ಕರ್ನಾಟಕದ ಮಹತ್ವಾಕಾಂಕ್ಷೆಯ ಮೇಕೆದಾಟು ಸಮತೋಲನ ಜಲಾಶಯ ಯೋಜನೆಗೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ತಮಿಳುನಾಡು ಸರ್ಕಾರದ ನಿಲುವಿಗೆ ಸುಪ್ರೀಂ ಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ಪದೇ ಪದೆ ಈ ನೆಪ ಸರಿಯಲ್ಲ. ಈ ವಿಷಯವನ್ನು ಈಗಾಗಲೇ ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲಾಗಿದೆ ಎಂದಿದೆ.
ನವದೆಹಲಿ: ಕಾವೇರಿ ನದಿಗೆ ಮೇಕೆದಾಟು ಅಣೆಕಟ್ಟು ಯೋಜನೆ ನಿರ್ಮಾಣಕ್ಕೆ ಕರ್ನಾಟಕಕ್ಕೆ ಅನುಮತಿ ನೀಡದಂತೆ ಕೋರಿ ಸಲ್ಲಿಕೆಯಾಗಿರುವ ಅರ್ಜಿಯ ವಿಚಾರಣೆ ವೇಳೆ, ತಮಿಳುನಾಡು ಸರ್ಕಾರದ ನಡೆಗೆ ಸುಪ್ರೀಂಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು ಪದೇ ಪದೇ ವಿಚಾರಣೆ ಮುಂದೂಡಿಕೆಗೆ ಮನವಿ ಸಲ್ಲಿಸುತ್ತಿರುವುದರ ಕುರಿತು ಅಸಮಧಾನ ಹೊರಹಾಕಿದ್ದು, ಪ್ರಕರಣದ ವಿಚಾರಣಾ ಪ್ರಕ್ರಿಯೆಯ ಬಗ್ಗೆ ಸ್ಪಷ್ಟ ನಿಲುವನ್ನು ವ್ಯಕ್ತಪಡಿಸಿದೆ.
ಹಿರಿಯ ವಕೀಲರ ಅಲಭ್ಯತೆ ನೆಪ, ಮುಂದೂಡಿಕೆಗೆ ಮನವಿ
ವಿಚಾರಣೆಯ ಸಂದರ್ಭದಲ್ಲಿ ತಮಿಳುನಾಡು ಸರ್ಕಾರದ ಪರವಾಗಿ ಹಾಜರಿದ್ದ ವಕೀಲರು, ತಮ್ಮ ಹಿರಿಯ ವಕೀಲರು ಲಭ್ಯವಿಲ್ಲದ ಕಾರಣ ವಿಚಾರಣೆಯನ್ನು ಮತ್ತೊಂದು ದಿನಕ್ಕೆ ಮುಂದೂಡುವಂತೆ ಪೀಠವನ್ನು ಕೋರಿದರು. ಈ ಮನವಿಗೆ ನ್ಯಾಯಪೀಠವು ತೀವ್ರ ಆಕ್ಷೇಪ ವ್ಯಕ್ತಪಡಿಸಿತು.
ಹಿಂದಿನ ವಿಚಾರಣೆಯ ವೇಳೆಯೂ ರಾಜ್ಯದ ಕಡೆಯಿಂದ ಇದೇ ಕಾರಣ ನೀಡಿ ಮುಂದೂಡಿಕೆಗೆ ವಿನಂತಿಸಲಾಗಿತ್ತು ಎಂಬ ಅಂಶವನ್ನು ನ್ಯಾಯಾಧೀಶರು ಗಮನಕ್ಕೆ ತಂದರು. ಪದೇ ಪದೇ ಇದೇ ರೀತಿ ವಿಳಂಬವಾಗುತ್ತಿರುವುದಕ್ಕೆ ನ್ಯಾಯಪೀಠ ತೀವ್ರ ಆಕ್ರೋಶ ವ್ಯಕ್ತಪಡಿಸಿತು.
ಪ್ರಕರಣ ಬಹುತೇಕ ಮುಗಿದಿದೆ; ಬಾಕಿ ಪ್ರಕರಣಗಳ ಹೊರೆ ಹೆಚ್ಚುತ್ತಿದೆ
ವಿಚಾರಣೆ ವೇಳೆ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್ ನೇತೃತ್ವದ ಪೀಠವು, ಈ ವಿಷಯವನ್ನು ಈಗಾಗಲೇ ಪರಿಣಾಮಕಾರಿಯಾಗಿ ಮುಕ್ತಾಯಗೊಳಿಸಲಾಗಿದೆ ಮತ್ತು ಈ ಪ್ರಕರಣ ಬಹುತೇಕ ಮುಗಿದು ಹೋಗಿರುವಂತಹದ್ದು ಎಂದು ಹೇಳಿತು. ಇಂತಹ ಅರ್ಜಿಗಳು ನ್ಯಾಯಾಲಯದಲ್ಲಿ ಬಾಕಿ ಇರುವ ಪ್ರಕರಣಗಳ ಸಂಖ್ಯೆ ಮತ್ತು ಹೊರೆ ಏರಿಕೆಯಾಗಲು ಕಾರಣವಾಗುತ್ತವೆ ಎಂದೂ ಪೀಠ ಎಚ್ಚರಿಸಿತು.
ಮೇಕೆದಾಟು ಯೋಜನೆ ಕುರಿತು ರಾಜ್ಯಗಳ ನಿಲುವು
ಕಾವೇರಿ ನದಿಗೆ ಮೇಕೆದಾಟು ಸಮತೋಲನ ಜಲಾಶಯ ನಿರ್ಮಿಸಲು ಕರ್ನಾಟಕ ಸರ್ಕಾರ ಪ್ರಸ್ತಾಪಿಸಿರುವ ಯೋಜನೆಗೆ ತಮಿಳುನಾಡು ವಿರೋಧ ವ್ಯಕ್ತಪಡಿಸುತ್ತಾ ಬಂದಿದೆ. ನದಿಯ ಕೆಳಭಾಗದ ನೀರಿನ ಲಭ್ಯತೆ ಹಾಗೂ ನೀರಾವರಿ ಚಟುವಟಿಕೆಗಳ ಮೇಲೆ ಪರಿಣಾಮ ಬೀರಬಹುದೆಂಬ ಕಳವಳವನ್ನು ತಮಿಳುನಾಡು ಮುಂದಿಟ್ಟಿದೆ.
ಮತ್ತೊಂದೆಡೆ, ಈ ಯೋಜನೆಯು ಬೆಂಗಳೂರು ನಗರದ ಕುಡಿಯುವ ನೀರಿನ ಅಗತ್ಯಗಳನ್ನು ಪೂರೈಸಲು ನೆರವಾಗಲಿದೆ, ವಿದ್ಯುತ್ ಉತ್ಪಾದನೆಗೆ ಸಹಕಾರಿಯಾಗಲಿದೆ ಹಾಗೂ ತಮಿಳುನಾಡಿಗೆ ನಿಗದಿಯಾಗಿರುವ ನೀರಿನ ಪಾಲಿಗೆ ಯಾವುದೇ ಧಕ್ಕೆಯಾಗದಂತೆ ಸಮತೋಲನ ಜಲಾಶಯವಾಗಿ ಕಾರ್ಯನಿರ್ವಹಿಸಲಿದೆ ಎಂದು ಕರ್ನಾಟಕ ಸರ್ಕಾರ ಸ್ಪಷ್ಟಪಡಿಸುತ್ತಾ ಬಂದಿದೆ.
ಮೇಕೆದಾಟು ಯೋಜನೆ ಪರಿಸರ ಪರಿಣಾಮಗಳ ಅಧ್ಯಯನಕ್ಕೆ ಸಮ್ಮತಿ
ಮತ್ತೊಂದೆಡೆ ಮೇಕೆದಾಟು ಜಲಾಶಯ ಯೋಜನೆ ಪ್ರದೇಶದಲ್ಲಿ ಅಣೆಕಟ್ಟು ನಿರ್ಮಾಣದಿಂದ ಪರಿಸರದ ಮೇಲಾಗುವ ಪರಿಣಾಮಗಳ ಮೌಲ್ಯಮಾಪನದ ಅಧ್ಯಯನ ನಡೆಸಲು ಕೇಂದ್ರ ವನ್ಯಜೀವಿ ಮಂಡಳಿ ಒಪ್ಪಿಗೆ ನೀಡಿದೆ. ದೆಹಲಿಯಲ್ಲಿ ಸೋಮವಾರ ನಡೆದ ಕೇಂದ್ರ ವನ್ಯಜೀವಿ ಮಂಡಳಿಯ ಸಭೆಯಲ್ಲಿ ಈ ಬಗ್ಗೆ ಸಮ್ಮತಿ ಸೂಚಿಸಲಾಗಿದೆ. ಅಧ್ಯಯನ ನಡೆದ ಬಳಿಕ ಸಂಪೂರ್ಣ ವರದಿ ಸಿದ್ದವಾಗಲಿದೆ.
ಮೇಕೆದಾಟು ಡಿಪಿಆರ್ ಕೈಬಿಡಿ: ಕೇಂದ್ರ ಸರ್ಕಾರಕ್ಕೆ ತಮಿಳುನಾಡು ಮನವಿ
ಕಳೆದವಾರ ಮೇಕೆದಾಟು ಯೋಜನೆಯ ವಿಸ್ತೃತ ವರದಿಗೆ (ಡಿಪಿಆರ್) ಕೇಂದ್ರದ ಅನುಮೋದನೆ ಪಡೆಯಲು ಕರ್ನಾಟಕ ನಿರಂತರವಾಗಿ ಪ್ರಯತ್ನಿಸುತ್ತಿರುವ ನಡುವೆಯೇ, ತಮಿಳುನಾಡು ಸಚಿವರಾದ ಎನ್. ಆನಂದ್, ಆಧವ್ ಅರ್ಜುನ ಮತ್ತು ರಾಜ್ಮೋಹನ್ ಅವರು ದೆಹಲಿಯಲ್ಲಿ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿತ್ತು. ಈ ವೇಳೆ, ಕೇಂದ್ರ ಮತ್ತು ಸಿಡಬ್ಲ್ಯೂಸಿ ಕರ್ನಾಟಕದ ಮೇಕೆದಾಟು ಯೋಜನೆಯ ಡಿಪಿಆರ್ ಅನ್ನು ಕೈಗೆತ್ತಿಕೊಳ್ಳದಂತೆ ಮತ್ತು ಎಲ್ಲಾ ಜಲಾನಯನ ರಾಜ್ಯಗಳ ಒಪ್ಪಿಗೆಯಿಲ್ಲದೆ ಯಾವುದೇ ಹೊಸ ಕಾವೇರಿ ಯೋಜನೆಗೆ ಅವಕಾಶ ನೀಡದಂತೆ ಕೇಂದ್ರ ಸಚಿವರನ್ನು ಒತ್ತಾಯಿಸಿತ್ತು.














