ಸಚಿವ ಸತೀಶ್ ಜಾರಕಿಹೊಳಿ ಸೋದರಿ ಪತಿ, ಮಾಜಿ ಸಂಸದರ ಪುತ್ರ ವೈ ಮಂಜುನಾಥ್‌ಗೆ ಇಡಿ ಶಾಕ್
ಸಚಿವ ಸತೀಶ್ ಜಾರಕಿಹೊಳಿ ಅವರ ಸೋದರಿಯ ಪತಿ ಹಾಗೂ ಅಬಕಾರಿ ಇಲಾಖೆಯ ಹೆಚ್ಚುವರಿ ಆಯುಕ್ತ ವೈ. ಮಂಜುನಾಥ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳಗಾವಿ, ಮೈಸೂರು, ಬೆಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆದಿದೆ.

ಸತೀಶ್ ಜಾರಕಿಹೊಳಿ ಅವರ ಸಹೋದರಿಯ ಪತಿ
ಬೆಳಗಾವಿ: ಸಚಿವ ಸತೀಶ್ ಜಾರಕಿಹೊಳಿ ಸಂಬಂಧಿ (ಸೋದರಿಯ ಪತಿ) ವೈ. ಮಂಜುನಾಥ್ ನಿವಾಸದ ಮೇಲೆ ಗೋವಾ ಮತ್ತು ಬೆಂಗಳೂರಿನ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಕಳೆದ ಹಲವು ವರ್ಷಗಳಿಂದ ಅಬಕಾರಿ ಇಲಾಖೆಯಲ್ಲಿ ವೈ. ಮಂಜುನಾಥ್ ಹೆಚ್ಚುವರಿ ಆಯುಕ್ತರಾಗಿ ಬೆಳಗಾವಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
10 ಕ್ಕೂ ಅಧಿಕ ಅರೆಸೇನಾ ಪಡೆ ಭದ್ರತೆಯಲ್ಲಿ ದಾಳಿ
ಇಂದು ಬೆಳಗ್ಗೆ ಬೆಳಗಾವಿಯ ದೂರದರ್ಶನ ಕೇಂದ್ರದಲ್ಲಿರುವ ಮಂಜುನಾಥ್ ನಿವಾಸಕ್ಕೆ ಅಧಿಕಾರಿಗಳು ಎಂಟ್ರಿ ಕೊಟ್ಟಿದ್ದು, ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿಕೊಂಡಿದ್ದಾರೆ. 10 ಕ್ಕೂ ಅಧಿಕ ಅರೆಸೇನಾ ಪಡೆ ಭದ್ರತೆಯಲ್ಲಿ ಈ ದಾಳಿ ನಡೆದಿದೆ.
ಆರು ಕಡೆ ದಾಳಿ
ಅಬಕಾರಿ ಹೆಚ್ಚುವರಿ ಆಯುಕ್ತ ವೈ ಮಂಜುನಾಥ್ ಅವರಿಗೆ ಸಂಬಂಧಿಸಿದಂತೆ ಬೆಳಗಾವಿ, ಮೈಸೂರು, ಬೆಂಗಳೂರು, ಅರಿಸಿಕೇರೆ ಸೇರಿ ಆರು ಕಡೆ ದಾಳಿ ನಡೆದಿದೆ. ಮೈಸೂರಿನಲ್ಲಿರುವ ವೈ ಮಂಜುನಾಥ ಸ್ನೇಹಿತೆ ಮನೆ, ಬೆಂಗಳೂರಲ್ಲಿರುವ ಅಪಾರ್ಟ್‌ಮೆಂಟ್, ಹಾಸನ ಜಿಲ್ಲೆಯ ಅರಿಸೀಕರೆಯಲ್ಲಿ ಆಪ್ತನ ಮನೆ ಮೇಲೆಯೂ ದಾಳಿ ನಡೆದಿರುವ ಮಾಹಿತಿ ಲಭ್ಯವಾಗಿದೆ.
ಸದ್ಯ ಬೆಂಗಳೂರಿನಲ್ಲಿರುವ ಮಂಜುನಾಥ್
ಅಥಣಿ ತಾಲೂಕಿನ ಐನಾಪುರ ಗ್ರಾಮದಲ್ಲಿರುವ ವೈ ಮಂಜುನಾಥ ಸ್ನೇಹಿತನ ಮನೆ ಮೇಲೆ ದಾಳಿ ನಡೆದಿದೆ. ವೈ. ಮಂಜುನಾಥ್ ಅವರು ಬಳ್ಳಾರಿ ಮಾಜಿ ಸಂಸದ ದೇವೇಂದ್ರಪ್ಪ ಪುತ್ರರಾಗಿದ್ದು, ಬೇನಾಮಿ ಹೆಸರಲ್ಲಿ ಜಮೀನು, ಬಾರ್, ರೆಸ್ಟೋರೆಂಟ್ ಸೇರಿದಂತೆ ಅಕ್ರಮ ಆಸ್ತಿ ಸಂಪಾದನೆಯ ಆರೋಪವನ್ನು ಎದುರಿಸುತ್ತಿದ್ದಾರೆ. ಸದ್ಯ ಬೆಂಗಳೂರಿನ ಅಪಾರ್ಟ್ಮೆಂಟ್‌ನಲ್ಲಿ ವೈ. ಮಂಜುನಾಥ್ ಇದ್ದಾರೆ.

