ಬೆಳಗಾವಿಯಲ್ಲಿ ಸಾಲ ವಾಪಸ್ ಕೊಡದ ಕಾರಣಕ್ಕೆ ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಮದುವೆ ಮಾಡಿಕೊಂಡ ಘಟನೆ ನಡೆದಿದೆ. ಬಾಲಕಿಯ ದೂರಿನ ಮೇರೆಗೆ ಆರೋಪಿಗಳ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ.

ಬೆಳಗಾವಿ (ಜ.18): ಕೊಟ್ಟ ಸಾಲ ವಾಪಸ್ ಕೊಡಲಿಲ್ಲವೆಂದು ಅಪ್ರಾಪ್ತ ಬಾಲಕಿಯನ್ನೇ ಬಲವಂತವಾಗಿ ಮದುವೆ ಮಾಡಿಕೊಂಡ ಘಟನೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆಯ ತವರು ಕ್ಷೇತ್ರ ಬೆಳಗಾವಿ ಜಿಲ್ಲೆಯ ಸವದತ್ತಿಯ ಗ್ರಾಮವೊಂದರಲ್ಲಿ ನಡೆದಿದೆ.

ಘಟನೆ ಬಗ್ಗೆ ಸಂತ್ರಸ್ತ ಬಾಲಕಿ ದೂರು ನೀಡಿದ ಹಿನ್ನೆಲೆ ಆರೋಪಿ ವಿಶಾಲ್ ಡವಳಿ, ಯುವಕನ ತಾಯಿ ರೇಖಾ ಡವಳಿ, ತಂದೆ ಪುಂಡಳಿಕ ಡವಳಿ, ಸಹೋದರ ಶ್ಯಾಮ ಡವಳಿ ವಿರುದ್ಧ ಪೋಕ್ಸೊ ಕಾಯ್ದೆಯಡಿ ಟಿಳಕವಾಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲು ಮಾಡಲಾಗಿದೆ.

ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಗ್ರಾಮವೊಂದರ ನಿವಾಸಿಯಾಗಿರುವ ಸಂತ್ರಸ್ತೆ. ಬಾಲಕಿಯ ಕುಟುಂಬಸ್ಥರು ಬಡವರಾಗಿದ್ದು, ಚಿಕ್ಕಪ್ಪ ಹಾಗೂ ತಾಯಿ ಬೆಳಗಾವಿಯ ಅನಗೋಳದಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದಾರೆ. ಇತ್ತೀಚೆಗೆ ಬಾಲಕಿ ಅನಾರೋಗ್ಯ ಜೊತೆಗೆ ಬಾಲಕಿಯ ಅತ್ತಿಗೆಗೆ ಹೆರಿಗೆ ಚಿಕಿತ್ಸೆಗೆ ಹಣವಿಲ್ಲದ್ದರಿಂದ ಕೈಗಡ ಸಾಲ ಮಾಡಿದ್ದ ಕುಟುಂಬ. ಆರೋಪಿ ವಿಶಾಲ್ ಡವಳಿ ಕುಟುಂಬಸ್ಥರ ಬಳಿ ಕಿವಿ ಒಲೆ ಒತ್ತೆಯಿಟ್ಟು ಬಾಲಕಿಯ ತಾಯಿ 50 ಸಾವಿರ ರೂಪಾಯಿ ಸಾಲ ಪಡೆದಿದ್ದರು. 

ಇದನ್ನೂ ಓದಿ: ಸಂಕ್ರಾಂತಿ ಹಬ್ಬಕ್ಕೆ ಗಂಡ ಒಡವೆ ಕೊಡಿಸದ್ದಕ್ಕೆ ಮನನೊಂದು ಜೀವ ಕಳ್ಕೊಂಡ ಪತ್ನಿ!

ಈ ಹಣ ಮರುಪಾವತಿ ಮಾಡಲು ವಿಳಂಬವಾಗಿದ್ದಕ್ಕೆ ತಗಾದೆ ತೆಗೆದಿದ್ದ ವಿಶಾಲ್ ಕುಟುಂಬಸ್ಥರು. ಹಣ ಕೊಡಲು ಆಗದಿದ್ದರೆ ಮಗಳನ್ನ ಮದುವೆ ಮಾಡಿಕೊಡುವಂತೆ ಪಟ್ಟು ಹಿಡಿದಿದ್ದರು. ಇದಕ್ಕೆ ಸಂತ್ರಸ್ತೆ ಬಾಲಕಿಯ ಕುಟುಂಬಸ್ಥರು ಒಪ್ಪದಿದ್ದರೂ 2024ರ ಸೆಪ್ಟೆಂಬರ್ 18ರಂದು ವಿಶಾಲ್ ಢವಳಿ ಕುಟುಂಬಸ್ಥರು ಬಾಲಕಿ ಮತ್ತು ತಾಯಿಯನ್ನು ಆಟೋದಲ್ಲಿ ಬಲವಂತವಾಗಿ ಮನೆಗೆ ಕರೆದುಕೊಂಡು ಹೋಗಿದ್ದಾರೆ. ಬಳಿಕ ಮಾರನೇ ದಿನ ಸೆ.19ರಂದು ಬೆಳಗ್ಗೆ ಅಪ್ರಾಪ್ತ ಬಾಲಕಿಯ ಜೊತೆಗೆ ವಿಶಾಲ್ ಮದುವೆ ಮಾಡಿಸಿದ್ದಾರೆ ಎಂದು ಸಂತ್ರಸ್ತ ಬಾಲಕಿ ಆರೋಪಿಸಿದ್ದಾಳೆ.

ಇದನ್ನೂ ಓದಿ: ದಪ್ಪ ಇರೋದಕ್ಕೆ ಮದುವೆಯಾಗಲೊಪ್ಪದ ಯುವತಿಯರು, ಮನನೊಂದು ಜೀವ ಕಳೆದುಕೊಂಡ ಯುವಕ!

ಮದುವೆ ಬಳಿಕ ಅಪ್ರಾಪ್ತ ಬಾಲಕಿಗೆ ನಿರಂತರವಾಗಿ ಲೈಂಗಿಕ ಕಿರುಕುಳ ನೀಡಿರುವ ಆರೋಪಿ ವಿಶಾಲ್, ಬಲವಂತವಾಗಿ ದೈಹಿಕ ಸಂಪರ್ಕ ಮಾಡಿದ್ದಾನೆ ಎಂದು ದೂರಿನಲ್ಲಿ ಬಾಲಕಿ ಉಲ್ಲೇಖಿಸಿದ್ದಾಳೆ. ಸದ್ಯ ಪ್ರಕರಣ ಸಂಬಂಧ ಎಫ್‌ಐಆರ್ ದಾಖಲಿಸಿಕೊಂಡಿರುವ ಟಿಳಕವಾಡಿ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.