ರಾಜ್ಯದ ಹೊಸ ಅಬಕಾರಿ ನೀತಿಯು ಸರ್ಕಾರದ ಬೊಕ್ಕಸಕ್ಕೆ ಭಾರಿ ಲಾಭ ತಂದುಕೊಟ್ಟಿದೆ. ಬಿಯರ್ ದರ ಇಳಿಕೆಯಿಂದಾಗಿ ಅದರ ಮಾರಾಟ ಗಣನೀಯವಾಗಿ ಏರಿಕೆಯಾಗಿದ್ದರೆ, ಐಎಂಎಲ್ ದರ ಹೆಚ್ಚಳದ ನಡುವೆಯೂ ಅದರ ವಹಿವಾಟು ಕುಗ್ಗಿಲ್ಲ.

ಬೆಂಗಳೂರು (ಜೂ.23): ರಾಜ್ಯದಲ್ಲಿ ಹೊಸ ಅಬಕಾರಿ ನೀತಿ ಜಾರಿಗೆ ಬಂದ ಬೆನ್ನಲ್ಲೇ ಮದ್ಯದ ವಹಿವಾಟು ಸಾರ್ವಕಾಲಿಕ ದಾಖಲೆ ಬರೆದಿದೆ. ಸಿಎಂ ಡಿಕೆ ಶಿವಕುಮಾರ್ ನೇತೃತ್ವದ ಗ್ಯಾರಂಟಿ ಸರ್ಕಾರಕ್ಕೆ ಈ ಬಾರಿ ಮದ್ಯಪ್ರಿಯರು ಭರ್ಜರಿ ಕಿಕ್ ನೀಡಿದ್ದು, ಸರ್ಕಾರದ ಬೊಕ್ಕಸ ತುಂಬಿ ತುಳುಕುವಂತೆ ಮಾಡಿದ್ದಾರೆ. ಕೇವಲ ಒಂದೇ ತಿಂಗಳ ಅವಧಿಯಲ್ಲಿ ಅಬಕಾರಿ ಇಲಾಖೆಯ ಆದಾಯದಲ್ಲಿ ಭಾರಿ ಪ್ರಮಾಣದ ಏರಿಕೆ ಕಂಡುಬಂದಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಬಿಯರ್ ಮಾರಾಟ ಗಣನೀಯವಾಗಿ ಜಿಗಿತ!

ಹೊಸ ಅಬಕಾರಿ ನೀತಿಯ ಅನ್ವಯ ಬಿಯರ್ ದರ ಇಳಿಕೆಯಾಗಿದ್ದೇ ತಡ, ರಾಜ್ಯದಲ್ಲಿ ಬಿಯರ್ ಮಾರಾಟ ಗಣನೀಯವಾಗಿ ಜಿಗಿತ ಕಂಡಿದೆ. ಪ್ರೀಮಿಯಂ ಮತ್ತು ವಿದೇಶಿ ಮದ್ಯ ಹಾಗೂ ಬಿಯರ್ ಬೆಲೆಯಲ್ಲಿ ಶೇಕಡಾ 16 ರಿಂದ 20 ರಷ್ಟು ಇಳಿಕೆ ಮಾಡಲಾಗಿತ್ತು. ಇದರ ನೇರ ಲಾಭ ಪಡೆದಿರುವ ಮದ್ಯಪ್ರಿಯರು ಕೇವಲ ಒಂದು ತಿಂಗಳ ಅವಧಿಯಲ್ಲಿ ಬರೋಬ್ಬರಿ 51.68 ಲಕ್ಷ ಬಾಕ್ಸ್ ಬಿಯರ್ ಅನ್ನು ಸ್ವಾಹಾ ಮಾಡಿದ್ದಾರೆ!

ದೇಶಿ ಮದ್ಯದ ದರ ಏರಿಕೆಯಾದ್ರೂ ಕುಗ್ಗದ ಕ್ರೇಜ್

ಮತ್ತೊಂದೆಡೆ ಹೊಸ ನೀತಿಯಲ್ಲಿ ವಿಸ್ಕಿ, ರಮ್, ಬ್ರಾಂಡಿ ಹಾಗೂ ವೋಡ್ಕಾದಂತಹ ಭಾರತೀಯ ತಯಾರಿಕೆಯ ವಿದೇಶಿ ಮದ್ಯದ (IML) ಬೆಲೆ ಶೇಕಡಾ 20 ರಿಂದ 30 ರಷ್ಟು ಹೆಚ್ಚಳವಾಗಿತ್ತು. ಇಷ್ಟಾದರೂ ಮದ್ಯದ ಮೇಲಿನ ಕ್ರೇಜ್ ಮಾತ್ರ ಕಿಂಚಿತ್ತೂ ಕಡಿಮೆಯಾಗಿಲ್ಲ. ದರ ಹೆಚ್ಚಳದ ನಡುವೆಯೂ ಒಂದೇ ತಿಂಗಳಲ್ಲಿ 51.33 ಲಕ್ಷ ಬಾಕ್ಸ್ ಐಎಂಎಲ್ (IML) ಮಾರಾಟವಾಗುವ ಮೂಲಕ ಮದ್ಯದ ಮಾರುಕಟ್ಟೆಯಲ್ಲಿ ಜಿಗಿತ ಕಂಡಿದೆ.

ಲಾಭ ತಂದುಕೊಟ್ಟ ಸ್ಲ್ಯಾಬ್‌ಗಳ ಕಡಿತ; ಆದಾಯದ ಕಂಪ್ಲೀಟ್ ಡಿಟೇಲ್ಸ್

ಅಬಕಾರಿ ಇಲಾಖೆಯ ಪ್ರಕಾರ, ಹೊಸ ಅಬಕಾರಿ ನೀತಿಯಲ್ಲಿ ಮದ್ಯದ ಮೇಲಿನ ತೆರಿಗೆ ಸ್ಲ್ಯಾಬ್‌ಗಳ (Slabs) ಸಂಖ್ಯೆಯನ್ನು 16 ರಿಂದ 8 ಕ್ಕೆ ಇಳಿಸಲಾಗಿತ್ತು. ಈ ತಾಂತ್ರಿಕ ಬದಲಾವಣೆ ಮತ್ತು ದರ ಪರಿಷ್ಕರಣೆ ಸರ್ಕಾರಕ್ಕೆ ಅದೃಷ್ಟ ತಂದಿದೆ.

  • ಕಳೆದ ವರ್ಷದ ಆದಾಯ (ಇದೇ ಅವಧಿ): 3,022 ಕೋಟಿ ರೂಪಾಯಿ
  • ಹೊಸ ನೀತಿ ಜಾರಿ ಬಳಿಕದ ಆದಾಯ: 3,509 ಕೋಟಿ ರೂಪಾಯಿ
  • ಹೆಚ್ಚುವರಿ ಆದಾಯ: ಬರೋಬ್ಬರಿ 486 ಕೋಟಿ ರೂಪಾಯಿ

ಹೊಸ ಅಬಕಾರಿ ನೀತಿಯು ಜಾರಿಗೆ ಬಂದ ಮೊದಲ ತಿಂಗಳಿನಲ್ಲೇ ಇಲಾಖೆಗೆ ನಿರೀಕ್ಷೆಗೂ ಮೀರಿದ ಯಶಸ್ಸು ತಂದುಕೊಟ್ಟಿದೆ ಎಂದು ಅಬಕಾರಿ ಇಲಾಖೆ ಹರ್ಷ ವ್ಯಕ್ತಪಡಿಸಿದೆ. ಒಟ್ಟಿನಲ್ಲಿ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ನಡುವೆ, ಇತ್ತ ಹೊಸ ಅಬಕಾರಿ ನೀತಿಯು ಸರ್ಕಾರದ ಖಜಾನೆಯನ್ನು ಯಶಸ್ವಿಯಾಗಿ ತುಂಬಿಸುತ್ತಿದೆ.