Gurmitkal grocery store fire: ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಿರಾಣಿ ಅಂಗಡಿಗೆ ಬೆಂಕಿ ತಗುಲಿ, ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ದಿನಸಿ ವಸ್ತುಗಳು ಸುಟ್ಟು ಕರಕಲಾಗಿವೆ. ಸ್ಥಳೀಯವಾಗಿ ಅಗ್ನಿಶಾಮಕ ಠಾಣೆ ಇಲ್ಲದ ಕಾರಣ ಎಂದ ಸ್ಥಳೀಯರು ಕಿಡಿ.

ಯಾದಗಿರಿ (ಅ.23): ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಕಿರಾಣಿ ಅಂಗಡಿಗೆ ಬೆಂಕಿ ಬಿದ್ದು, ಲಕ್ಷಾಂತರ ರೂಪಾಯಿ ಬೆಲೆಯ ವಸ್ತುಗಳು ಸುಟ್ಟು ಭಸ್ಮವಾದ ಆಘಾತಕಾರಿ ಘಟನೆ ಯಾದಗಿರಿ ಜಿಲ್ಲೆಯ ಗುರುಮಠಕಲ್ ಪಟ್ಟಣದಲ್ಲಿ ನಸುಕಿನ ಜಾವ ನಡೆದಿದೆ.

ಶ್ರೀನಿವಾಸ ಎಂಬವರಿಗೆ ಸೇರಿದ ಹೊಲ್‌ಸೇಲ್ ಕಿರಾಣಿ ಅಂಗಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಸುಮಾರು 40 ಲಕ್ಷ ರೂಪಾಯಿಗೂ ಅಧಿಕ ಮೌಲ್ಯದ ದಿನಸಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.

ಬೆಂಕಿ ನಂದಿಸಲು ಸ್ಥಳೀಯರು ಹರಸಾಹಸ:

ಸ್ಥಳೀಯರು ಬೆಂಕಿಯನ್ನು ನಂದಿಸಲು ಹರಸಾಹಸ ಪಟ್ಟರು. ನೀರಿನ ಟ್ಯಾಂಕರ್‌ನಿಂದ ನೀರು ತರಿಸಿ, ಬಕೆಟ್‌ಗಳ ಮೂಲಕ ಬೆಂಕಿಯನ್ನು ನಿಯಂತ್ರಿಸಲು ಮುಂದಾದರು. ಯಾದಗಿರಿ ನಗರದಿಂದ ಆಗಮಿಸಿದ ಅಗ್ನಿಶಾಮಕ ದಳದ ವಾಹನ ತಡವಾಗಿ ಆಗಮಿಸಿತು. ಈ ವೇಳೆಗೆ ಅಂಗಡಿಯಲ್ಲಿದ್ದ ಎಲ್ಲಾ ವಸ್ತುಗಳು ಬೆಂಕಿಗಾಹುತಿಯಾಗಿದ್ದವು.

ಗುರುಮಠಕಲ್‌ನಲ್ಲಿಲ್ಲ ಅಗ್ನಿಶಾಮಕ ಠಾಣೆ:

ಗುರುಮಠಕಲ್ ಪಟ್ಟಣದಲ್ಲಿ ಅಗ್ನಿಶಾಮಕ ದಳದ ಠಾಣೆ ಇಲ್ಲದಿರುವುದು ಈ ಘಟನೆಯ ತೀವ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಯಾದಗಿರಿಯಿಂದ ಗುರುಮಠಕಲ್‌ಗೆ ಅಗ್ನಿಶಾಮಕ ವಾಹನ ಆಗಮಿಸುವಲ್ಲಿ ವಿಳಂಬವಾದ ಕಾರಣ ಕಿರಾಣಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ. ಪದೇ ಪದೇ ಅಗ್ನಿ ಅನಾಹುತ ಘಟನೆಗಳು ನಡೆಯುತ್ತಿದ್ದರೂ, ಗುರುಮಠಕಲ್‌ನಲ್ಲಿ ಅಗ್ನಿಶಾಮಕ ಠಾಣೆ ಆರಂಭಿಸದಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಗುರುಮಠಕಲ್ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆ ಮಂಜೂರಾತಿಗೆ ಒತ್ತಾಯಿಸಿದ್ದಾರೆ.

ಈ ಘಟನೆ ಗುರುಮಠಕಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.