ಯುದ್ಧಪೀಡಿತ ಉಕ್ರೇನ್‌ನಿಂದ ತಾಯ್ನಾಡಿಗೆ ವಿದ್ಯಾರ್ಥಿಗಳು ದಾಳಿ ಮುಂದುವರಿಸಿರುವ ರಷ್ಯಾ, ಉಕ್ರೇನ್ ಧ್ವಂಸ ಯುದ್ಧದ ನಡುವೆ ಭಾರತೀಯ ವಿದ್ಯಾರ್ಥಿಗಳ ರಕ್ಷಣೆ

ಹುಬ್ಬಳ್ಳಿ(ಮಾ.08): ಕಳೆದ ಹತ್ತು ದಿನಗಳಿಂದ ತುಂಬಾ ಕಷ್ಟವಾಗಿತ್ತು. ಬೇರೆ ಯಾವ ದೇಶಗಳೂ ಅಲ್ಲಿ ಸ್ಥಳಾಂತರ ನಡೆಸಿರಲಿಲ್ಲ. ಭಾರತವೂ ಹಾಗೆ ಕೈಬಿಟ್ಟಿದ್ದರೆ ನಾವು ಅಲ್ಲೆ ಸತ್ತು ಹೋಗ್ತಿದ್ದೀವಿ.ಇದು ಯುದ್ಧಪೀಡಿತ ಉಕ್ರೇನ್‌ನಿಂದ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಬಂದಿಳಿದ ಧಾರವಾಡ, ಬಾಗಲಕೋಟೆ ಜಿಲ್ಲೆಯ ನಾಲ್ವರು ವಿದ್ಯಾರ್ಥಿಗಳು ತಾವು ಕಂಡ ಕರಾಳತೆ, ಅನುಭವಿಸಿದ ಭೀತಿಯನ್ನು ಹೀಗೆ ಬಿಚ್ಚಿಟ್ಟರು. ನಿಲ್ದಾಣಕ್ಕೆ ಮಕ್ಕಳು ಬರುತ್ತಿದ್ದಂತೆ ಪಾಲಕರು ಕಣ್ಣೀರು ಹಾಕಿದರು. ಮತ್ತೆ ಮತ್ತೆ ಯೋಗಕ್ಷೇಮ ವಿಚಾರಿಸಿದರು. ವಾಪಸ್‌ ಬಂದಿದ್ದಕ್ಕೆ ಮಾಧ್ಯಮದ ಎದುರು ಸಂತಸ ಹಂಚಿಕೊಂಡರು.

ಬಾಗಲಕೋಟೆ ಬೀಳಗಿ ತಾಲೂಕು ಸುನಗ ಗ್ರಾಮದ ಸಹನಾ ಮಲ್ಲನಗೌಡ ಪಾಟೀಲ್‌, ನಾನು ಖಾರ್ಕೀವ್‌ನಲ್ಲಿದ್ದೆ. ಆರು ದಿನಗಳ ಕಾಲ ಬಂಕರ್‌ನಲ್ಲಿ ಇದ್ದೆವು. ಊಟ, ನೀರಿಗೆ ತುಂಬಾ ತೊಂದರೆಯಾಗಿತ್ತು. ಸೂಪರ್‌ ಮಾರುಕಟ್ಟೆಗಳಲ್ಲಿ ನೀರಿಗಾಗಿ ಉದ್ದುದ್ದದ ಸರದಿ ಸಾಲಿತ್ತು. ಯುದ್ಧ ಆರಂಭವಾದ ಮೊದಲ ದಿನದಿಂದಲೇ ಸ್ಥಳಾಂತರ ಶುರುವಾಗಿತ್ತು. ಕಾರ್ಕೀವ್‌ನಿಂದ ಹಂಗೇರಿಗೆ ಟ್ರೈನ್‌ ಮೂಲಕ ಹೋಗಿ ಅಲ್ಲಿಂದ ಬಂದಿದ್ದೇವೆ. ಹಾವೇರಿಯ ನವೀನ ಗ್ಯಾನೇಗೌಡರ ನನ್ನ ಕ್ಲಾಸ್‌ಮೇಟ್‌ ಆಗಿದ್ದ. ನಾವೆಲ್ಲ ಒಟ್ಟಾಗಿ ಉಕ್ರೇನ್‌ಗೆ ಹೋಗಿದ್ದೆವು. ಸಿಟಿಯ ಮಧ್ಯಭಾಗದಲ್ಲಿದ್ದ. ಆತನನ್ನು ಸಾಕಷ್ಟುಮಿಸ್‌ ಮಾಡಿಕೊಳ್ಳುತ್ತೇವೆ ಎಂದರು.

Operation Ganga: ಉಕ್ರೇ​ನ್‌​ನ​ಲ್ಲಿನ ಭಾರ​ತೀ​ಯರ ರಕ್ಷ​ಣೆ​ಯಲ್ಲಿ ಬೆಳ​ಗಾವಿ ಸೊಸೆ!

ಮೂಲತಃ ಮುಂಡಗೋಡದ ಸದ್ಯ ಹುಬ್ಬಳ್ಳಿ ನಿವಾಸಿ ನಾಝಿಲ್ಲಾ ಗಾಜಿಪುರ, ಕಾರ್ಕೀವ್‌ನಲ್ಲಿ ತುಂಬಾ ಭಯಂಕರವಾಗಿತ್ತು. ಬಾಂಬ್‌, ಶೆಲ್‌ ದಾಳಿ ನಿರಂತರವಾಗಿತ್ತು. ಉಕ್ರೇನ್‌ನಿಂದ ಬದುಕಿ ಬರುವ ನಂಬಿಕೆಯೇ ಇರಲಿಲ್ಲ. ಉಕ್ರೇನ್‌ಗೆ ತೆರಳಿ ಕೇವಲ ಒಂದು ತಿಂಗಳಾಗಿತ್ತು. ಸ್ಥಳಾಂತರ ಆರಂಭವಾದ ಬಳಿಕ ಕಾರ್ಕೀವ್‌ನಿಂದ ಹಂಗೇರಿಗೆ 1700 ಕಿಮೀ ಆಗುತ್ತದೆ. ಟ್ರೈನ್‌ ಮೂಲಕ 28 ಗಂಟೆ ಪ್ರಯಾಣಿಸಿದ್ದೆವು. ಮಧ್ಯದಲ್ಲಿ 8 ಕಿಮೀ ನಡೆದು ಹೋಗಿದ್ದೆವು. ಭಾರತದ ರಾಷ್ಟ್ರಧ್ವಜ ಹಿಡಿದು ಹೋಗಿದ್ದೆವು. ಹೀಗಾಗಿ ನಮಗೆ ಯಾರೂ ಯಾವುದೇ ತೊಂದರೆ ನೀಡಿಲ್ಲ. ರಾಷ್ಟ್ರಧ್ವಜವೇ ನಮ್ಮನ್ನು ರಕ್ಷಿಸಿದೆ. ನಾವಿದ್ದ ಬಂಕರ್‌ನಲ್ಲಿ ಕೊನೆಯದಾಗಿ ಉಳಿದಿದ್ದ 200 ವಿದ್ಯಾರ್ಥಿಗಳನ್ನು ರುಮೇನಿಯಾ ಗಡಿಗೆ ಕರೆತರಲಾಗುತ್ತಿದೆ. ನಮ್ಮ ಮುಂದಿನ ಶಿಕ್ಷಣದ ಬಗ್ಗೆ ಈವರೆಗೂ ಯಾವುದೇ ಸ್ಪಷ್ಟತೆ ಇಲ್ಲದಿರುವುದು ನಮಗೆ ಬೇಸರವಾಗಿದೆ. ಸರ್ಕಾರ ನಮಗೆ ಇದೊಂದು ನೆರವು ನೀಡಬೇಕು ಎಂದು ಮನವಿ ಮಾಡಿಕೊಂಡರು.

ಸದ್ಯಕ್ಕೆ ಉಕ್ರೇನ್‌ ಪರಿಸ್ಥಿತಿ ಹದಗೆಟ್ಟಿದೆ. ಭಾರತ ಸರ್ಕಾರದಿಂದ ಸ್ಥಳಾಂತರ ಆಗದೆ ಇದ್ದಿದ್ದರೆ ಯಾರೂ ಬದುಕುಳಿಯುವ ಪರಿಸ್ಥಿತಿ ಇರಲೇ ಇಲ್ಲ. ಯುದ್ಧಕ್ಕೂ ಎರಡು ವಾರ ಮೊದಲೆ ಸ್ಥಳಾಂತರ ಆಗುವಂತೆ ತಿಳಿಸಿದ್ದರು. ಆದರೆ, ಯುನಿರ್ವಸಿಟಿ ಆನ್‌ಲೈನ್‌ ಕ್ಲಾಸ್‌ ಬಗ್ಗೆ ಸ್ಪಷ್ಟನಿಲುವು ತೋರದ ಕಾರಣ ನಾವೂ ನಿರ್ಲಕ್ಷ್ಯ ಮಾಡಿದ್ದೆವು. ಅವರು ನಮ್ಮಿಂದ . 28 ಲಕ್ಷ ಡೊನೇಶನ್‌ ಸೇರಿ ವಾರ್ಷಿಕ ಹಾಸ್ಟೆಲ್‌ ಮೊತ್ತವನ್ನು ಪಡೆದಿದ್ದರು. ಅವರಿಗೆ ಯುದ್ಧ ಆಗುವ ಬಗ್ಗೆ ನಂಬಿಕೆ ಇರಲಿಲ್ಲ. ಭಾರತೀಯರು ಹಾಗೂ ನೈಜೇರಿಯಾದವರು ಹೋಗುವಂತೆ ಸಂದೇಶ ಬಂದಿತ್ತು. ಆದರೆ, ಬಳಿಕ ಅದರ ಪರಿಣಾಮ ಅನುಭವಿಸಬೇಕಾಯಿತು ಎಂದು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರದ ವಿನಾಯಕ ನ್ಯಾಮಗೌಡ ಬೇಸರ ವ್ಯಕ್ತಪಡಿಸಿದರು.

ಒಂದೇ ವಾರದಲ್ಲಿ 16500 ಜನರ ರಕ್ಷಿಸಿದ ‘ಆಪರೇಷನ್‌ ಗಂಗಾ’- ಕೊನೆಯ ಹಂತಕ್ಕೆ ಏರ್‌ಲಿಫ್ಟ್‌

ಧಾರವಾಡದ ಸಾರಸ್ವತಪುರದ ಮಿಲನ ನರಸಿಂಹ ದೇವಮಾನೆ ಮಾತನಾಡಿ, ಝ್ಯಾಪ್ರೋಸ್‌ ಎಂಬಲ್ಲಿ ಯುನಿವರ್ಸಿಟಿ ಕೆಳಗಿನ ಬಂಕರ್‌ನಲ್ಲಿ ಉಳಿದುಕೊಂಡಿದ್ದೆವು. ನಾವಿದ್ದ ಒಂದು ಕಿಮೀ ಅಂತರದಲ್ಲಿ ರಷ್ಯನ್‌ ಆರ್ಮಿ ಬಂದು ನಿಂತಿತ್ತು. ಈಗ ನೆನೆಸಿಕೊಂಡರೆ ನರಕದಿಂದ ವಾಪಸ್‌ ಬಂದಂತಾಗಿದೆ. ನಿಜವಾಗಿಯೂ ವಾಪಸ್‌ ಬರುವ ಬಗ್ಗೆ ನಮಗೆ ಯಾವುದೇ ನಂಬಿಕೆ ಇರಲಿಲ್ಲ. ಈಗ ವಾಪಸ್‌ ನಮ್ಮ ನೆಲಕ್ಕೆ ಬಂದಿರುವುದು ಸಂತೋಷವಾಗಿದೆ ಎಂದರು.