ಬೆಂಗಳೂರು(ಸೆ.03): ಕೋವಿಡ್‌-19 ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಮಾ.22ರಿಂದ ರದ್ದು ಪಡಿಸಲಾಗಿದ್ದ ಮೆಟ್ರೋ ರೈಲು ಸಂಚಾರವನ್ನು ಸೆ.7ರಿಂದ ಆರಂಭವಾಗುತ್ತಿದ್ದು, ಈ ಸಂಬಂಧ ಬಿಎಂಆರ್‌ಸಿಎಲ್‌ ಬುಧವಾರ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಂದು ರೈಲಿನಲ್ಲಿ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ಕಲ್ಪಿಸಿದೆ.

ನೇರಳೆ ಮಾರ್ಗದಲ್ಲಿ ಸೆ.7ರಿಂದ 10ರ ವರೆಗೆ ರೈಲುಗಳು ಬೆಳಗ್ಗೆ 8ರಿಂದ 11ರ ವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 7.30ರ ವರೆಗೆ 5 ನಿಮಿಷಗಳ ಅಂತರದಲ್ಲಿ ಕಾರ್ಯನಿರ್ವಹಿಸಲಿವೆ. ಹಸಿರು ಮಾರ್ಗದಲ್ಲಿ ಸೆ.9ರಿಂದ 10ರಂದು ರೈಲುಗಳು ಬೆಳಗ್ಗೆ 8ರಿಂದ 11ರವರೆಗೆ ಮತ್ತು ಸಂಜೆ 4.30ರಿಂದ ರಾತ್ರಿ 7.30ರ ವರೆಗೆ ಕಾರ್ಯನಿರ್ವಹಿಸಲಿವೆ. ಸೆ.11ರಿಂದ ಬೆಳಗ್ಗೆ 7ರಿಂದ ರಾತ್ರಿ 9ರ ವರೆಗೆ ಹಸಿರು ಮತ್ತು ನೇರಳೆ ಮಾರ್ಗಗಳಲ್ಲಿ ಜನದಟ್ಟಣೆಯ ಸಮಯದಲ್ಲಿ 5 ನಿಮಿಷಗಳ ಅಂತರದಲ್ಲಿ ಮತ್ತು ಉಳಿದ ಸಮಯದಲ್ಲಿ 10 ನಿಮಿಷಗಳ ಅಂತರದಲ್ಲಿ ಸಂಚಾರ ನಡೆಸಲಿವೆ.

ಸೆ. 7 ರಿಂದ ನಮ್ಮ ಮೆಟ್ರೋ ಶುರು: ಹತ್ತುವ ಮುನ್ನ ಇದು ನೆನಪಿರಲಿ ಗುರು..!

400ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರಿದ್ದರೆ ಅವರನ್ನು ಮುಂದಿನ ನಿಲ್ದಾಣದಲ್ಲಿ ಇಳಿಸಲಾಗುವುದು. ಲಿಫ್ಟ್‌ಗಳಲ್ಲಿ ನಾಲ್ಕಕ್ಕಿಂತ ಹೆಚ್ಚು ಜನರು ಪ್ರಯಾಣಿಸಬಾರದು. 65 ವರ್ಷಕ್ಕಿಂತ ಮೇಲ್ಪಟ್ಟವರು ಮತ್ತು 10 ವರ್ಷದೊಳಗಿನವರು ಅಗತ್ಯವಿದ್ದರೆ ಮಾತ್ರ ಪ್ರಯಾಣಿಸಬೇಕು. ರೈಲು ಹತ್ತುವಾಗ ಮತ್ತು ಇಳಿಯುವಾಗ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. ರೈಲು ಪ್ರತಿ ನಿಲ್ದಾಣದಲ್ಲಿ 60 ಸೆಕೆಂಡ್‌ ಮತ್ತು ಇಂಟರ್‌ ಎಕ್ಸ್‌ಚೇಂಜ್‌ ನಿಲ್ದಾಣದಲ್ಲಿ 75 ನಿಮಿಷ ಮಾತ್ರ ನಿಲುಗಡೆಯಾಗಲಿದೆ ಎಂದು ಮಾರ್ಗಸೂಚಿಯಲ್ಲಿ ಮೆಟ್ರೋ ನಿಗಮ ಮಾಹಿತಿ ನೀಡಿದೆ.

ಟಿಕೆಟ್‌ ಇಲ್ಲ; ಸ್ಮಾರ್ಟ್‌ಕಾರ್ಡ್‌ ಕಡ್ಡಾಯ

ಕೊರೋನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ಟೋಕನ್‌ ಮಾರಾಟವನ್ನು ಅನುಮತಿಸದ ಕಾರಣ ನಿಲ್ದಾಣಗಳಿಗೆ ಪ್ರವೇಶಿಸಲು ಮತ್ತು ಪ್ರಯಾಣಿಸಲು ಆನ್‌ಲೈನ್‌ ರೀಚಾಜ್‌ರ್‍ನೊಂದಿಗೆ ಸ್ಮಾರ್ಟ್‌ ಕಾರ್ಡ್‌ ಬಳಸಬೇಕಿದೆ. ಮಾಸ್ಕ್‌ ಬಳಕೆ ಕಡ್ಡಾಯವಾಗಿದ್ದು, ಪ್ರವೇಶದ್ವಾರದಲ್ಲೇ ಪ್ರತಿಯೊಬ್ಬರು ಸ್ಯಾನಿಟೈಜರ್‌ನಿಂದ ಕೈ ಸ್ವಚ್ಛಗೊಳಿಸಿಕೊಳ್ಳಬೇಕಾಗಿದೆ. ರೈಲಿನಲ್ಲಿ ಒಬ್ಬರ ಪಕ್ಕ ಒಬ್ಬರು ಕೂರುವಂತಿಲ್ಲ. ಒಂದೊಮ್ಮೆ ನಿಲ್ಲುವಂತಿದ್ದರೆ, ಗುರುತು ಮಾಡಿರುವ ಬಾಕ್ಸ್‌ಗಳಲ್ಲೇ ನಿಲ್ಲಬೇಕೆಂದು ಸೂಚಿಸಲಾಗಿದೆ.

ನಿಲ್ದಾಣಗಳ ಪ್ರವೇಶ ದ್ವಾರದಲ್ಲಿ ಎಎಫ್‌ಸಿ ಗೇಟ್‌ ಪ್ರವೇಶ ಮತ್ತು ನಿರ್ಗಮನದ ಸಮಯದಲ್ಲಿ ಮತ್ತು ಪ್ಲಾಟ್‌ಫಾರಮ್‌ನಲ್ಲಿ ಹಳದಿ ಗುರುತಿನ ಜಾಗದಲ್ಲಿಯೇ ನಿಲ್ಲಬೇಕು. ಎಲ್ಲರೂ ಕಡ್ಡಾಯವಾಗಿ 6 ಅಡಿ ಅಂತರ ಕಾಯ್ದುಕೊಳ್ಳಬೇಕು. 50ಕ್ಕೂ ಹೆಚ್ಚು ಪ್ರಯಾಣಿಕರು ನಿಲ್ದಾಣಗಳಲ್ಲಿ ನಿಲ್ಲಲು ಅನುಮತಿ ಇಲ್ಲ. ನಿಲ್ದಾಣಗಳ ಪ್ರವೇಶವನ್ನು ಅದಕ್ಕೆ ತಕ್ಕಂತೆ ಅನುಗುಣವಾಗಿ ನಿಯಂತ್ರಿಸಲಾಗಿದೆ ಎಂದು ಬಿಎಂಆರ್‌ಸಿಎಲ್‌ ತಿಳಿಸಿದೆ.