ಬೆಂಗಳೂರು(ಸೆ.25): ಕೆ.ಜೆ.ಹಳ್ಳಿ- ಡಿಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಪೊಲೀಸ್‌ ವೈಫಲ್ಯವೇ ಪ್ರಮುಖ ಕಾರಣ. ಇದರ ಜತೆಗೆ, ಕೇಂದ್ರ ಸರ್ಕಾರದ ಸಿಎಎ ಮತ್ತು ಎನ್‌ಆರ್‌ಸಿ ಜಾರಿ ವಿರುದ್ಧ ಸ್ಥಳೀಯರಲ್ಲಿದ್ದ ಅಸಮಾಧಾನ ಕೂಡ ಪರಿಣಾಮ ಬೀರಿದೆ.

ಹೀಗಂತ ಗಲಭೆ ಯ ಸತ್ಯಶೋಧನೆಗೆ ಕೆಪಿಸಿಸಿ ರಚಿಸಿದ್ದ ಮಾಜಿ ಗೃಹ ಸಚಿವ ಡಾ. ಜಿ.ಪರಮೇಶ್ವರ್‌ ನೇತೃತ್ವದ ಸಮಿತಿ ವರದಿ ಸಲ್ಲಿಕೆ ಮಾಡಿದೆ. ಅಲ್ಲದೆ, ಗಲಭೆಗೆ ಸಂಬಂಧಿಸಿದಂತೆ ಪ್ರಮುಖ ಆರೋಪ ಕೇಳಿಬಂದಿದ್ದ ಮಾಜಿ ಮೇಯರ್‌ ಸಂಪತ್‌ ರಾಜ್‌ ಅವರಿಗೂ ಸಮಿತಿ ಕ್ಲೀನ್‌ ಚಿಟ್‌ ನೀಡಿದೆ.

ಸಮಿತಿ ಅಧ್ಯಕ್ಷ ಡಾ. ಜಿ.ಪರಮೇಶ್ವರ್‌ ಅವರು ಬುಧವಾರವಷ್ಟೇ ವರದಿಯನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಿದ್ದರು. ಈ ವರದಿಯಲ್ಲಿ ಗಲಭೆಯ ಹಿಂದೆ ಸಂಪತ್‌ ರಾಜ್‌ ಅವರ ಕೈವಾಡವಿಲ್ಲ ಎಂದು ತಿಳಿಸಲಾಗಿದೆ. ಜೊತೆಗೆ ಗಲಭೆ ಬಳಿಕ ಸ್ಥಳೀಯ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಅವರು ಕಾರ್ಪೊರೇಟರ್‌ಗಳನ್ನು ರಾಜಕೀಯವಾಗಿ ದೂರವಿಟ್ಟು ಗೊಂದಲ ಸೃಷ್ಟಿಸಿಕೊಂಡಿದ್ದಾರೆ. ಅವರನ್ನು ಪಕ್ಷದ ವೇದಿಕೆಗೆ ಕರೆದು ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವಂತೆ ಶಿಫಾರಸು ಮಾಡಿದೆ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ.

ಡಿಜೆ ಹಳ್ಳಿ ಗಲಭೆ ಪ್ರಕರಣ: ಎಸ್‌ಡಿಪಿಐ ಕಚೇರಿ 30 ಕಡೆ ಎನ್‌ಐಎ ದಾಳಿ

ಸೂಕ್ಷ್ಮ ಪ್ರದೇಶದಲ್ಲಿ ಪೊಲೀಸರು ನಿರ್ಲಕ್ಷ್ಯ ತಾಳಿದ್ದೇ ಗಲಭೆ ನಡೆಯಲು ಕಾರಣ. ಈ ಪ್ರದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿರುವ ಅಲ್ಪಸಂಖ್ಯಾತ ಸಮುದಾಯ ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಮತ್ತು ರಾಷ್ಟ್ರೀಯ ನಾಗರಿಕ ನೋಂದಣಿ ತಿದ್ದುಪಡಿ ಕಾಯ್ದೆ(ಎನ್‌ಆರ್‌ಸಿ) ವಿಚಾರವಾಗಿ ಮೊದಲೇ ತೀವ್ರ ಅಸಮಾಧಾನಗೊಂಡಿತ್ತು. ಇದೂ ಕೂಡ ಘಟನೆ ಮೇಲೆ ಪರಿಣಾಮ ಬೀರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಶಾಸಕರಿಂದ ಪಾಲಿಕೆ ಸದಸ್ಯರ ನಿರ್ಲಕ್ಷ್ಯ

ಘಟನೆಯಲ್ಲಿ ಮಾಜಿ ಮೇಯರ್‌ ಸಂಪತ್‌ರಾಜ್‌ ಕೈವಾಡವಿಲ್ಲ. ಡಿ.ಜೆ.ಹಳ್ಳಿ ಕ್ಷೇತ್ರದ ಮೇಲೆ ಹಿಡಿತ ಸಾಧಿಸುವ ಪ್ರಯತ್ನ ಮಾಡಿಲ್ಲ. ಸಂಪತ್‌ರಾಜ್‌ ಮೇಯರ್‌ ಆದ ಬಳಿಕ ತಮ್ಮ ಕ್ಷೇತ್ರ ಕೈತಪ್ಪಬಹುದೆಂದು ಶಾಸಕರಿಗೆ ಭಯ ಕಾಡಿರಬಹುದು. ಹಾಗಾಗಿ ಅವರೊಂದಿಗೆ ಅಂತರ ಕಾಯ್ದುಕೊಳ್ಳುವ ಪ್ರಯತ್ನ ನಡೆಸಿದ್ದಾರೆ. ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಅವರು ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ವಲಸೆ ಬಂದಿದ್ದರೂ ಮೂಲ ಕಾಂಗ್ರೆಸಿಗರು ಅಖಂಡ ಗೆಲುವಿಗೆ ಶ್ರಮಿಸಿದ್ದರು. ಆದರೆ, ಅಖಂಡ ಅವರು ಗೆದ್ದ ಮೇಲೆ ಸ್ಥಳೀಯ ಕಾಂಗ್ರೆಸ್‌ ಕಾರ್ಪೋರೇಟರ್‌ಗಳನ್ನು ಕಡೆಗಣಿಸಿದ್ದಾರೆ. ಅವರನ್ನು ಪಕ್ಷದ ವೇದಿಕೆಗೆ ಕರೆದು ಎಚ್ಚರಿಕೆ ಕೊಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ತಿಳಿದು ಬಂದಿದೆ.