Asianet Suvarna News Asianet Suvarna News

ಮುಂದಿನ ಮಳೆಗಾಲಕ್ಕೆ ಐಟಿ ಕಾರಿಡಾರ್‌ನ ಎಲ್ಲ ಸಮಸ್ಯೆಗಳಿಗೆ ಪರಿಹಾರ: ಅಶ್ವತ್ಥ್

ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದಾಗಿ ವಿಚಲಿತರಾಗಿರುವ ಐಟಿ-ಬಿಟಿ ಕಂಪನಿಗಳನ್ನು ಸಂತೈಸಲು ರಾಜ್ಯ ಸರ್ಕಾರ ಮುಂದಾಗಿದೆ. 

minister dr cn ashwath narayan meeting with bengaluru it firms gvd
Author
First Published Sep 8, 2022, 6:45 AM IST

ಬೆಂಗಳೂರು (ಸೆ.08): ಸಿಲಿಕಾನ್‌ ಸಿಟಿ ಬೆಂಗಳೂರಿನಲ್ಲಿ ಮಳೆಯಿಂದ ಉಂಟಾಗಿರುವ ಸಮಸ್ಯೆಗಳಿಂದಾಗಿ ವಿಚಲಿತರಾಗಿರುವ ಐಟಿ-ಬಿಟಿ ಕಂಪನಿಗಳನ್ನು ಸಂತೈಸಲು ರಾಜ್ಯ ಸರ್ಕಾರ ಮುಂದಾಗಿದೆ. ಐಟಿ-ಬಿಟಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದ ಐಟಿ-ಬಿಟಿ ಸಚಿವ ಡಾ.ಸಿ.ಎನ್‌.ಅಶ್ವತ್ಥನಾರಾಯಣ ಅವರು ‘ಮುಂದಿನ ಮಳೆಗಾಲದ ವೇಳೆಗೆ ಐಟಿ ಕಂಪನಿಗಳ ತಾಣ ಎಂದೇ ಪ್ರಸಿದ್ಧವಾಗಿರುವ ಮಹದೇವಪುರ ವಲಯದ ಭಾಗದ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತೇವೆ’ ಎಂದು ಭರವಸೆ ನೀಡಿದ್ದಾರೆ.

ಮಹದೇವಪುರ ಭಾಗದ ಸರ್ಜಾಪುರ, ಇಕೋ ಸ್ಪೇಸ್‌, ವೈಟ್‌ಫೀಲ್ಡ್‌, ಮಾರತಹಳ್ಳಿ, ಕುಂದಲಹಳ್ಳಿ, ಹೋಪ್‌ ಫಾರಂ ಸೇರಿದಂತೆ ಹಲವು ಭಾಗಳಲ್ಲಿ ತೀವ್ರ ಮಳೆಯಿಂದಾಗಿ ಐಟಿ-ಬಿಟಿ ಕಂಪನಿಗಳ ಕಾರ್ಯನಿರ್ವಹಣೆಗೆ ತೀವ್ರ ಅಡಚಣೆಯಾಗಿತ್ತು. ಈ ಬಗ್ಗೆ ಐಟಿ ಉದ್ಯಮಿಗಳು ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿ ಟ್ವೀಟ್‌ಗಳನ್ನೂ ಮಾಡಿದ್ದರು. ಇದರಿಂದ ಎಚ್ಚೆತ್ತ ಐಟಿ-ಬಿಟಿ ಸಚಿವ ಅಶ್ವತ್ಥನಾರಾಯಣ, ವಿಧಾನಸೌಧದಲ್ಲಿ ಬುಧವಾರ ಸಂಜೆ ಐಟಿ-ಬಿಟಿ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿದರು.

ರಾಮನಗರದಲ್ಲಿ ಜೆಡಿಎಸ್‌ಗೆ ಶಾಕ್ ಕೊಟ್ಟ ಅಶ್ವತ್ಥ್ ನಾರಾಯಣ, ಮಾಜಿ MLC ಬಿಜೆಪಿ ಸೇರ್ಪಡೆ

ಬೆಂಗಳೂರು ಬ್ರಾಂಡ್‌ ಉಳಿಸೋಣ-ಅಶ್ವತ್ಥ್: ಐಟಿ ಉದ್ಯಮಿಗಳ ಅಹವಾಲುಗಳನ್ನು ಆಲಿಸಿದ ಸಚಿವ ಅಶ್ವತ್ಥನಾರಾಯಣ್‌, ‘ಬೆಂಗಳೂರು ಬ್ರಾಂಡ್‌ ಅನ್ನು ಎಲ್ಲರೂ ಸೇರಿ ಉಳಿಸೋಣ. ಇದಕ್ಕೆ ಅಪಕೀರ್ತಿ ತರುವುದು ಬೇಡ. ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಲು ಇನ್ನುಮುಂದೆ ಪ್ರತಿ ತಿಂಗಳೂ ವರ್ಚುಯಲ… ಸಭೆ ನಡೆಸಲಾಗುವುದು. ಜತೆಗೆ ಐಟಿ ಪ್ರತಿನಿಧಿಗಳನ್ನು ಒಳಗೊಂಡ ಸಮನ್ವಯ ಸಮಿತಿಗಳನ್ನು ರಚಿಸಲಾಗುವುದು’ ಎಂದು ಭರವಸೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಬೆಂಗಳೂರು ಬಿಡುವ ಮನಸ್ಸಿಲ್ಲ-ಕಂಪನಿಗಳು: ಇದಕ್ಕೆ ಸ್ಪಂದಿಸಿದ ಐಟಿ ಕಂಪನಿಗಳ ಪ್ರತಿನಿಧಿಗಳು, ‘ನಮಗ್ಯಾರಿಗೂ ಬೆಂಗಳೂರನ್ನು ಬಿಟ್ಟು ಹೋಗುವ ಮನಸ್ಸಿಲ್ಲ. ಮಳೆಯಿಂದ ಉಂಟಾಗಿರುವ ಸಮಸ್ಯೆ ಮತ್ತು ನಷ್ಟವನ್ನು ಸರ್ಕಾರದ ಗಮನಕ್ಕೆ ತರುವುದಷ್ಟೇ ನಮ್ಮ ಬಯಕೆಯಾಗಿದೆ. ಮಳೆಯಿಂದಾಗಿ ಕಚೇರಿಗಳ ಸುತ್ತಲಿನ ಪ್ರದೇಶಗಳು ಜಲಾವೃತಗೊಂಡಿವೆ. ಸಿಬ್ಬಂದಿ ಕಚೇರಿಗೆ ತಲುಪಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಕೂಡಲೇ ಇದಕ್ಕೆ ಕಾರಣವಾಗಿರುವ ಅಂಶಗಳನ್ನು ಗುರುತಿಸಿ ಪರಿಹಾರ ಒದಗಿಸಿ’ ಎಂದು ಮನವಿ ಮಾಡಿದರು.

ಕಾಲಮಿತಿಯಲ್ಲಿ ಕೆಲಸ ಮುಗಿಸುತ್ತೇವೆ: ಕಂಪನಿಗಳ ಮನವಿಗೆ ಪ್ರತಿಕ್ರಿಯಿಸಿದ ಸಚಿವ ಅಶ್ವತ್ಥನಾರಾಯಣ, ‘ಮಳೆ ನೀರು ಸರಾಗವಾಗಿ ಹರಿದು ಹೋಗಲು ಇರುವ ಕೆ-100 ಯೋಜನೆಯನ್ನು ಮಹದೇವಪುರಕ್ಕೂ ಅಳವಡಿಸುತ್ತೇವೆ. ಇಲ್ಲಿನ ಅಭಿವೃದ್ಧಿ ಯೋಜನೆಗಳಲ್ಲಿ ಐಟಿ ಕಂಪನಿಗಳ ಸಹಭಾಗಿತ್ವ ಪಡೆದು, ಎಲ್ಲಾ ಯೋಜನೆಗಳನ್ನೂ ಕಾಲಮಿತಿಯಲ್ಲಿ ಮುಗಿಸುವ ಕೆಲಸ ಮಾಡುತ್ತೇವೆ. ಇವುಗಳ ಅನುಷ್ಠಾನದಲ್ಲಿ ತಂತ್ರಜ್ಞಾನವನ್ನು ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳುತ್ತೇವೆ. ಜತೆಗೆ ಎಲೆಕ್ಟ್ರಾನಿಕ್‌ ಸಿಟಿಯಲ್ಲಿರುವ ‘ಎಲ್ಸಿಟಾ’ ಮಾದರಿಯ ವ್ಯವಸ್ಥೆಯನ್ನು ಇಲ್ಲೂ ಆರಂಭಿಸುವ ಬಗ್ಗೆಯೂ ಪರಿಶೀಲಿಸುತ್ತೇವೆ’ ಎಂದು ವಿವರಣೆ ನೀಡಿದರು.

ಐಟಿ ಕಂಪನಿಗಳು ಧೃತಿಗೆಡಬಾರದು: ಐಟಿ ವಿಷನ್‌ ಗ್ರೂಪ್‌ ಮುಖ್ಯಸ್ಥ ಕ್ರಿಸ್‌ ಗೋಪಾಲಕೃಷ್ಣನ್‌, ‘ಬೆಂಗಳೂರು ಬ್ರಾಂಡ್‌ ಎಲ್ಲಿಗೂ ಹೋಗುವುದಿಲ್ಲ. ಇಂತಹ ಮಹಾಮಳೆ ಬಂದರೆ ಎಂತಹ ನಗರವಾದರೂ ಸ್ತಬ್ಧವಾಗುತ್ತದೆ. ಶೇ.80ಕ್ಕಿಂತ ಹೆಚ್ಚಿನ ಭಾಗಕ್ಕೆ ಏನೂ ಆಗಿಲ್ಲ. ಮಹದೇವಪುರದ ಭಾಗದಲ್ಲಿ ಆಗಿರುವ ಹಾನಿ ಅನಿರೀಕ್ಷಿತ. ಇದರಿಂದ ಐಟಿ ಕಂಪನಿಗಳು ಧೃತಿಗೆಡಬಾರದು’ ಎಂದು ಹೇಳಿದರು.

ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ, ಮೆಟ್ರೋ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌, ನಗರ ಪೊಲೀಸ್‌ ಆಯುಕ್ತ ಪ್ರತಾಪ್‌ ರೆಡ್ಡಿ ಸಭೆಯಲ್ಲಿ ಹಾಜರಿದ್ದರು. ಐಟಿ ಕಂಪನಿಗಳ ಪರವಾಗಿ ಗೋಲ್ಡ್‌ಮ್ಯಾನ್ಸ್‌ ಸ್ಯಾಕ್ಸ್‌, ಇಸ್ಫೋಸಿಸ್‌, ವೆಲ್ಸ್‌ಫಾರ್ಗೋ, ವಿಪ್ರೋ, ಎಂಫಸಿಸ್‌, ಇಂಟೆಲ್‌, ಆಕ್ಸೆಂಚರ್‌, ಸೊನಾಟ ಸಾಫ್‌್ಟವೇರ್‌, ನಾಸ್ಕಾಂ ಸೇರಿದಂತೆ ವಿವಿಧ ಕಂಪನಿಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.

'ಕಾರ್ಪೋರೇಷನ್ ಕೊಠಡಿಯ ದಾಖಲೆಗಳಿಗೆ ಬೆಂಕಿ‌ ಇಟ್ಟಿದ್ದು ಇದೇ ಅಶ್ವಥ್ ನಾರಾಯಣ'

ಪೈ ಕಳವಳ ಅರ್ಥ ಮಾಡಿಕೊಳ್ಳಬೇಕು: ಉದ್ಯಮಿ ಮೋಹನ್‌ದಾಸ್‌ ಪೈ ಅವರು ನಗರದ ಪರಿಸ್ಥಿತಿ ಬಗ್ಗೆ ಟೀಕಿಸಿ ಮಾಡಿರುವ ಟ್ವೀಟ್‌ಗಳ ಹಿಂದಿನ ಅವರ ಕಳವಳ ಹಾಗೂ ಕಳಕಳಿ ಅರ್ಥ ಮಾಡಿಕೊಳ್ಳಬೇಕು ಎಂದು ಸಚಿವ ಅಶ್ವತ್ಥನಾರಾಯಣ್‌ ಹೇಳಿದರು. ಐಟಿ ಕಂಪನಿಗಳ ಸಭೆ ಬಳಿಕ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ‘ಪೈ ಅವರು ನಗರದ ಸಮಸ್ಯೆಗಳ ಬಗ್ಗೆ ಖಾರವಾದ ಟ್ವೀಟ್‌ ಮಾಡಿರುವುದು ನಿಜ. ನಗರ ಈ ಮಟ್ಟಕ್ಕೆ ಬೆಳೆಯಲು ಅವರ ಕೊಡುಗೆಯೂ ಇದೆ. ಇದೇ ನಗರದ ಬಗ್ಗೆ ಅವರು ಹಲವು ಒಳ್ಳೆಯ ಟ್ವೀಟ್‌ ಮಾಡಿದ್ದಾರೆ. ಪ್ರಸ್ತುತ ಅವರ ಮಾತಿನ ಕಳಕಳಿ ಹಾಗೂ ಕಳವಳ ಅರ್ಥ ಮಾಡಿಕೊಳ್ಳೋಣ’ ಎಂದರು.

Follow Us:
Download App:
  • android
  • ios