Asianet Suvarna News Asianet Suvarna News

ವಿಜಯಪುರ, ಬಾಗಲಕೋಟೆಯಲ್ಲಿ ಭೂಕಂಪನ ಅನುಭವ: ಆತಂಕದಲ್ಲಿ ಜನತೆ

ಗುಮ್ಮಟನಗರಿ ವಿಜಯಪುರ ಹಾಗೂ ಬಾಗಲಕೋಟೆಯಲ್ಲಿ ಭೂಕಂಪನ ಅನುಭವವಾಗಿದ್ದು, ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಬಬಲೇಶ್ವರ, ಇಂಡಿ, ಚಡಚಣ, ವಿಜಯಪುರ ನಗರ ತಿಕೋಟ, ಚಡಚಣ ಭಾಗದಲ್ಲಿ ಭೂಕಂಪನವಾಗಿದ್ದು, ಜನತೆ ಬೆಚ್ಚಿಬಿದ್ದಿದೆ. 

many areas of vijayapura district have experienced earthquake gvd
Author
Bangalore, First Published Jul 9, 2022, 8:36 AM IST

ವಿಜಯಪುರ (ಜು.09): ಗುಮ್ಮಟನಗರಿ ವಿಜಯಪುರ ಜಿಲ್ಲೆಯಾದ್ಯಂತ ಭೂಕಂಪನ ಅನುಭವವಾಗಿದ್ದು, ಕೆಲ ಸೆಕೆಂಡುಗಳ ಕಾಲ ಭೂಮಿ ಕಂಪಿಸಿದೆ. ಬಬಲೇಶ್ವರ, ಇಂಡಿ, ಚಡಚಣ, ವಿಜಯಪುರ ನಗರ ತಿಕೋಟ, ಚಡಚಣ ಭಾಗದಲ್ಲಿ ಭೂಕಂಪನವಾಗಿದ್ದು, ಜನತೆ ಬೆಚ್ಚಿಬಿದ್ದಿದೆ. ಬೆಳಗ್ಗೆ ಸುಮಾರು 6.23ಕ್ಕೆ ಭೂಮಿ ಕಂಪಿಸಿದ್ದು, ನಿದ್ದೆಯಲ್ಲಿದ್ದ ಜನತೆಗೆ ಭೂಕಂಪನ ಶಾಕ್ ಕೊಟ್ಟಿದೆ. ಅಲ್ಲದೇ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಭೂಕಂಪನ ಅನುಭವವಾಗಿದೆ.

ಎರಡು ಬಾರಿ ಕಂಪಿಸಿದ ಭೂಮಿ: ವಿಜಯಪುರದಲ್ಲಿ ಭಾರಿ ಸದ್ದಿನೊಂದಿಗೆ ಭೂಕಂಪನವಾಗಿದ್ದು, ಆಫ್‌ಗಳಲ್ಲು ಭೂಕಂಪನದ ತೀವ್ರತೆ ದಾಖಲಾಗಿದೆ. ಬೆಳಗ್ಗೆ 6:22 ಹಾಗೂ 6:24ಕ್ಕೆ‌ ಎರಡು ಬಾರಿ ಕಂಪಿಸಿದೆ. 6 ಗಂಟೆ 22 ನಿಮಿಷಕ್ಕೆ 4.9 ತೀವ್ರತೆಯಲ್ಲಿ ಭೂಕಂಪನವಾದರೆ, 6 ಗಂಟೆ 24 ನಿಮಿಷಕ್ಕೆ 4.6 ತೀವ್ರತೆಯಲ್ಲಿ ಭೂಕಂಪಿಸಿದೆ. 

ಕೊಡಗು, ಸುಳ್ಯದಲ್ಲಿ ಮತ್ತೆ 2 ಬಾರಿ ಕಂಪಿಸಿದ ಭೂಮಿ: ಆತಂಕದಲ್ಲಿ ಜನತೆ

ವಿಜಯಪುರ, ಇಂಡಿ, ಸೊಲ್ಲಾಪುರ, ಜಮಖಂಡಿ, ಬಾಗಲಕೋಟೆ, ಮುಂಬೈ, ಪುಣೆ ಭಾಗಗಳಲ್ಲಿ ಭೂಕಂಪನ ತೀವ್ರತೆ ದಾಖಲಾಗಿದೆ. ಬೆಳಗ್ಗೆ 6.22ಕ್ಕೆ ಮಹಾರಾಷ್ಟ್ರದ ಸಾಂಗಲಿ ಭೂಕಂಪನ‌‌ ಕೇಂದ್ರ ಹಾಗೂ 6.24ಕ್ಕೆ ಮಹಾರಾಷ್ಟ್ರದ ಸೊಲ್ಲಾಪುರ ಭೂಕಂಪನ ಕೇಂದ್ರದಿಂದ ತೀವ್ರತೆಯನ್ನು ದಾಖಲಿಸಲಾಗಿದೆ. ಇನ್ನು ಸಿಸಿಟಿವಿಗಳಲ್ಲು ಭೂಕಂಪನದ ತೀವ್ರತೆ ದಾಖಲಾಗಿದ್ದು, ಭೂಕಂಪನದಿಂದ ವಿದ್ಯುತ್ ತಂತಿಗಳು ಅಲುಗಾಡಿದೆ. ಇದರಿಂದ ಮನೆಗಳಲ್ಲಿದ್ದ ಜನರು ಓಡೋಡಿ ಹೊರಬಂದಿದ್ದಾರೆ.

ಭೂಕಂಪನದಿಂದ ಬಿರುಕು ಬಿಟ್ಟ ಮನೆಗಳು: ಹೌದು! ಮಹಾರಾಷ್ಟ್ರದ ಜತ್ತ ತಾಲೂಕಿನ ಮರಬಗಿ ಗ್ರಾಮದಲ್ಲಿ ಭೂಕಂಪನದಿಂದ ಮನೆಗಳು ಬಿರುಕು ಬಿಟ್ಟಿದ್ದು, ಭೂಕಂಪನ ಹೊಡೆತಕ್ಕೆ ತಗಡಿನ ಶೀಟ್, ಮನೆಗಳು ಅಲುಗಾಡಿದೆ. ಘಟನೆಯಲ್ಲಿ ಅಣ್ಣಾರಾಯ ಗದ್ಯಾಳ ಎಂಬುವರ ಮನೆ ಬಿರುಕು ಬಿಟ್ಟಿದ್ದು, ಬೆದರಿದ ದನಕರುಗಳು, ಮನೆಗಳಿಂದ ಹೆದರಿ ಜನರು ಓಡೋಡಿ ಹೊರ ಬಂದಿದ್ದಾರೆ. ಇನ್ನು ಕರ್ನಾಟಕ-ಮಹಾರಾಷ್ಟ್ರ ಗಡಿಯಲ್ಲೂ ಭೂಕಂಪನದ ತೀವ್ರತೆಯ ಭಾರಿ ಅನುಭವವಾಗಿದೆ.

ಮಂಗಳೂರು: ಸುಳ್ಯದಲ್ಲೂ ಕಂಪಿಸಿದ ಭೂಮಿ, ಗೋಡೆಗಳಲ್ಲಿ ಬಿರುಕು..!

2 ಸೆಕೆಂಡ್‌ಗಳ ಕಾಲ ಕಂಪಿಸಿದ ಭೂಮಿ: ಬಾಗಲಕೋಟೆ ಜಿಲ್ಲೆಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಜಿಲ್ಲೆಯ ತುಬಚಿ ಗ್ರಾಮದಲ್ಲಿ 2 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಘಟನೆ ನಡೆದಿದೆ. ಈ ಬಗ್ಗೆ ಬಾಗಲಕೋಟೆ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ್, ಬೆಳಗಿನ ಜಾವ ಎರಡು ಸೆಕೆಂಡ್ ಭೂಮಿ ಕಂಪಿಸಿದ ಮಾಹಿತಿ ಬಂದಿದೆ. ಕೆಎಸ್‌ಎನ್‌ಡಿಎಂಸಿ ಬೆಂಗಳೂರು ಇವರಿಂದ ಹೆಚ್ಚಿನ ಮಾಹಿತಿ ಪಡೆಯಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಗ್ರಾಮಸ್ಥರಲ್ಲಿ ಆತಂಕದ ಛಾಯೆ: ಇನ್ನು ಬೆಳಗಾವಿಯಲ್ಲೂ ಸಹ ಭೂಕಂಪನದ ಅನುಭವವಾಗಿದೆ. ಬೆಳಗ್ಗೆ 6:45ಕ್ಕೆ ಇದ್ದಕ್ಕಿದ್ದಂತೆ ಭೂಮಿ ಕಂಪಿಸಿದೆ. ಜಿಲ್ಲೆಯ ಅಥಣಿ ತಾಲೂಕಿನ ಶಿರಹಟ್ಟಿ ಗ್ರಾಮದಲ್ಲಿ ಭೂಕಂಪನದ ಅನುಭವವಾಗಿದ್ದು, ಸದ್ದಾಗುತ್ತಿದ್ದಂತೆ ಮನೆಯಿಂದ ಗ್ರಾಮಸ್ಥರು ಹೊರಗೆ ಬಂದಿದ್ದಾರೆ. ಇದರಿಂದ ಗ್ರಾಮಸ್ಥರಲ್ಲಿ ಆತಂಕದ ಛಾಯೆ ಆವರಿಸಿದ್ದು, ಸ್ಥಳಕ್ಕೆ ಅಥಣಿ ತಹಶೀಲ್ದಾರ್ ಹಾಗೂ ಡಿಎಸ್ಪಿ ಭೇಟಿ ಪರಿಶೀಲನೆ ನಡೆಸಿದ್ದಾರೆ.

Follow Us:
Download App:
  • android
  • ios