Asianet Suvarna News Asianet Suvarna News

Grama Vastavya: ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ ಕುಟುಂಬಗಳಿಗೆ 1 ತಿಂಗಳಲ್ಲಿ ಹಕ್ಕುಪತ್ರ: ಸಚಿವ ಅಶೋಕ್‌ ಭರವಸೆ

ಅಲೆಮಾರಿಗಳಾಗಿ ಇನ್ನೆಷ್ಟು ದಿನ ಬದುಕು ಸವೆಸಬೇಕು, ನೆಮ್ಮದಿಯ ಬದುಕು ನಿಮಗೂ ಬೇಕು. ಅದಕ್ಕೇ ಕಳೆದ 7 ದಶಕದಲ್ಲಿ ಯಾವ ಪಕ್ಷದವರೂ ಮಾಡದಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ. 

minister r ashok to grama vastavya at machinal tanda in kalaburagi gvd
Author
First Published Jan 18, 2023, 8:01 AM IST

ಶೇಷಮೂರ್ತಿ ಅವಧಾನಿ

ಮಾಚನಾಳ ತಾಂಡಾ (ಕಲಬುರಗಿ) (ಜ.18): ‘ಅಲೆಮಾರಿಗಳಾಗಿ ಇನ್ನೆಷ್ಟುದಿನ ಬದುಕು ಸವೆಸಬೇಕು, ನೆಮ್ಮದಿಯ ಬದುಕು ನಿಮಗೂ ಬೇಕು. ಅದಕ್ಕೇ ಕಳೆದ 7 ದಶಕದಲ್ಲಿ ಯಾವ ಪಕ್ಷದವರೂ ಮಾಡದಂತಹ ಕೆಲಸವನ್ನು ಬಿಜೆಪಿ ಮಾಡುತ್ತಿದೆ. ರಾಜ್ಯದಲ್ಲಿರುವ ಎಲ್ಲಾ ಲಂಬಾಣಿ ತಾಂಡಾ, ಕುರುಬರ ಹಟ್ಟಿ, ಅಲೆಮಾರಿಗಳ ಹಾಡಿಗಳಲ್ಲಿರುವ ಎಲ್ಲರಿಗೂ ನೆಮ್ಮದಿಯ ಸೂರು, ಅದರ ಹಕ್ಕುಪತ್ರ ನೋಂದಣಿ ಮಾಡಿಸಿಕೊಡುತ್ತಿದೆ. ನೆಮ್ಮದಿ ನಿಮ್ಮದಾಗಿಸಿಕೊಳ್ಳಿ’ ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳುತ್ತಿದ್ದಂತೆಯೇ ಕಲಬುರಗಿ ತಾಲೂಕಿನ ಮಾಚನಾಳ ತಾಂಡಾದಲ್ಲಿ ಸೇರಿದ್ದ ನೂರಾರು ಲಂಬಾಣಿ ಸಮುದಾಯದ ಜನರು ಕೇಕೆ ಹಾಕಿ, ಚಪ್ಪಾಳೆ ತಟ್ಟಿಸಚಿವರ ಮಾತುಗಳಿಗೆ ಹರ್ಷ ವ್ಯಕ್ತಪಡಿಸಿದರು.

ಈ ವೇಳೆ, ಮೂಲ ಸವಲತ್ತಿಲ್ಲದ ತಾಂಡಾಗಳಲ್ಲಿ ಹರಿದು ಹೋದ ತಮ್ಮ ಬದುಕು ಇನ್ನು ಮುಂದಾದರು ಹಸನಾಗೋ ಕಾಲ ಬಂತಲ್ಲ ಎಂಬ ಆಶಾಕಿರಣ ಅವರ ಮೊಗದಲ್ಲಿ ಕಂಡಿತು. ಸಚಿವ ಅಶೋಕ ಮಾತುಗಳನ್ನು ಕೇಳುತ್ತಲೇ ಲಂಬಾಣಿ ಜನ ಕರತಾಡನ ಮಾಡುತ್ತ ಸರ್ಕಾರ ತಮ್ಮನ್ನು ಬೆಂಬಲಿಸಿದ ಪರಿ ಕಂಡು ಸಂತುಷ್ಟರಾದರು. ತಮ್ಮ ತಾಂಡಾದಲ್ಲಿ ಸಚಿವರನ್ನು ಕಂಡ ಲಂಬಾಣಿಗರು ಖುಷಿಯಲ್ಲಿದ್ದರು. ಕಂದಾಯ ಸಚಿವ ಆರ್‌ ಅಶೋಕ ಮಂಗಳವಾರ ಕಲಬುರಗಿ ತಾಲೂಕಿನ ಮಾಚನಾಳ ತಾಂಡಾದಲ್ಲಿ ನಡೆಸಿದ ಗ್ರಾಮ ಸಭೆಯಲ್ಲಿ ಕಂಡ ಬಂದ ನೋಟಗಳಿವು.

Shivamogga: ಜ.28ಕ್ಕೆ ಹೊಳ​ಲೂ​ರ​ಲ್ಲಿ ಸಚಿವ ಅ​ಶೋ​ಕ್‌ ಗ್ರಾಮ ವಾಸ್ತವ್ಯ

ಸಚಿವರಿಗೆ ಭವ್ಯ ಸ್ವಾಗತ: ತಾಂಡಾಕ್ಕೆ ಬಂದ ಅಶೋಕ ಅವರಿಗೆ ತಾಂಡಾದ ಜನ ಎತ್ತಿನ ಬಂಡಿಯಲ್ಲಿ ಭವ್ಯ ಸ್ವಾಗತ ಕೋರಿದರು. ಸೇವಾಲ ಮಂದಿರಕ್ಕೆ ಕರೆದೊಯ್ದು ಹರಸಿದರು. ನಂತರ, ಊರಿನ ಸರ್ಕಾರಿ ಶಾಲಾ ಅಂಗಳದಲ್ಲಿ ನಡೆದ ಗ್ರಾಮ ಸಭೆಯಲ್ಲಿ ತಾಂಡಾವಾಸಿಗಳ ಬದುಕು- ಬವಣೆ ಬಗ್ಗೆ ಸಚಿವರು ಮಾತನಾಡಿದರು. ನಿಮ್ಮ ಬವಣೆಗಳೆಲ್ಲದಕ್ಕೂ ಪೂರ್ಣ ವಿರಾಮ ಹಾಕಿರಿ, ಬದುಕು ಹಸನಾಗಿಸಿಕೊಳ್ಳಿರಿ ಎಂದು ತಾಂಡಾವಾಸಿಗಳಿಗೆ ಹುರಿದುಂಬಿಸಿದರು.

ತಾಂಡಾ, ಹಾಡಿ ಹಾಗೂ ಹಟ್ಟಿಜನಗಳಿಗೆ ಹಕ್ಕುಪತ್ರಗಳೇ ಇಲ್ಲದ ಸಮಯದಲ್ಲಿ ತಮ್ಮ ಸರ್ಕಾರ ಅವರಿಗೆಲ್ಲರಿಗೂ ಹಕ್ಕುಪತ್ರ ನೀಡುವ ಕೆಲಸ ಮಾಡುತ್ತಿದೆ. ಅದಕ್ಕಾಗಿ ಜ.19ರಂದು ಕಲಬುರಗಿಗೆ ಪ್ರಧಾನಿ ನರೇಂದ್ರ ಮೋದಿಯವರೇ ಆಗಮಿಸುತ್ತಿದ್ದಾರೆ. ತಾಂಡಾವಾಸಿಗಳು ಅಲೆಮಾರಿಗಳಾಗಿ ಮುಂದುವರಿಯೋ ದಿನಗಳು ಮುಗಿದವು. ಎಲ್ಲರೂ ನೆಮ್ಮದಿಯಾಗಿ ಮನೆಗಳಲ್ಲಿ ವಾಸವಾಗುವ ಮೂಲಕ ಮಕ್ಕಳಿಗೆ ಶಿಕ್ಷಣ ಕೊಡಿಸಿ ಉತ್ತಮ ಸಂಸಾರ ಮಾಡಿರಿ ಎಂದು ಕರೆ ನೀಡಿದರು.

ನೆಮ್ಮದಿಯ ಬದುಕು ನಿಮ್ಮದಾಗಿಸಿಕೊಳ್ಳಿ: ಲಂಬಾಣಿ ಜನರ ನೋವು-ನಲಿವು ಖುದ್ದು ಕಾಣಲೆಂದೇ ತಾವು ತಾಂಡಾದಲ್ಲಿ ವಾಸ್ತವ್ಯ ಹೂಡಿರೋದಾಗಿ ಹೇಳಿದ ಸಚಿವರು, ಬ್ರಿಟೀಷರಿಗೇ ಸವಾಲು ಹಾಕಿದ ಜನ ನೀವು. ನಿಮ್ಮನ್ನೇ 75 ವರ್ಷದಿಂದ ಮನೆ ಸಹ ಇಲ್ಲದಂತೆ ಮಾಡಿದ್ದಾರೆ, ಇದಕ್ಕೆ ಯಾರನ್ನೂ ದೂಷಿಸೋದಿಲ್ಲ ಎಂದು ಹೆಸರು ಹೇಳದೆಯೇ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು. ಒಗ್ಗಟ್ಟಿನ ಮಾತನ್ನಾಡುತ್ತ ಈ ದೇಶವನ್ನು 5 ದಶಕ ಆಳಿದವರು ಇಂತಹ ದುರವಸ್ಥೆಗೆ ಕಾರಣರಾಗಿದ್ದಾರೆ. 

ಸೂರಿಲ್ಲದವರಿಗೆ ಬಿಜೆಪಿ ಇದೀಗ ಸೂರು ಕಲ್ಪಿಸುತ್ತಿದೆ. ಹಕ್ಕುಪತ್ರ ನೀಡಿ ಹೆಮ್ಮೆಯಿಂದ ಬದುಕುವಂತೆ ಮಾಡುತ್ತಿದೆ ಎಂದರು. ‘ನಾ ನಾಯಕಿ, ನಾ ನಾಯಕ’ ಎಂದು ಅನೇಕರು ರಾಜ್ಯದಲ್ಲಿ ಅಡ್ಡಾಡುತ್ತಿದ್ದಾರೆ. ನಾವು ನಾಯಕರೂ ಅಲ್ಲ, ನಾಯಕಿಯೂ ಅಲ್ಲ. ನಾವು ನಿಮ್ಮೆಲ್ಲರ ಸೇವಕ. ಪ್ರದಾನಿ ಮೋದಿಯವರೇ ಹೇಳುವಂತೆ ನಾವು ಸೇವಕರು. ನಿಮ್ಮ ಮತದಿಂದ ಗೆದ್ದು ಬಂದು ಸದನದಲ್ಲಿದ್ದೇವೆ. ನಿಮ್ಮ ಸೇವೆಯೇ ನಮ್ಮ ಕಾಯಕ ಎಂದು ಹೇಳಿ ತಾಂಡಾ ಜನಗಳ ಗಮನ ಸೆಳೆದರು.

1 ತಿಂಗಳಲ್ಲಿ 1.02 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ: ಇನ್ನೊಂದು ತಿಂಗಳಲ್ಲಿ ರಾಜ್ಯಾದ್ಯಂತ ಇರುವ ಹಟ್ಟಿ, ಹಾಡಿ, ತಾಂಡಾಗಳಲ್ಲಿರುವ 1.02 ಲಕ್ಷ ಕುಟುಂಬಗಳಿಗೆ ಹಕ್ಕುಪತ್ರ ನೀಡಲಾಗುತ್ತದೆ. ಆ ಮೂಲಕ ಅಲೆಮಾರಿಗಳಿಗೂ ನೆಮ್ಮದಿಯ, ಗೌರವದ ಬದುಕು ಕಟ್ಟಿಕೊಡುವ ಯತ್ನವನ್ನು ಬಿಜೆಪಿ ಮಾಡುತ್ತಿದೆ ಎಂದರು. ಇದು ಸಣ್ಣ ಸಮಾರಂಭ, ಇದಕ್ಯಾಕೆ ಪ್ರಧಾನಿ ಬರಬೇಕು ಎಂಬ ವಿಪಕ್ಷದವರ ಟೀಕೆಗಳನ್ನು ಪ್ರಸ್ತಾಪಿಸುತ್ತ, ನಮ್ಮ ಪ್ರಧಾನಿ ಮೋದಿಯವರು ಬಡವರ ಮನೆಯಲ್ಲಿ ಹುಟ್ಟಿದವರು. 

ಬಡವರ ಸಣ್ಣ ನೆರವಿನ ಕೆಲಸವೂ ಅವರಿಗೆ ಖುಷಿ ಕೊಡುತ್ತದೆ, ಅದಕ್ಕೆ ಅವರು ಬರುತ್ತಿದ್ದಾರೆ ಎಂದು ಟೀಕೆಗಳಿಗೆ ತಿರುಗೇಟು ನೀಡಿದರು. ಅಲೆಮಾರಿಗಳಿದ್ದರೆ ಮಕ್ಕಳ ಭವಿಷ್ಯ ರೂಪಿಸಲು ಆಗೋದಿಲ್ಲ, ಒಂದೆ ಕಡೆ ಮನೆಯಲ್ಲಿದ್ದರೆ ಮಾತ್ರ ಉತ್ತಮ ಬದುಕು, ಭವಿಷ್ಯವನ್ನು ಮಕ್ಕಳಿಗೆ ನೀಡಲು ಸಾಧ್ಯ. ಅದಕ್ಕಾಗಿ ನೀವೆಲ್ಲರೂ ಬರುವ ದಿನಗಳಲ್ಲಿ ನಿಮ್ಮ ಮಕ್ಕಳನ್ನು ಓದಿಸಿ ಎಂದು ಸೇರಿದ್ದ ಲಂಬಾಣಿಗಳಿಗೆ ಕರೆ ನೀಡಿದರು. ಪ್ರಧಾನಿ ಮೋದಿಯವರ ಸಮಾರಂಭಕ್ಕೆ ಬರುವಂತೆ ಎಲ್ಲರಿಗೂ ಆಹ್ವಾನ ನೀಡಿದರು.

Chikkaballapur: ಕಾಂಗ್ರೆಸ್‌ ಪಕ್ಷವು ದರೋಡೆಕೋರರ ಕೂಟ: ಸಚಿವ ಅಶೋಕ್‌

ತಾಂಡಾದಲ್ಲಿ ಸಂಭ್ರಮ ಸಂತಸ: ಸಚಿವ ಅಶೋಕ ಅವರು ರಾತ್ರಿ 7.30 ಗಂಟೆಗೆ ತಾಂಡಾಕ್ಕೆ ಬರುತ್ತಿದ್ದಂತೆಯೇ ಅಲ್ಲಿ ಸಂತಸ ಮನೆ ಮಾಡಿತ್ತು. ಶಾಸಕ ದತ್ತಾತ್ರೇಯ ಪಾಟೀಲ್‌ ರೇವೂರ್‌, ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಪಿ.ರಾಜೀವ್‌, ಜಿಲ್ಲಾಧಿಕಾರಿ ಯಶವಂತ, ತಹಸೀಲ್ದಾರ್‌ ವೆಂಕನಗೌಡ ಸೇರಿದಂತೆ ಅಧಿಕಾರಿಗಳು ಈ ವೇಳೆ ಹಾಜರಿದ್ದರು. ಬಳಿಕ, ಊರಲ್ಲಿನ ಮಂದಿರಗಳಿಗೆ ತೆರಳಿ, ದೇವರ ದರ್ಶನ ಪಡೆದರು. ಬಳಿಕ, ಅಶೋಕ ಅವರನ್ನು ಎತ್ತಿನ ಬಂಡಿಯಲ್ಲಿ ಊರವರು ಸ್ವಾಗತಿಸಿದರು. ನಂತರ, ಸಚಿವರು ಗ್ರಾಮ ಸಭೆ ನಡೆಸಿ, ಊರಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಮಾಡಿದರು.

Follow Us:
Download App:
  • android
  • ios