ಚಿಕ್ಕಮಗಳೂರಿನ ರೈತ ಕುಟುಂಬಕ್ಕೆ ಮೆಸ್ಕಾಂ ಇಲಾಖೆ 3 ಲಕ್ಷ ರೂ. ವಿದ್ಯುತ್ ಬಿಲ್ ನೀಡಿದ್ದು ಆಘಾತ ಉಂಟುಮಾಡಿದೆ. 13 ವರ್ಷಗಳ ಬಿಲ್ ಅನ್ನು ಒಮ್ಮೆಲೇ ಪಾವತಿಸುವಂತೆ ನೋಟಿಸ್ ನೀಡಿದ್ದು, ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವರದಿ : ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ಚಿಕ್ಕಮಗಳೂರು (ಫೆ.26): ಇವರದ್ದು ಒಂದು ಸಾಮಾನ್ಯ ರೈತ ಕುಟುಂಬ. ಬೆಳೆ ಬಂದರೆ ಜೀವನ, ಇಲ್ಲದಿದ್ದರೆ ವನವಾಸ ಎಂಬಂತೆ ಬದುಕು ಸಾಗಿಸುತ್ತಿದ್ದಾರೆ. ಇಂತಹ ರೈತ ಕುಟುಂಬಕ್ಕೆ ಈಗಾಗಲೇ ಎಲ್ಲ ವಸ್ತುಗಳ ಮೇಲೆಯೂ ತೆರಿಗೆ ಭಾರ ಹೆಚ್ಚಿಸಿರುವ ರಾಜ್ಯ ಸರ್ಕಾರ 3 ಲಕ್ಷ ರೂ. ವಿದ್ಯುತ್ ಬಿಲ್ ನೀಡಿ ಕಟ್ಟಲೇಬೇಕು ಎಂದು ದುಂಬಾಲು ಬಿದ್ದಿದೆ. ಮೆಸ್ಕಾಂ ಇಲಾಖೆಯು ನೀಡಿ ವಿದ್ಯುತ್ ಬಿಲ್‌ ನೋಡಿ ಮಲೆನಾಡಿನ ರೈತ ಶಾಕ್ ಆಗಿದ್ದಾರೆ.

ಕಳೆದ 13 ವರ್ಷಗಳಿಂದ ವಿದ್ಯುತ್ ಬಿಲ್ ನೀಡದ ಮೆಸ್ಕಾಂ ಒಂದೇ ಬಾರಿಗೆ 160 ತಿಂಗಳ ವೇಳೆ ವಿದ್ಯುತ್ ಬಿಲ್ 3.20 ಲಕ್ಷ ರೂ. ಹಣ ಕಟ್ಟುವಂತೆ ರೈತರಿಗೆ ನೋಟೀಸ್ ನೀಡಿರೋ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಸಮೀಪದ ಬಿಕ್ಕರಣೆ ನಡೆದಿದೆ. ಚಿಕ್ಕಮಗಳೂರು ತಾಲೂಕಿನ ಬಿಕ್ಕರಣೆ ಗ್ರಾಮದ ರೈತ ಉಮೇಶ್ ಅವರಿಗೆ ನೋಟೀಸ್ ನೀಡಿದ್ದು 15 ದಿನಗಳ ಒಳಗೆ ಹಣ ಕಟ್ಟದಿದ್ದರೆ ವಿದ್ಯುತ್ ಸಂಪರ್ಕ ಕಡಿತಗೊಳಿಸುವುದಾಗಿ ಎಚ್ಚರಿಕೆ ನೀಡಿ 2023ರ ಡಿಸೆಂಬರ್ 16ರಂದೇ ನೋಟೀಸ್ ನೀಡಿದ್ದಾರೆ.

ಉಮೇಶ್ ಸೇರಿ ಹಲವು ರೈತರಿಗೆ ಇದೇ ರೀತಿ ನೋಟೀಸ್ ಕಳಿಸಿದ್ದಾರೆ. ಆದರೆ, ಯಾವ ರೈತರು ಹಣ ಕಟ್ಟಿರಲಿಲ್ಲ. ಇದೀಗ, ಮೆಸ್ಕಾಂ ಸಿಬ್ಬಂದಿಗಳು ಹಣ ಕಟ್ಟುವಂತೆ ಪೀಡಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. 10HP ಮೋಟರ್ ಗೆ ವಿದ್ಯುತ್ ಸಂಪರ್ಕ ಉಚಿತವಿದೆ. ಮಾಜಿ ಸಿಎಂ ದಿವಂಗತ ಬಂಗಾರಪ್ಪನವರ ಕಾಲದಿಂದಲೂ ಹೀಗೆ ಇರೋದು. ಆದರೆ, ಈಗ ಮೆಸ್ಕಾಂ ಸಿಬ್ಬಂದಿಗಳು ಹಣಕ್ಕಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ರೈತರು ಮೆಸ್ಕಾಂ ಸಿಬ್ಬಂದಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಹಂಪಿ ಉತ್ಸವ 2025: ವೈಭವದ ವೇದಿಕೆ ಸಿದ್ಧಪಡಿಸಿದ ಜಿಲ್ಲಾಡಳಿತ ಫೆ.28ರಂದು ಸಿದ್ದರಾಮಯ್ಯ ಉದ್ಘಾಟನೆ!

ಕಾಫಿತೋಟದ ಮಾಲೀಕರಿಗೆ ಉಚಿತ ವಿದ್ಯುತ್ ಇಲ್ಲ : ಇಷ್ಟು ವರ್ಷಗಳ ಕಾಲ ಏಕೆ ನೋಟೀಸ್ ನೀಡಲಿಲ್ಲ. ಉಚಿತ ವಿದ್ಯುತ್ ಇತ್ತು ಎಂದು ನೀಡಿರಲಿಲ್ಲ.‌ ಆದರೆ, ಈಗ ಹಣ ಕಟ್ಟುವಂತೆ ದುಂಬಾಲು ಬಿದ್ದಿದ್ದಾರೆ. ಸರ್ಕಾರ ವಿದ್ಯುತ್ ಬಿಲ್ ಬಾಕಿಯನ್ನ ಮನ್ನಾ ಮಾಡುತ್ತೇವೆ ಎಂದಿತ್ತು. ಅಲ್ಲದೆ 10HP ಮೋಟರ್ ಗೆ ಉಚಿತ ವಿದ್ಯುತ್ ಇದೆ. ಆದರೆ, ಇಷ್ಟು ವರ್ಷ ಸುಮ್ಮನಿದ್ದ ಮೆಸ್ಕಾಂ ಈಗ ಏಕೆ ಹಣಕ್ಕೆ ಹಿಂದೆ ನೀಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಆದರೆ, ಮೆಸ್ಕಾಂ ಸಿಬ್ಬಂದಿಗಳು ವಿದ್ಯುತ್ ಬಿಲ್ ಬಾಕಿಯನ್ನ ಕಟ್ಟಲೇಬೇಕು. ಕಾಫಿ ತೋಟಕ್ಕೆ ಉಚಿತ ವಿದ್ಯುತ್ ಇಲ್ಲ. ಕಾಫಿ ತೋಟದ ಮಾಲೀಕರು ಕಟ್ಟಲೇಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.