ಬೆಂಗಳೂರು(ಅ.30): ಬಿಬಿಎಂಪಿ ವ್ಯಾಪ್ತಿಯಲ್ಲಿ ಆರ್ಥಿಕವಾಗಿ ಹಿಂದುಳಿದವರ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರು ಪಾವತಿಸಲು ಸ್ಥಾಪಿಸಲಾಗಿರುವ ‘ಮೇಯರ್‌ ವೈದ್ಯಕೀಯ ಪರಿಹಾರ ನಿಧಿ’ ಸದ್ಯ ಖಾಲಿ ಖಾಲಿ! ಪರಿಣಾಮ ವೈದ್ಯಕೀಯ ವೆಚ್ಚವನ್ನು ಮರು ಪಾವತಿಸಲು ಕೋರಿದ ಸಾರ್ವಜನಿಕರು ಸಲ್ಲಿಸಿರುವ 1,500ಕ್ಕೂ ಹೆಚ್ಚು ಅರ್ಜಿಗಳು ಪರಿಹಾರಕ್ಕಾಗಿ ಮೇಯರ್‌ ಆಪ್ತ ಕಚೇರಿಯಲ್ಲಿ ಎದುರು ನೋಡುತ್ತಿವೆ.

ಕಿಡ್ನಿ, ಹೃದಯ, ಕಣ್ಣು ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಗಳಿಗೆ ಚಿಕಿತ್ಸೆ ಪಡೆದು ಅದರ ವೆಚ್ಚದ ಮರು ಪಾವತಿ ಕೋರಿದ ಸಾರ್ವಜನಿಕರ ಅರ್ಜಿಗಳು ಕಳೆದ ಮೂರು ತಿಂಗಳಿಂದ ವಿಲೇವಾರಿಯಾಗಿಲ್ಲ.

ವಿದೇಶಿ ಪ್ರವಾಸದ ಆಸೆ ತೋರಿಸಿ 80 ಲಕ್ಷ ಧೋಖಾ

ಪ್ರತಿ ವರ್ಷ ಪಾಲಿಕೆ ಬಜೆಟ್‌ನಲ್ಲಿ .10 ಕೋಟಿ ಮೊತ್ತವನ್ನು ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ಮೀಸಲಿಡಲಾಗುತ್ತದೆ. ಪ್ರಸಕ್ತ ವರ್ಷದ ಮೇಯರ್‌ ವೈದ್ಯಕೀಯ ಪರಿಹಾರ ನಿಧಿ ಪೂರ್ಣ ಪ್ರಮಾಣದಲ್ಲಿ ವೆಚ್ಚವಾಗಿದೆ. ಹೊಸದಾಗಿ ಬಂದ ಅರ್ಜಿಗಳಿಗೆ ಪರಿಹಾರ ನೀಡಲು ಹಣ ಇಲ್ಲದಂತಾಗಿದೆ. ಇದರಿಂದ ಕಳೆದ ಮೂರು ತಿಂಗಳಿಂದ ವೈದ್ಯಕೀಯ ಮರುಪಾವತಿಗೆ ಸಲ್ಲಿಕೆಯಾದ 1,500ಕ್ಕೂ ಹೆಚ್ಚು ಅರ್ಜಿಗಳು ವಿಲೇವಾರಿ ಆಗದೇ ಬಾಕಿ ಉಳಿದಿವೆ.

ಅನುದಾನ ಮರು ಹೊಂದಾಣಿಕೆ:

2016-17, 2017-18, 2018-19 ಹಾಗೂ 2019-20 ಸಾಲಿನ ಅವಧಿಗೆ ತಲಾ 10 ಕೋಟಿ ರು.ಗಳಂತೆ 40 ಕೋಟಿ ರು.ಗಳನ್ನು ಮೇಯರ್‌ ವೈದ್ಯಕೀಯ ಪರಿಹಾರ ನಿಧಿಗೆ ಬಿಡುಗಡೆ ಮಾಡಲಾಗಿತ್ತು. ಹೆಚ್ಚಿನ ಸಂಖ್ಯೆಯ ಅರ್ಜಿ ಸಲ್ಲಿಕೆಯಾಗುತ್ತಿರುವುದು ಮತ್ತು ಈಗಾಗಲೇ ಸಲ್ಲಿಕೆಯಾದ ಅರ್ಜಿಗಳಿಗೆ ಪರಿಹಾರ ನೀಡಬೇಕಾದ ಹಿನ್ನೆಲೆಯಲ್ಲಿ 2019-20ನೇ ಸಾಲಿನ ಬಜೆಟ್‌ನಲ್ಲಿ ಬೇರೆ ಯೋಜನೆಗೆ ಮೀಸಲಿಟ್ಟು ಬಳಕೆಯಾಗದಿರುವ ಅನುದಾನವನ್ನು ವೈದ್ಯಕೀಯ ಪರಿಹಾರ ನಿಧಿಗೆ ಮರು ಹೊಂದಾಣಿಕೆ ಮಾಡಿಕೊಳ್ಳುವುದಕ್ಕೆ ಮೇಯರ್‌ ನಿರ್ಧರಿಸಿದ್ದಾರೆ.

ಆದರೆ, ಯಾವ ಯೋಜನೆಯ ಅನುದಾನ ಮರು ಹೊಂದಾಣಿಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದರ ಬಗ್ಗೆ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಾಗೂ ಪಾಲಿಕೆ ಮಾಸಿಕ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ನಂತರವೇ ಅರ್ಜಿ ಸಲ್ಲಿಸಿದ ರೋಗಿಗಳಿಗೆ ವೈದ್ಯಕೀಯ ಚಿಕಿತ್ಸಾ ವೆಚ್ಚ ಮರುಪಾವತಿ ಮಾಡಲು ಸಾಧ್ಯ.

‘ಕನ್ನಡ ಪ್ರಭ’ಕ್ಕೆ ದೊರೆತ ಮಾಹಿತಿ ಪ್ರಕಾರ ಅ.31ರಂದು (ಇದೇ ಗುರುವಾರ) ನಡೆಯುವ ಕೌನ್ಸಿಲ್‌ ಸಭೆಯಲ್ಲಿ ವೈದ್ಯಕೀಯ ಪರಿಹಾರ ನಿಧಿಗೆ ಅನುದಾನ ಹೊಂದಾಣಿಕೆ ಮಾಡಿಕೊಳ್ಳುವ ಸಾಧ್ಯತೆ ಇದೆ. ನವೆಂಬರ್‌ ಮೊದಲ ಅಥವಾ ಎರಡನೇ ವಾರದಲ್ಲಿ ಅರ್ಜಿ ಸಲ್ಲಿಸಿದ ರೋಗಿಗಳಿಗೆ ವೈದ್ಯಕೀಯ ವೆಚ್ಚ ಮರುಪಾವತಿಯಾಗುವ ಸಾಧ್ಯತೆ ಇದೆ. ಅ.31ರ ಕೌನ್ಸಿಲ್‌ ಸಭೆಯಲ್ಲಿ ಅನುಮೋದನೆ ಸಿಗದೇ ಹೋದರೆ, ಪರಿಹಾರ ಕೋರಿದ ಅರ್ಜಿಗಳು ವಿಲೇವಾರಿಯಾಗಲು ಮತ್ತಷ್ಟುವಿಳಂಬವಾಗಲಿದೆ.

14 ಕೋಟಿ ಬಾಕಿ:

ಕಳೆದ ನಾಲ್ಕು ಮೇಯರ್‌ಗಳ ಅವಧಿಯಲ್ಲೂ ನಿಗದಿತ ಮೊತ್ತಕ್ಕಿಂತ ಹೆಚ್ಚು ಅಂದರೆ, .10 ಕೋಟಿಕ್ಕಿಂತ ಅಧಿಕ ಮೊತ್ತವನ್ನು ವೈದ್ಯಕೀಯ ಪರಿಹಾರ ನೀಡುವುದಕ್ಕೆ ಅನುಮೋದನೆ ನೀಡಲಾಗಿತ್ತು. ಇದರಿಂದ ಬಾಕಿ ಪಾವತಿಸಬೇಕಾದ ಪರಿಹಾರ ಮೊತ್ತ .14 ಕೋಟಿ ಆಗಿದೆ. ಜತೆಗೆ ಹೊಸದಾಗಿ ಸಲ್ಲಿಕೆಯಾದ 1,500 ಅರ್ಜಿಗಳಿಗೂ ಸೇರಿದಂತೆ ಒಟ್ಟು . 20 ಕೋಟಿ ಮೇಯರ್‌ ವೈದ್ಯಕೀಯ ಪರಿಹಾರ ನಿಧಿಯಿಂದ ಪಾವತಿಯಾಗಬೇಕಿದೆ ಎಂದು ಮೂಲಗಳು ‘ಕನ್ನಡಪ್ರಭ’ಕ್ಕೆ ತಿಳಿಸಿವೆ

ನಿಧಿ ದುರ್ಬಳಕೆ ಆರೋಪ

ಮೇಯರ್‌ ವಿವೇಚನೆಗೆ ಒಳಪಟ್ಟಿರುವ ಮೇಯರ್‌ ವೈದ್ಯಕೀಯ ಪರಿಹಾರ ನಿಧಿ ದುರ್ಬಳಕೆ ಆರೋಪ ಕೇಳಿ ಬರುತ್ತಿದೆ. ಪರಿಹಾರಕ್ಕೆಂದು ಅರ್ಜಿ ಸಲ್ಲಿಕೆ ಮಾಡುವ ಬಹುತೇಕ ಮಂದಿ ಆರ್ಥಿಕವಾಗಿ ಸದೃಢವಾಗಿರುವವರು. ಪ್ರತಿಷ್ಠಿತ ಖಾಸಗಿ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆದು ಲಕ್ಷಾಂತರ ರುಪಾಯಿ ಮರುಪಾವತಿಗೆ ಅರ್ಜಿ ಸಲ್ಲಿಕೆ ಮಾಡುತ್ತಿದ್ದಾರೆ. ಜತೆಗೆ ರಾಜಕೀಯ ಪ್ರಭಾವ ಬಳಸಿ ಬಿಬಿಎಂಪಿಯಿಂದ ಪರಿಹಾರ ಪಡೆಯುತ್ತಿದ್ದಾರೆ. ಹೀಗಾಗಿ, ಬಡವರಿಗೆ ನ್ಯಾಯಸಮ್ಮತವಾಗಿ ಸಿಗಬೇಕಾದ ಪರಿಹಾರ ಶ್ರೀಮಂತರ ಪಾಲಾಗುತ್ತಿದೆ ಎಂದು ಆರೋಪವೂ ಇದೇ ವೇಳೆ ಕೇಳಿ ಬರುತ್ತಿದೆ.

ಬಿಜೆಪಿ ಸರ್ಕಾರದ 100 ದಿನದ ಸಂಭ್ರಮಾಚರಣೆಗೆ ಬ್ರೇಕ್ ನೀಡಿದ ನೆರೆ!...

ಈಗಾಗಲೇ ನಿಗದಿ ಪಡಿಸಿ ಮೇಯರ್‌ ವೈದ್ಯಕೀಯ ಪರಿಹಾರ ನಿಧಿ ಅನುದಾನ ಖಾಲಿಯಾಗಿದೆ. ಹಾಗಾಗಿ, ಪರಿಹಾರ ಕೋರಿ ಬಂದ ಅರ್ಜಿ ಬಾಕಿ ಉಳಿದಿವೆ ಎಂದು ಬಿಬಿಎಂಪಿ ಆಯುಕ್ತ ಬಿ.ಎಚ್‌. ಅನಿಲ್‌ಕುಮಾರ್‌ ಹೇಳಿದ್ದಾರೆ.

-ವಿಶ್ವನಾಥ ಮಲೇಬೆನ್ನೂರು