ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಅವರು, ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್‌ಎಸ್‌ಎಸ್‌ ಅನ್ನು ಕಾನೂನಿನ ವ್ಯಾಪ್ತಿಗೆ ತರುವುದಾಗಿ ಹೇಳಿದ್ದಾರೆ. ನೋಂದಣಿಯಾಗದ ಸಂಸ್ಥೆಯು ದೇಶಭಕ್ತಿಯ ಪ್ರಮಾಣಪತ್ರ ನೀಡುವುದನ್ನು ಪ್ರಶ್ನಿಸಿ, ಆರ್‌ಎಸ್‌ಎಸ್‌ಗೆ ಅಚ್ಚರಿಯಾಗುವಂತಹ ಕಾನೂನು ಕ್ರಮದ ಎಚ್ಚರಿಕೆ ನೀಡಿದ್ದಾರೆ.

 ಬೆಂಗಳೂರು (ಆ.9): ಕಾನೂನು ಚೌಕಟ್ಟಿನಿಂದ ಹೊರಗಿರುವ ಆರ್‌ಎಸ್‌ಎಸ್‌ ಅನ್ನು ಕಾನೂನಿನ ಒಳಗೆ ತರುತ್ತೇನೆ. ಎಲ್ಲದರ ಬಗ್ಗೆಯೂ ಈಗ ಬಹಿರಂಗಗೊಳಿಸಲಾಗದು ಎಂದು ಗೃಹ ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದರು.

ಆರೆಸ್ಸೆಸ್ ಇತಿಹಾಸದ ಬಗ್ಗೆ ಪ್ರಿಯಾಂಕ್ ಖರ್ಗೆ ಅಧ್ಯಯನ

ವಿಧಾನಸೌಧದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ್‌ ಖರ್ಗೆ, ಆರ್‌ಎಸ್‌ಎಸ್‌ ನೋಂದಣಿ ಕುರಿತಂತೆ ಈ ಹಿಂದೆ ಬರೆಯಲಾಗಿದ್ದ ಪತ್ರಕ್ಕೆ ನಿರೀಕ್ಷೆಯಂತೆ ಯಾವುದೇ ಬಂದಿಲ್ಲ. ಸದ್ಯ ಆರ್‌ಎಸ್‌ಎಸ್‌ ಕಾನೂನು ಚೌಕಟ್ಟಿನಿಂದ ಹೊರಗಿದೆ. ಅದನ್ನು ಕಾನೂನಿನ ಒಳಗೆ ತರಲಾಗುವುದು. ನಾನು ಗೃಹ ಖಾತೆ ವಹಿಸಿಕೊಂಡು ಒಂದೂವರೆ ತಿಂಗಳಾಗಿದ್ದು, 100 ವರ್ಷಗಳ ಇತಿಹಾಸದ ಸಂಸ್ಥೆಯ ಬಗ್ಗೆ ಅಧ್ಯಯನ ಮಾಡಿ ತಿಳಿದುಕೊಳ್ಳುತ್ತೇನೆ. ಎಲ್ಲವನ್ನೂ ಕಾನೂನಾತ್ಮಕವಾಗಿಯೇ ಮಾಡುತ್ತೇನೆ ಎಂದರು.

ಆರೆಸ್ಸೆಸ್ ಕಾನೂನು ಪ್ರಕಾರ ನೋಂದಣಿಯಾಗಿಲ್ಲ

ಆರ್‌ಎಸ್‌ಎಸ್‌ ಸಂಸ್ಥೆಯೇ ಕಾನೂನು ಪ್ರಕಾರ ನೋಂದಣಿಯಾಗಿಲ್ಲ. ಆದರೆ, ದೇಶದಲ್ಲಿ ದೇಶ ದ್ರೋಹಿ-ದೇಶ ಭಕ್ತಿಯ ಪ್ರಮಾಣ ಪತ್ರ ನೀಡುತ್ತಿದ್ದಾರೆ. ಹೀಗೆ ಪ್ರಮಾಣಪತ್ರ ನೀಡಲು ಅವರು ಯಾರು ಎಂಬುದನ್ನು ಹೇಳಬೇಕು. ಮುಂದೆ ಏನು ಮಾಡುತ್ತೇವೆ ಎಂಬುದನ್ನು ಈಗಲೇ ಬಹಿರಂಗವಾಗಿ ಹೇಳುವುದಿಲ್ಲ. ಬಹಿರಂಗಗೊಳಿಸಿದರೆ ನಾವು ತೆಗೆದುಕೊಳ್ಳುವ ಕ್ರಮದಿಂದ ಆರ್‌ಎಸ್‌ಎಸ್‌ಗೆ ಅಚ್ಚರಿಯಾಗುವುದಿಲ್ಲ. ಅವರಿಗೆ ಅಚ್ಚರಿಯಾಗುವಂತಹ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.