ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಮೇ 2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ‌ ಸಲೀಂ ಅಹ್ಮದ್ ಹೇಳಿದರು.

ಹುಬ್ಬಳ್ಳಿ (ಏ.21): ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ಮೇ 2ರಂದು ಹುಬ್ಬಳ್ಳಿಯಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ‌ ಸಲೀಂ ಅಹ್ಮದ್ ಹೇಳಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿ, ಕೇಂದ್ರ ಸರ್ಕಾರ ಬೆಲೆ‌ ಏರಿಕೆಯಿಂದ ಜನರು ತತ್ತರಿಸಿ ಹೋಗಿದ್ದಾರೆ. ಈಗಾಗಲೇ ಬೆಂಗಳೂರಿನಲ್ಲಿ ‌ನಡೆದ ಪ್ರತಿಭಟನೆ ಯಶಸ್ವಿಯಾಗಿದೆ. ಇದೀಗ ಹುಬ್ಬಳ್ಳಿಯಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಎಲ್ಲ ‌ಜಿಲ್ಲಾ, ತಾಲೂಕುಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.

ಬಿಜೆಪಿಯವರು ಕಾಂಗ್ರೆಸ್ ಸರ್ಕಾರದ ವಿರುದ್ಧ ಜನಾಕ್ರೋಶ ಯಾತ್ರೆ ಮಾಡುತ್ತಿದ್ದಾರೆ. ಆದರೆ, ಅವರು ಕರ್ನಾಟಕ ಸರ್ಕಾರದ ವಿರುದ್ಧ ಹೋರಾಟ ‌ಮಾಡುವ ನೈತಿಕತೆ‌ ಕಳೆದುಕೊಂಡಿದ್ದಾರೆ. ಅವರು ಅವರ ವಿರುದ್ಧವೇ ಜನಾಕ್ರೋಶ ಯಾತ್ರೆ ಮಾಡಬೇಕು. ಕಳೆದ 12 ವರ್ಷಗಳಲ್ಲಿ ಯಾವ ರೀತಿ ಬೆಲೆ ಏರಿಕೆ ಮಾಡಿದ್ದಾರೆ ಎಂಬ ಕುರಿತು ಆತ್ಮವಿಮರ್ಶೆ ಮಾಡಿಕೊಳ್ಳಲಿ ಎಂದರು.

ಇದನ್ನೂ ಓದಿ: ವಕ್ಫ್ ಕಾಯ್ದೆ ವಿರುದ್ಧ ಹೋರಾಟ ಮುಂದುವರಿಯುತ್ತೆ; ಎಂಎಲ್ಸಿ ಸಲೀಂ ಅಹ್ಮದ್

ಕರ್ನಾಟಕಕ್ಕೆ ಅನ್ಯಾಯ ಆದ ಬಗ್ಗೆ ಪ್ರಧಾನಮಂತ್ರಿಗೆ ಸಿಎಂ ಸಿದ್ದರಾಮಯ್ಯ ಹಲವು ಬಾರಿ ಮನವಿ ಕೊಟ್ಟಿದ್ದಾರೆ. ಅನೇಕ ಬಾರಿ ಭೇಟಿ ಕೂಡ ಮಾಡಲಾಗಿದೆ. ಆದರೆ, ಕೇಂದ್ರ ಸರ್ಕಾರ ನಮ್ಮ ಯಾವುದೇ ಬೇಡಿಕೆ ಈಡೇರಿಸಿಲ್ಲ. ಕರ್ನಾಟಕಕ್ಕೆ ಮಲತಾಯಿ ಧೋರಣೆ ಅನುಸರಿಸಲಾಗಿದೆ. ಕೇಂದ್ರದಿಂದ ಕರ್ನಾಟಕದ‌ ಪಾಲಿನ ಜೆಎಸ್‌ಟಿ ಹಣವೂ ಸಿಗುತ್ತಿಲ್ಲ ಎಂದು ದೂರಿದರು.

ಮೇಕೆದಾಟು,‌ ಮಹದಾಯಿ ಯೋಜನೆ ಜಾರಿಯಾಗಿಲ್ಲ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಹದಾಯಿ ಯೋಜನೆ ಜಾರಿ ಮಾಡಿ ವಿಜಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನಿಸುವುದಾಗಿ ಹೇಳಿದ್ದರು. ಇದುವರೆಗೆ ಏನೂ ಆಗಿಲ್ಲ. ಇನ್ಮುಂದೆ ರಾಜಕಾರಣ ಮಾಡಬೇಡಿ. ರಾಜ್ಯದಿಂದ ಕೇಂದ್ರದಲ್ಲಿ ಐವರು ಕೇಂದ್ರ ‌ಮಂತ್ರಿಗಳಿದ್ದಾರೆ. ಕರ್ನಾಟಕಕ್ಕೆ ನ್ಯಾಯ ಕೊಡಿಸಿ ಎಂದ ಅವರು, ರಾಜ್ಯಕ್ಕೆ ಸಹಾಯ ಆಗುವಂತಹ ಕೆಲಸ ಮಾಡಿ ಎಂದು ಆಗ್ರಹಿಸಿದರು.

ಇದನ್ನೂ ಓದಿ: ರಾಹುಲ್ ಗಾಂಧಿ ಮುಂದಿನ ಪ್ರಧಾನಿ ಗ್ಯಾರಂಟಿ, ಬಿಜೆಪಿ ಸೋಲುತ್ತೆ, ಕಾಂಗ್ರೆಸ್ ಗೆಲ್ಲುತ್ತೆ, ಸಲೀಂ ಭವಿಷ್ಯ!

ಮುಂದಿನ ಜಿಲ್ಲಾ ಪಂಚಾಯಿತಿ, ‌ತಾಲೂಕು ಪಂಚಾಯಿತ ಚುನಾವಣೆ ಎದುರಿಸಲು ಕಾಂಗ್ರೆಸ್‌ ಸಿದ್ಧ‍ವಾಗಿದೆ ಎಂದೂ ಅವರು ಈ ವೇಳೆ ತಿಳಿಸಿದರು.