ವಿಮಾನದಲ್ಲಿ ಬಂದು ಇಂದಿರಾ ಕ್ಯಾಂಟೀನ್ ಊಟ ಮಾಡಿಹೋದ ಮಿನಿಸ್ಟರ್ ರಹೀಂ ಖಾನ್!
ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ವಿಮಾನದಲ್ಲಿ ಶಿವಮೊಗ್ಗ ನಗರಕ್ಕೆ ಬಂದು ಇಂದಿರಾ ಕ್ಯಾಂಟೀನ್ ಊಟ ಸವಿದು ಹೋಗಿದ್ದಾರೆ.
ಶಿವಮೊಗ್ಗ (ನ.25): ಕಳೆದೊಂದು ವರ್ಷದ ಹಿಂದೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಅದ್ಧೂರಿಯಾಗಿ ಉದ್ಘಾಟನೆಗೊಂಡ ಶಿವಮೊಗ್ಗ ನಗರದ ಬಳಿಯ ಸೋಗಾನೆಯಲ್ಲಿರುವ ವಿಮಾನ ನಿಲ್ದಾಣಕ್ಕೆ ವಿಮಾನದಲ್ಲಿ ಬಂದ ಪೌರಾಡಳಿತ ಸಚಿವ ರಹೀಂ ಖಾನ್ ಅವರು ಶಿವಮೊಗ್ಗದ ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿ ಹೋಗಿದ್ದಾರೆ.
ಹೌದು, ಶಿವಮೊಗ್ಗ ನಗರಕ್ಕೆ ವಿಮಾನದಲ್ಲಿ ಬಂದ ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಂ ಖಾನ್ ಅವರು, ನರದಲ್ಲಿರುವ ಬಿಹೆಚ್. ರಸ್ತೆಯಲ್ಲಿನ ಇಂದಿರಾ ಕ್ಯಾಂಟೀನ್‌ಗೆ ಬಂದು ಊಟ ಮಾಡಿದರು. ಜೊತೆಗೆ, ಇಂದಿರಾ ಕ್ಯಾಂಟೀನ್‌ಗೆ ಸರಬರಾಜಾಗುವ ಊಟದ ಬಗ್ಗೆ ಪರಿಶೀಲನೆ ಮಾಡಿ, ಅಲ್ಲಿನ ಸ್ವಚ್ಛತೆ ಹಾಗೂ ಸಿಬ್ಬಂದಿ ಬಗ್ಗೆ ಪರಿಶೀಲನೆ ಮಾಡಿದರು. ನಂತರ ಕ್ಯಾಂಟೀನ್ ಸಿಬ್ಭಂದಿ ಜೊತೆ ಊಟ ಸರಬರಾಜು ಮತ್ತು ಪೂರೈಕೆ ಬಗ್ಗೆ ಚರ್ಚೆ ಮಾಡಿದರು. ಜೊತೆಗೆ, ಕುಡಿಯುವ ನೀರಿಗೆ ಫಿಲ್ಟರ್ ಅಳವಡಿಸುವಂತೆ ಸೂಚನೆ ನೀಡಿದರು. ಇನ್ನು ಇಂದಿರಾ ಕ್ಯಾಂಟೀನ್‌ಗೆ ವಿಐಪಿ ಗಳು ಬಂದಾಗ ಮಾತ್ರ ಉತ್ತಮ ಊಟ ಕೊಡುವ ಬಗ್ಗೆ ದೂರು ಬಂದಿದೆ. ಹಗೆ ಮಾಡದೇ ಎಲ್ಲ ಜನರಿಗೂ ಉತ್ತಮ ಊಟ ನೀಡುತ್ತಾ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಸೂಚನೆ ನೀಡಿದರು.
ಇನ್ನು ಸಾರ್ವಜನಿಕರಿಗೆ ಮೆನುವಿನ ಪ್ರಕಾರ ನೀಡಲಾಗುತ್ತಿದ್ದ ಚಪಾತಿ ಹಾಗೂ ಪಲ್ಯ ಊಟವನ್ನು ಹಾಕಿಸಿಕೊಂಡು ಅಲ್ಲಿಯೇ ಊಟ ಮಾಡಿದರು. ಇನ್ನು ಪೌರಾಡಳಿತ ಸಚಿವ ರಹೀಂ ಖಾನ್ ಅವರಿಗೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಸಾರ್ಥ ನೀಡಿದರು. ಎಲ್ಲರೂ ಒಟ್ಟಿಗೆ ಊಟ ಮಾಡಿದ್ದಲ್ಲದೇ ಈ ವೇಳೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಆಗಾಗ ಇಂದಿರಾ ಕ್ಯಾಂಟೀನ್‌ಗೆ ಬಂದು ಊಟ ಮಾಡಿ ಗುಣಮಟ್ಟ ಪರಿಶೀಲನೆ ಮಾಡಿ ಮಾಹಿತಿ ನೀಡುವಂತೆ ಸೂಚಿಸಿದರು.
ಇದನ್ನೂ ಓದಿ: ‘ಕರಿಯ’ ಹೇಳಿಕೆ ಸಮಸ್ಯೆ: ಸಚಿವ ಜಮೀರ್ ಅಹಮದ್ ಬಚಾವ್
ಇಂದಿರಾ ಕ್ಯಾಂಟೀನ್‌ನಲ್ಲಿ ಊಟ ಮಾಡಿದ ಬಳಿಕ ಮಾಧ್ಯಮಗಳೊಂದಿಗೆಮಾತನಾಡಿದ ಅವರು, ಮುಸ್ಲಿಂ ಸಮುದಾಯದವರೇ ದಾನ ಮಾಡಿರುವ ಜಾಗವನ್ನು ವಕ್ಫ್ ಅನ್ನುತ್ತಾರೆ. ಬಿಜೆಪಿ ಅವರು ರೈತರಿಗೆ, ಸಾರ್ವಜನಿಕರನ್ನು ಬೇರೆ ರೀತಿಯಲ್ಲಿ ತಿರುಚುತ್ತಿದ್ದಾರೆ. ಇಷ್ಟು ದಿನ ಮಹಾರಾಷ್ಟ ಚುನಾವಣೆ ಇತ್ತು. ಈಗ ದೆಹಲಿ ಚುನಾವಣೆ ಇದೆ. ಬಿಜೆಪಿಗೆ ಯಾವತ್ತು ಒಂದು ವಿಷಯ ಬೇಕಾಗುತ್ತದೆ. ರಾಮಮಂದಿರ ವಿಷಯ, ಹಿಜಾಬ್ ವಿಷಯ ಇತ್ತು. ಆಮೇಲೆ ನೀವು ಯಾವ ಊಟ ಮಾಡುತ್ತೀರಾ ಅಂತ ವಿಷಯ ತಂದರು. ಈಗ ವಕ್ಪ್ ಅಂತ ಸುಮ್ಮನೆ ವಿಷಯ ತಂದಿದ್ದಾರೆ ಎಂದು ಕಿಡಿಕಾರಿದರು.
ಮುಂದುವರೆದು, ನೂರಕ್ಕೆ ನೂರು ವಕ್ಪ್ ತಿದ್ದುಪಡಿ ಮಸೂದೆ ವಾಪಾಸಾಗುವುದಿಲ್ಲ. ನಾಳೆ ವಕ್ಫ್ ತಿದ್ದುಪಡಿ ಬಿಲ್ ಮಂಡನೆ ಇದೆ. ಆದರೆ, ಇದನ್ನ ನಿತಿಶ್ ಕುಮಾರ್ ಮತ್ತು ಚಂದ್ರಬಾಬು ನಾಯ್ಡು ಅವರೆ ತಿರಸ್ಕರಿಸಲಿದ್ದಾರೆ. ಡಿಸೆಂಬರ್ 9 ರಿಂದ ಚಳಿಗಾಲದ ಅಧಿವೇಶನ ನಡೆಯಲಿದೆ. ಬೀದರ್‌ನಲ್ಲಿ 70 ವರ್ಷದ ಹಿಂದೆ 400 ಎಕರೆ ಇತ್ತು. ಈಗ 10 ಎಕರೆ ಕೂಡ ವಕ್ಫ್‌ನಲ್ಲಿ ಇಲ್ಲ. ಹೀಗಾಗಿ, ವಕ್ಫ್ ಭೂಮಿ ಒತ್ತುವರಿ ಆಗಿರುವುದನ್ನು ಗುರುತಿಸಿ ನೋಟೀಸ್ ನೀಡಿ ಅದನ್ನು ಪುನಃ ವಶಕ್ಕೆ ಪಡೆಯಲಾಗುತ್ತಿದೆ ಎಂದು ಹೇಳಿದರು.
ಇದನ್ನೂ ಓದಿ: ದೇವೇಗೌಡರಿಗೆ ವಯಸ್ಸಾಗಿದ್ದು ಜೆಡಿಎಸ್ ಪಕ್ಷ ಮುನ್ನಡೆಸೋಕಾಗ್ತಿಲ್ಲ, ಪರ್ಯಾಯ ನಾಯಕರೂ ಇಲ್ಲ; ಸಿಪಿವೈ
ಇಂದಿರಾ ಕ್ಯಾಂಟೀನ್ ಪರಿಶೀಲನ ವಿಚಾರದ ಬಗ್ಗೆ ಮಾತನಾಡಿ, ಶಿವಮೊಗ್ಗ ನಗರದ ಇಂದಿರಾ ಕ್ಯಾಂಟೀನ್‌ನಲ್ಲಿ ನೀರಿನ ಸಮಸ್ಯೆ ಆಗಬಾರದು. ಇವತ್ತು ಇಂದಿರಾ ಕ್ಯಾಂಟಿನ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ. ಕೆಲವು ಸಮಸ್ಯೆ ಕಂಡುಬಂದಿದ್ದು, ಅದನ್ನು ಪರಿಹಸರಿಸಲು ಹೇಳಿದ್ದೇನೆ. ಜೊತೆಗೆ ರಾಜ್ಯದಲ್ಲಿ ಹೊಸದಾಗಿ 180 ಇಂದಿರಾ ಕ್ಯಾಂಟಿನ್ ನಿರ್ಮಾಣ ಆಗುತ್ತಿದೆ. ಬಡವರಿಗಾಗಿ ಮಾಡಿದ ಯೋಜನೆ ಇದು ಎಂದು ಪೌರಾಡಳಿತ ಸಚಿವ ರಹೀಂ ಖಾನ್ ಹೇಳಿದರು.