ಧಾರವಾಡ ಪೇಢಾ ಎಂದರೆ ಮನಮೋಹನ ಸಿಂಗ್‌ಗೆ ಬಲು ಪ್ರೀತಿ!
ಹುಬ್ಬಳ್ಳಿಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೂ ಅವಿನಾನುಭವ ನಂಟಿತ್ತು. ಮನಮೋಹನ ಸಿಂಗ್ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಧಾರವಾಡ ಪೇಢಾ ಎಂದರೆ ಸಿಂಗ್‌ಗೆ ಬಲುಪ್ರೀತಿ.
ಹುಬ್ಬಳ್ಳಿ (ಡಿ.28): ಹುಬ್ಬಳ್ಳಿಗೂ ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರಿಗೂ ಅವಿನಾನುಭವ ನಂಟಿತ್ತು. ಮನಮೋಹನ ಸಿಂಗ್ ಅವರ ಸಂಬಂಧಿಕರು ಹುಬ್ಬಳ್ಳಿಯಲ್ಲಿ ನೆಲೆಸಿದ್ದಾರೆ. ಧಾರವಾಡ ಪೇಢಾ ಎಂದರೆ ಸಿಂಗ್‌ಗೆ ಬಲುಪ್ರೀತಿ. ಇಲ್ಲಿಂದ ಹೋಗುವಾಗ ತೆಗೆದುಕೊಂಡು ಹೋಗುತ್ತಿದ್ದೆವು ಎಂದು ಸಂಬಂಧಿಕರು ನೆನಪಿಸಿಕೊಳ್ಳುತ್ತಾರೆ. ಹುಬ್ಬಳ್ಳಿಗೆ ಚುನಾವಣಾ ಪ್ರಚಾರಕ್ಕೂ ಸಿಂಗ್ ಆಗಮಿಸಿದ್ದರು. ಮನಮೋಹನ್ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಅವರ ಸಹೋದರಿ ಹರಿಪ್ರೀತ್ ಕುಟುಂಬದವರು ಹುಬ್ಬಳ್ಳಿಯ ವಿದ್ಯಾ ನಗರದಲ್ಲಿ ವಾಸವಿದ್ದಾರೆ.
ನಗರದಲ್ಲಿ ನೆಲೆಸಿರುವ ಹರ್ನಾಮಸಿಂಗ್ ಕೊಯ್ಲಿ ಎಂಬುವರನ್ನು ಹರ್‌ಪ್ರೀತ್ ಕೌರ್ ವಿವಾಹವಾಗಿದ್ದರು. ಈ ಕಾರಣದಿಂದ ಮನಮೋಹನ್ ಸಿಂಗ್ ಅವರಿಗೂ ಹುಬ್ಬಳ್ಳಿಗೂ ಹಲವು ವರ್ಷಗಳಿಂದಲೂ ನಂಟಿತ್ತು. ಆಟೋಮೊಬೈಲ್ ಶಾಪ್ ಹೊಂದಿರುವ ಹರ್ನಾಮ್ ಸಿಂಗ್ ಕೊಯ್ಲಿ, ಹುಬ್ಬಳ್ಳಿಯ ಹೊರವಲಯದಲ್ಲಿ ಮಿನಿ ಪಂಜಾಬಿ ಡಾಭಾ ನಡೆಸುತ್ತಿದ್ದಾರೆ. ಇದೀಗ ಅವರ ಪುತ್ರರು ಡಾಭಾ ನೋಡಿಕೊಳ್ಳುತ್ತಿದ್ದಾರೆ. 14 ವರ್ಷಗಳ ಹಿಂದೆ ಹರಿಪ್ರೀತ್ ಕೌರ್ ಸಾವನ್ನಪ್ಪಿದ್ದಾರೆ. ಕೌರ್ ಪತಿ ಹರ್ನಾಮ್ ಸಿಂಗ್ ಕೊಯ್ಲಿ ಅನಾರೋಗ್ಯಪೀಡಿತರಾಗಿದ್ದಾರೆ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ ಹರ್‌ಪ್ರೀತ್ ಕೌರ್ ಮನೆಯಲ್ಲೀಗ ನೀರವ ಮೌನ ಆವರಿಸಿದೆ.
ಹುದ್ದೆ ಇಲ್ಲದಿದ್ದರೂ ದೇಶದ ಬಗ್ಗೆ ಚಿಂತಿಸುತ್ತಿದ್ದ ದಾರ್ಶನಿಕ ಮನಮೋಹನ್ ಸಿಂಗ್: ರಾಜೀವ್ ಚಂದ್ರಶೇಖರ್
ಸರಳ ವ್ಯಕ್ತಿತ್ವ: ಹರ್‌ಪ್ರೀತ್ ಕೌರ್ ಪುತ್ರ ಮನ್‌ಮಿತ್ ಕೊಯ್ಲಿ ಮಾತನಾಡಿ, ಮನಮೋಹನ್ ಸಿಂಗ್ ಅಗಲಿಕೆ ಅತ್ಯಂತ ನೋವು ತಂದಿದೆ. ನಮಗೆ ಮಾತ್ರವಲ್ಲದೇ ಇಡೀ ದೇಶಕ್ಕೆ ನಷ್ಟವಾಗಿದೆ. ರಿಸರ್ವ್ ಬ್ಯಾಂಕ್ ಗವರ್ನರ್ ಆಗಿದ್ದಾಗಿನಿಂದ ನಮ್ಮ ಕುಟುಂಬದ ಜೊತೆ ಒಡನಾಟವಿತ್ತು. ಎಷ್ಟೇ ದೊಡ್ಡ ಸ್ಥಾನಕ್ಕೆ ಹೋದರೂ ಅತ್ಯಂತ ಸರಳ ವ್ಯಕ್ತಿತ್ವ ಅವರದ್ದು. ಬಿಡುವಿಲ್ಲದ ಕೆಲಸದ ಮಧ್ಯೆ ಕುಟುಂಬ ಸದಸ್ಯರ ಜೊತೆ ಬೆರೆಯುತ್ತಿದ್ದರು. ಮುಂಬೈನಲ್ಲಿದ್ದಾಗ ಫ್ಯಾಮಿಲಿ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಭಾಗವಹಿಸುತ್ತಿದ್ದರು. ದೆಹಲಿಗೆ ಶಿಫ್ಟ್ ಆದ ಬಳಿಕ ಒಡನಾಟ ಕಡಿಮೆಯಾಗಿತ್ತು. ಪ್ರಧಾನಮಂತ್ರಿ ಸ್ಥಾನಕ್ಕೆ ಹೋದರೂ ಒಂದಿಷ್ಟು ಗರ್ವ ಇರಲಿಲ್ಲ. ಎಲ್ಲರೊಂದಿಗೂ ಅತ್ಯಂತ ಸರಳವಾಗಿ ಬೆರೆತು ಮಾತನಾಡುತ್ತಿದ್ದರು ಎಂದು ಸ್ಮರಿಸಿಕೊಂಡರು.
ಧಾರವಾಡ ಪೇಢಾ ಇಷ್ಟ: ಮನ್‌ಮಿತ್ ಕೊಯ್ಲಿ ಅವರ ಪತ್ನಿ ಅಪರ್ಣಾ ಮಾತನಾಡಿ, ಮನಮೋಹನ್ ಸಿಂಗ್ ಅವರು ಸಿಹಿ ತಿಂಡಿಗಳನ್ನು ಇಷ್ಟಪಡುತ್ತಿದ್ದರು. ನಾವು ದೆಹಲಿಗೆ ಹೋಗುವಾಗ ಧಾರವಾಡ ಪೇಢಾ ಮತ್ತಿತರ ಸಿಹಿ ತೆಗೆದುಕೊಂಡು ಹೋಗುತ್ತಿದ್ದೇವು. ಧಾರವಾಡ ಪೇಢಾವನ್ನು ಅತ್ಯಂತ ಪ್ರೀತಿಯಿಂದ ಸೇವಿಸುತ್ತಿದ್ದರು. ಸಿಂಗ್ ಅವರ ನಿಧನದಿಂದ ತೀವ್ರ ಆಘಾತವಾಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇವೆ. ಹುಬ್ಬಳ್ಳಿಯಿಂದ ನಾಲ್ಕು ಜನ ದೆಹಲಿಗೆ ತೆರಳಿ ನಾಳಿನ ಅಂತ್ಯಕ್ರಿಯೆಯಲ್ಲಿ ಭಾಗಿಯಾಗುತ್ತೇವೆ ಎಂದು ತಿಳಿಸಿದರು. ಈ ನಡುವೆ ಈ ಕುಟುಂಬ ನಡೆಸುವ ಡಾಭಾ ಮತ್ತು ಆಟೋ ಮೊಬೈಲ್‌ನ್ನು ಶುಕ್ರವಾರ ಬಂದ್ ಮಾಡಿ ಗೌರವ ನಮನ ಸಲ್ಲಿಸಿದ್ದಾರೆ. ಜತೆಗೆ ಡಾಭಾ ಎದುರಿಗೆ ಮನಮೋಹನ್ ಸಿಂಗ್ ಅವರ ಭಾವಚಿತ್ರ ಇಟ್ಟು ಪೂಜೆ ಸಲ್ಲಿಸಿ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಅವರ ಅಂತ್ಯಕ್ರಿಯೆಗೆ ಹುಬ್ಬಳ್ಳಿಯ ನಾಲ್ಕು ಜನ ಸಂಬಂಧಿಕರು ತೆರಳಿದ್ದಾರೆ.
ಜೇಬಲ್ಲೇ ರಾಜೀನಾಮೆ ಪತ್ರ ಇಟ್ಟುಕೊಂಡು ಮೌನದಿಂದಲೇ ಜಗತ್ತು ಗೆದ್ದ ಮನಮೋಹನ ಸಿಂಗ್!
ಚುನಾವಣಾ ಪ್ರಚಾರಕ್ಕೆ: 2013ರಲ್ಲಿ ನಡೆದ ವಿಧಾನಸಭಾ ಚುನಾವಣಾ ಪ್ರಚಾರಕ್ಕೂ ಮನಮೋಹನ್ ಸಿಂಗ್ ಹುಬ್ಬಳ್ಳಿಗೆ ಬಂದಿದ್ದರು. ಆಗ ನೆಹರು ಮೈದಾನದಲ್ಲಿ ಚುನಾವಣಾ ಪ್ರಚಾರ ಸಮಾರಂಭ ಏರ್ಪಡಿಸಲಾಗಿತ್ತು. ಶಾಸಕ ಪ್ರಸಾದ ಅಬ್ಬಯ್ಯ ಮೊದಲ ಬಾರಿಗೆ ಆಗ ಚುನಾವಣೆಗೆ ಸ್ಪರ್ಧಿಸಿದ್ದರು. ಆಗ ಬರೋಬ್ಬರಿ ಅರ್ಧಗಂಟೆಗೂ ಹೆಚ್ಚು ಕಾಲ ಮಾಡಿದ್ದ ಭಾಷಣ ಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿತ್ತು. ಆಗ ಇಲ್ಲಿನ ಗುರುದ್ವಾರಕ್ಕೂ ಭೇಟಿ ನೀಡಿ ಸಂಬಂಧಿಕರ ಮನೆಗೂ ಭೇಟಿ ನೀಡಿ ದೆಹಲಿಗೆ ತೆರಳಿದ್ದರು. ಈ ಕಾರಣ ಹುಬ್ಬಳ್ಳಿ ಬಗ್ಗೆ ಹೆಚ್ಚಿನ ಪ್ರೀತಿ ಇತ್ತು. ಈ ಭಾಗದ ಯಾರಾದರೂ ಜನಪ್ರತಿನಿಧಿಗಳು ಹೋದರೆ ಅವರಿಗೆ ಹುಬ್ಬಳ್ಳಿಯ ಬಗ್ಗೆ ಕೇಳುತ್ತಿದ್ದರಂತೆ. ಈ ಬಗ್ಗೆ ಬೊಮ್ಮಾಯಿ ಕೂಡ ನೆನಪಿಸಿಕೊಳ್ಳುತ್ತಾರೆ. ಹೀಗಾಗಿ ಮನಮೋಹನ್ ಸಿಂಗ್ ಅವರಿಗೂ ಹುಬ್ಬಳ್ಳಿಗೂ ಅವಿನಾನುಭವ ನಂಟಿತ್ತು.