ರಾಜ್ಯದಲ್ಲಿರುವ ಯಾವುದೇ ಧರ್ಮದ, ಯಾವುದೇ ಪ್ರಾರ್ಥನಾ ಮಂದಿರದ ಬಾಕಿ ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಿಲ್ಲ  ವಿದ್ಯುತ್‌ ಬಿಲ್‌ ಮನ್ನಾ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್‌ ಕುಮಾರ ಸ್ಪಷ್ಟನೆ

 ಸುವರ್ಣಸೌಧ (ಡಿ.14):  ರಾಜ್ಯದಲ್ಲಿರುವ ಯಾವುದೇ ಧರ್ಮದ, ಯಾವುದೇ ಪ್ರಾರ್ಥನಾ ಮಂದಿರದ ಬಾಕಿ ವಿದ್ಯುತ್‌ ಬಿಲ್‌ (Electricity Bill) ಮನ್ನಾ ಮಾಡುವುದಿಲ್ಲ ಎಂದು ಇಂಧನ ಸಚಿವ ಸುನೀಲ್‌ ಕುಮಾರ (Sunil Kumar) ಸ್ಪಷ್ಟಪಡಿಸಿದ್ದಾರೆ. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ (BJP) ಸದಸ್ಯ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವ ಸುನೀಲ್‌ ಕುಮಾರ್‌, ರಾಜ್ಯದಲ್ಲಿರುವ ದೇವಸ್ಥಾನ, ಮಸೀದಿ, ಚಚ್‌ರ್‍ಗಳ ಅಂಕಿ ಅಂಶವನ್ನು ಒದಗಿಸಿ ವಿದ್ಯುತ್‌ ಬಿಲ್‌ ಬಾಕಿ ಇರುವ ವಿವರ ನೀಡಿದರು.

ಎಲ್ಲ ಧರ್ಮಗಳ ಹಲವು ಪ್ರಾರ್ಥನಾ ಮಂದಿರದ ವಿದ್ಯುತ್‌ ಬಾಕಿ ಇದೆ. ಆದರೆ, ಬಾಕಿ ಬಿಲ್‌ ಮನ್ನಾ ಮಾಡುವ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ. ಇಲಾಖೆಯನ್ನೂ ನಿರ್ವಹಿಸಬೇಕು. ಹೀಗಾಗಿ ಮನ್ನಾ ಮಾಡಲ್ಲ. ಯಾವುದೇ ಪ್ರಾರ್ಥನಾ ಮಂದಿರ ಅನಧಿಕೃತ ವಿದ್ಯುತ್‌ ಸಂಪರ್ಕ ಪಡೆದುಕೊಂಡಿದ್ದರೆ ಕಡಿತ ಮಾಡಲಾಗುವುದು ಎಂದು ಹೇಳಿದರು.

ವಿದ್ಯುತ್ ದರ ಏರಿಕೆ :

ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೇ ರಾಜ್ಯದಲ್ಲಿ(Karnataka) ಸಾರ್ವಜನಿಕರಿಗೆ ಮತ್ತೊಮ್ಮೆ ವಿದ್ಯುತ್‌(Electricity) ಶುಲ್ಕ ಹೆಚ್ಚಳದ ಶಾಕ್‌ ನೀಡಲು ಇಂಧನ ಇಲಾಖೆ(Department of Energy) ಸಜ್ಜಾಗಿದೆ. ಈಗಾಗಲೇ ಬೆಸ್ಕಾಂ ವತಿಯಿಂದ ಪ್ರತಿ ಯುನಿಟ್‌ಗೆ 1.50 ರು. ವಿದ್ಯುತ್‌ ಶುಲ್ಕ ಹೆಚ್ಚಳ ಮಾಡುವಂತೆ ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗಕ್ಕೆ (KERC) ಪ್ರಸ್ತಾವನೆ ಸಲ್ಲಿಕೆಯಾಗಿದೆ.

ಇದರ ಜತೆಗೆ ಮಂಗಳೂರು ವಿದ್ಯುತ್‌ ಸರಬರಾಜು ಕಂಪೆನಿ (MESCOM), ಹುಬ್ಬಳ್ಳಿ ವಿದ್ಯುತ್‌ ಸರಬರಾಜು ಕಂಪೆನಿ(HESCOM), ಕಲಬುರಗಿ ವಿದ್ಯುತ್‌ ಸರಬರಾಜು ಕಂಪೆನಿ(GESCOM) ಹಾಗೂ ಮೈಸೂರು ಚಾಮುಂಡೇಶ್ವರಿ ವಿದ್ಯುತ್‌ ಕಂಪೆನಿಗಳೂ(CESCOM) ಸಹ ದರ ಹೆಚ್ಚಳ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು, ಸರಾಸರಿ ಪ್ರತಿ ಯುನಿಟ್‌ಗೆ 1 ರು.ನಿಂದ 1.50 ರು.ವರೆಗೆ ದರ ಹೆಚ್ಚಳ ಮಾಡುವಂತೆ ಸದ್ಯದಲ್ಲೇ ಪ್ರಸ್ತಾವನೆ ಸಲ್ಲಿಸಲು ನಿರ್ಧರಿಸಿವೆ. ಎಲ್ಲಾ ಎಸ್ಕಾಂಗಳ ಬೇಡಿಕೆಗಳನ್ನು ಪರಿಗಣಿಸಿ ಕೆಇಆರ್‌ಸಿಯು 2022ರ ಏ.1ರಿಂದ ಅನ್ವಯವಾಗುವಂತೆ ಫೆಬ್ರುವರಿ ಅಥವಾ ಮಾರ್ಚ್‌ ತಿಂಗಳಲ್ಲಿ ಅಂತಿಮ ದರ ಪರಿಷ್ಕರಣೆ ಪಟ್ಟಿಬಿಡುಗಡೆ ಮಾಡಲಿದ್ದು, ಅಂತಿಮವಾಗಿ ಎಷ್ಟು ದರ ಏರಿಕೆಯಾಗಲಿದೆ ಎಂಬುದು ಕುತೂಹಲ ಮೂಡಿಸಿದೆ.

ಪೆಟ್ರೋಲ್‌, ವಿದ್ಯುತ್‌ ದರ ಏರಿಕೆ ಬಳಿಕ ಮತ್ತೊಂದು ಶಾಕ್‌ ಕೊಡಲು ಸಜ್ಜಾದ ಸರ್ಕಾರ..!

ಬೆಸ್ಕಾಂನಿಂದ ಭರ್ಜರಿ ಶಾಕ್‌:

ಬೆಸ್ಕಾಂ ವತಿಯಿಂದ ಪ್ರತಿ ಯುನಿಟ್‌ಗೆ 1.50 ರು. ಹೆಚ್ಚಳ ಮಾಡುವಂತೆ ಮನವಿ ಮಾಡಲಾಗಿದೆ. ವಿದ್ಯುತ್‌ ಖರೀದಿ ವೆಚ್ಚ, ನಿರ್ವಹಣೆ ಹಾಗೂ ಸರಬರಾಜು ವೆಚ್ಚಗಳನ್ನು ಪರಿಶೀಲಿಸಿದರೆ ಪ್ರತಿ ಯುನಿಟ್‌ಗೆ 1.50 ರು. ಹೆಚ್ಚಳ ಮಾಡಬೇಕು. ಇಲ್ಲದಿದ್ದರೆ ಆರ್ಥಿಕವಾಗಿ ಬೆಸ್ಕಾಂಗೆ ತೀವ್ರ ನಷ್ಟ ಉಂಟಾಗಲಿದೆ ಎಂದು ಪ್ರಸ್ತಾವನೆಯಲ್ಲಿ ತಿಳಿಸಲಾಗಿದೆ.

ಬೆಸ್ಕಾಂ ಮನವಿಯನ್ನು ಕೆಇಆರ್‌ಸಿ ಪುರಸ್ಕರಿಸಿದರೆ ಬೆಸ್ಕಾಂ ವ್ಯಾಪ್ತಿಯ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ವಿದ್ಯುತ್‌ ಗ್ರಾಹಕರಿಗೆ ದೊಡ್ಡ ಪ್ರಮಾಣದಲ್ಲಿ ವಿದ್ಯುತ್‌ ದರ ಏರಿಕೆಯಾಗಲಿದೆ. ಆದರೆ, ಕೆಇಆರ್‌ಸಿ ಎಲ್ಲಾ ಎಸ್ಕಾಂಗಳ ಮನವಿ ಆಧರಿಸಿ ಏಕರೂಪದ ದರ ಹೆಚ್ಚಳ ಮಾಡಲಿದೆ ಎಂದು ತಿಳಿದು ಬಂದಿದೆ.

Electricity | ಬಿಪಿಎಲ್‌ ಕುಟುಂಬಕ್ಕೆ ಉಚಿತ ‘ಬೆಳಕು’ ವಿದ್ಯುತ್‌ ಸಂಪರ್ಕ

ಒಂದೂವರೆ ವರ್ಷದಲ್ಲಿ 4ನೇ ಬಾರಿ ದರ ಏರಿಕೆ?

ಎಸ್ಕಾಂಗಳ ಮನವಿ ಪುರಸ್ಕರಿಸಿ ಕೆಇಆರ್‌ಸಿಯು 2022ರ ಏ.1 ರಿಂದ ಅನ್ವಯವಾಗುವಂತೆ ದರ ಪರಿಷ್ಕರಣೆ ಮಾಡಿದರೆ ಒಂದೂವರೆ ವರ್ಷ ಅವಧಿಯಲ್ಲಿ ನಾಲ್ಕು ಬಾರಿ ವಿದ್ಯುತ್‌ ದರ ಹೆಚ್ಚಳ ಮಾಡಿದಂತಾಗಲಿದೆ. ಮೊದಲಿಗೆ 2020ರ ನ.1 ರಿಂದ ಅನ್ವಯವಾಗುವಂತೆ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯಲ್ಲೂ ಪ್ರತಿ ಯುನಿಟ್‌ಗೆ 40 ಪೈಸೆ ಹೆಚ್ಚಳ ಮಾಡಿ ಕೆಇಆರ್‌ಸಿ ಆದೇಶ ಮಾಡಿತ್ತು. ಬಳಿಕ 2021ರ ಜನವರಿಯಲ್ಲಿ ಇಂಧನ ವೆಚ್ಚ ಹೆಚ್ಚಳದ ನೆಪದಲ್ಲಿ ಪ್ರತಿ ಯುನಿಟ್‌ಗೆ 5 ರಿಂದ 8 ಪೈಸೆ ಹೆಚ್ಚಳ ಮಾಡಿತ್ತು. ಇದರ ಬೆನ್ನಲ್ಲೇ 2021ರ ಏ.1 ರಿಂದ ಪೂರ್ವಾನ್ವಯವಾಗುವಂತೆ ಜು.10 ರಂದು ಪ್ರತಿ ಯುನಿಟ್‌ಗೆ 30 ಪೈಸೆ ಹೆಚ್ಚಳ ಮಾಡಲಾಗಿತ್ತು.

ಒಂದೂವರೆ ವರ್ಷದಲ್ಲಿ 78 ಪೈಸೆ ಏರಿಕೆ

ಕಳೆದ ಒಂದೂವರೆ ವರ್ಷದಲ್ಲಿ ಮಾಡಲಾದ ಮೂರು ಏರಿಕೆಗಳ ಬಳಿಕ, ಗ್ರಾಹಕರಿಗೆ(Customers) ಪ್ರತಿ ಯುನಿಟ್‌ಗೆ ಕನಿಷ್ಠ 78 ಪೈಸೆಯವರೆಗೂ ಏರಿಕೆಯ ಶಾಕ್‌ ತಗುಲಿದೆ.