ಬೆಂಗಳೂರು(ಸೆ.04):ಸೂರ್ಯನಗರ 4ನೇ ಹಂತದ ‘ಪ್ರಧಾನಮಂತ್ರಿಗಳ ವಸತಿ ಬಡಾವಣೆ’ ಯೋಜನೆಗೆ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ದೊರೆತಿದ್ದು, 30 ಸಾವಿರ ನಿವೇಶನಗಳ ಬೃಹತ್‌ ಬಡಾವಣೆ ನಿರ್ಮಾಣಕ್ಕೆ ಚಾಲನೆ ಸಿಗಲಿದೆ ಎಂದು ವಸತಿ ಸಚಿವ ವಿ. ಸೋಮಣ್ಣ ಅಭಿಪ್ರಾಯಪಟ್ಟಿದ್ದಾರೆ.

ಗುರುವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆ ತೀರ್ಮಾನದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ನಾನು 2008-13ರ ಅವಧಿಯಲ್ಲಿ ವಸತಿ ಸಚಿವನಾಗಿದ್ದಾಗ ಸೂರ್ಯನಗರ 4ನೇ ಹಂತದ ಟೌನ್‌ಶಿಪ್‌ ನಿರ್ಮಾಣಕ್ಕಾಗಿ 2013ರಲ್ಲಿ 1938 ಎಕರೆ ಪ್ರದೇಶದಲ್ಲಿ 30 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಲು ಯೋಜನೆ ರೂಪಿಸಿದ್ದೆ. ಆದರೆ ಏಳು ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು. ಇದೀಗ ಭೂಮಿ ಕಳೆದುಕೊಂಡವರಿಗೆ ಶೇ.50-50ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ಭೂಮಿ ಹಂಚಿಕೆಗೆ ಮನವೊಲಿಸಲಾಗಿದೆ. ಇವರು ಕಳೆದ 7 ವರ್ಷದಿಂದ ಭೂಮಿಯೂ ಇಲ್ಲದೆ, ಪರಿಹಾರವೂ ಸಿಗದೆ ಅತಂತ್ರರಾಗಿದ್ದರು. ಇದೀಗ ಅವರ ಬೇಡಿಕೆಯಂತೆ ಪ್ರತಿ ಎಕರೆಗೆ 20 ಲಕ್ಷ ರು. ಮುಂಗಡ ಹಣ ನೀಡಲು ಸಹ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಇಂದಿನ ಆರ್ಥಿಕ ಪರಿಸ್ಥಿತಿಯಲ್ಲಿ ಭೂ ಸ್ವಾಧೀನ ಕೈಗೊಂಡಿದ್ದರೆ 4,200 ಕೋಟಿ ರು. ವೆಚ್ಚ ಭರಿಸಬೇಕಾಗಿತ್ತು. ಇದೀಗ ಪಾಲುದಾರಿಕೆಯಿಂದ 1,910 ಕೋಟಿ ರು.ಗಳಲ್ಲಿ ಅನುಷ್ಠಾನಗೊಳ್ಳಲಿದೆ. ಇದರಿಂದ ಮಂಡಳಿಗೂ ಲಾಭದಾಯಕವಾಗಲಿದ್ದು ಭೂ ಮಾಲೀಕರಿಗೂ ಉಪಯೋಗವಾಗಲಿದೆ ಎಂದರು.

ಸೂರು ಇಲ್ಲದವರು ಮನೆ ಕಟ್ಟಿಸಿಕೊಳ್ಳಲು 5 ಲಕ್ಷ: ವಸತಿ ಸಚಿವ ವಿ.ಸೋಮಣ್ಣ

ಕೆಆರ್‌ಎಸ್‌ ನಿಸರ್ಗ ವಸತಿ ಯೋಜನೆಗೂ ಚಾಲನೆ:

ಇದೇ ವೇಳೆ ಮೈಸೂರು ತಾಲೂಕಿನ ಇಲವಾಲ ಹೋಬಳಿಯ ವಿವಿಧ ಗ್ರಾಮದ 469 ಎಕರೆ ಪ್ರದೇಶದಲ್ಲಿ ಕರ್ನಾಟಕ ಗೃಹ ಮಂಡಳಿ ವತಿಯಿಂದ ಅಭಿವೃದ್ಧಿಪಡಿಸಿದ ಕೆಆರ್‌ಎಸ್‌ ನಿಸರ್ಗ ವಸತಿ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ ಸಾಂತ್ವನ ನಿವೇಶನ ನೀಡಲು ಒಪ್ಪಿಗೆ ದೊರೆತಿದೆ.

ಭೂಮಿ ಕಳೆದುಕೊಂಡವರಿಗೆ ಅರ್ಧ ಎಕರೆಗೆ 54 ಚದರ ಮೀಟರ್‌ (6/9 ಮೀಟರ್‌) ನಿವೇಶನ, 1 ಎಕರೆ ಕಳೆದುಕೊಂಡವರಿಗೆ 9/12 ಮೀಟರ್‌ ನಿವೇಶನವನ್ನು ಕ್ರಮವಾಗಿ 50 ಸಾವಿರ ರು. ಹಾಗೂ 1 ಲಕ್ಷ ರು. ಪಾವತಿಸಿಕೊಂಡು ಹಂಚಿಕೆ ಮಾಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಹೇಳಿದರು.

ಕೊಡಗು ನೆರೆ ಪರಿಹಾರಕ್ಕೆ ಸಿಎಂಗೆ ಸೋಮಣ್ಣ ಪತ್ರ

ಕೊಡಗು ಜಿಲ್ಲೆಯಲ್ಲಿ ಉಂಟಾಗಿರುವ ನೆರೆ ಹಾನಿಗೆ ಶಾಶ್ವತ ಪರಿಹಾರ ಕಲ್ಪಿಸಲು ಹಾಗೂ ಬೆಳೆಹಾನಿ, ಮೂಲ ಸೌಕರ್ಯ ಹಾನಿಗೆ ಸಂಬಂಧಿಸಿದಂತೆ ಕೂಡಲೇ ಪರಿಹಾರ ಒದಗಿಸುವಂತೆ ಮನವಿ ಮಾಡಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಪತ್ರ ಬರೆದಿದ್ದಾರೆ.

ನೆರೆಯಿಂದ 91 ಗ್ರಾಮ ಪ್ರವಾಹಕ್ಕೆ ತುತ್ತಾಗಿದ್ದು ಜಿಲ್ಲೆಯಲ್ಲಿ 415 ಕೋಟಿ ರು. ಮೌಲ್ಯದ 41,026 ಎಕರೆ ಬೆಳೆ ಹಾನಿ ಉಂಟಾಗಿದೆ. ಜತೆಗೆ ರಸ್ತೆ, ಸೇತುವೆ ಮತ್ತಿತರ ಮೂಲಸೌಕರ್ಯ ದುರಸ್ತಿ ಹಾಗೂ ಪುನರ್‌ನಿರ್ಮಾಣ ಕಾರ್ಯ ಮಾಡಬೇಕಿದೆ. ಜತೆಗೆ ಕಳೆದ ಬಾರಿಯ ನೆರೆಯ ಪರಿಹಾರದ ಹಣವೂ ಬಾಕಿ ಇದ್ದು ಕೂಡಲೇ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದಾರೆ.