ಹೋರಾಟಗಾರ ಅಹಿಂಸಾ ಚೇತನ್‌ ಅವರು ಕರ್ನಾಟಕದಲ್ಲಿ ಸಮ ಸಮಾಜ ನಿರ್ಮಾಣಕ್ಕಾಗಿ ಹೊಸ ರಾಜಕೀಯ ಪಕ್ಷವನ್ನು ಸ್ಥಾಪಿಸುವುದಾಗಿ ಘೋಷಿಸಿದ್ದಾರೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಪಕ್ಷವನ್ನು ಅಧಿಕೃತವಾಗಿ ಲೋಕಾರ್ಪಣೆ ಮಾಡಲಾಗುವುದು ಎಂದ ಅವರು, ಬಿಡದಿ ಟೌನ್‌ಶಿಪ್‌ ಮತ್ತು ನೀಟ್‌ ವ್ಯವಸ್ಥೆ ಬಗ್ಗೆ ಹೇಳಿದ್ದೇನು?

 ಮಂಗಳೂರು (ಆ.9): ಜನಪರ ಹೋರಾಟಗಾರರು, ಸಂಘಟನೆಗಾರರು, ಚಳವಳಿಗಾರರ ಜೊತೆ ಸೇರಿ ಅಖಂಡ ಕರ್ನಾಟಕಕ್ಕೆ ಸಮ ಸಮಾಜ ಕಟ್ಟಬೇಕು ಎಂಬ ಉದ್ದೇಶದಿಂದ ಉತ್ತಮ ರಾಷ್ಟ್ರ ಕಟ್ಟುವುದಕ್ಕಾಗಿ ರಾಜಕೀಯ ಪಕ್ಷ ಕಟ್ಟುತ್ತೇವೆ ಎಂದು ಹೋರಾಟಗಾರ, ಅಹಿಂಸಾ ಚೇತನ್‌ ಘೋಷಿಸಿದ್ದಾರೆ.

ಅವರು ಶನಿವಾರ ಮಂಗಳೂರು ಭೇಟಿ ವೇಳೆ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿ, ಪ್ರಸ್ತುತ ರಾಜಕೀಯವಾಗಿ ನಡೆಯುತ್ತಿರುವ ಬೆಳವಣಿಗೆ, ಸರ್ಕಾರದ ನಿರ್ಲಕ್ಷ್ಯತನವನ್ನು ವಿರೋಧಿಸಲು ಜನಪರ ಆಡಳಿತಕ್ಕಾಗಿ ರಾಜಕೀಯ ಪಕ್ಷದ ಮೂಲಕವೇ ಪರಿಹಾರವಿದೆ. ತಮ್ಮ ಕುರ್ಚಿ ಅಲುಗಾಡುತ್ತದೆ ಎಂದ ಕೂಡಲೇ ಕಿವುಡ, ಕುರುಡ ಸರ್ಕಾರಗಳು ಎಚ್ಚೆತ್ತುಕೊಳ್ಳುತ್ತವೆ. ಕರ್ನಾಟಕಕ್ಕೆ ಪರಿಹಾರ, ಪರ್ಯಾಯ ಬೇಕು. ಅದಕ್ಕಾಗಿ ಸಮಾನತೆ, ಸಂವಿಧಾನದಂತೆ ನಡೆಯುವ ಪಕ್ಷ ಬೇಕು. ಅದಕ್ಕಾಗಿ ಪ್ರಾದೇಶಿಕ ಪಕ್ಷ ಕಟ್ಟಿ ರಾಜ್ಯವನ್ನು ಬಲಿಷ್ಠ ಮಾಡಲು ಕೆಲಸ ಮಾಡಲಾಗುವುದು. ನಮ್ಮ ಸಿದ್ಧಾಂತದಂತೆ ನಡೆಯುವ, ಸಮಸಮಾಜ, ಸಮಾನತೆ, ನ್ಯಾಯ, ಸಂವಿಧಾನದಂತೆ ನಡೆಯುವ ಉದ್ದೇಶದಂತೆ ಪಕ್ಷಕ್ಕೆ ಹೆಸರಿಡಲಾಗುವುದು, ಅದರ ನೋಂದಾಣಿ ಪ್ರಕ್ರಿಯೆ ನಡೆಯುತ್ತಿದೆ. ಜನವರಿಯಲ್ಲಿ ಹುಬ್ಬಳ್ಳಿಯಲ್ಲಿ ಬೃಹತ್‌ ಸಮಾವೇಶ ನಡೆಸಿ, ರಾಜಕೀಯ ಪಕ್ಷ ಲೋಕಾರ್ಪಣೆ ಮಾಡುವ ಬಗ್ಗೆ ತಯಾರಿ ನಡೆಯುತ್ತಿದೆ ಎಂದರು. ಅದಕ್ಕಾಗಿ ದಕ್ಷಿಣ ಕನ್ನಡ, ಉಡುಪಿ, ಸೇರಿದಂತೆ ರಾಜ್ಯದಲ್ಲಿ ಸಂಚರಿಸಿ ಸಭೆ ನಡೆಸಲಾಗುತ್ತಿದೆ ಎಂದರು.

ಬಿಡದಿ ಟೌನ್‌ಶಿಪ್‌ ಆಗಬಾರದು:

ಬಿಡದಿ ಟೌನ್‌ಶಿಪ್‌ ಆಗಬಾರದು, ರೈತರು ಭೂಮಿ ಕೈತಪ್ಪಬಾರದು ಎಂಬುದು ನನ್ನ ಆಗ್ರಹ. ಅಭಿವೃದ್ಧಿ ಹೆಸರಿನಲ್ಲಿ ರೈತರ ಭೂಮಿ ಕಸಿದು ಕಟ್ಟಡ ಕಟ್ಟಿ, ಲ್ಯಾಂಡ್‌ ಮಾಫಿಯಾ ಲಾಭಿಗಳು ಒಳ್ಳೆಯದಲ್ಲ. ಆ ಯೋಜನೆಯೇ ತಪ್ಪು. ಬೆಂಗಳೂರನ್ನು ಅಭಿವೃದ್ಧಿ ಹೆಸರಿನಲ್ಲಿ ನಾಶ ಮಾಡಲಾಗುತ್ತದೆ ಹೊರತು, ದಕ್ಷಿಣ ಕನ್ನಡ, ಕರಾವಳಿ, ಉತ್ತರ ಕರ್ನಾಟಕ, ಮಧ್ಯ ಕರ್ನಾಟಕ, ಕಲ್ಯಾಣ ಕರ್ನಾಟಕ, ಹಳೆ ಮೈಸೂರು ಭಾಗಗಳನ್ನು ನಿರ್ಲಕ್ಷ್ಯ ಮಾಡಿದರೆ ಒಳ್ಳೆಯದಲ್ಲ. ದೆಹಲಿ ಪಕ್ಷಗಳ ಉದ್ದೇಶವೇ ಅಧಿಕಾರ ಲಾಭಕ್ಕಾಗಿ ಅಧಿಕಾರ ವಿಸ್ತರಣೆ, ಸ್ವಂತ ಲಾಭ ಮಾಡಿಕೊಳ್ಳುವುದು ಆಗಿದೆ ಎಂದು ಅವರು ಆರೋಪಿಸಿದರು.

ಮಹಿಳಾ ಮೀಸಲು ಒಳ್ಳೆಯದು:

ಕೇಂದ್ರ ಸರ್ಕಾರ ಎಫ್‌ಸಿಆರ್‌ಎ (ಭಾರತದಲ್ಲಿ ವಿದೇಶಿ ದೇಣಿಗೆ ಮತ್ತು ಹಣಕಾಸಿನ ನೆರವನ್ನು ಸ್ವೀಕರಿಸುವ ಸಂಸ್ಥೆಗಳ ನಿಂಯಂತ್ರಿಸುವ ಕಾನೂನು) ಬಿಲ್‌ ತರಲು ಹೊರಟಿರುವ ಪ್ರಶ್ನೆಗೆ ಉತ್ತರಿಸಿದ ಅವರು, ಅದರ ಬಗ್ಗೆ ನಾನು ಅಧ್ಯಯನ ಮಾಡಬೇಕಿದೆ. ಬಳಿಕ ಉತ್ತರಿಸುತ್ತೇನೆ. ನಾನು ಕೇಂದ್ರ-ರಾಜ್ಯ ಸರ್ಕಾರ ಮಾಡಿದೆಲ್ಲ ತಪ್ಪು, ಮಾಡಿದೆಲ್ಲ ಸರಿ ಎಂದು ಹೇಳಲ್ಲ ಎಂದರು.

ನೀಟ್‌ ವ್ಯವಸ್ಥೆಯೇ ಸರಿ ಇಲ್ಲ:

ಸಂವಿಧಾನಾತ್ಮಕ ಹೋರಾಟಗಳು ಸಮಾಜಕ್ಕೆ ಬೇಕು. ಆದರೆ ಹೋರಾಟ ಓರ್ವ ಸಚಿವರನ್ನು ಗುರಿಯಾಗಿಸಿ, ಅವರನ್ನು ಬದಲಾಯಿಸಲು ಮಾತ್ರ ಇರಬಾರದು, ಒಬ್ಬ ಸಚಿವ ಕೆಳಗಿಳಿದರೆ ಮತ್ತೊಬ್ಬ ಬರುತ್ತಾನೆ. ಆದರೆ ವ್ಯವಸ್ಥೆ ಅದೇ ರೀತಿ ಇರುತ್ತದೆ. ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮಾತ್ರ ಸಮಸ್ಯೆ ಅಲ್ಲ. ನೀಟ್‌ ವ್ಯವಸ್ತೆಯೇ ಸರಿ ಇಲ್ಲ. ಇದನ್ನು ಸರಿಪಡಿಸಲು ಉತ್ತರ ಭಾರತದ ಉದ್ದೇಶ ನೋಡದೇ, ಇಡೀ ಒಕ್ಕೂಟದಂತೆ ನೋಡಿ ಸಿಇಟಿ ತರಹ ನಮಗೆ ನಮ್ಮ ರಾಜ್ಯದಲ್ಲೇ ಆದ್ಯತೆ ನೀಡುವಂತಹ ವ್ಯವಸ್ಥೆ ಮಾಡಬೇಕು ಎಂದರು.

------