ಕೊಳಚೆ ಪ್ರದೇಶದ ನಿವಾಸಿಗಳಿಗೆ ಸರ್ಕಾರದ ಸಿಹಿ ಸುದ್ದಿ: ಸಚಿವ ಸೋಮಣ್ಣ
ಕೊಳಚೆ ನಿವಾಸಿಗಳ ಹಕ್ಕುಪತ್ರ ದರ ಭಾರೀ ಕಡಿತ: ಸರ್ಕಾರ ಆದೇಶ| ಹೊರೆ ಕಮ್ಮಿ ಮಾಡುವ ಸೋಮಣ್ಣ ಮನವಿಗೆ ಸಿಎಂ ಸ್ಪಂದನೆ| ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಕೊಳಗೇರಿಯಲ್ಲಿ ನೆಲೆಸಿರುವ 15,83,134 ಮಂದಿಯನ್ನೊಳಗೊಂಡ 3,12,969 ಕುಟುಂಬಗಳಿಗೆ ಅನುಕೂಲ|
ಬೆಂಗಳೂರು(ಮಾ.27): ರಾಜ್ಯದಲ್ಲಿನ ಸರ್ಕಾರಿ ಘೋಷಿತ ಕೊಳಚೆ ಪ್ರದೇಶದಲ್ಲಿ ನೆಲೆಸಿರುವ ನಿವಾಸಿಗಳಿಗೆ ಸರ್ಕಾರವು ಸಿಹಿ ಸುದ್ದಿ ನೀಡಿದ್ದು, ಕೊಳಚೆ ಪ್ರದೇಶ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ನಿಗದಿಪಡಿಸಿದ ದರದಲ್ಲಿ ಭಾರೀ ಪ್ರಮಾಣದಲ್ಲಿ ಕಡಿತಗೊಳಿಸಿ ಆದೇಶ ಹೊರಡಿಸಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮತ್ತು ಇತರೆ ಮಹಾನಗರ ಪಾಲಿಕೆ ಹಾಗೂ ಸ್ಥಳೀಯ ಸಂಸ್ಥೆಗಳ ನಿಯಂತ್ರಣಕ್ಕೊಳಪಟ್ಟ 1873 ಘೋಷಿತ ಕೊಳಚೆ ಪ್ರದೇಶಗಳಲ್ಲಿ ನೆಲೆಸಿರುವ ಕೊಳಚೆ ನಿವಾಸಿಗಳಿಗೆ ಹಕ್ಕುಪತ್ರಗಳನ್ನು ವಿತರಿಸಲು ನಿಗದಿಪಡಿಸಿದ ದರವನ್ನು ಇಳಿಕೆ ಮಾಡಲಾಗಿದೆ. ಬಿಬಿಎಂಪಿ ಮತ್ತು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ವಿಸ್ತೀರ್ಣದವರೆಗೂ ಇತರರಿಗೆ ನಾಲ್ಕು ಸಾವಿರ ಮತ್ತು ಎಸ್‌ಸಿ/ಎಸ್‌ಟಿ ವರ್ಗದವರಿಗೆ ಎರಡು ಸಾವಿರ ರು. ದರ ನಿಗದಿ ಮಾಡಲಾಗಿದೆ. ಈ ಮೊದಲು ದರವು ಕ್ರಮವಾಗಿ 10 ಸಾವಿರ ರು ಮತ್ತು ಐದು ಸಾವಿರ ರು. ನಿಗದಿ ಮಾಡಲಾಗಿತ್ತು.
ಬಡವರಿಗೆ ಸಂತಸದ ಸುದ್ದಿ ನೀಡಿದ ಸಚಿವ ಸೋಮಣ್ಣ
ನಗರಸಭೆ ವ್ಯಾಪ್ತಿಯಲ್ಲಿ 600 ಚದರ ಅಡಿಗಳ ವಿಸ್ತೀರ್ಣದವರೆಗೂ ಈ ಹಿಂದೆ ಇದ್ದ ನಾಲ್ಕು ಸಾವಿರ ರು. ದರವನ್ನು ಕಡಿತಗೊಳಿಸಿ ಎರಡು ಸಾವಿರ ರು. ನಿಗದಿಗೊಳಿಸಲಾಗಿದೆ. ಎಸ್‌ಸಿ/ಎಸ್‌ಟಿ ವರ್ಗದವರಿಗೆ ಎರಡು ಸಾವಿರ ರು.ನಿಂದ ಒಂದು ಸಾವಿರ ರು.ವರೆಗೆ ನಿಗದಿ ಮಾಡಿ ಸರ್ಕಾರ ಆದೇಶಿಸಿದೆ. ಪುರಸಭೆ ಮತ್ತು ಪಟ್ಟಣ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಹಕ್ಕುಪತ್ರ ಪಡೆಯಲು 1200 ಚದರ ಅಡಿಯವರೆಗೆ ಎರಡು ಸಾವಿರ ರು. ನಿಗದಿಪಡಿಸಲಾಗಿದೆ. ಎಸ್‌ಸಿ/ಎಸ್‌ಟಿ ವರ್ಗದವರಿಗೆ ಒಂದು ಸಾವಿರ ರು. ನಿಗದಿ ಮಾಡಲಾಗಿದೆ. ಈ ಮೊದಲು ಈ ದರಗಳು ಕ್ರಮವಾಗಿ ಮೂರು ಸಾವಿರ ಮತ್ತು 1500 ರು.ಆಗಿತ್ತು.
ಸೋಮಣ್ಣ ಮನವಿಗೆ ಮನ್ನಣೆ:
ಹಕ್ಕುಪತ್ರಗಳನ್ನು ಪಡೆದುಕೊಳ್ಳಲು ನಿಗದಿ ಪಡಿಸಿದ್ದ ದರಗಳು ಹೆಚ್ಚಾಗಿದ್ದು, ಬಡ ಕುಟುಂಬಗಳ ಪಾವತಿಸಲು ಕಷ್ಟಕರವಾಗಿದೆ. ಹೀಗಾಗಿ ಈ ಹೊರೆಯನ್ನು ಕಡಿಮೆಗೊಳಿಸಬೇಕು ಎಂಬ ಉದ್ದೇಶದಿಂದ ದರಗಳನ್ನು ಕಡಿಮೆ ಮಾಡಲು ವಸತಿ ಸಚಿವ ವಿ.ಸೋಮಣ್ಣ ಅವರು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈ ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಈ ಮೊದಲು ನಿಗದಿಯಾಗಿದ್ದ ದರವನ್ನು ಕಡಿತಗೊಳಿಸಿದ್ದಾರೆ. ಸರ್ಕಾರದ ಈ ನಿರ್ಧಾರದಿಂದ ರಾಜ್ಯದ ಕೊಳಗೇರಿಯಲ್ಲಿ ನೆಲೆಸಿರುವ 15,83,134 ಮಂದಿಯನ್ನೊಳಗೊಂಡ 3,12,969 ಕುಟುಂಬಗಳಿಗೆ ಅನುಕೂಲವಾಗಲಿದೆ ಎಂದು ಸೋಮಣ್ಣ ತಿಳಿಸಿದ್ದಾರೆ.