ಕೆಲ ತಿಂಗಳ ಹಿಂದೆ ರಾಜ್ಯದಲ್ಲಿ ಅಮುಲ್ ಹಾಲು ಮಾರಾಟಕ್ಕೆ ದೊಡ್ಡ ಮಟ್ಟದ ವಿರೋಧ ವ್ಯಕ್ತಪಡಿಸಿದ್ದ ಕನ್ನಡ ಪರ ಹೋರಾಟಗಾರರು ಈಗ ಮತ್ತೊಂದು ಹೋರಾಟಕ್ಕೆ ಅಣಿಯಾಗಬೇಕಿದೆ. ಕೇರಳದಲ್ಲಿ ನಂದಿನಿ ಮಳಿಗೆಗಳನ್ನು ತೆರೆದಿದ್ದಕ್ಕೆ ಪ್ರತಿಯಾಗಿ ಕೇರಳ, ಕರ್ನಾಟಕದಲ್ಲಿ ಮಿಲ್ಮಾ ಉತ್ಪನ್ನಗಳನ್ನು ಮಾರಾಟ ಮಾಡಲು ನಿರ್ಧಾರ ಮಾಡಿದೆ.
ಕೊಚ್ಚಿ (ಜೂ.24): ಅಮುಲ್ ಹಾಗೂ ನಂದಿನಿ ವಿಚಾರದಲ್ಲಿ ಕರ್ನಾಟಕ ಹಾಗೂ ಕೇಂದ್ರ ಸರ್ಕಾರದ ನಡುವೆ ದೊಡ್ಡ ವಾರ್ ನಡೆದಿತ್ತು. ಚುನಾವಣೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಕೂಡ ಇದನ್ನು ಭರ್ಜರಿಯಾಗಿ ಬಳಸಿಕೊಂಡಿತ್ತು. ಈಗ ಅಧಿಕಾರದಲ್ಲಿರುವ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಮತ್ತೊಮ್ಮೆ ರಾಜ್ಯದ ಹಾಲು ಮಾರಾಟಗಾರರ ಹಿತ ಕಾಯಬೇಕಾದ ಪ್ರಸಂಗ ಎದುರಾಗಿದೆ. ರಾಜ್ಯದಲ್ಲಿ ಕೆಎಂಎಫ್ ನಂದಿನಿ ಮಳಿಗೆಗಳನ್ನು ತೆರೆದಿರುವ ಬಗ್ಗೆ ದೊಡ್ಡ ಮಟ್ಟದ ಆಕ್ಷೇಪ ವ್ಯಕ್ತಪಡಿಸಿದ್ದ ಕೇರಳ ಸರ್ಕಾರ, ಈ ಕುರಿತಾಗಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಗೆ ದೂರು ಸಲ್ಲಿಸಿದೆ. ಕೇರಳ ಸರ್ಕಾರ ಕೂಡ ರಾಜ್ಯ ಸರ್ಕಾರಕ್ಕೆ ಪತ್ರವನ್ನೂ ಬರೆದಿದೆ. ಇದರ ನಡುವೆ ಕೇರಳ ಹಾಲು ಒಕ್ಕೂಟದ ಮಹಾಮಂಡಳಿಯಾಗಿರುವ ಮಿಲ್ಮಾ, ಕರ್ನಾಟಕದಲ್ಲಿ ತನ್ನ ಮಳಿಗೆಗಳನ್ನು ಸ್ಥಾಪನೆ ಮಾಡೋದಲ್ಲದೆ, ಮನೆಮನೆಗೆ ಉತ್ಪನ್ನ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದೆ. ಕೇರಳದಲ್ಲಿ ನಂದಿನಿ ಪ್ರವೇಶಿಸಿರುವ ನಿರ್ಧಾರಕ್ಕೆ ಸೆಡ್ಡು ಹೊಡೆಯುವ ಸಲುವಾಗಿ ಮಿಲ್ಮಾ ಪ್ರತಿತಂತ್ರ ಎನ್ನುವಂತೆ ಈ ನಿರ್ಧಾರ ಮಾಡಿದೆ.
ಕೇರಳದಲ್ಲಿ ನಂದಿನಿ ಹಾಲು ಹಾಗೂ ನಂದಿನಿ ಉತ್ಪನ್ನಗಳು ಕಡಿಮೆ ಬೆಲೆಗೆ ಮಾರಾಟವಾಗುತ್ತಿದೆ. ಇದು ಮಿಲ್ಮಾಗೆ ದೊಡ್ಡ ಮಟ್ಟದ ಪೆಟ್ಟು ನೀಡಿದೆ ಎಂದು ಮಿಲ್ಮಾದ ಅಧಿಕಾರಿಗಳು ತಿಳಿಸಿದ್ದಾರೆ. ಈ ಕುರಿತಾಗಿ ಮಾತನಾಡಿರುವ ಮಿಲ್ಮಾ ಅಧ್ಯಕ್ಷ ಕೆಎಸ್ ಮಣಿ, ಕೇರಳದ ಪ್ರಖ್ಯಾತ ಹಾಲಿನ ಬ್ರ್ಯಾಂಡ್ ಆಗಿರುವ ಮಿಲ್ಮಾ ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಮಳಿಗೆಗಳನ್ನು ಆರಂಭ ಮಾಡಿ ಉತ್ಪನ್ನ ಮಾರಾಟ ಮಾಡಲು ನಿರ್ಧಾರ ಮಾಡಿದೆ ಎಂದಿದ್ದಾರೆ. ಇದನ್ನು ಏಟಿಗೆ ಏಟು ಎನ್ನುವ ರೀತಿಯಲ್ಲಿ ಯಾವುದೇ ಕಾರಣಕ್ಕೂ ನೋಡಬಾರದು ಎಂದಿದ್ದಾರೆ. ಅದರೊಂದಿಗೆ ಕರ್ನಾಟಕದ ರೈತರಿಂದಲೇ ನೇರವಾಗಿ ಹಾಲನ್ನು ಖರೀದಿ ಮಾಡಲಿದ್ದೇವೆ ಎಂದು ತಿಳಿಸಿರುವುದು ಮುಂಬರುವ ದಿನಗಳಲ್ಲಿ ಡೈರಿ ವಾರ್‌ಗೆ ಕಾರಣವಾಗುವ ಲಕ್ಷಣವೂ ತೋರಿದೆ.
ಮಿಲ್ಮಾದ ಎರ್ನಾಕುಲಂ ಪ್ರಾದೇಶಿಕ ಒಕ್ಕೂಟದ ಅಧ್ಯಕ್ಷ ಎಂಟಿ ಜಯನ್ ಈ ಬಗ್ಗೆ ಮಾತನಾಡಿದ್ದು, 'ಇಲ್ಲಿಯವರೆಗೂ ಮಿಲ್ಮಾ ಹೆಚ್ಚಿನ ದರಕ್ಕೆ ಕರ್ನಾಟಕ ಸೇರಿದಂತೆ ಇತರ ರಾಜ್ಯಗಳ ಹಾಲು ಒಕ್ಕೂಟದಿಂದ ಹಾಲನ್ನು ಖರೀದಿಸುವ ಮೂಲಕ ತನ್ನ ಕೊರತೆಯನ್ನು ನೀಗಿಸಿಕೊಳ್ಳುತ್ತಿತ್ತು. ಇಲ್ಲಿಯವರೆಗೂ ನಾವು ಆಯಾ ರಾಜ್ಯಗಳ ಸ್ಥಳೀಯ ರೈತರಿಂದ ಹಾಲನ್ನು ನೇರವಾಗಿ ಖರೀದಿಸಿಲ್ಲ. ಇದು ಅಮುಲ್‌ನ ಮಾಡೆಲ್ ಆಗಿದೆ. ಇದೇ ರೀತಿಯ ಟ್ರೆಂಡ್ ಮುಂದುವರಿದಲ್ಲಿ, ಕರ್ನಾಟಕದ ರೈತರಿಂದಲೇ ನಾವು ನೇರವಾಗಿ ಹಾಲು ಖರೀದಿ ಮಾಡಬೇಕಾಗುತ್ತದೆ' ಎಂದು ಎಚ್ಚರಿಸಿದ್ದಾರೆ.
ಮಿಲ್ಮಾದಿಂದ ವಿರೋಧ ವ್ಯಕ್ತವಾಗಿದ್ದರ ಬಗ್ಗೆ ಮಾತನಾಡಿದ್ದ ಕೆಎಂಎಫ್, ಮುಂದಿನ ಆರು ತಿಂಗಳಲ್ಲಿ ಕೇರಳದಲ್ಲಿ ಮತ್ತೆ 25 ಹೊಸ ಮಳಿಗೆಗಳನ್ನು ಆರಂಭ ಮಾಡಲಿದ್ದೇವೆ ಎಂದು ತಿಳಿಸಿತ್ತಲ್ಲದೆ, ಮುಂದಿನ ಎರಡು ವರ್ಷಗಳಲ್ಲಿ ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ 1 ಕೆಎಂಎಫ್ ಮಳಿಗೆ ಇರಲಿದೆ ಎಂದು ಹೇಳಿದ್ದರು. ದೇಶದ 2ನೇ ಅತಿದೊಡ್ಡ ಹಾಲಿನ ಬ್ರ್ಯಾಂಡ್ ಇದನ್ನು ಘೋಷಣೆ ಮಾಡಿದ ಬೆನ್ನಲ್ಲಿಯೇ ಮಿಲ್ಮಾ ಕೂಡ ತಾನು ಕರ್ನಾಟಕ ಮಾರುಕಟ್ಟೆ ಪ್ರವೇಶ ಮಾಡುವುದಾಗಿ ತಿಳಿಸಿದೆ.
Milma VS Nandini: ಕೇರಳದ ಪ್ರತಿ ತಾಲೂಕಿನಲ್ಲಿ ಕನಿಷ್ಠ ಒಂದು ನಂದಿನಿ ಮಳಿಗೆ, ಕೆಎಂಎಫ್ ಗುರಿ
ನಂದಿನಿಯು ಆರಂಭದಲ್ಲಿ ಮಿಲ್ಮಾಕ್ಕಿಂತ ಕಡಿಮೆ ದರದಲ್ಲಿ ಹಾಲನ್ನು ಮಾರಾಟ ಮಾಡುತ್ತಿದ್ದವು. ಕೇರಳ ಸರ್ಕಾರವು ಅಧಿಕೃತವಾಗಿ ತನ್ನ ಪ್ರತಿಭಟನೆಯನ್ನು ತಿಳಿಸಿದ ನಂತರ ಅದು ಶುಲ್ಕವನ್ನು ಹೆಚ್ಚಿಸಿತು. ಕರ್ನಾಟಕದಲ್ಲಿ 500 ಮಿಲಿ ಹಾಲಿನ ಬೆಲೆ 21 ರೂಪಾಯಿ ಇದ್ದರೆ, ಕೇರಳದಲ್ಲಿ ಇದರ ಬೆಲೆ 29 ರೂಪಾಯಿ ಆಗಿದೆ. ಆದರೆ, ಹಾಲಿನ ಉತ್ಪನ್ನಗಳು ತುಂಬಾ ಅಗ್ಗವಾಗಿವೆ ಎಂದು ನಂದಿನಿ ಅಧಿಕಾರಿಗಳು ಹೇಳಿದ್ದಾರೆ. ನಂದಿನಿ ಹಾಲು, ಐಸ್ ಕ್ರೀಮ್, ಪನೀರ್, ಚೀಸ್, ಚಾಕೊಲೇಟ್ ಮತ್ತು ಕುಕೀಸ್ ಸೇರಿದಂತೆ 600 ಕ್ಕೂ ಹೆಚ್ಚು ಉತ್ಪನ್ನಗಳನ್ನು ಕೆಎಂಎಫ್ ಮಾರಾಟ ಮಾಡುತ್ತಿದೆ. ಕೇರಳದಲ್ಲಿ ತನ್ನ ಬ್ರ್ಯಾಂಡ್ ಅಸ್ತಿತ್ವವನ್ನು ವಿಸ್ತರಿಸಲು ನಂದಿನಿಯ ಕ್ರಮವು ಕೇರಳ ಸಹಕಾರಿ ಹಾಲು ಮಾರಾಟ ಒಕ್ಕೂಟದ ದೊಡ್ಡ ಮಟ್ಟದ ಪ್ರತಿರೋಧ ವ್ಯಕ್ತಪಡಿಸಿದೆ.
Milma VS Nandini: ರಾಜ್ಯಗಳ ನಡುವೆ 'ಹಾಲಾಹಲ', ಪರಿಹಾರ ಕೋರಿ ರಾಜ್ಯಕ್ಕೆ ಕೇರಳ ಸರ್ಕಾರ ಪತ್ರ!
