ಸುಡುವ ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಸುರಿದಿದೆ. ಶುಕ್ರವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದೆ.
ಬೆಂಗಳೂರು (ಮೇ.3): ರಾಜ್ಯದ ಕೆಲ ಜಿಲ್ಲೆಗಳಲ್ಲಿ ಮಳೆಯಾಗಿದೆ. ಸುಡುವ ರಣ ಬಿಸಿಲು, ಬಿಸಿ ಗಾಳಿಯಿಂದ ತತ್ತರಿಸಿದ ಬೆಂಗಳೂರಿಗೆ ಗುರುವಾರದ ಸಂಜೆ ತುಸು ಮಳೆ ಬಂದು ತಂಪೆರೆಯಿತು. ಶುಕ್ರವಾರ ಮಧ್ಯಾಹ್ನದಿಂದಲೇ ಮಳೆ ಆರಂಭವಾಗಿದ್ದು, ಮಲ್ಲೇಶ್ವರಂ, ಮೈಸೂರು ಬ್ಯಾಂಕ್, ಮೆಜೆಸ್ಟಿಕ್, ಕಾರ್ಪೋರೇಷನ್, ಶಿವಾನಂದ ಸರ್ಕಲ್ , ಮತ್ತಿಕೆರೆ ಮಾಗಡಿ ರೋಡ್ ಸೇರಿದಂತೆ ಸೇರಿದಂತೆ ಹಲವೆಡೆ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮುಂದಿನ 2 ವಾರಗಳಲ್ಲಿ ಇನ್ನಷ್ಟು ಚಂಡಮಾರುತ ಸಹಿತ ಮಳೆಯಾಗಲಿದೆ ಎಂದು ವರದಿ ತಿಳಿಸಿದೆ.
ಬೆಳಗ್ಗೆಯಿಂದಲೇ ಮೋಡ ಕವಿದ ವಾತಾವರಣ ಇತ್ತು. ಮದ್ಯಾಹ್ನ ಗುಡುಗು ಸಹಿತ ಆಲಿಕಲ್ಲು ಮಳೆಯಾಯ್ತು. ಕಾದ ಹೆಂಚಿನಂತಾಗಿದ್ದ ಬೆಂಗಳೂರು ವಾತಾವರಣ ಅಲ್ಪ ತಂಪಾಗಿದೆ.
ಅನಿರೀಕ್ಷಿತ ಮಳೆಗೆ ತುಸು ತಣ್ಣಗಾದ ಬೆಂಗಳೂರು: ಏಕಾಏಕಿ ಗುಡುಗು, ಮಿಂಚು
ಮಳೆಯಾದ ಪ್ರದೇಶಗಳು: ರಾಜಾಜಿನಗರ, ಮಲ್ಲೇಶ್ವರಂ, ವಸಂತ ನಗರ, ಬಾಣಸವಾಡಿ, HBR ಲೇಔಟ್, ಕಮ್ಮನಹಳ್ಳಿ, ಲಿಂಗರಾಜಪುರಂ, BTM ಲೇಔಟ್, ಜಯನಗರ, ಬಸವೇಶ್ವರನಗರ, ಕಾಮಾಕ್ಷಿಪಾಳ್ಯ, ಕೆಂಗೇರಿ, ನಾಯಂಡಹಳ್ಳಿ, ರಾಜಾಜಿನಗರ.
ತುಂತುರು ಮಳೆ ಪ್ರದೇಶಗಳು: ಸದಾಶಿವನಗರ, ಶೇಷಾದ್ರಿಪುರಂ, ಶಿವಾಜಿನಗರ, ಬೆಳ್ಳಂದೂರು, ಸಿವಿ ರಾಮನ್ ನಗರ, ಮಾರತ್ತಹಳ್ಳಿ, ವೈಟ್‌ಫೀಲ್ಡ್, ಕಲ್ಯಾಣ್ ನಗರ, ಹೆಬ್ಬಾಳ, ಮತ್ತಿಕೆರೆ, ಬೊಮ್ಮಸಂದ್ರ ,ಎಲೆಕ್ಟ್ರಾನಿಕ್ ಸಿಟಿ, ಕೊತ್ನೂರು, ರಾಜರಾಜೇಶ್ವರಿ ನಗರ.
ಆನೇಕಲ್, ತಮಿಳುನಾಡು ಸೂಳಗಿರಿಯಲ್ಲಿ ಆಲಿಕಲ್ಲು ಮಳೆಯಾಗಿದೆ. ಆನೇಕಲ್ ಸುತ್ತಮುತ್ತ ಗುಡುಗು, ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಆನೇಕಲ್ ಅತ್ತಿಬೆಲೆ ಜಿಗಣಿ ಚಂದಾಪುರ ಸೇರಿದಂತೆ ಅನೇಕ ಕಡೆಯಲ್ಲಿ ಮಳೆಯಾಗಿದ್ದು, ಮೊದಲ ಭರ್ಜರಿ ಮಳೆಯಾಗಿದೆ. ಬೇಸಿಗೆಯ ಬಿಸಿಲಿನಿಂದ ಕಂಗೆಟ್ಟಿದ್ದ ಜನ,ರೈತರ ಮುಖದಲ್ಲಿ ಸಂತಸ ಮೂಡಿದೆ.
ಕೊಡಗಿನಲ್ಲಿ 38 ಡಿಗ್ರಿ ತಲುಪಿದ ರಣಭೀಕರ ಬಿಸಿಲು: ಸುಟ್ಟು ಕರಕಲಾದ ಬೆಳೆ, ಕಂಗಾಲಾದ ಅನ್ನದಾತ..!
ನೆಲಮಂಗಲದಲ್ಲಿ ಬಿರುಗಾಳಿ ಸಹಿತ ಮಳೆಯಾಗಿದ್ದು, ಬಿರುಗಾಳಿಯ ರಭಸಕ್ಕೆ ಮರ ಧರೆಗುರುಳಿದೆ. ಪರಿಣಾಮ ರಸ್ತೆ ಬದಿಯ ಪೆಟ್ಟಿ ಅಂಗಡಿ ಧ್ವಂಸವಾಗಿದೆ. ಇಲ್ಲಿನ ಮಾಕಳಿ ಬಳಿ ಘಟನೆ ನಡೆದಿದೆ. ಮಂಜುಳಾ ಎಂಬುವವರ ಪೆಟ್ಟಿ ಅಂಗಡಿ ಮೇಲೆ ಮರ ಬಿದ್ದು, ಪ್ರಾಣಪಾಯದಿಂದ ಮಹಿಳೆ ಪಾರಾಗಿದ್ದಾರೆ. ಈ ಭಾಗದಲ್ಲಿ ಸಾಧಾರಣ ತುಂತುರು ಮಳೆಯಾಗಿದ್ದು, ಮಾದನಾಯಕನಹಳ್ಳಿಯಲ್ಲಿ ಕೆಲಕಾಲ ಮಳೆರಾಯ ತಂಪೆರೆದಿದ್ದಾನೆ.
ರಾಮನಗರದಲ್ಲಿ ಮಳೆ ಸಿಂಚನ: ರೇಷ್ಮೆನಾಡು ರಾಮನಗರದ ಹಲವೆಡೆ ವರುಣನ ಸಿಂಚನವಾಗಿದೆ. ಬಿಸಿಲಿಗೆ ಬಳಲಿದ್ದ ಜನತೆಗೆ ಮಳೆರಾಯ ತಂಪೆರೆದ. ರಾಮನಗರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು, ದಿಢೀರ್ ವರುಣನ ಆಗಮನಕ್ಕೆ ಜನಜೀವನ ಅಸ್ತವ್ಯಸ್ತವಾಗಿದೆ. ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಕೋಲಾರಕ್ಕೆ ಮಳೆರಾಯನ ಎಂಟ್ರಿ: ಬೆಳಿಗ್ಗೆಯಿಂದಲೂ ಮೋಡ ಕವಿದ ವಾತಾವರಣ ಹೊಂದಿದ್ದ ಕೋಲಾರ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆಯಾಗಿದೆ. ಬಿಸಿಲ ಬೇಗೆಯಿಂದ ತತ್ತರಿಸಿದ್ದ ಜನರಿಗೆ ವರುಣ ತಂಪೆರೆದಿದ್ದಾನೆ. ವರುಣನ ಎಂಟ್ರಿಯಿಂದ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮೈಸೂರಿನಲ್ಲಿ ಮಳೆ: ಮೈಸೂರಿನಲ್ಲಿ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲಿ ಮಳೆ. ಮಳೆರಾಯನ ಆಗಮನಕ್ಕೆ ಸಂತಸಗೊಂಡ ಮೈಸೂರಿಗರು. ಬಿರುಗಾಳಿ ಸಹಿತ ಬಾರೀ ಮಳೆಗೆ ಧರೆಗುರುಳಿದ ಮರ, ರಂಬೆ ಕೊಂಬೆಗಳು. ನಗರದ ಕಾಳಿದಾಸ ರಸ್ತೆಯಲ್ಲಿ ಕಾರುಗಳ ಮೇಲೆ ಬಿದ್ದ ಮರದ ರಂಬೆಗಳು, ಹತ್ತಾರು ಕಾರುಗಳು ಜಖಂ.
