ರಾಮನಗರ ಶಾಸಕ ಇಕ್ಬಾಲ್ ಹುಸೇನ್, ಬಜೆಟ್‌ನಲ್ಲಿ ತಮ್ಮ ಕ್ಷೇತ್ರಕ್ಕೆ ಅನುದಾನ ಸಿಗದಿದ್ದಕ್ಕೆ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳ ಮೇಲಿನ ನಂಬಿಕೆ ಹುಸಿಯಾಗಿದೆ ಎಂದಿರುವ ಅವರು, ಇನ್ನು ಮುಂದೆ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಗತಿ ಎಂದು ಹೇಳಿದ್ದಾರೆ.

ರಾಮನಗರ (ಮಾ.13): ಕರ್ನಾಟಕದ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಎಲ್ಲವೂ ಸರಿಯಿಲ್ಲ ಎಂಬುದು ಮತ್ತೊಮ್ಮೆ ಬಹಿರಂಗವಾಗಿದೆ. ಸಿಎಂ ಸಿದ್ದರಾಮಯ್ಯ ಅವರು ಮಂಡಿಸಿದ ರಾಜ್ಯ ಬಜೆಟ್ ಕುರಿತು ಸ್ವಪಕ್ಷದ ಶಾಸಕರೇ ಈಗ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ರಾಮನಗರ ಕ್ಷೇತ್ರದ ಶಾಸಕ ಇಕ್ಬಾಲ್ ಹುಸೇನ್ ಅವರು, 'ಬಜೆಟ್ ನನಗೆ ಸಮಾಧಾನ ತಂದಿಲ್ಲ, ಮುಖ್ಯಮಂತ್ರಿಗಳ ಮೇಲಿದ್ದ ನಂಬಿಕೆ ಹುಸಿಯಾಗಿದೆ' ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ.

ಸಿಎಂಗೆ ಫೋಟೋ ತೋರಿಸಿದರೂ ಸಿಗದ ಅನುದಾನ!

ರಾಮನಗರದ ಮೊಟ್ಟೆದೊಡ್ಡಿ ಗ್ರಾಮದಲ್ಲಿ ಮಾತನಾಡಿದ ಇಕ್ಬಾಲ್ ಹುಸೇನ್, ತಮ್ಮ ಕ್ಷೇತ್ರದ ಅಭಿವೃದ್ಧಿಗೆ ಬಜೆಟ್‌ನಲ್ಲಿ ಆದ್ಯತೆ ಸಿಗದಿರುವ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. 'ನನ್ನ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಸಿಎಂ ಸಿದ್ದರಾಮಯ್ಯ ಅವರಿಗೆ ಹಲವು ಬಾರಿ ಮನವಿ ಮಾಡಿದ್ದೆ. ಭಕ್ಷಿಕೆರೆ ಏರಿ ಹೊಡೆದು ಪ್ರವಾಹದಿಂದ ಉಂಟಾದ ಹಾನಿಯ ಬಗ್ಗೆ ಫೋಟೋ ಸಹಿತ ಮಾಹಿತಿ ನೀಡಿದ್ದೆ. ರಸ್ತೆ, ಚರಂಡಿ ಹಾಗೂ ನೀರಾವರಿ ಯೋಜನೆಗಳಿಗಾಗಿ ವಿಶೇಷ ಅನುದಾನ ನೀಡುವಂತೆ ನಾಲ್ಕೈದು ಬಾರಿ ಕೇಳಿಕೊಂಡಿದ್ದೆ. ಪಾರದರ್ಶಕವಾಗಿ ಅನುದಾನ ಸಿಗಲಿದೆ ಎಂಬ ನಂಬಿಕೆ ನನಗಿತ್ತು. ಆದರೆ ಈಗ ಆ ನಂಬಿಕೆ ಹುಸಿಯಾಗಿದೆ' ಎಂದು ನೋವು ತೋಡಿಕೊಂಡಿದ್ದಾರೆ. 

ಜೊತೆಗೆ, ಈ ಹಿಂದೆ ಇದ್ದ ಜನಪ್ರತಿನಿಧಿಗಳು ಕ್ಷೇತ್ರದಲ್ಲಿ ಯಾವುದೇ ಅಭಿವೃದ್ಧಿ ಮಾಡಿಲ್ಲ. ಹೀಗಾಗಿ ಹೊಸದಾಗಿ ಆಯ್ಕೆಯಾದ ನನಗೆ ಜನರ ನಿರೀಕ್ಷೆಗಳನ್ನು ಪೂರೈಸಲು ಹೆಚ್ಚಿನ ಅನುದಾನದ ಅಗತ್ಯವಿತ್ತು. ಆದರೆ ಸಿಎಂ ಕಡೆಯಿಂದ ಸೂಕ್ತ ಸ್ಪಂದನೆ ಸಿಗದಿರುವುದು ನನಗೆ ವೈಯಕ್ತಿಕವಾಗಿ ನೋವುಂಟು ಮಾಡಿದೆ ಎಂದು ತಿಳಿಸಿದರು.

ಈಗ ಡಿಸಿಎಂ ಡಿಕೆಶಿಯೇ ನಮಗೆ ಗತಿ!

ಮುಖ್ಯಮಂತ್ರಿಗಳಿಂದ ಕೆಲಸವಾಗದ ಹಿನ್ನೆಲೆಯಲ್ಲಿ, ಇಕ್ಬಾಲ್ ಹುಸೇನ್ ಈಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರತ್ತ ಮುಖ ಮಾಡಿದ್ದಾರೆ. 'ಇನ್ನು ಮುಂದೆ ನಾವು ಡಿಸಿಎಂ ಹಿಂದೆಯೇ ಹೋಗಬೇಕು. ನಮ್ಮ ಕಷ್ಟ-ಸುಖಗಳನ್ನೆಲ್ಲ ಅವರ ಮೇಲೆಯೇ ಹಾಕಬೇಕು. ರಾಮನಗರ ಜಿಲ್ಲೆ ಅವರದ್ದೂ ಹೌದು, ಕ್ಷೇತ್ರದ ಜವಾಬ್ದಾರಿ ಅವರ ಮೇಲೂ ಇದೆ. ಹಿಂದೆ ಅವರಿಂದಲೇ ನಾನು ಹಲವು ಅಭಿವೃದ್ಧಿ ಕೆಲಸಗಳನ್ನು ಮಾಡಿಸಿಕೊಂಡಿದ್ದೆ. ಮುಂದೆಯೂ ಅವರ ಮೇಲೆಯೇ ಭಾರ ಹಾಕಬೇಕಿದೆ' ಎಂದು ಹೇಳುವ ಮೂಲಕ ಪರೋಕ್ಷವಾಗಿ ಸಿಎಂ ಸಿದ್ದರಾಮಯ್ಯ ವಿರುದ್ಧ ಅಸಮಾಧಾನ ಹೊರಹಾಕಿದರು.

ಯುಗಾದಿ ಬಳಿಕ ಡಿಕೆಶಿ ಸಿಎಂ? ಕುತೂಹಲ ಮೂಡಿಸಿದ ಹೇಳಿಕೆ

ಇದೇ ವೇಳೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಆಗುವ ವಿಚಾರದ ಬಗ್ಗೆಯೂ ಇಕ್ಬಾಲ್ ಹುಸೇನ್ ಮಾರ್ಮಿಕವಾಗಿ ಮಾತನಾಡಿದ್ದಾರೆ. "ನಮ್ಮ ಗುರುಗಳು (ಡಿಕೆಶಿ) ಜಪದಿಂದ ಇನ್ನೂ ಎದ್ದಿಲ್ಲ. ಬಹುಶಃ ಯುಗಾದಿ ಹಬ್ಬದ ಬಳಿಕ ನಮ್ಮ ಗುರುಗಳು ಎಚ್ಚರವಾಗುತ್ತಾರೆ. ಸದ್ಯ ಅಧಿವೇಶನ ನಡೆಯುತ್ತಿದೆ, ಯುಗಾದಿ ಬಳಿಕ ರಾಜ್ಯಕ್ಕೆ ಒಂದು ಒಳ್ಳೆಯ ಸುದ್ದಿ ಸಿಗಲಿದೆ. ಡಿಕೆಶಿ ಅವರ ಶ್ರಮಕ್ಕೆ ತಕ್ಕ ರಿಸಲ್ಟ್ ಸಿಕ್ಕೇ ಸಿಗುತ್ತದೆ," ಎಂದು ಹೇಳುವ ಮೂಲಕ ರಾಜ್ಯ ರಾಜಕಾರಣದಲ್ಲಿ ನಾಯಕತ್ವ ಬದಲಾವಣೆಯ ಮುನ್ಸೂಚನೆ ನೀಡಿದ್ದಾರೆ.

ಶಾಸಕ ಇಕ್ಬಾಲ್ ಹುಸೇನ್ ಅವರ ಈ ಹೇಳಿಕೆಗಳು ಕಾಂಗ್ರೆಸ್ ವಲಯದಲ್ಲಿ ತಲ್ಲಣ ಮೂಡಿಸಿವೆ. ಒಂದೆಡೆ ಬಜೆಟ್ ಅನುದಾನದ ಅಸಮಾಧಾನ, ಇನ್ನೊಂದೆಡೆ ಡಿಕೆಶಿ ಸಿಎಂ ಪಟ್ಟಕ್ಕೇರುವ ಸುಳಿವು ನೀಡಿರುವುದು ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಮುಖ್ಯಮಂತ್ರಿಗಳ ವಿರುದ್ಧವೇ ಶಾಸಕರೊಬ್ಬರು ಬಹಿರಂಗವಾಗಿ ನಂಬಿಕೆ ಹುಸಿಯಾಗಿದೆ ಎಂದು ಹೇಳಿರುವುದು ಸಿದ್ದರಾಮಯ್ಯ ಪಾಳಯಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ.

ಒಟ್ಟಾರೆಯಾಗಿ, ಯುಗಾದಿ ಹಬ್ಬದ ನಂತರ ಕರ್ನಾಟಕ ರಾಜಕೀಯದಲ್ಲಿ ಯಾವ ರೀತಿಯ ಬದಲಾವಣೆಗಳು ಸಂಭವಿಸಲಿವೆ ಎಂಬುದು ಈಗ ಕುತೂಹಲದ ಸಂಗತಿಯಾಗಿದೆ.