ಸಚಿವ ಎಂ.ಬಿ.ಪಾಟೀಲ್ ಅವರು ಲಿಂಗಾಯತ ಮೀಸಲಾತಿಗಾಗಿ ಉಪಜಾತಿಗಳನ್ನು ಒಂದುಗೂಡಿಸುವ ಅಗತ್ಯವನ್ನು ಪ್ರತಿಪಾದಿಸಿದ್ದಾರೆ. ಜಾತಿ ಗಣತಿಯಲ್ಲಿನ ತಪ್ಪುಗಳನ್ನು ಸರಿಪಡಿಸಿ, ಎಲ್ಲಾ ಉಪ ಪಂಗಡಗಳು ಒಂದೇ ಮೀಸಲಾತಿ ಅಡಿಯಲ್ಲಿ ಬರಬೇಕೆಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಬೆಂಗಳೂರು (ಫೆ.27): ಮೀಸಲಾತಿ ಸಲುವಾಗಿ ನಾವು ಉಪಜಾತಿ ಬರೆಸುತ್ತಿದ್ದೇವೆ. ಲಿಂಗಾಯತ ಹೋರಾಟ ಪ್ರಾರಂಭ ಮಾಡಿದಾಗ ನಮಗೆ ಮೀಸಲಾತಿ ಉದ್ದೇಶವೇ ಇತ್ತು ಎಂದು ಸಚಿವ ಎಂಬಿ ಪಾಟೀಲ್ ನುಡಿದರು.
ಇಂದು ಬಸವ ಸಮಿತಿಯ ಅನುಭವ ಮಂಟಪ ಸಭಾಂಗಣದಲ್ಲಿ ನಡೆದ'ವಚನ ದರ್ಶನ ಮಿಥ್ಯ Vs ಸತ್ಯ' ಗ್ರಂಥ ಬಿಡುಗಡೆ ಸಮಾರಂಭವನ್ನುದ್ದೇಶಿಸಿ ಮಾತನಾಡಿದ ಸಚಿವರು, ಆಗಿನ ಸರ್ಕಾರ ಇದ್ದಾಗ ಸಮಯ ಕಡಿಮೆ ಇತ್ತು. ಆಗ ತಪ್ಪು ತಡೆಗಳು ಎಲ್ಲ ಕಡೆಯಿಂದಲೂ ಆಗಿದೆ. ಒಕ್ಕಲಿಗ ಜಾತಿಯಲ್ಲೂ ನೂರೆಂಟು ಉಪಜಾತಿಗಳಿವೆ. ಆದರೆ ಅವರೆಲ್ಲರೂ ಒಂದೇ ಜಾತಿಯ ಅಡಿಯಲ್ಲಿ ಮೀಸಲಾತಿ ಪಡೆಯುತ್ತಿದ್ದಾರೆ. ಅದೇ ರೀತಿ ನಾವು ಎಲ್ಲ ಉಪ ಪಂಗಡಗಳು ಒಂದೇ ಹೆಡ್ಡಿಂಗ್ ನ ಅಡಿ ಬರಬೇಕಿದೆ ಎಂದರು.
ಇದನ್ನೂ ಓದಿ: ರಾಜಕೀಯಕ್ಕಾಗಿ ಲಿಂಗಾಯತರ ಒಡೆವ ದುಷ್ಕೃತ: ಬಿ.ವೈ.ವಿಜಯೇಂದ್ರ
ಜಾತಿ ಗಣತಿ ಬೈಯುತ್ತೇವೆ. ಜಾತಿ ಗಣತಿಗೆ ಹೋದಾಗ ಗಾಣಿಗ, ಬಣಜಿಗ, ಕೂಡು ಒಕ್ಕಲಿಗ ಅಂತಾ ಬರೆಸಿದ್ದೇವೆ. ಆದರೆ ಯಾರೂ ವೀರಶೈವ ಲಿಂಗಾಯತ ಎಂದು ಬರೆಸಿಲ್ಲ. ಇದೇ ಕಾರಣಕ್ಕೆ ನಾವು 2 ಕೋಟಿಯಿಂದ 65 ಲಕ್ಷಕ್ಕೆ ಇಳಿದಿದ್ದೇವೆ. ಮತ್ತೆ ಜಾತಿಗಣತಿ ಆದ್ರೂ ಇದೇ ಸಮಸ್ಯೆ ಆಗುತ್ತೆ. ಮತ್ತೊಮ್ಮೆ ಜಾತಿ ಜನಗಣತಿ ಆದ್ರೂ ಕೂಡ ಮತ್ತಷ್ಟು ಸಂಖ್ಯೆ ಕಡಿಮೆ ಬರೆಸುತ್ತಾರೆ ಹೀಗಾಗಿ ನಾವೆಲ್ಲ ಲಿಂಗಾಯತು ಒಂದೇ ಮೀಸಲಾತಿ ಅಡಿ ಬರಬೇಕಿದೆ ಎಂದರು.
ಕಾರ್ಯಕ್ರಮದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಸಚಿವ ಎಂ.ಬಿ.ಪಾಟೀಲ್, ಬಿ. ಆರ್. ಪಾಟೀಲ್, ಶಂಕರ್ ಬಿದರಿ, ಡಾ. ಪಂಡಿತಾರಾದ್ಯ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಾಧೀಶರು ಭಾಗಿಯಾಗಿದ್ದರು.
