ಮಂಗಳೂರು ಸ್ಫೋಟ ಪ್ರಕರಣದ ಜಾಲ ಭೇದಿಸುತ್ತೇವೆ: ಸಿಎಂ ಬೊಮ್ಮಾಯಿ
ಮಂಗಳೂರು ಸ್ಫೋಟ ಪ್ರಕರಣ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಇದರ ಹಿಂದಿನ ಜಾಲವನ್ನು ಭೇದಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸ್ಫೋಟ ಪ್ರಕರಣ ಉಗ್ರರ ಕೃತ್ಯ ಆಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.
ಬಳ್ಳಾರಿ (ನ.21): ಮಂಗಳೂರು ಸ್ಫೋಟ ಪ್ರಕರಣ ಕುರಿತು ಎಲ್ಲ ಆಯಾಮಗಳಲ್ಲೂ ತನಿಖೆ ನಡೆಯುತ್ತಿದೆ. ಇದರ ಹಿಂದಿನ ಜಾಲವನ್ನು ಭೇದಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. ಸ್ಫೋಟ ಪ್ರಕರಣ ಉಗ್ರರ ಕೃತ್ಯ ಆಗಿರಬಹುದು ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ದುಷ್ಕೃತ್ಯ ಎಸಗಿದ ವ್ಯಕ್ತಿ ನಕಲಿ ಆಧಾರ್ ಕಾರ್ಡ್, ನಕಲಿ ವಿಳಾಸ ಬಳಸಿ ಕೃತ್ಯ ಎಸಗಿದ್ದಾನೆ. ನಕಲಿ ವಿಳಾಸ ಹುಬ್ಬಳ್ಳಿಯದು ಎಂದು ತಿಳಿದು ಬಂದಿದೆ.
ಘಟನೆಯ ಹಿನ್ನೆಲೆಯಲ್ಲಿ ಸಮಗ್ರ ತನಿಖೆಯಾಗಲಿದೆ. ಈ ಸಂಬಂಧ ಎನ್‌ಐಎ ಹಾಗೂ ಐಬಿ ಸ್ಥಳದಲ್ಲಿಯೇ ಬೀಡು ಬಿಟ್ಟಿವೆ. ರಾಜ್ಯ ಪೊಲೀಸ್ ಅಧಿಕಾರಿಗಳು ಸುದೀರ್ಘ ತನಿಖೆ ಕೈಗೊಂಡಿದ್ದಾರೆ. ಸ್ಫೋಟ ಕೃತ್ಯವನ್ನು ಎಸಗಿದವರು ಮಂಗಳೂರು, ಕೊಯಮತ್ತೂರು ಸೇರಿದಂತೆ ವಿವಿಧೆಡೆ ಓಡಾಡಿರುವ ಶಂಕೆ ಇದ್ದು, ಇದೊಂದು ವ್ಯವಸ್ಥಿತ ಜಾಲವಾಗಿದೆ. ಕೃತ್ಯ ಎಸಗಿದವನಿಗೆ ಉಗ್ರರ ಸಂಪರ್ಕ ಇದೆ ಎಂದು ಗೊತ್ತಾಗುತ್ತಿದ್ದು, ಪೂರ್ಣ ಪ್ರಮಾಣದ ತನಿಖೆಯಿಂದ ಎಲ್ಲವೂ ಹೊರ ಬರಲಿದೆ ಎಂದರು.
ಮಂಗಳೂರು ಬಾಂಬ್ ಸ್ಫೋಟ: ಗುಪ್ತಚರ, ಗೃಹ ಇಲಾಖೆ ವೈಫಲ್ಯ ಸಾಬೀತು, ಸಿದ್ದು
ತಮಿಳ್ನಾಡಲ್ಲಿ ಓರ್ವ ವಶಕ್ಕೆ: ಮಂಗಳೂರಿನಲ್ಲಿ ನಡೆದ ಆಟೋರಿಕ್ಷಾ ಸ್ಫೋಟ ಪ್ರಕರಣದಲ್ಲಿ ಆರೋಪಿಯ ಬಳಿ ಸಿಕ್ಕಿರುವ ಸಿಮ್ ಕಾರ್ಡ್ ತಮಿಳುನಾಡಿನಲ್ಲಿ ಖರೀದಿಯಾಗಿದ್ದರ ಹಿನ್ನೆಲೆಯಲ್ಲಿ ತಮಿಳುನಾಡು ಪೊಲೀಸರು 40 ವರ್ಷದ ಸುರೇಂದ್ರನ್ ಎಂಬ ವ್ಯಕ್ತಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸುರೇಂದ್ರನ್ ಆಧಾರ್ ಕಾರ್ಡ್ ಬಳಸಿಯೇ ಆರೋಪಿ ಸಿಮ್ ಖರೀದಿಸಿದ್ದು, ಈತ ಆರೋಪಿಗೆ ಸಹಾಯ ಮಾಡಿರುವ ಶಂಕೆಯ ಹಿನ್ನೆಲೆಯಲ್ಲಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಭಾನುವಾರ ಹೇಳಿದ್ದಾರೆ.
ಕೃಷ್ಣಗಿರಿ ಜಿಲ್ಲೆಯ ಕುಂಡಸಪ್ಪೈ ಗ್ರಾಮದ ನಿವಾಸಿಯಾಗಿರುವ ಸುರೇಂದ್ರನ್, ತನ್ನ ಹೆಸರಿನಲ್ಲಿಯೇ ಆರೋಪಿಗೆ ಸಿಮ್ ಕೊಡಿಸಿದ್ದಾನೆಯೇ ಅಥವಾ ಆತನ ಅರಿವಿಗೆ ಬಾರದಂತೆ ಆರೋಪಿಯು ಆತನ ನಂಬರ್ ಬಳಸುತ್ತಿದ್ದಾನೆ ಎಂಬುದರ ಬಗ್ಗೆ ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ವಿಚಾರಣೆಗೆ ಸುರೇಂದ್ರನ್‌ನನ್ನು ಕೊಯಮತ್ತೂರಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಆಟೋದಲ್ಲಿ ಕುಕ್ಕರ್ ಸ್ಫೋಟ: ಮಂಗಳೂರಿನಲ್ಲಿ ನಡೆದಿತ್ತಾ ಭಾರೀ ವಿಧ್ವಂಸಕ ಕೃತ್ಯಕ್ಕೆ ಸಂಚು?
ಕೊಯಮತ್ತೂರಲ್ಲಿ ಬಿಗಿ ಭದ್ರತೆ: ಇದರೊಂದಿಗೆ ಕೊಯಮತ್ತೂರಿನ ಹೊರವಲಯದಲ್ಲಿ ಪೊಲೀಸರು ವಿಶೇಷವಾಗಿ ಕರ್ನಾಟಕದಿಂದ ಬರುವ ವಾಹನಗಳ ತಪಾಸಣೆ ಆರಂಭಿಸಿದ್ದಾರೆ. ಅಲ್ಲದೇ ರೇಲ್ವೆ ನಿಲ್ದಾಣ ಹಾಗೂ ಬಸ್ ನಿಲ್ದಾಣಗಳಲ್ಲಿ ಅನುಮಾನಾಸ್ಪದವಾಗಿ ಸಂಚರಿಸುವವರ ಮೇಲೂ ವಿಶೇಷ ನಿಗಾ ಇಡಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.