Asianet Suvarna News Asianet Suvarna News

ಕಡಿಮೆ ಸೋಂಕಿತರಿರುವ ಕೋವಿಡ್‌ ಕೇಂದ್ರ ಬಂದ್‌!

ಹೋಮ್‌ ಐಸೋಲೇಷನ್‌ನಲ್ಲಿ ಇರಲು ಕೊರೋನಾ ಸೋಂಕಿತರ ಒಲವು| ಈ ಹಿನ್ನೆಲೆಯಲ್ಲಿ ಕೇಂದ್ರಗಳ ಮುಚ್ಚಲು ಕ್ರಮ: ಆಯುಕ್ತ ಮಂಜುನಾಥ್‌ ಪ್ರಸಾದ್‌|ನಿತ್ಯ 30 ಸಾವಿರಕ್ಕೂ ಹೆಚ್ಚು ಕೋವಿಡ್‌-19 ಪರೀಕ್ಷೆ| ಪಾಲಿಕೆಯ 19 ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚು| ಸಾವು ಹೆಚ್ಚಾಗಲು ಕಾರಣ ತಿಳಿಯಲು ಸಮಿತಿ ರಚನೆ|
 

Manjunath Prasad Says Least Infected is Covid Care Center Close in Bengaluru
Author
Bengaluru, First Published Sep 3, 2020, 7:55 AM IST

ಬೆಂಗಳೂರು(ಸೆ.03): ಇತ್ತೀಚಿಗೆ ಕೊರೋನಾ ಸೋಂಕಿತರು ಹೋಮ್‌ ಐಸೋಲೇಷನ್‌ನಲ್ಲಿ ಇರಲು ಹೆಚ್ಚು ಒಲವು ತೋರುತ್ತಿರುವುದರಿಂದ ಕಡಿಮೆ ಸೋಂಕಿತರು ಇರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ಮುಚ್ಚಲು ನಿರ್ಧರಿಸಲಾಗಿದೆ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ್‌ ಪ್ರಸಾದ್‌ ತಿಳಿಸಿದ್ದಾರೆ.

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಬಿಎಂಪಿ ವ್ಯಾಪ್ತಿಯಲ್ಲಿ ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನೀಡಲು 12 ಕೋವಿಡ್‌ ಆರೈಕೆ ಕೇಂದ್ರಗಳನ್ನು ತೆರೆಯಲಾಗಿತ್ತು. ಸೋಂಕು ದೃಢಪಟ್ಟವರು ಹೋಮ್‌ ಐಸೋಲೇಷನ್‌ನಲ್ಲಿರಲು ಹೆಚ್ಚು ಆಸಕ್ತಿ ವ್ಯಕ್ತಪಡಿಸುತ್ತಿದ್ದು, ಕಡಿಮೆ ಸೋಂಕಿತರು ಇರುವ ಕೋವಿಡ್‌ ಆರೈಕೆ ಕೇಂದ್ರಗಳನ್ನು ಮುಚ್ಚಲಾಗುವುದು. ಸೋಂಕು ಪ್ರಕರಣಗಳು ಹೆಚ್ಚಾದಲ್ಲಿ ಅವಶ್ಯಕತೆ ಇದ್ದರೆ ಮತ್ತೆ ತೆರೆಯಲಾಗುವುದು ಎಂದು ಹೇಳಿದರು.

ಬುಧವಾರ ಕರ್ನಾಟಕದಲ್ಲಿ ಕೊರೋನಾ ಸ್ಫೋಟ: ಇದುವರೆಗಿನ ಸಾರ್ವಕಾಲಿಕ ದಾಖಲೆ

ಹೋಮ್ ಐಸೋಲೇಷನ್‌ನಲ್ಲಿ ಇರಲು ಇಚ್ಛಿಸುವವರು ಅವರ ಮನೆಯಲ್ಲಿ ಪ್ರತ್ಯೇಕ ವ್ಯವಸ್ಥೆ ಇದೆಯೇ ಎಂಬುದನ್ನು ಪಾಲಿಕೆ ತಂಡ ಪರಿಶೀಲಿಸಲಿದೆ. ಅಲ್ಲದೆ ಕುಶಾಲ ಪೋರ್ಟನ್‌ನಲ್ಲಿ ನಮೂದಿಸಿ ‘ಸ್ವಸ್ಥ್‌’ ಸಂಸ್ಥೆಯಿಂದ ಅಗತ್ಯ ಸೌಲಭ್ಯ ನೀಡಿಕೆ ಹಾಗೂ ನಿಗಾ ವಹಿಸಲಾಗುತ್ತಿದೆ. ಮನೆಗಳಲ್ಲಿ ಅಗತ್ಯ ವ್ಯವಸ್ಥೆ ಇಲ್ಲದಿದ್ದರೆ ಕೋವಿಡ್‌ ಆರೈಕೆ ಕೇಂದ್ರಗಳಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿದೆ ಎಂದರು.

ಬಾಡಿಗೆ ಹಾಸಿಗೆಗಳು ವಾಪಸ್‌:

ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ (ಬಿಐಇಸಿ) 6,500 ಹಾಸಿಗೆಗಳ ವ್ಯವಸ್ಥೆ ಕಲ್ಪಿಸಿ 1,500 ಮಂದಿಗೆ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಇನ್ನು 1,500 ಹಾಸಿಗೆಗಳನ್ನು ವೈದ್ಯರು ಹಾಗೂ ಇತರೆ ಸಿಬ್ಬಂದಿಗೆ ಮೀಸಲಿಡಲಾಗಿದೆ. ಉಳಿದ 3,500 ಹಾಸಿಗೆಗಳನ್ನು ಈಗಾಗಲೇ ಖರೀದಿಸಲಾಗಿದ್ದು ಅದನ್ನು ಕೋವಿಡ್‌ ಆರೈಕೆ ಮಾಡುತ್ತಿರುವ ಆಸ್ಪತ್ರೆ ಇಲ್ಲವೇ ಹಾಸ್ಟೆಲ್‌ಗಳಿಗೆ ವರ್ಗಾಯಿಸಲು ಕ್ರಮಕೈಗೊಳ್ಳಲಾಗುತ್ತಿದೆ. ಬಾಡಿಗೆಗೆ ಪಡೆದಿರುವ ಹಾಸಿಗೆಗಳನ್ನು ಹಿಂದಿರುಗಿಸಲಾಗುತ್ತಿದೆ ಎಂದು ಹೇಳಿದರು.

ಸಾವು ಹೆಚ್ಚಳ ಪತ್ತೆಗೆ ಸಮಿತಿ:

ಬಿಬಿಎಂಪಿ ವ್ಯಾಪ್ತಿಯಲ್ಲಿ ಹೆಚ್ಚು ಸಾವಾಗುತ್ತಿರುವ 19 ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಈ ಆಸ್ಪತ್ರೆಗಳಲ್ಲಿ 24,368 ಮಂದಿ ದಾಖಲಾಗಿದ್ದು, 1,598 ಮಂದಿ ಸಾವನ್ನಪ್ಪಿದ್ದಾರೆ. ಈ ಆಸ್ಪತ್ರೆಗಳಲ್ಲಿ ಸಾವಿನ ಸಂಖ್ಯೆ ಹೆಚ್ಚಾಗಲು ಕಾರಣವೇನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸಲು ಸಮಿತಿ ರಚನೆ ಮಾಡಲಾಗಿದೆ ಎಂದು ತಿಳಿಸಿದರು.

ನಿತ್ಯ ಸರಾಸರಿ 30000 ಟೆಸ್ಟ್‌:

ಜುಲೈ ತಿಂಗಳಿಗೆ ಹೋಲಿಸಿದರೆ ಆಗಸ್ಟ್‌ ತಿಂಗಳಲ್ಲಿ ಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಪ್ರಸ್ತುತ ದಿನಕ್ಕೆ 30 ಸಾವಿರ ಪರೀಕ್ಷೆ ಮಾಡಲಾಗುತ್ತಿದೆ. ಜುಲೈ ತಿಂಗಳಲ್ಲಿ ದಿನಕ್ಕೆ ಮೂರು ಸಾವಿರ ಪರೀಕ್ಷೆ ಮಾತ್ರ ನಡೆಸಲಾಗಿತ್ತು. ಇದೀಗ ಪಾಸಿಟಿವಿಟಿ ಸಂಖ್ಯೆ ಶೇ.10ರಷ್ಟಾಗಿದೆ. ಸಾವಿನ ಸಂಖ್ಯೆ ಶೇ.1.52 ಆಗಿದೆ. ಕಾಯಿಲೆಗಳಿರುವ 50 ವರ್ಷ ಮೇಲ್ಪಟ್ಟವರಿಗೆ, ಸೋಂಕು ಲಕ್ಷಗಳಿರುವ ಐಎಲ್‌ಐ, ಸಾರಿ ಹಾಗೂ ಪ್ರಾಥಮಿಕ ಸಂಪರ್ಕಿತರು ಮತ್ತು ಕಂಟೈನ್ಮೆಂಟ್‌ ಪ್ರದೇಶದಲ್ಲಿ ಇರುವವರಿಗೆ ಪರೀಕ್ಷೆ ಮಾಡಲಾಗುತ್ತಿದೆ. ಇಂತಹವರು ಕೂಡಲೇ ಪರೀಕ್ಷೆ ಮಾಡಿಸಿಕೊಂಡರೆ ಮೂಲದಲ್ಲೇ ಸೋಂಕು ಹರಡುವುದು ಮತ್ತು ಸಾವುಗಳನ್ನು ತಡೆಯಬಹುದು ಎಂದು ಹೇಳಿದರು.

ಭಿತ್ತಿಪತ್ರ ಅಂಟಿಸಲ್ಲ; ಬ್ಯಾರಿಕೇಡ್‌ ಹಾಕಲ್ಲ

ಪಾಲಿಕೆ ವ್ಯಾಪ್ತಿಯ ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ 100 ಮೀಟರ್‌ ವ್ಯಾಪ್ತಿಯಲ್ಲಿ ಒಂದೆರಡು ಪ್ರಕರಣಗಳು ಪತ್ತೆಯಾದರೆ ಬ್ಯಾರಿಕೇಡ್‌ ಅಳವಡಿಸುವುದಿಲ್ಲ. 100 ಮೀಟರ್‌ ವ್ಯಾಪ್ತಿಯಲ್ಲಿ ಮೂರಕ್ಕಿಂತ ಹೆಚ್ಚು ಪ್ರಕರಣಗಳು ಕಂಡುಬಂದ ಕಂಟೈನ್ಮೆಂಟ್‌ ಪ್ರದೇಶದಲ್ಲಿ ಮಾತ್ರ ಬ್ಯಾರಿಕೇಡ್‌ ಅಳವಡಿಸಲಾಗುತ್ತಿದೆ. ಈ ಪೈಕಿ 17,159 ಕಡೆ ಒಂದೆರಡು ಪ್ರಕರಣಗಳಿದ್ದು, ಅಲ್ಲಿ ಬ್ಯಾರಿಕೇಡ್‌ ಅಳವಡಿಸಿರುವುದಿಲ್ಲ. 1,018 ಕಡೆ ಮೂರಕ್ಕಿಂತ ಹೆಚ್ಚು ಪ್ರಕರಣಗಳಿರುವ ಪ್ರದೇಶಗಳಲ್ಲಿ ಬ್ಯಾರಿಕೇಡ್‌ ಹಾಕಲಾಗಿದೆ. ಹಾಗೆಯೇ ಕಂಟೈನ್ಮೆಂಟ್‌ ಪ್ರದೇಶಗಳಲ್ಲಿ ಸೋಂಕು ದೃಢಪಟ್ಟವರ ಮನೆಗಳ ಮುಂದೆ ಇನ್ನು ಮುಂದೆ ಭಿತ್ತಿಪತ್ರ ಅಂಟಿಸದೆ ಸುತ್ತ-ಮುತ್ತಲಿನ ಮನೆಯವರಿಗೆ ಸೋಂಕು ದೃಢಪಟ್ಟಿರುವರ ಬಗ್ಗೆ ಮಾಹಿತಿ ನೀಡಲಾಗುವುದು ಎಂದು ತಿಳಿಸಿದರು.
 

Follow Us:
Download App:
  • android
  • ios