ಕಂಟೈನ್‌ಮೆಂಟ್ ಝೋನ್‌ನಲ್ಲಿ ಮೆಟ್ರೋ ರೈಲು ನಿಲ್ಲಲ್ಲ
ಯಾವುದೇ ಮೆಟ್ರೋ ನಿಲ್ದಾಣವು ಕಂಟೈನ್‌ಮೆಂಟ್ ವಲಯದ ವ್ಯಾಪ್ತಿಗೆ ಬಂದರೆ ಅಂತಹ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತೆರೆಯುವುದಿಲ್ಲ| ಪ್ರಯಾಣಿಕರು ಸಮೀಪದ ಮೆಟ್ರೋ ನಿಲ್ದಾಣವನ್ನು ರೈಲು ಹತ್ತಲು ಮತ್ತು ಇಳಿಯಲು ಉಪಯೋಗಿಸಬೇಕು ಎಂದು ಸ್ಪಷ್ಟಪಡಿಸಿದ ಮೆಟ್ರೋ ನಿಗಮ|
ಬೆಂಗಳೂರು(ಸೆ.04):ಕೋವಿಡ್-19 ಲಾಕ್‌ಡೌನ್ ಸಡಿಲಿಕೆ ಹಿನ್ನೆಲೆಯಲ್ಲಿ ಸೆ.7 ರಿಂದ ಮೆಟ್ರೋ ರೈಲು ಸಂಚಾರ ಆರಂಭವಾದರೂ ಕೂಡ ಕಂಟೈನ್‌ಮೆಂಟ್ ವ್ಯಾಪ್ತಿಯ ಮೆಟ್ರೋ ನಿಲ್ದಾಣಗಳಲ್ಲಿ ರೈಲು ನಿಲುಗಡೆ ಇಲ್ಲ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್) ತಿಳಿಸಿದೆ.
ಗುರುವಾರ ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಗಳನ್ನು ಪ್ರಕಟಿಸಿರುವ ಮೆಟ್ರೋ ನಿಗಮ, ಯಾವುದೇ ಮೆಟ್ರೋ ನಿಲ್ದಾಣವು ಕಂಟೈನ್‌ಮೆಂಟ್ ವಲಯದ ವ್ಯಾಪ್ತಿಗೆ ಬಂದರೆ ಅಂತಹ ನಿಲ್ದಾಣದಲ್ಲಿ ಪ್ರಯಾಣಿಕರ ಪ್ರವೇಶ ಮತ್ತು ನಿರ್ಗಮನ ದ್ವಾರಗಳನ್ನು ತೆರೆಯುವುದಿಲ್ಲ. ಪ್ರಯಾಣಿಕರು ಸಮೀಪದ ಮೆಟ್ರೋ ನಿಲ್ದಾಣವನ್ನು ರೈಲು ಹತ್ತಲು ಮತ್ತು ಇಳಿಯಲು ಉಪಯೋಗಿಸಬೇಕು ಎಂದು ಸ್ಪಷ್ಟಪಡಿಸಿದೆ.
1 ಮೆಟ್ರೋದಲ್ಲಿ 400 ಜನರಷ್ಟೇ ಪ್ರಯಾಣ: ಟಿಕೆಟ್ ಇಲ್ಲ; ಸ್ಮಾರ್ಟ್‌ಕಾರ್ಡ್ ಕಡ್ಡಾಯ
* ಟೋಕನ್ ಮಾರಾಟ ನಿಷೇಧವಿರುವ ಕಾರಣ ಸ್ಮಾರ್ಟ್‌ಕಾರ್ಡ್ ಕಡ್ಡಾಯ
* ಸ್ಮಾರ್ಟ್‌ಕಾರ್ಡ್‌ಗಳನ್ನು ಗೇಟ್ ರೀಡರ್‌ನಿಂದ 3 ಸೆಂ.ಮೀ ದೂರದಿಂದ ಪ್ರಸ್ತುತ ಪಡಿಸಬೇಕು
* ದೇಹದ ತಾಪಮಾನ 37 ಡಿಗ್ರಿ ಸೆಲ್ಸಿಯಸ್‌ಗಿಂತ ಕಡಿಮೆ ಇದ್ದರಷ್ಟೇ ನಿಲ್ದಾಣ ಪ್ರವೇಶಿಸಕ್ಕೆ ಅನುಮತಿ
* ಕೊರೋನಾ ಸೋಂಕಿನ ಲಕ್ಷಣ ಇರುವ ಪ್ರಯಾಣಿಕರಿಗೆ ಅನುಮತಿ ನಿರಾಕರಣೆ
* ರೈಲಿನ ಒಳಗೆ ಗುರುತಿಸಿದ ಆಸನಗಳಲ್ಲಿ ಮಾತ್ರ ಕೂರಬೇಕು, ನಿಲ್ಲಬೇಕು
* ನಿಲ್ದಾಣಗಳ ಸಮೀಪ ಪ್ರಯಾಣಿಕರ ವಾಹನ ನಿಲುಗಡೆಗೆ ಅನುಮತಿ
* ನಿಲ್ದಾಣಗಳಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ಲವಂತಿಲ್ಲ
* ಅಗತ್ಯವಿದ್ದರೆ ಮಾತ್ರ 65 ವರ್ಷ ಮೇಲ್ಪಟ್ಟ, 10 ವರ್ಷದ ಒಳಗಿನವರಿಗೆ ಅವಕಾಶ