*ನಿಜಲಿಂಗಪ್ಪ ಸಿಎಂ ಆಗಿದ್ದಾಗಲೇ ಯೋಜನೆಗೆ ಚಿಂತಿಸಿದ್ದರು*ಯೋಜನೆ ಕಾರ್ಯಗತಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ*ಪಾದಯಾತ್ರೆಯಿಂದ ಬಿಜೆಪಿಗೆ ನಡುಕ: ಸಿದ್ಧರಾಮಯ್ಯ
ಮೈಸೂರು (ಜ. 4): ಮೇಕೆದಾಟು ಯೋಜನೆ 1968ರಲ್ಲೇ ಇತ್ತು. ದಿ.ನಿಜಲಿಂಗಪ್ಪ (S. Nijalingappa) ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ (Mekedatu Project) ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು ಎಂದು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಹೇಳಿದರು. ನಗರದ ಕಾಂಗ್ರೆಸ್ ಭವನ ಆವರಣದಲ್ಲಿ ಸೋಮವಾರ ಕೆಪಿಸಿಸಿ (KPCC) ಆಯೋಜಿಸಿದ್ದ ಮೇಕೆದಾಟು ಯೋಜನೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಬಿ.ಎಸ್.ಯಡಿಯೂರಪ್ಪ ಅವರು ಚುನಾವಣೆಗೂ ಮುನ್ನ ತಾವು ಅಧಿಕಾರಕ್ಕೆ ಬಂದರೆ ತಾವೇ ಮೇಕೆದಾಟು ಯೋಜನೆ ಆರಂಭಿಸುತ್ತೇವೆ ಎಂದು ಭರವಸೆ ನೀಡಿದ್ದರು.
1968ರಲ್ಲಿ ನಿಜಲಿಂಗಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೇಕೆದಾಟು ಯೋಜನೆ ಕೈಗೆತ್ತಿಕೊಳ್ಳಲು ಉದ್ದೇಶಿಸಲಾಗಿತ್ತು. ಕಾಲಾನಂತರ ನಾನು ಮುಖ್ಯಮಂತ್ರಿ ಆದ ಮೇಲೆ ಅದಕ್ಕೆ ಡಿಪಿಆರ್ ಸಿದ್ಧಪಡಿಸಲಾಯಿತು. ಅದನ್ನು ಕೇಂದ್ರ ತಿರಸ್ಕರಿಸಿದ ಮೇಲೆ, ಮತ್ತೊಂಡು ಡಿಪಿಆರ್ ಸಲ್ಲಿಸಲಾಯಿತು. ಈಗ ಕಾರಜೋಳ ಕೂಡ ಒಂದು ಡಿಪಿಆರ್ ಸಲ್ಲಿಸಿದ್ದಾರೆ. ಯೋಜನೆ ಅನುಷ್ಠಾನಕ್ಕೆ ಇದ್ದ ಅಡೆತಡೆ ನಿವಾರಣೆ ಆಗಿದೆ. ಆದರೂ ಯೋಜನೆ ಕಾರ್ಯಗತಗೊಳಿಸುವಲ್ಲಿ ಸರ್ಕಾರ ನಿರ್ಲಕ್ಷ್ಯ ತೋರುತ್ತಿದೆ ಎಂದು ಆರೋಪಿಸಿದರು.
ಪಾದಯಾತ್ರೆಯಿಂದ ಬಿಜೆಪಿಗೆ ನಡುಕ
ಮೇಕೆದಾಟು ಯೋಜನೆ ಕುರಿತ ಕಾಂಗ್ರೆಸ್‌ನ ಈ ಪಾದಯಾತ್ರೆಯಿಂದ ಬಿಜೆಪಿ ಮತ್ತು ಜೆಡಿಎಸ್‌ಗೆ ನಡುಕ ಉಂಟಾಗಿದೆ. ಈ ಹೋರಾಟದಿಂದ ಕಾಂಗ್ರೆಸ್‌ಗೆ ರಾಜಕೀಯ ಲಾಭವಾಗುತ್ತದೆ ಎಂಬ ಆರೋಪ ಅಲ್ಲಗಳೆಯಲ್ಲ. ಆದರೆ, ನಮ್ಮದೇ ಸರ್ಕಾರ ಈ ಯೋಜನೆಗೆ ಡಿಪಿಆರ್ ಸಿದ್ಧಪಡಿಸಿತ್ತು. ಅಲ್ಲದೆ ಹಸಿರು ಪೀಠ, ಸುಪ್ರೀಂ ಕೋರ್ಟ್ ಕೂಡ ಒಪ್ಪಿಗೆ ಸೂಚಿಸಿದ್ದರೂ ಬಿಜೆಪಿ ಮಾತ್ರ ರಾಜಕೀಯ ಮಾಡುತ್ತಿದೆ. ಒಂದು ಕಡೆ ತಮಿಳುನಾಡಿನ ಬಿಜೆಪಿ ನಾಯಕ ಅಣ್ಣಾಮಲೈ ಎತ್ತಿಕಟ್ಟಿದರೆ, ಮತ್ತೊಂದೆಡೆ ತಮಿಳುನಾಡು ಬಿಜೆಪಿ ಉಸ್ತುವಾರಿ ಸಿ.ಟಿ.ರವಿ ಕೂಡ ವಿರೋಧಿಸುತ್ತಿದ್ದಾರೆ ಎಂದರು.
ಡಿಕೆಶಿ-ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯ ಇಲ್ಲ: ಸಿದ್ದು
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ (D K Shivakumar) ಹಾಗೂ ನನ್ನ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ನನ್ನ ಮತ್ತು ಅವರ ನಡುವೆ ಯಾವುದೇ ರೀತಿಯ ವೈಮನಸ್ಸು ಇಲ್ಲ ಮಾಜಿ ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿರುವ ಭ್ರಷ್ಟಸರ್ಕಾರವನ್ನು ಹೊಗಲಾಡಿಸಿ, ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಬೇಕು ಎಂಬುದೊಂದೇ ನಮ್ಮ ಗುರಿ ಎಂದು ಹೇಳಿದರು.
ಇದನ್ನೂ ಓದಿ: Congress Padayatra: ಮೇಕೆದಾಟು ಬಳಿಕ ಕೃಷ್ಣೆ, ಮಹದಾಯಿಗಾಗಿಯೂ ಹೋರಾಟ: ಡಿಕೆಶಿ
ರಾಜ್ಯದಲ್ಲಿ ಯಾವುದೇ ಕ್ಷಣದಲ್ಲೂ ಚುನಾವಣೆ ಬಂದರೂ ಎದುರಿಸಲು ಸಿದ್ಧ. 2023ರ ಏಪ್ರಿಲ್‌ಗೇ ವಿಧಾನಸಭೆ ಚುನಾವಣೆ ನಡೆಯಲೆಂದು ನಾವು ಬಯಸುತ್ತೇವೆ. ಒಂದು ವೇಳೆ ಇವರ ಕಚ್ಚಾಟದಿಂದ ಸರ್ಕಾರ ಪತನವಾಗಿ ಚುನಾವಣೆ ಬಂದರೆ ಎದುರಿಸಲು ಸಿದ್ಧರಿದ್ದೇವೆ. ಆದರೆ, ರಾಜ್ಯ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯಕ್ಕೆ ಕಾಂಗ್ರೆಸ್ ಮುಂದಾಗುವುದಿಲ್ಲ ಎಂದು ಸಿದ್ದರಾಮಯ್ಯ ಅವರು ತಿಳಿಸಿದರು.
ಶೇ.40 ಕಮಿಷನ್ ಹಗರಣ, ಬಿಟ್ ಕಾಯಿನ್ ಹಗರಣದ ಬಗ್ಗೆ ಚರ್ಚೆಗೆ ಸದನದಲ್ಲಿ ಅನುಮತಿ ಕೋರಿದ್ದೆ, ಸಮಯಾವಕಾಶ ಕೊರತೆ ಇರುವುದು ಗೊತ್ತಾದಾಗ ಸದನವನ್ನು ಒಂದು ವಾರ ವಿಸ್ತರಿಸುವಂತೆ ಮನವಿ ಕೂಡ ಮಾಡಿದ್ದೆ. ಸರ್ಕಾರ ಈ ನಡುವೆ ಮತಾಂತರ ನಿಷೇಧ ಕಾಯ್ದೆ ತಂದು ಚರ್ಚೆ ಸಾಧ್ಯವಾಗಿಲ್ಲ ಎಂದರು.
