ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣಕ್ಕೆ ಹೋಗುವವರಿಗೆ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಆನ್‌ಲೈನ್‌ನಲ್ಲಿ ಕಡ್ಡಾಯವಾಗಿ ಟಿಕೆಟ್ ಬುಕ್ ಮಾಡಬೇಕು, ಪ್ರತಿದಿನ ಕೇವಲ 150 ಜನರಿಗೆ ಮಾತ್ರ ಅವಕಾಶವಿದ್ದು, ರಾತ್ರಿ ವಾಸ್ತವ್ಯವನ್ನು ನಿಷೇಧಿಸಲಾಗಿದೆ.

ವಿಧಾನಸಭೆ: ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯದಿಂದ ಕುಮಾರ ಪರ್ವತ ಚಾರಣಕ್ಕೆ ಹೋಗುವವರು ಕಡ್ಡಾಯವಾಗಿ ಆನ್‌ಲೈನ್‌ ಮೂಲಕ ಟಿಕೆಟ್ ಪಡೆದುಕೊಳ್ಳಬೇಕು. ಚಾರಣಿಗರ ಅನುಕೂಲಕ್ಕಾಗಿ ಚಾರಣ ಆರಂಭಿಕ ಸಮಯವನ್ನು ಬೆಳಗ್ಗೆ 5.30ರಿಂದಲೇ ಪ್ರಾರಂಭಿಸಲಾಗುವುದು ಎಂದು ಅರಣ್ಯ, ಸಚಿವ ಈಶ್ವರ ಖಂಡ್ರೆ ತಿಳಿಸಿದರು. ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿಯ ಭಾಗೀರಥಿ ಮುರುಳ್ಯ ಅವರ ಪ್ರಶ್ನೆಗೆ ಸಚಿವರು ಉತ್ತರಿಸಿದರು.

ಚಾರಣದಾರರ ಸುರಕ್ಷತೆ ದೃಷ್ಟಿಯಿಂದ ಮತ್ತು ವನ್ಯಜೀವಿಧಾಮದೊಳಗೆ ಮೂಲ ಸೌಲಭ್ಯ ಇಲ್ಲದ ಕಾರಣ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿರ್ದೇಶನದಂತೆ ವನ್ಯಜೀವಿಧಾಮದೊಳಗೆ ರಾತ್ರಿ ವಾಸ್ತವ್ಯ ನಿಬಂರ್ಧಿಸಲಾಗಿದೆ. ಚಾರಣಕ್ಕೆ ಒಂದೇ ದಿನ 2 ಸಾವಿರದಿಂದ 3 ಸಾವಿರ ಜನ ಹೋದರೆ ಅನಾಹುತ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ನಿಯಂತ್ರಣ ಕ್ರಮ ಕೈಗೊಂಡು ಪ್ರತಿನಿತ್ಯ 150 ಜನರಿಗೆ ಮಾತ್ರ ಚಾರಣಕ್ಕೆ ಅವಕಾಶ ನೀಡಲಾಗುತ್ತಿದೆ. ಮಳೆಗಾಲದಲ್ಲಿ ಜಾರುವ ಕಾರಣ, ಬೇಸಿಗೆಯಲ್ಲಿ ಕಾಡ್ಗಿಚ್ಚಿನ ಭೀತಿಯ ಕಾರಣಕ್ಕೆ ಚಾರಣ ಇರುವುದಿಲ್ಲ’ ಎಂದು ವಿವರಿಸಿದರು.

‘ಸುಬ್ರಹ್ಮಣ್ಯ ಮಾರ್ಗವಾಗಿ ಇರುವ ಶೇಷ ಪರ್ವತವು ಕುಮಾರಪರ್ವತದಿಂದ 2 ಕಿ.ಮೀ. ಅಂತರದಲ್ಲಿದೆ. ಇದು ಅತ್ಯಂತ ದುರ್ಗಮವಾಗಿರುವ ಕಾರಣ, 2025ರ ಡಿಸೆಂಬರ್‌ನಿಂದ ಅದೇ ಚಾರಣ ಮಾರ್ಗದಲ್ಲಿ ಶೇಷಪರ್ವತಕ್ಕೆ 20 ಕಿ.ಮೀ.ಗೆ ಸೀಮಿತಗೊಳಿಸಿ 12 ಗಂಟೆಗಳ ಒಳಗಾಗಿ ಅಂದರೆ ಬೆಳಗ್ಗೆ 6ಕ್ಕೆ ಚಾರಣ ಆರಂಭಿಸಿ, ಸಂಜೆ 6ರೊಳಗೆ ಮರಳಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ಆದರೆ, ಈಗ ಶೇಷ ಪರ್ವತಕ್ಕೆ 10 ಗಂಟೆ ನಂತರ ಪೊಲೀಸರು ಬಿಡುವುದಿಲ್ಲ ಎಂದು ಸದಸ್ಯರು ಹೇಳುವುದರಿಂದ ಬೆಳಗ್ಗೆ 6 ರ ಬದಲು ಇನ್ನೂ ಬೇಗ 5.30ಕ್ಕೇ ಚಾರಣ ಶುರುಗೆ ಕ್ರಮ ವಹಿಸಲಾಗುವುದು ಎಂದರು.