ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಆಗುತ್ತಾ? ಸಚಿವ ಸುಧಾಕರ್ ಕೊಟ್ಟ ಸ್ಪಷ್ಟನೆ ಇದು!
ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ಜೋರಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಠಿಣ ನಿಯಮಗಳನ್ನು ಜಾರಿಗೆ ತಂದಿದ್ದು, ವೀಕೆಂಡ್ ಲಾಕ್ ಡೌನ್ ಬಗ್ಗೆ ಸಚಿವರು ಸ್ಪಷ್ಟನೆ ಕೊಟ್ಟಿದ್ದಾರೆ.
ಬೆಂಗಳೂರು, (ಏ.03): ಕರೋನಾ ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ.
ಇಂದು (ಶನಿವಾರ) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಾಂತ್ರಿಕ ಸಲಹಾ ಸಮಿತಿಯವರ ಶಿಫಾರಸಿನ ಮೇಲೆ ಮುಖ್ಯಮಂತ್ರಿ ಅವರೊಂದಿಗೆ ಚರ್ಚೆ ಮಾಡಿ ಮಾರ್ಗಸೂಚಿಯನ್ನು ಜಾರಿ ಮಾಡಲಾಗಿದೆ. ಇದು ಏಕಾಏಕಿ ತೆಗೆದುಕೊಂಡ ನಿರ್ಧಾರವಲ್ಲ. ಮಾರ್ಗಸೂಚಿ ಸಡಿಲಿಸುವ ಆಲೋಚನೆ ಇಲ್ಲ ಎಂದರು.
ಗುಂಪು ಇರುವ ಕಡೆ, ಮುಚ್ಚಿದ ಪ್ರದೇಶಗಳಿಗೆ ಹೋಗುವುದನ್ನ ಕಡಿಮೆ ಮಾಡಿ: ತಜ್ಞರ ಸಲಹೆ
ಸೋಂಕು ನಿಯಂತ್ರಣಕ್ಕೆ ಮಾರ್ಗಸೂಚಿ ಕಟ್ಟುನಿಟ್ಟಿನ ಪಾಲನೆ ಅನಿವಾರ್ಯ. ಅಲ್ಲದೆ, ವೈಜ್ಞಾನಿಕ ವರದಿ ಆಧಾರದ ಮೇಲೆ ಕ್ರಮ ಮಾರ್ಗಸೂಚಿ ಪ್ರಕಟಿಸಲಾಗಿದೆ ಎಂದು ಸರ್ಕಾರದ ಕ್ರಮವನ್ನು ಸಮರ್ಥಿಕೊಂಡರು. ಕೋವಿಡ್ ಮುನ್ನೆಚ್ಚರಿಕೆ ಕ್ರಮ ತೆಗೆದುಕೊಳ್ಳದೆ ಬೇರೆ ದಾರಿ ಇಲ್ಲ. ಕರೊನಾ ಎರಡನೇ ಅಲೆ ಹೊಸ್ತಿಲಲ್ಲಿದ್ದೇವೆ ಹಾಗಾಗಿ ನಿಯಂತ್ರಣ ಕ್ರಮ ಅತ್ಯವಶ್ಯ ಎಂದು ಹೇಳಿದರು.
ಕರ್ಫ್ಯೂ, ಲಾಕ್ ಡೌನ್ ಇಲ್ಲ
ಇನ್ನು ಇದೇ ವೇಳೆ ನೈಟ್ ಕರ್ಫ್ಯೂ, ವೀಕೆಂಡ್ ಲಾಕ್‍ಡೌನ್ ಬಗ್ಗೆ ಸದ್ಯಕ್ಕೆ ಯಾವುದೇ ಪ್ರಸ್ತಾವನೆ ಸರ್ಕಾರದ ಮುಂದಿಲ್ಲ ಎಂದು ತಿಳಿಸಿದರು. ಕೋವಿಡ್ 2ನೇ ಅಲೆ ಬಗ್ಗೆ ಜನರು ಸಾಕಷ್ಟು ಎಚ್ಚರದಿಂದಿರಬೇಕು. ಮಾರ್ಗಸೂಚಿಯಲ್ಲಿ ಯಾವುದೇ ಬದಲಾವಣೆ ಇಲ್ಲ. ಇದನ್ನು ಪ್ರತಿಯೊಬ್ಬರೂ ಅನುಸರಿಸಬೇಕು ಎಂದು ಮನವಿ ಮಾಡಿಕೊಂಡರು.