ನರೇಗಾ ಯೋಜನೆ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ನೀಡಿದ್ದ ಚರ್ಚೆಯ ಸವಾಲನ್ನು ಡಿಸಿಎಂ ಡಿಕೆ ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ. ತಮ್ಮ ಕನಕಪುರ ತಾಲೂಕಿಗೆ ನರೇಗಾದಲ್ಲಿ ನಂಬರ್ ಒನ್ ಪ್ರಶಸ್ತಿ ಬಂದಿದ್ದು, ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ಬೆರಳ ತುದಿಯಲ್ಲಿದೆ ಎಂದು ಹೇಳಿದ್ದಾರೆ. 

ಬೆಂಗಳೂರು (ಜ.11): ನರೇಗಾ ಯೋಜನೆಯ ಅನುಷ್ಠಾನದ ಕುರಿತು ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ಅವರು ನೀಡಿದ್ದ ಸವಾಲನ್ನು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅಧಿಕೃತವಾಗಿ ಸ್ವೀಕರಿಸಿದ್ದಾರೆ.ಕುಮಾರಸ್ವಾಮಿ ಅವರು ಚರ್ಚೆಗೆ ಸಿದ್ಧ ಎಂದು ಹೇಳಿದ್ದಾರೆ, ನಾನು ಅವರ ಸವಾಲನ್ನು ಸ್ವಾಗತಿಸುತ್ತೇನೆ. ಅವರು ಯಾವ ಟಿವಿ ಚಾನೆಲ್‌ನಲ್ಲಿ ಬೇಕಾದರೂ ವೇದಿಕೆ ಸಿದ್ಧಪಡಿಸಲಿ, ನಾನು ಬರಲು ಸಿದ್ಧ ಎಂದು ಗುಡುಗಿದ್ದಾರೆ.

ಪಾರ್ಟಿ ಪ್ರೆಸಿಡೆಂಟ್ ಬರಲಿ, ಚಿಲ್ಲರೆಗಳಿಗೆ ಉತ್ತರಿಸಲ್ಲ ಎಂದ ಡಿಕೆ!

ಚರ್ಚೆಯ ಗುಣಮಟ್ಟದ ಬಗ್ಗೆ ಮಾತನಾಡಿದ ಡಿಕೆಶಿ, ಯಾರು ಬೇಕಾದರೂ ಬರಲಿ, ಆದರೆ ನಾನು ಸಣ್ಣ-ಪುಟ್ಟ ಅಥವಾ ಚಿಲ್ಲರೆ ವಿಚಾರ ಮಾಡುವವರ ಜೊತೆ ಚರ್ಚೆಗೆ ಕೂರುವುದಿಲ್ಲ. ಕುಮಾರಸ್ವಾಮಿ ಅವರು ಒಂದು ಪಕ್ಷದ ಅಧ್ಯಕ್ಷರು, ಅವರು ಬರಲಿ. ಪಬ್ಲಿಕ್ ಡಿಬೇಟ್, ಅಸೆಂಬ್ಲಿ ಅಥವಾ ಟಿವಿ ಡಿಬೇಟ್ ಹೀಗೆ ಅವರು ಎಲ್ಲಿಗೆ ಕರೆಯುತ್ತಾರೋ ಅಲ್ಲಿಗೆ ನಾನು ಹೋಗಲು ಸಿದ್ಧನಿದ್ದೇನೆ' ಎಂದು ಪಂಥಾಹ್ವಾನ ಸ್ವೀಕರಿಸಿದ್ದಾರೆ..

ನರೇಗಾ ಮಾಹಿತಿ ನನ್ನ ಫಿಂಗರ್ ಟಿಪ್ಸ್‌ನಲ್ಲಿದೆ

ತಮ್ಮ ಸಿದ್ಧತೆಯ ಬಗ್ಗೆ ಆತ್ಮವಿಶ್ವಾಸ ವ್ಯಕ್ತಪಡಿಸಿದ ಡಿಕೆ ಶಿವಕುಮಾರ್, ನನಗೆ ಯಾವುದೇ ವಿಶೇಷ ತಯಾರಿಯ ಅಗತ್ಯವಿಲ್ಲ. ನರೇಗಾ ಯೋಜನೆ ಬಗ್ಗೆ ಸಂಪೂರ್ಣ ಮಾಹಿತಿ ನನ್ನ ಬೆರಳ ತುದಿಯಲ್ಲಿದೆ (Fingertips). ಇಡೀ ದೇಶದಲ್ಲೇ ನರೇಗಾ ಯೋಜನೆಯಡಿ ನನ್ನ ಕನಕಪುರ ತಾಲೂಕಿಗೆ 'ನಂಬರ್ ಒನ್ ತಾಲೂಕು' ಎಂಬ ಪ್ರಶಸ್ತಿ ಸಿಕ್ಕಿದೆ. ಈ ವಿಚಾರ ಪ್ರಲ್ಹಾದ್ ಜೋಷಿ, ಕುಮಾರಸ್ವಾಮಿ ಅಥವಾ ವಿಜಯೇಂದ್ರ ಅವರಿಗೆ ಗೊತ್ತಿದೆಯೋ ಇಲ್ಲವೋ https://kannada.asianetnews.com/state/mgnrega-scheme-minister-joshi-accuses-congress-of-misleading-state-workers/articleshow-iwkdiaxನನಗೆ ತಿಳಿಯದು. ಈ ಹಿಂದೆ ಕೇಂದ್ರ ಸರ್ಕಾರವೇ ಬಂದು ತನಿಖೆ ನಡೆಸಿದರೂ ನಮಗೆ ಕ್ಲೀನ್ ಚಿಟ್ ಸಿಕ್ಕಿದೆ' ಎಂದರು.

ಸಮಯ ನಿಗದಿಪಡಿಸಿ, ಇಂದೇ ಬರುತ್ತೇನೆ

ಚರ್ಚೆಗೆ ಯಾವಾಗ ಸಮಯ ಫಿಕ್ಸ್ ಮಾಡುತ್ತೀರಾ? ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ಕೇವಲ ಮೂರು ದಿನಗಳ ಸಮಯ ಕೊಡಿ ಸಾಕು. ಇನ್ನು ತುರ್ತು ಎನ್ನುವುದಾದರೆ ಇವತ್ತು ಸಂಜೆಯೇ ಕರೆಯಲಿ, ನಾನು ಬರಲು ರೆಡಿ. ನರೇಗಾದಲ್ಲಿ ಹಣ ಹೊಡೆದಿದ್ದೇವೆ ಎಂಬ ಆರೋಪಗಳಿಗೆ ನೇರವಾಗಿಯೇ ಉತ್ತರಿಸುತ್ತೇನೆ ಎಂದು ಸವಾಲು ಹಾಕಿದರು.

ಕುಮಾರಸ್ವಾಮಿ ಹೇಳಿಕೆಗೆ ಕಿಡಿ

ರಾಜ್ಯದಲ್ಲಿ 'ಬೆಸ್ಟ್ ಲೀಸ್ಟ್ ಸಿಎಂ' ಎಂಬ ಕುಮಾರಸ್ವಾಮಿ ಅವರ ಟೀಕೆಗೆ ಪ್ರತಿಕ್ರಿಯಿಸಿದ ಡಿಕೆಶಿ, 'ಅದಕ್ಕೆ ಸಿದ್ದರಾಮಯ್ಯ ಅವರೇ ಉತ್ತರ ಕೊಡುತ್ತಾರೆ. ಅವರು ಸಮರ್ಥರಿದ್ದಾರೆ ಮತ್ತು ಈಗಾಗಲೇ ಉತ್ತರ ನೀಡುತ್ತಿದ್ದಾರೆ. ಕುಮಾರಸ್ವಾಮಿ ಅವರ ಮಾತುಗಳನ್ನು ನಾನು ಗಂಭೀರವಾಗಿ ಪರಿಗಣಿಸುವುದಿಲ್ಲ. ಅವರದ್ದು ಬರೀ ಡೈಲಾಗ್ ಹೊಡೆಯುವುದು ಮತ್ತು ಸ್ಟೇಟ್ಮೆಂಟ್ ಕೊಡುವುದಷ್ಟೇ ಕೆಲಸ' ಎಂದು ಲೇವಡಿ ಮಾಡಿದರು. ಅಲ್ಲದೆ, ಕುಮಾರಸ್ವಾಮಿ ಅವರ ರಾಜ್ಯ ರಾಜಕಾರಣದ ಮರುಪ್ರವೇಶದ ಬಗ್ಗೆ ಮಾತನಾಡುತ್ತಾ, 'ಅಯ್ಯೋ ರಾಜ್ಯ ಯಾಕೆ, ಅವರು ಹಳ್ಳಿಯಿಂದಲೇ ತಮ್ಮ ರಾಜಕಾರಣವನ್ನು ಮತ್ತೆ ಶುರು ಮಾಡಲಿ' ಎಂದು ವ್ಯಂಗ್ಯವಾಡಿದರು.