ಬೆಂಗಳೂರು[ಅ.30]: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಬರುವ ನವೆಂಬರ್‌ 2 ರಂದು ಮೊದಲ 100 ದಿನ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಸರಳವಾಗಿ ಆಚರಿಸಲು ಉದ್ದೇಶಿಸಲಾಗಿದೆ.

ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಪ್ರಮಾಣದ ಪ್ರವಾಹ, ಮಳೆಯಿಂದಾಗಿ ಸಾಕಷ್ಟು ಹಾನಿ ಉಂಟಾಗಿರುವ ಈ ವೇಳೆಯಲ್ಲಿ ಪರಿಹಾರ ಕಾರ್ಯ ಕೈಗೊಳ್ಳುವುದು ಮುಖ್ಯವೇ ಹೊರತು ಸಂಭ್ರಮಾಚರಣೆ ಅಲ್ಲ. ಹಾಗೆ ಸಂಭ್ರಮಾಚರಣೆ ಮಾಡಿದಲ್ಲಿ ಅದು ಟೀಕೆಗೊಳಗಾಗಬಹುದು ಎಂಬ ನಿಲುವಿಗೆ ಯಡಿಯೂರಪ್ಪ ಅವರು ಬಂದಿದ್ದಾರೆ ಎನ್ನಲಾಗಿದೆ.

ಹೆಚ್ಚಿನ ಜಿಲ್ಲಾ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ಈ ಬಗ್ಗೆ ಗುರುವಾರ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಸಹೋದ್ಯೋಗಿ ಸಚಿವರೊಂದಿಗೆ ಅಭಿಪ್ರಾಯ ಸಂಗ್ರಹಿಸಿ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ. ಆದರೆ, ಸದ್ಯದ ಮಾಹಿತಿ ಅನುಸಾರ ಸಂಭ್ರಮಾಚರಣೆ ಬೇಡ ಎಂಬ ನಿಲುವಿಗೆ ಬರಲಾಗಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಇದೇ ವೇಳೆ ಆಡಳಿತರೂಢ ಬಿಜೆಪಿ ವತಿಯಿಂದ ಜಿಲ್ಲಾ ಕೇಂದ್ರಗಳಲ್ಲಿ ಸರಳವಾಗಿ ಸರ್ಕಾರದ ಮೊದಲ ನೂರು ದಿನದ ಆಚರಣೆಯನ್ನು ನಡೆಸಲು ಚಿಂತನೆ ನಡೆಯುತ್ತಿದೆ. ಸರ್ಕಾರದಿಂದ ಯಾವುದೇ ಕಾರ್ಯಕ್ರಮ ಹಮ್ಮಿಕೊಳ್ಳುವ ಸಾಧ್ಯತೆ ಕಡಿಮೆ ಎಂದು ತಿಳಿದುಬಂದಿದೆ.