ಬೆಂಗಳೂರು (ಸೆ.15):‘ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದರೆ ಅವರ ಮನೆ ವಾಚ್‌ಮ್ಯಾನ್‌ ಆಗುತ್ತೇನೆ ಎಂದಿದ್ದರು. ವಾಚ್‌ಮ್ಯಾನ್‌ ಕೆಲಸ ಖಾಲಿ ಇದೆ ಎಂಬ ವಿಷಯ ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆಯಾಗುತ್ತಿದೆ. ಯಾವಾಗ ವಾಚ್‌ಮ್ಯಾನ್‌ ಆಗುತ್ತೀರಾ ಎಂದು ಜನ ಕೇಳುತ್ತಿದ್ದಾರೆ’ ಎಂದು ಶಾಸಕ ಜಮೀರ್‌ ಅಹಮದ್‌ ಕುರಿತು ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ವ್ಯಂಗ್ಯವಾಡಿದ್ದಾರೆ.

ವಿಧಾನಸೌಧದಲ್ಲಿ ಸೋಮವಾರ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಶಾಸಕ ಜಮೀರ್‌ ಅಹಮದ್‌ ಮಾತಿನಲ್ಲಿ ಎಷ್ಟುಸತ್ಯ ಇರುತ್ತದೆ? ಆಸ್ತಿಯನ್ನು ಸರ್ಕಾರಕ್ಕೆ ಬರೆದು ಕೊಡುತ್ತೇನೆ ಎಂದಿದ್ದಾರೆ. ಅದನ್ನು ಪಕ್ಕಕ್ಕಿಡಿ. ಆ ಆಸ್ತಿ ಹೇಗೆ ಬಂತು ಎನ್ನುವುದನ್ನು ಹೇಳಲಿ’ ಎಂದು ಒತ್ತಾಯಿಸಿದರು.

'ಈ ಫೋಟೋ ಏನನ್ನು ಹೇಳುತ್ತೆ? ಜನ್ಮಜನ್ಮಾಂತರದ ಸಂಬಂಧ ಅನ್ನುತ್ತೆ' ...

‘ಕ್ಯಾಸಿನೋ ಹೋದರೆ ನೆಮ್ಮದಿ ಸಿಗುತ್ತದೆ ಎಂಬುದಾಗಿ ಜಮೀರ್‌ ಹೇಳಿದ್ದಾರೆ. ಯಾವ ರೀತಿ ನೆಮ್ಮದಿ ಸಿಗುತ್ತದೆ ಎಂದುದನ್ನು ಅವರೇ ಹೇಳಬೇಕು. ಶ್ರೀಲಂಕಾದ ಕೊಲೊಂಬೋದಲ್ಲಿ ಜಮೀರ್‌ ಅವರಿಗೆ ತಪಸ್ಸು ಮಾಡುವುದಕ್ಕೆ ಜಾಗ ಇರಬಹುದೇನೋ? ಬುದ್ಧನಿಗೆ ಬೋಧಿ ವೃಕ್ಷದ ಕೆಳಗೆ ಜ್ಞಾನೋದಯವಾದಂತೆ, ಕೊಲಂಬೋಗೆ ಹೋದರೆ ಯಾವ ರೀತಿ ಶಾಂತಿ ಸಿಗುತ್ತದೆ ಎಂಬುದನ್ನು ಸ್ಪಷ್ಟಪಡಿಸಬೇಕು. ಕ್ಯಾಸಿನೋಗೆ ಯಾಕೆ, ಎಷ್ಟುಬಾರಿ ಹೋಗಿದ್ದರು ಎಂಬುದನ್ನು ಹೇಳಬೇಕು. ಅದನ್ನು ಮುಚ್ಚಿಟ್ಟರೆ ಸಂಶಯದ ಸುಳಿಯೊಳಗೆ ಸಿಲುಕುತ್ತಾರೆ’ ಎಂದು ಲೇವಡಿ ಮಾಡಿದರು.

ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರಾಗಿರುವ ಫಾಜಿಲ್‌ ಜತೆ ಜಮೀರ್‌ ಅಹಮದ್‌ ಇರುವ ಫೋಟೋ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ಜನ್ಮ ಜನ್ಮಾಂತರ ಸಂಬಂಧ ಇರುವ ರೀತಿಯಲ್ಲಿ ಅವರಿಬ್ಬರ ಫೋಟೋಗಳಿವೆ. ಅದಕ್ಕೆಲ್ಲಾ ಅವರೇ ಉತ್ತರ ಹೇಳಬೇಕು’ ಎಂದು ಮಾಜಿ ಮುಖ್ಯಮಂತ್ರಿಯೊಬ್ಬರು ಮತ್ತು ಜಮೀರ್‌ ಅಹ್ಮದ್‌ ಜತೆ ಫಾಜಿಲ್‌ ಇರುವ ಫೋಟೋವನ್ನು ಪ್ರದರ್ಶಿಸಿದರು. ‘ಇದು ಯಾವುದೋ ಕೌಟುಂಬಿಕ ಕಾರ್ಯಕ್ರಮದ್ದಾಗಿದೆ. ಇದು ಅಪರಿಚಿತರ ಜತೆ ತೆಗೆಸಿಕೊಂಡು ಫೋಟೋವಂತೂ ಅಲ್ಲ. ನಾನು ಈಗಲೇ ಅವರನ್ನು ಪೆಡ್ಲರ್‌ ಎನ್ನುತ್ತಿಲ್ಲ. ಆದರೆ ಅಲ್ಪಸಂಖ್ಯಾತರ ಗುರಾಣಿ ಹಿಡಿದು ತಪ್ಪಿಸಿಕೊಳ್ಳುವುದು ಬೇಡ. ಷಡ್ಯಂತ್ರದ ಗುರಾಣಿ ಹಿಡಿಯುವುದು ಬೇಡ. ಕಳ್ಳನ ಹೆಂಡತಿ ಯಾವತ್ತಾದರೂ ಒಂದು ದಿನ ‘ಡ್ಯಾಷ್‌’ ಆಗಲೇಬೇಕು’ ಎಂದು ಟೀಕಾಪ್ರಹಾರ ನಡೆಸಿದರು.