ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸಲಿಲ್ಲವೆಂಬ ಕಾರಣಕ್ಕೆ ಗೃಹಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಯೊಂದಿಗೆ ಗಲಾಟೆ ನಡೆದ ಬಳಿಕ ಈ ಘಟನೆ ನಡೆದಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಬೆಂಗಳೂರು (ಜ.17): ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸಲಿಲ್ಲವೆಂಬ ಕ್ಷುಲ್ಲಕ ಕಾರಣ ಗೃಹಿಣಿಯೋರ್ವಳ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಬೊಮ್ಮನಹಳ್ಳಿಯ ಗಾರೇಪಾಳ್ಯದಲ್ಲಿ ನಡೆದಿದೆ.

ಅಕ್ಷತಾ(24), ಮೃತ ದುರ್ದೈವಿ. ಮೂಲತಃ ಉತ್ತರ ಪ್ರದೇಶದವರಾದ ಅಕ್ಷತಾ-ಧೀರಜ್ ದಂಪತಿ ಒಂದೂವರೆ ವರ್ಷದ ಹಿಂದೆಯಷ್ಟೇ ವಿವಾಹವಾಗಿದ್ದರು. ಮದುವೆ ಬಳಿಕ ಬೊಮ್ಮನಹಳ್ಳಿಯ ಗಾರೇಪಾಳ್ಯದಲ್ಲಿ ವಾಸವಾಗಿದ್ದರು. ಮೃತ ಮಹಿಳೆಯ ಪತಿ ಪಾನಿಪೂರಿ ಮಾರಾಟ ಜೀವನ ಸಾಗಿಸುತ್ತಿದ್ದ. ಸಂಕ್ರಾಂತಿ ಹಬ್ಬಕ್ಕೆ ಒಡವೆ ಕೊಡಿಸುವಂತೆ ಕೇಳಿದ್ದ ಪತ್ನಿ. ಆದರೆ ಒಡವೆಗೆ ಹಣ ಇಲ್ಲವೆಂದು ನಿರಾಕರಿಸಿದ್ದ ಪತಿ. ಅಷ್ಟಕ್ಕೆ ಸುಮ್ಮನಾಗದ ಅಕ್ಷತಾ. ಪದೇಪದೆ ಗಂಡನೊಂದಿಗೆ ಈ ವಿಚಾರವಾಗಿ ಕೇಳಿದ್ದಾಳೆ. ಇದರಿಂದ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಗಲಾಟೆಯಾಗಿದೆ.

ಇದನ್ನೂ ಓದಿ: ದಪ್ಪ ಇರೋದಕ್ಕೆ ಮದುವೆಯಾಗಲೊಪ್ಪದ ಯುವತಿಯರು, ಮನನೊಂದು ಜೀವ ಕಳೆದುಕೊಂಡ ಯುವಕ!

ಪತ್ನಿಯ ಒಡವೆ ಆಸೆಗೆ ಬೇಸತ್ತಿದ್ದ ಪತಿ. ಪ್ರತಿದಿನ ಒಡವೆ ವಿಚಾರವಾಗಿ ಜಗಳ ಹಿನ್ನೆಲೆ ಕುಡಿದು ಬಂದು ಪತ್ನಿಗೆ ಹಿಗ್ಗಾಮುಗ್ಗಾ ಹೊಡೆದಿದ್ದಾನೆ. ಇದರಿಂದ ಮನನೊಂದು ಅಕ್ಷತಾ ಫ್ಯಾನ್‌ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸದ್ಯ ಘಟನೆ ಸಂಬಂಧ ಯುಡಿಆರ್ ಪ್ರಕರಣ ದಾಖಲಿಸಿರುವ ಬೊಮ್ಮನಹಳ್ಳಿ ಪೊಲೀಸರು ವಿಚಾರಣೆ ಮುಂದುವರಿಸಿದ್ದಾರೆ.