ಮಂಡ್ಯ ವಿಶ್ವವಿದ್ಯಾಲಯವನ್ನು ಮುಚ್ಚುತ್ತಿರುವ ಸರ್ಕಾರದ ವಿರುದ್ಧ ಆರ್. ಅಶೋಕ್ ವಾಗ್ದಾಳಿ ನಡೆಸಿದ್ದಾರೆ. ಸಿದ್ದರಾಮಯ್ಯ ಸರ್ಕಾರವು ಆರ್ಥಿಕವಾಗಿ ದಿವಾಳಿಯಾಗಿದೆ ಎಂದು ಟೀಕಿಸಿದ್ದಾರೆ. ಕಾಂಗ್ರೆಸ್ ಶಾಸಕರು ವಿವಿ ಉಳಿಸಿಕೊಳ್ಳಲು ಅಸಮರ್ಥರಾಗಿದ್ದಾರೆ ಎಂದು ಕಿಡಿಕಾರಿದ್ದಾರೆ.
ಮಂಡ್ಯ (ಮಾ.01): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಆರ್ಥಿಕ ತಜ್ಞ ಎನ್ನುತ್ತಾರೆ. ಆದರೆ, ಒಂದು ವರ್ಷಕ್ಕೆ 1 ಲಕ್ಷ ಕೋಟಿ ರೂ. ಸಾಲ ಮಾಡಿದ ಏಕೈಕ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಇವರು ಯಾವ ಸೀಮೆ ತಜ್ಞ? ಸರ್ಕಾರದ ಖಜಾನೆ ತುಂಬಾ ಹೆಗ್ಗಣ ತುಂಬಿವೆ. ಸರ್ಕಾರ ಪಾಪರ್ ಆಗಿದೆ. ವಿಧಾನಸೌಧದ ಮುಂದೆ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ ಲೇವಡಿ ಮಾಡಿದ್ದಾರೆ.
ಮಂಡ್ಯದಲ್ಲಿ ಶನಿವಾರ ನಡೆದ ಮಂಡ್ಯ ವಿಶ್ವವಿದ್ಯಾಲಯ ಉಳಿವಿಗಾಗಿ ಹೋರಾಟದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಜ್ಯದ ಯಾವುದೇ ಹಳ್ಳಿಗೆ ಹೋದರು ಒಂದು ಶಾಲೆ ಕೊಡಿ ಅಂತಾರೆ. ಆದರೆ, ಮಂಡ್ಯದಲ್ಲಿ ಸ್ತಿತ್ವದಲ್ಲಿರುವ ವಿಶ್ವವಿದ್ಯಾಲಯ ಉಳಿಸಿಕೊಳ್ಳುತ್ತಿಲ್ಲ. ಈಗಾಗಲೇ ಸರ್ಕಾರ ಕೊಟ್ಟಿರುವುದನ್ನ ಕಿತ್ತುಕೊಳ್ಳುತ್ತಿದ್ದು, ಇದಕ್ಕೆ ತಿರುಗಿ ಬೀಳಬೇಕು. ಮಂಡ್ಯದ ಜನರು ಕೆಆರ್‌ಎಸ್ ನೀರು ಹೆಚ್ಚುವರಿ ಬಿಟ್ಟಾಗ ಯಾವ ರೀತಿ ಪ್ರತಿಭಟಿಸುತ್ತಾರೋ ಅದೇ ರೀತಿ ಪ್ರತಿಭಟಿಸಬೇಕು. ಸರ್ಕಾರ ವಿದ್ಯಾರ್ಥಿಗಳ ಭವಿಷ್ಯದ ಬಗ್ಗೆ ಯೋಚಿಸಬೇಕು. ಮಂಡ್ಯಕ್ಕೆ ವಿಶ್ವವಿದ್ಯಾಲಯ ಅವಶ್ಯಕತೆ ಇಲ್ಲ ಎಂದು ಕಮಿಟಿ ರಿಪೋರ್ಟ್ ಕೊಟ್ಟಿದೆ. ಇವರು ಲಾಭದಾಯಕವಾಗಿಲ್ಲ ಎಂದು ವರದಿ ಕೊಟ್ಟಿದ್ದಾರೆ. ರಾಜ್ಯ ಸರ್ಕಾರ ಲಾಭ ನೋಡುವುದಾದರೆ ಕಾಲೇಜು ಕಟ್ಟಡವನ್ನು ಬಾರ್‌ಗೆ ಬಾಡಿಗೆ ಕೊಡಿ ಒಳ್ಳೆ ಲಾಭ ಬರುತ್ತದೆ ಎಂದು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಸರ್ಕಾರ ಪಾಪರ್ ಆಗಿದೆ. ವಿಧಾನಸೌಧದ ಮುಂದೆ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಭಿಕ್ಷೆ ಬೇಡುತ್ತಿದ್ದಾರೆ. ಒಂದು ವರ್ಷಕ್ಕೆ 1 ಲಕ್ಷ ಕೋಟಿ ಸಾಲ ಮಾಡಿದ ಏಕೈಕ ಸಿಎಂ ಸಿದ್ದರಾಮಯ್ಯ ಆಗಿದ್ದಾರೆ. ಇವರನ್ನು ಆರ್ಥಿಕ ತಜ್ಞ ಅಂತಾ ಹೇಳುತ್ತಾರೆ, ಯಾವ ತಜ್ಞನೂ ಅಲ್ಲ. ಖಜಾನೆ ತುಂಬಾ ಹೆಗ್ಗಣ ತುಂಬಿವೆ ಅಷ್ಟೇ. ಶಿಕ್ಷಣ ವ್ಯಾಪಾರ ಅಲ್ಲ, ಶಿಕ್ಷಣ ನಮ್ಮ ದೇಶದ ಆಸ್ತಿ. ಶಿಕ್ಷಣ ನೀಡುವುದು ಸರ್ಕಾರದ ಕರ್ತವ್ಯ. ಮಂಡ್ಯದಲ್ಲೇ ವಿಶ್ವವಿದ್ಯಾಲಯ ಇದ್ದರೆ ನಮ್ಮ ವಿದ್ಯಾರ್ಥಿಗಳು ಮೈಸೂರಿಗೆ ಹೋಗುವುದು ತಪ್ಪುತ್ತದೆ. ಮಂಡ್ಯದ 6 ಜನ ಕಾಂಗ್ರೆಸ್ ಶಾಸಕರಿಗೆ ಒಂದು ವಿಶ್ವವಿದ್ಯಾಲಯ ಉಳಿಸಿಕೊಳ್ಳುವ ಯೋಗ್ಯತೆ ಇಲ್ಲವಾದರೆ, ಅವರು ಏಕಿರಬೇಕು? ಎಂದು ಕಿಡಿಕಾರಿದರು.
ಜಿಲ್ಲೆಯ ಎಲ್ಲ ಕಾಂಗ್ರೆಸ್ ಶಾಸಕರು ಸೇರಿಕೊಂಡು ಮಂಡ್ಯದ ಜನ ವಿದ್ಯಾವಂತರಾಗುವುದು ಬೇಡ ಅಂತ ಘೋಷಿಸಿಬಿಡಿ. ಕಾಂಗ್ರೆಸ್ ಅಧಿಕಾರಕ್ಕೆ ಬಂತು, ವಿದ್ಯೆ ಕಿತ್ತುಕೊಂಡಿತು ಎಂದು ಜನ ಹೇಳುತ್ತಾರೆ. ಅಬಕಾರಿ ಸಚಿವರು ಮುಚ್ಚಿರುವ ಬಾರ್ ಓಪನ್ ಮಾಡುತ್ತಾರೆ. ಆದರೆ, ಮಂಡ್ಯದಲ್ಲಿ ಶಿಕ್ಷಣಕ್ಕಾಗಿ ಆರಂಭಿಸಿದ ವಿಶ್ವವಿದ್ಯಾಲಯವನ್ನು ಸರ್ಕಾರ ಮುಚ್ಚುತ್ತಿದೆ. ಈ ಕಾಂಗ್ರೆಸ್ ಸರ್ಕಾರಕ್ಕೆ ಮಾನ ಮಾರ್ಯಾದೆ ಇದ್ಯಾ? ಹಣ ಇಲ್ಲ ಮುಚ್ಚುತ್ತೇವೆ ಅಂತೀರಲ್ಲಾ ನಾಚಿಕೆ ಆಗಲ್ವಾ? ಮಾತೆತ್ತಿದ್ದರೆ 2 ಸಾವಿರ ಕೊಟ್ಟಿಲ್ವಾ? ಅಂತಾರೆ. ಹಾಗಾದರೆ 2 ಸಾವಿರ ಪಡೆದು ಮಕ್ಕಳ ವಿದ್ಯಾಭ್ಯಾಸ ನಿಲ್ಲಿಸಬೇಕಾ? ಎಂದು ಆರ್. ಅಶೋಕ್ ಪ್ರಶ್ನೆ ಮಾಡಿದರು.
ಇದನ್ನೂ ಓದಿ: ಸರ್ಕಾರ ಖಜಾನೆಯಿಂದ ಒಂದು ಪೈಸೆ ಕೊಡಬೇಕಿಲ್ಲ, ಸರ್ಟಿಫಿಕೇಟ್ ಕೊಟ್ಟರೆ ಸಾಕು: ಸಂಸದ ಯದುವೀರ್
