ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಜೀವನದ ಸವಿನೆನಪಿಗಾಗಿ ಚಿತ್ರದುರ್ಗದಲ್ಲಿ 'ಬಿಎಸ್‌ವೈ ಅಭಿಮಾನೋತ್ಸವ' ಆಯೋಜಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಾವಿರಾರು ಮಹಿಳೆಯರು, ರೈತರು, ಸಾಂಸ್ಕೃತಿಕ ತಂಡಗಳೊಂದಿಗೆ ಅದ್ಧೂರಿ ಮೆರವಣಿಗೆ  ಕೇಂದ್ರ ಗೃಹ ಸಚಿವ ಅಮಿತ್ ಶಾ ಉದ್ಘಾಟಿಸಲಿದ್ದಾರೆ.

 ಚಿತ್ರದುರ್ಗ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ರಾಜಕೀಯ ಪ್ರವೇಶಿಸಿ 50 ವರ್ಷ ಸಂದ ಹಿನ್ನೆಲೆಯಲ್ಲಿ ಅವರನ್ನು ಅಭಿನಂದಿಸಲು ಶನಿವಾರ ಮಧ್ಯಾಹ್ನ ಚಿತ್ರದುರ್ಗದಲ್ಲಿ ಆಯೋಜಿಸಿರುವ ‘ಬಿಎಸ್‌ವೈ ಅಭಿಮಾನೋತ್ಸವ’ಕ್ಕೆ ಕ್ಷಣಗಣನೆ ಆರಂಭವಾಗಿದ್ದು, ರೈತ ನಾಯಕನ ಅದ್ಧೂರಿ ಸ್ವಾಗತಕ್ಕೆ ಕೋಟೆ ನಗರಿ ಸಜ್ಜಾಗಿದೆ.

ಶುಕ್ರವಾರ ಸಂಜೆ 4 ಗಂಟೆಗೆ ಹೊಳಲ್ಕೆರೆ ರಸ್ತೆಯ ಕನಕ ವೃತ್ತಕ್ಕೆ ಆಗಮಿಸುವ ಯಡಿಯೂರಪ್ಪ ಅವರನ್ನು ಒಂದು ಸಾವಿರ ಮಹಿಳೆಯರು ಪೂರ್ಣಕುಂಭದೊಂದಿಗೆ ಸ್ವಾಗತಿಸಲಿದ್ದಾರೆ. ರೈತರು ಸಾಂಪ್ರದಾಯಿಕ ರಾಶಿ ಪೂಜೆಯೊಂದಿಗೆ ರೈತ ಗೌರವ ಸಲ್ಲಿಸಲಿದ್ದಾರೆ. ಬಳಿಕ, ಯಡಿಯೂರಪ್ಪ ಅವರನ್ನು ಪುಷ್ಪಾಲಂಕೃತ ಸಾರೋಟಿನಲ್ಲಿ ಕುಳ್ಳಿರಿಸಿ, ಕನಕದಾಸ ವೃತ್ತದ ಸಮೀಪ ಚಂದ್ರವಳ್ಳಿ ಮೈದಾನದಿಂದ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಗುವುದು.

‘ಮಿನಿ ದಸರಾ’ ರೀತಿ ಸಾಗಲಿರುವ ಈ ಮೆರವಣಿಗೆಯಲ್ಲಿ 2,000ಕ್ಕೂ ಹೆಚ್ಚಿನ ಸಂಖ್ಯೆಯ ರೈತರು ನೇಗಿಲು ಹಿಡಿದು ಶಿಸ್ತುಬದ್ಧವಾಗಿ ರೈತ ಘೋಷಣೆಯೊಂದಿಗೆ ನಡೆದು ಬರಲಿದ್ದಾರೆ. ಒನಕೆ ಓಬವ್ವನ ನೆಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ‘ನಾರಿ ಶಕ್ತಿ ವಂದನ್‌ʼ ಕಾಯ್ದೆಗೆ ಗೌರವ ಸಲ್ಲಿಸಲು 200ಕ್ಕೂ ಹೆಚ್ಚು ಮಹಿಳೆಯರು ಒನಕೆ ಓಬವ್ವನ ಪಾತ್ರಧಾರಿಗಳಾಗಿ ಶಿಸ್ತುಬದ್ಧವಾಗಿ ಮೆರವಣಿಗೆಯಲ್ಲಿ ನಡೆದು ಬರಲಿದ್ದಾರೆ. 25ಕ್ಕೂ ಹೆಚ್ಚು ಸಾಂಸ್ಕೃತಿಕ ಹಾಗೂ ಜಾನಪದ ಕಲಾತಂಡಗಳು ಯಡಿಯೂರಪ್ಪನವರು ನಡೆದು ಬಂದ ಹಾದಿ, ಸಾಧನೆ ಹಾಗೂ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ನೀಡಲಾದ ಜನಪ್ರಿಯ ಯೋಜನೆಗಳಾದ ಭಾಗ್ಯಲಕ್ಷ್ಮಿ, ಹೆಣ್ಣುಮಕ್ಕಳಿಗೆ ಸೈಕಲ್‌ ವಿತರಣೆ, ಕೃಷಿ ಬಜೆಟ್‌ ಮೊದಲಾದವುಗಳನ್ನು ಪ್ರತಿಬಿಂಬಿಸುವ ಸ್ತಬ್ಧ ಚಿತ್ರಗಳು ಮೆರವಣಿಗೆಯಲ್ಲಿ ಸಾಗಿ ಬರಲಿವೆ.

ಯಡಿಯೂರಪ್ಪನವರ ಹೋರಾಟದ ದಿನಗಳ ನೆನಪಾಗಿ ಉಳಿದಿರುವ ಅವರ ವಾಹನ (ಅಂಬಾಸಿಡರ್‌ ಕಾರು ಸಿಕೆಆರ್‌ 45) ಮೆರವಣಿಗೆಯ ಪ್ರಮುಖ ಆಕರ್ಷಣೆಯಾಗಲಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ಸ್ವಾಗತ ಸಮಿತಿಯ ಕಾರ್ಯಾಧ್ಯಕ್ಷ, ಮಾಜಿ ಸಚಿವ ಶ್ರೀರಾಮುಲು ಸೇರಿ ಜನಪ್ರತಿನಿಧಿಗಳು ಮೆರವಣಿಗೆಯಲ್ಲಿ ಭಾಗವಹಿಸಲಿದ್ದಾರೆ.

ಯಡಿಯೂರಪ್ಪ ಅವರ ಪುರಪ್ರವೇಶಕ್ಕೆ ಇಡೀ ಚಿತ್ರದುರ್ಗ ನಗರವನ್ನು ಸಿಂಗರಿಸಲಾಗಿದೆ. ಎಲ್ಲೆಡೆ ಕೇಸರಿ ಬಾವುಟಗಳು ಹಾರಾಡುತ್ತಿವೆ. ನಗರದ ತುಂಬೆಲ್ಲಾ ಯಡಿಯೂರಪ್ಪ ಅವರನ್ನು ಸ್ವಾಗತಿಸುವ, ಅಭಿನಂದಿಸುವ ಕಟೌಟ್‌ಗಳು ರಾರಾಜಿಸುತ್ತಿವೆ.

10 ಲಕ್ಷ ಜನರ ಸಮ್ಮುಖ ನಾಳೆ ಅಭಿಮಾನೋತ್ಸವ

ಶನಿವಾರ ಮಧ್ಯಾಹ್ನ ನಡೆಯಲಿರುವ ಅಭಿಮಾನೋತ್ಸವವನ್ನು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಉದ್ಘಾಟಿಸಲಿದ್ದಾರೆ. ಸಾವಿರಕ್ಕೂ ಹೆಚ್ಚು ಮಠಾಧೀಶರು, 10 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸಲಿದ್ದು, ಕಾರ್ಯಕ್ರಮಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸಲಾಗಿದೆ. ಈ ವೇಳೆ, ‘ಕೆಂದಾವರೆ-ಕಮಲದಲ್ಲಿ ಅರಳಿದ ಹೂ’ ಹಾಗೂ ‘ಸದನದಲ್ಲಿ ಶಿಕಾರಿ’ ಎಂಬ ಎರಡು ಅಭಿನಂದನಾ ಗ್ರಂಥಗಳನ್ನು ಬಿಡುಗಡೆಗೊಳಿಸಲಾಗುವುದು.