ ಹಿಂದೆಯೇ ಆದೇಶ; ಸಾಕ್ಷಿ ತೆರೆದಿಟ್ಟ ಶಾಸಕ ಬೆಲ್ಲದ್!
ರಾಜ್ಯ ಸರ್ಕಾರ ರೈತರು, ಮಠ-ಮಂದಿರಗಳ ಭೂಮಿಯನ್ನು ವಕ್ಫ್ ಆಸ್ತಿಯೆಂದು ನೋಂದಣಿ ಮಾಡಲು ಆದೇಶ ಹೊರಡಿಸಿದೆ ಎಂದು ಶಾಸಕ ಅರವಿಂದ ಬೆಲ್ಲದ್ ಸಾಕ್ಷಿಯನ್ನು ತೋರಿಸಿದ್ದಾರೆ.
ಬೆಂಗಳೂರು (ಅ.05): ಕಳೆದೊಂದು ತಿಂಗಳಿಂದ ರಾಜ್ಯದ ಹಲವು ಜಿಲ್ಲೆಗಳಲ್ಲಿ ರೈತರು, ಮಠ-ಮಂದಿರಗಳು, ದೇವಸ್ಥಾನಗಳು, ಹಿಂದೂ ರುದ್ರಭೂಮಿಗಳ ಭೂಮಿಯನ್ನು ವಕ್ಫ್ ಆಸ್ತಿಯೆಂದು ಆರ್‌ಟಿಸಿಯಲ್ಲಿ ಹೆಸರು ಬದಲಾವಣೆ ಮಾಡಲು ನೊಟೀಸ್ ನೀಡಲಾಗಿದೆ. ಇದರ ಬೆನ್ನಲ್ಲಿಯೇ ರಾಜ್ಯ ಸರ್ಕಾರದಿಂದ ಕಳೆದ 6 ತಿಂಗಳ ಹಿಂದೆಯೇ ರೈತರು, ಮಠ-ಮಂದಿರಗಳ ಆಸ್ತಿಯನ್ನು ವಕ್ಫ್ ಹೆಸರಿಗೆ ನೋಂದಣಿ ಮಾಡಲು ಆದೇಶ ಹೊರಡಿಸಲಾಗಿದ್ದು, ಶಾಸಕ ಅರವಿಂದ ಬೆಲ್ಲದ್ ಸರ್ಕಾರದ ಆದೇಶ ಪತ್ರವನ್ನು ಪ್ರದರ್ಶನ ಮಾಡಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ (ಹಳೆಯ ಟ್ವಿಟರ್) ಖಾತೆಯಲ್ಲಿ ಹಂಚಿಕೊಂಡಿರುವ ಹುಬ್ಬಳ್ಳಿ-ಧಾರವಾಡ (ಪಶ್ಚಿಮ) ಕ್ಷೇತ್ರದ ಶಾಸಕ ಅರವಿಂದ ಬೆಲ್ಲದ್ ಅವರು, ರೈತರ ಹಾಗೂ ಮಠ-ಮಂದಿರಗಳ ಭೂಮಿಯನ್ನು ವಕ್ಫ್ ಮಡಿಲಿಗೆ ಹಾಕಲು, ರಾಜ್ಯ ಕಾಂಗ್ರೆಸ್ ಸರ್ಕಾರವು 6 ತಿಂಗಳ ಹಿಂದೆಯೇ ವ್ಯವಸ್ಥಿತ ಪಿತೂರಿ ಹೂಡಿ, ಅಧಿಕಾರಿಗಳ ಮೇಲೆ ಒತ್ತಡ ಹೇರಿತ್ತು ಎಂಬುದಕ್ಕೆ ಈ ಪತ್ರವೇ ಸಾಕ್ಷಿ..!! ಎಂದು ಪತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಅಬಕಾರಿ ಇಲಾಖೆ ಭ್ರಷ್ಟಾಚಾರದ ಮೂಲ ಪುರುಷ ಸಚಿವ ತಿಮ್ಮಾಪುರ್; ಅಧ್ಯಕ್ಷ ಗುರುಸ್ವಾಮಿ!
ಮುಂದುವರೆದು, 'ಕಾಂಗ್ರೆಸ್ ಪಕ್ಷದ ಈ ಹಿಂದೂ ವಿರೋಧಿ ನಡೆಯ ವಿರುದ್ಧ ರಾಜ್ಯಾದ್ಯಂತ ಅನ್ನದಾತರ ಆಕ್ರೋಶ ಭುಗಿಲೆದ್ದ ನಂತರ, ನೋಟಿಸ್ ನೀಡಿದ್ದನ್ನು ಅಧಿಕಾರಿಗಳ ಬೆನ್ನಿಗೆ ಕಟ್ಟಿ ಮತ್ತು ರೈತರ ಜಮೀನಿನ ಪಹಣಿಗಳಲ್ಲಿ ವಕ್ಫ್ ಮಂಡಳಿ ಹೆಸರು ನಮೂದಾಗಿದ್ದು ಕಣ್ತಪ್ಪಿನಿಂದ ಎಂದು ಹೇಳುತ್ತಿದ್ದ ರಾಜ್ಯ ಸರ್ಕಾರದ ಕುತಂತ್ರ ಈಗ ಬಯಲಾಗಿದೆ! ಅಲ್ಲದೇ, ಈ ಪತ್ರದಲ್ಲಿ ಖಬರಸ್ತಾನ್‌ಗೆ ಸರ್ಕಾರಿ ಜಮೀನು ನೀಡಬೇಕು, ಸರ್ಕಾರಿ ಜಮೀನು ಇಲ್ಲದಿದ್ದರೆ ಖಾಸಗಿ ಜಮೀನು ಖರಿದೀಸಿ ಕೊಡಬೇಕು ಎಂದು ಆದೇಶಿಸಲಾಗಿರುವುದೇಕೆ!?
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ವಕ್ಫ್ ಬಳಿ ಲಕ್ಷಾಂತರ ಎಕರೆ ಜಮೀನಿದ್ದರೂ, ಖಬರಸ್ತಾನಕ್ಕೆ ಸರ್ಕಾರಿ ಜಮೀನು & ಖರೀದಿಗೆ ಜನರ ತೆರಿಗೆ ಹಣವೇ ಬೇಕಾ? ಇನ್ನಾದರೂ ಕಾಂಗ್ರೆಸ್ ತನ್ನ ಓಲೈಕೆ ರಾಜಕಾರಣ ನಿಲ್ಲಿಸದಿದ್ದರೆ, ರಾಜ್ಯದ ಜನರೇ ಈ ರೈತ ವಿರೋಧಿ, ಹಿಂದೂ ವಿರೋಧಿ ಸರ್ಕಾರವನ್ನು ಕಿತ್ತೆಸೆಯುವ ದಿನಗಳು ದೂರವಿಲ್ಲ! ಎಂದು ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಮತ್ತೊಬ್ಬ ಸರ್ಕಾರಿ ನೌಕರ ಆತ್ಮಹತ್ಯೆ: ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಪ್ತನ ಹೆಸರು ಬಹಿರಂಗ