ಬೆಂಗಳೂರು(ಸೆ.25): ಡಿ.ಜೆ.ಹಳ್ಳಿ-ಕೆ.ಜಿ.ಹಳ್ಳಿ ಗಲಭೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ದಳ (ಎನ್‌ಐಎ), ಎಸ್‌ಡಿಪಿಐ ಕಚೇರಿ ಸೇರಿದಂತೆ ಗುರುವಾರ ಸುಮಾರು 30ಕ್ಕೂ ಹೆಚ್ಚಿನ ಸ್ಥಳಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಿ ಪ್ರಕರಣದ ಪ್ರಮುಖ ಸಂಚುಕೋರನೊಬ್ಬನನ್ನು ಬಂಧಿಸಿದ್ದಲ್ಲದೆ ಹಲವಾರು ಮಾರಕಾಸ್ತ್ರಗಳನ್ನು ಜಪ್ತಿ ಮಾಡಿದೆ.

ಕೆ.ಜಿ.ಹಳ್ಳಿಯ ಸೈಯದ್‌ ಸಾದಿಕ್‌ ಬಂಧಿತರಾಗಿದ್ದು, ಕೆ.ಜಿ.ಹಳ್ಳಿ ಠಾಣೆ ಮೇಲಿನ ದಾಳಿಯಲ್ಲಿ ಆತನ ಪ್ರಮುಖ ಪಾತ್ರವಹಿಸಿದ್ದ. ಇನ್ನು ಕಾರ್ಯಾಚರಣೆ ವೇಳೆ ಏರ್‌ಗನ್‌, ಪೆಲ್ಲೆಟ್ಸ್‌, ಕಬ್ಬಿಣದ ಸಲಾಕೆಗಳು, ಮಾರಕಾಸ್ತ್ರಗಳು, ಡಿಜಿಟಲ್‌ ಡಿವೈಸ್‌, ಡಿವಿಆರ್‌ ಹಾಗೂ ಎಸ್‌ಡಿಪಿಐ ಮತ್ತು ಪಿಎಫ್‌ಐ ಸಂಘಟನೆಗಳಿಗೆ ಸಂಬಂಧಿಸಿ ದಾಖಲೆಗಳು ಜಪ್ತಿಯಾಗಿವೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಸ್‌ಡಿಪಿಐ ಕಚೇರಿಗಳು ಹಾಗೂ ಆ ಪಕ್ಷದ ಬೆಂಗಳೂರು ಘಟಕದ ಕಾರ್ಯದರ್ಶಿಯೂ ಆಗಿರುವ ಪ್ರಕರಣದ ಪ್ರಮುಖ ಆರೋಪಿ ಸೈಯದ್‌ ಮುಜಾಮಿಲ್‌ ಮನೆ ಸೇರಿದಂತೆ 30 ಕಡೆಗೆ ಎನ್‌ಐಎ ಶೋಧ ನಡೆಸಿದೆ. ಮುಂಜಾನೆ 5ಕ್ಕೆ ಈ ಕಾರ್ಯಾಚರಣೆ ಶುರುವಾಗಿದ್ದು, ಮಧ್ಯಾಹ್ನ 1ಕ್ಕೆ ಮುಕ್ತಾಯವಾಗಿದೆ ಎಂದು ಮೂಲಗಳು ಹೇಳಿವೆ.

ಡಿಜೆ-ಕೆಜಿ ಹಳ್ಳಿ ಗಲ​ಭೆಯ 2 ಕೇಸ್‌ ಎನ್‌ಐಎ ತನಿಖೆ

ಯಾರೀತ ಸೈಯದ್‌ ಸಾದಿಕ್‌:

ಕೆ.ಜಿ.ಹಳ್ಳಿಯ ಸೈಯದ್‌ ಸಾದಿಕ್‌ ಖಾಸಗಿ ಬ್ಯಾಂಕ್‌ಗಳ ಸಾಲ ವಸೂಲಾತಿ ಏಜೆಂಟ್‌ ಆಗಿ ಕೆಲಸ ಮಾಡುತ್ತಿದ್ದ. ಸ್ಥಳೀಯವಾಗಿ ಎಸ್‌ಡಿಪಿಐ ಸಂಘಟನೆ ಜತೆ ಗುರುತಿಸಿಕೊಂಡಿದ್ದ ಆತ, ಆ.11ರಂದು ರಾತ್ರಿ ಕೆ.ಜಿ.ಹಳ್ಳಿ ಠಾಣೆ ಮೇಲೆ ದಾಳಿಗೆ ಪ್ರಮುಖ ಸಂಚುಕೋರನಾಗಿದ್ದ. ದಾಳಿ ಬಳಿಕ ತಲೆಮರೆಸಿಕೊಂಡಿದ್ದ ಎಂದು ಎನ್‌ಐಎ ಹೇಳಿದೆ.

ಈ ಗಲಭೆ ಪ್ರಕರಣದ ಕೆಲ ಆರೋಪಿಗಳಿಗೆ ಭಯೋತ್ಪಾದಕ ಸಂಘಟನೆಗಳ ನಂಟು ಹೊಂದಿರುವುದು ಸಿಸಿಬಿ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು. ಈ ಸಂಗತಿಯನ್ನು ಗಂಭೀರವಾಗಿ ಪರಿಗಣಿಸಿದ ಸರ್ಕಾರವು, ಹೆಚ್ಚಿನ ತನಿಖೆ ಸಲುವಾಗಿ ಎನ್‌ಐಎಗೆ ವಹಿಸಿದೆ. ಐಜಿಪಿ ನೇತೃತ್ವದಲ್ಲಿ ತನಿಖೆ ಆರಂಭಿಸಿರುವ ಎನ್‌ಐಎ ವಿಶೇಷ ತಂಡವು, ಗುರುವಾರ ಸ್ಥಳೀಯ ಪೊಲೀಸರ ಸಹಕಾರದಲ್ಲಿ ಗಲಭೆ ಪೀಡಿತ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸಿದೆ. ಹಲಸೂರು ಗೇಟ್‌, ದೇವರಜೀವನಹಳ್ಳಿ (ಡಿ.ಜೆ.ಹಳ್ಳಿ) ಹಾಗೂ ಕೆ.ಜಿ.ಹಳ್ಳಿಯಲ್ಲಿರುವ ಎಸ್‌ಡಿಪಿಐ ಕಚೇರಿಗಳಲ್ಲಿ ಎನ್‌ಐಎ ಶೋಧ ನಡೆಸಿದೆ ಎಂದು ತಿಳಿದು ಬಂದಿದೆ.

ಅಲ್ಲದೆ, ಪ್ರಕರಣದಲ್ಲಿ ಬಂಧಿತರಾಗಿರುವ ಆರೋಪಿಗಳಾದ ಎಸ್‌ಡಿಪಿಐನ ಬೆಂಗಳೂರು ಘಟಕದ ಕಾರ್ಯದರ್ಶಿ ಸೈಯದ್‌ ಮುಜಾಮಿಲ್‌, ಸ್ಥಳೀಯ ಕಾಂಗ್ರೆಸ್‌ ಮುಖಂಡ ಹಾಗೂ ಬಿಬಿಎಂಪಿ ನಾಗವಾರ ವಾರ್ಡ್‌ ಕಾಂಗ್ರೆಸ್‌ ಸದಸ್ಯೆ ಪತಿ ಮಾಜಿ ಖಲೀಂ ಪಾಷ, ಪುಲಿಕೇಶಿ ನಗರದ ಕ್ಷೇತ್ರದ ಜೆಡಿಎಸ್‌ ಅಧ್ಯಕ್ಷ ವಾಜಿದ್‌ ಪಾಷ, ಬಿಬಿಎಂಪಿ ಮಾಜಿ ಮೇಯರ್‌ ಸಂಪತ್‌ ರಾಜ್‌ ಆಪ್ತ ಸಹಾಯಕ ಅರುಣ್‌, ಭಯೋತ್ಪಾದಕ ಸಂಘಟನೆಗಳ ಜತೆ ನಂಟು ಆರೋಪ ಎದುರಿಸುತ್ತಿರುವ ಸಮೀವುದ್ದೀನ್‌ ಹಾಗೂ ಫೈರೋಜ್‌ ಪಾಷನ ಮನೆ ಹಾಗೂ ಕಚೇರಿಗಳ ಮೇಲೆ ಎನ್‌ಐಎ ಕಾರ್ಯಾಚರಣೆ ನಡೆಸಿದೆ ಎನ್ನಲಾಗಿದೆ.

ಶಾಸಕರ ಮನೆ, ಠಾಣೆಗೆ ಭೇಟಿ, ಪರಿಶೀಲನೆ

ಇನ್ನು ಗಲಭೆ ವೇಳೆ ಬೆಂಕಿಗೆ ಆಹುತಿಯಾಗಿದ್ದ ಕಾವಲ್‌ಭೈರಸಂದ್ರದಲ್ಲಿರುವ ಪುಲಿಕೇಶಿ ನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆ ಹಾಗೂ ಕಚೇರಿ, ಅವರ ಸೋದರಿ ಮನೆ ಹಾಗೂ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿ ಠಾಣೆಗಳಿಗೆ ಸಹ ಎನ್‌ಐಎ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

421 ಆರೋಪಿಗಳು, 72 ಎಫ್‌ಐಆರ್‌

ಫೇಸ್‌ಬುಕ್‌ನಲ್ಲಿ ಇಸ್ಲಾಂ ಧರ್ಮಗುರು ಮಹಮ್ಮದ್‌ ಪೈಗಂಬರ್‌ ಬಗ್ಗೆ ಆ.11ರಂದು ಸೋಮವಾರ ರಾತ್ರಿ ಪುಲಿಕೇಶಿನಗರ ಕ್ಷೇತ್ರದ ಶಾಸಕ ಅಖಂಡ ಶ್ರೀನಿವಾಸ ಮೂರ್ತಿ ಸೋದರ ಸಂಬಂಧಿ ನವೀನ್‌ ವಿವಾದಾತ್ಮಕ ಪೋಸ್ಟ್‌ ಹಾಕಿದ್ದ. ಇದರಿಂದ ಆ ದಿನ ರಾತ್ರಿ ಡಿ.ಜೆ.ಹಳ್ಳಿ, ಕೆ.ಜಿ.ಹಳ್ಳಿ ಹಾಗೂ ಕಾವಲ್‌ಭೈರಸಂದ್ರದಲ್ಲಿ ಗಲಭೆ ನಡೆದಿತ್ತು. ಈ ಸಂಬಂಧ ಇದುವರೆಗೆ 72 ಎಫ್‌ಐಆರ್‌ಗಳು ದಾಖಲಾಗಿದ್ದು, ಒಟ್ಟು 421 ಆರೋಪಿಗಳು ಬಂಧಿತರಾಗಿದ್ದಾರೆ. ಇದರಲ್ಲಿ ಪೊಲೀಸರ ಗುಂಡಿನ ದಾಳಿ ಸಂಬಂಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳ ಬಗ್ಗೆ ಎನ್‌ಐಎ ತನಿಖೆ ನಡೆಸುತ್ತಿದೆ. ಶಾಸಕರ ಮನೆ ಮತ್ತು ಕಚೇರಿ ಮೇಲಿನ ದಾಳಿ ಬಗ್ಗೆ ಸಿಸಿಬಿ ತನಿಖೆ ನಡೆಸುತ್ತಿದೆ. ಉಳಿದವು ಪೂರ್ವ ವಿಭಾಗದ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.