ಬೆಂಗಳೂರು(ಸೆ.27): ಡಿಜೆ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣ ಪೂರ್ವ ನಿಯೋಜಿತ ಕೃತ್ಯವಾಗಿದ್ದು, ಪೊಲೀಸ್‌ ಇಲಾಖೆ 421 ಆರೋಪಿಗಳ ವಿರುದ್ಧ ಕ್ರಮಕೈಗೊಂಡಿದೆ ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಡಾ. ಜೆ.ಸಿ.ಮಾಧುಸ್ವಾಮಿ ತಿಳಿಸಿದ್ದಾರೆ. 

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಮಂತ್ರಿ ಮಂಡಲದ ವಿರುದ್ಧ ಕಾಂಗ್ರೆಸ್‌ ಮಂಡಿಸಿರುವ ಅವಿಶ್ವಾಸ ನಿರ್ಣಯದ ಪ್ರಸ್ತಾಪದ ಚರ್ಚೆಯಲ್ಲಿ ಮಾತನಾಡಿದ ಅವರು, ಗಲಭೆ ಪ್ರಕರಣದಲ್ಲಿ ಬಂಧಿತರಾಗಿರುವ 421 ಆರೋಪಿಗಳಲ್ಲಿ ಯಾರೂ ಅಮಾಯಕರಲ್ಲ. ಇದೊಂದು ಪೂರ್ವ ನಿಯೋಜಿತ ಕೃತ್ಯ. ಪೊಲೀಸ್‌ ಠಾಣೆ, ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರ ಮನೆಯ ಮೇಲೆ ದುರುದ್ದೇಶದಿಂದ ದಾಳಿ ನಡೆಸಿ ಸುಡಲಾಗಿದೆ. ಪೊಲೀಸರ ಮೇಲೆ ಹಲ್ಲೆ ನಡೆಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಸಿಸಿ ಟಿವಿಯಯ ಫೋಟೋಗಳನ್ನು ಸಂಗ್ರಹಿಸಲಾಗಿದೆ ಎಂದು ಹೇಳಿದರು.

ಅದಕ್ಕೂ ಮುನ್ನ ಮಾತನಾಡಿದ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು, ಡಿಜಿ ಹಳ್ಳಿ ಮತ್ತು ಕೆಜಿ ಹಳ್ಳಿ ಗಲಭೆ ಪ್ರಕರಣಕ್ಕೆ ನವೀನ್‌ ಎಂಬ ವ್ಯಕ್ತಿ ಫೇಸ್‌ಬುಕ್‌ ಮತ್ತು ಟ್ವೀಟರ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದೇ ಕಾರಣ. ಇದು ಪೂರ್ವ ನಿಯೋಚಿತ ಕೃತ್ಯವಲ್ಲ ಎಂದು ಹೇಳಿದರು.

ಡಿಜೆ ಹಳ್ಳಿ ಗಲಭೆಗೆ ಪೊಲೀಸ್‌ ವೈಫಲ್ಯವೇ ಕಾರಣ: ಸಂಪತ್‌ಗೆ ಕ್ಲೀನ್‌ಚಿಟ್‌

2020 ಆಗಸ್ಟ್‌ 11ರಂದು ಸಂಜೆ 5.47ಕ್ಕೆ ಫೇಸ್‌ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್‌ ಹಾಕಿದ್ದರ ವಿರುದ್ಧ ಎಸ್‌ಡಿಪಿಐ ಎಂಟತ್ತು ಜನರು ದೂರು ಕೊಡಲು ಪೊಲೀಸ್‌ ಠಾಣೆಗೆ ಹೋಗಿದ್ದರು. ಆ ನಂತರ 20ರಿಂದ 25 ಮಂದಿ ಮೌಲ್ವಿಗಳು ಕೂಡ ಪ್ರಕರಣ ದಾಖಲಿಸುವಂತೆ ಪೊಲೀಸರಿಗೆ ಕೋರಿದ್ದರೂ ಪೊಲೀಸರು ದೂರುದಾಖಲು ಮಾಡಿಕೊಳ್ಳದೆ ಇದು ಸೈಬರ್‌ ಕ್ರೈಂಗೆ ಬರುತ್ತದೆ. ಅಲ್ಲಿಗೆ ಹೋಗಿ ಎಂದು ಹೇಳುತ್ತಾ ಪ್ರಕರಣ ದಾಖಲಿಸಿರಲಿಲ್ಲ ಎಂದರು.

ಗಲಭೆ ಕುರಿತು ಕಾಂಗ್ರೆಸ್‌ ಸತ್ಯಶೋಧನಾ ಸಮಿತಿ ರಚಿಸಿತ್ತು. ಫೇಸ್‌ಬುಕ್‌ ಪೋಸ್ಟ್‌ ಬಗ್ಗೆ ದೂರು ದಾಖಲಿಸಿಕೊಂಡು ಕೂಡಲೇ ಎಫ್‌ಐಆರ್‌ ಹಾಕಿದ್ದರೆ ಘಟನೆ ನಡೆಯುತ್ತಿರಲಿಲ್ಲ. ಈ ನಡುವೆ ವೈರ್‌ಲೆಸ್‌ನಲ್ಲಿ ಗೋಲಿಬಾರ್‌ ಆದೇಶ ನೀಡಿದ್ದರಿಂದ ನಾಲ್ಕು ಮಂದಿ ಸಾವನ್ನಪ್ಪಿದರು. ಇದು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ ಎನ್ನುವುದಕ್ಕೆ ಸ್ಪಷ್ಟಉದಾಹರಣೆ ಎಂದು ವಾಗ್ದಾಳಿ ನಡೆಸಿದರು.

ಡಿಜೆ ಹಳ್ಳಿ ಗಲಭೆ ಪ್ರಕರಣ: ಎಸ್‌ಡಿಪಿಐ ಕಚೇರಿ 30 ಕಡೆ ಎನ್‌ಐಎ ದಾಳಿ

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ಅರವಿಂದ ಲಿಂಬಾವಳಿ, ಇದು ಪೂರ್ವ ನಿಯೋಜಿತ ಕೃತ್ಯವಾಗಿದೆ. ದಲಿತ ಎನ್ನುವ ಕಾರಣಕ್ಕೆ ಕಾಂಗ್ರೆಸ್‌ ಪಕ್ಷದ ಶಾಸಕ ಅಖಂಡ ಶ್ರೀನಿವಾಸ್‌ ಅವರ ಮನೆ ಮೇಲೆ ದಾಳಿ ನಡೆಸಿ ಸುಡಲಾಗಿದೆ ಎಂದು ವಾಗ್ದಾಳಿ ನಡೆಸಿದರು. ಇದಕ್ಕೆ ಬಿಜೆಪಿಯ ಹಲವು ಸದಸ್ಯರು ಧ್ವನಿಗೂಡಿಸಿದರು.

ಮಾತು ಮುಂದುವರೆಸಿದ ಸಿದ್ದರಾಮಯ್ಯ ಅವರು, ಓರ್ವ ಶಾಸಕರಿಗೆ ರಕ್ಷಣೆ ಕೊಡಲು ಆಗಲಿಲ್ಲ ಎಂದ ಮೇಲೆ ಸರ್ಕಾರ ಯಾರಿಗೆ ರಕ್ಷಣೆ ಕೊಡುತ್ತದೆ. ಪೊಲೀಸ್‌ ಠಾಣೆಯನ್ನೇ ರಕ್ಷಿಸಿಕೊಳ್ಳಲಾಗಲಿಲ್ಲ. ಇನ್ನು ಇದನ್ನು ಗೃಹ ಸಚಿವ ಬಸವರಾಜ ಬೊಮ್ಮಾಯಿ ಪೂರ್ವ ನಿಯೋಚಿತ ಸಂಚು ಎಂದು ಆರೋಪಿಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಎಸ್‌ಡಿಪಿಐ ಕೈವಾಡ ಇದ್ದರೆ ಸಾಕ್ಷ್ಯ ಸಹಿತ ರದ್ದು ಮಾಡಿ. ಈ ಬಗ್ಗೆ ಚುನಾವಣಾ ಆಯೋಗಕ್ಕೆ ಶಿಫಾರಸು ಮಾಡಿ. ಎಸ್‌ಡಿಪಿಐ ವಿರುದ್ಧ ಆರೋಪಿಸುತ್ತಿದ್ದವರು ಈಗೇಕೆ ಸುಮ್ಮನೆ ಇದ್ದೀರಿ ಎಂದು ವ್ಯಂಗ್ಯವಾಡಿದರು.