ಡಿ.ಕೆ.ಶಿವಕುಮಾರ್ ಶ್ರಮಕ್ಕೆ ಕೂಲಿ ಕೊಡುವುದಿಲ್ಲ ಎಂದು ಹೇಳುವವರು ಯಾರಿದ್ದಾರೆ? ಅವರು ಒಂದು ಬಾರಿಯಾದರೂ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು.
ಸುವರ್ಣ ವಿಧಾನಸೌಧ (ಡಿ.13): ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪಕ್ಷಕ್ಕಾಗಿ ಕಷ್ಟಪಟ್ಟಿದ್ದಾರೆ. ಇಡೀ ರಾಜ್ಯದ ತುಂಬ ಓಡಾಡಿದ್ದಾರೆ. ಎಂಟು ಬಾರಿ ಶಾಸಕರಾಗಿ, ಹಲವು ಇಲಾಖೆಗಳ ಸಚಿವರಾಗಿ ಕೆಲಸ ಮಾಡಿದ್ದಾರೆ. ಅವರ ಶ್ರಮಕ್ಕೆ ಕೂಲಿ ಕೊಡುವುದಿಲ್ಲ ಎಂದು ಹೇಳುವವರು ಯಾರಿದ್ದಾರೆ? ಅವರು ಒಂದು ಬಾರಿಯಾದರೂ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಎಸ್.ಟಿ.ಸೋಮಶೇಖರ್ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಹೈಕಮಾಂಡ್ ನಾಯಕರ ಮುಂದೆ ಯಾವುದೇ ನಂಬರ್ ಗೇಮ್ ಇರುವುದಿಲ್ಲ. ಹಿಂದೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರನ್ನು ಬದಲಿಸಿ ಬೊಮ್ಮಾಯಿ ಅವರನ್ನು ಮಾಡುವಾಗ ಯಾವುದೇ ನಂಬರ್ ಗೇಮ್ ಇರಲಿಲ್ಲ ಎಂದರು.
ರಾಜಕೀಯ ಚರ್ಚೆಯಿಲ್ಲ, ಬಿರಿಯಾನಿ ಚೆನ್ನಾಗಿತ್ತು: ಗುರುವಾರ ರಾತ್ರಿಯ ಡಿನ್ನರ್ ಸಭೆ ಕುರಿತು ಮಾತನಾಡಿದ ಎಸ್.ಟಿ.ಸೋಮಶೇಖರ್, ಡಿನ್ನರ್ ಸಭೆಗೆ 70ರಿಂದ 75 ಮಂದಿ ಬಂದಿದ್ದರು. ಅಲ್ಲಿ ರಾಜಕೀಯವಾಗಿ ಯಾವುದೇ ಚರ್ಚೆಯಾಗಿಲ್ಲ. ಊಟದ ಬಗ್ಗೆ ಚರ್ಚೆಯಾಯಿತು. ಬಿರಿಯಾನಿ ತುಂಬಾ ಚೆನ್ನಾಗಿತ್ತು. ನನಗೆ ಈಗ ಸಿಎಲ್‌ಪಿ, ಬಿಜೆಎಲ್‌ಬಿ ಯಾವುದೂ ಇಲ್ಲ. ಹೀಗಾಗಿ ಯಾರೇ ಊಟಕ್ಕೆ ಕರೆದರೂ ಹೋಗುತ್ತೇನೆ. ಬಿಜೆಪಿಯವರು ಊಟ ಹಾಕಿಸುತ್ತೇವೆ ಎಂದರೆ ಅಲ್ಲಿಗೂ ಹೋಗುತ್ತೇನೆ ಎಂದರು.
ರಾಷ್ಟ್ರೀಯ ಪಕ್ಷಗಳಲ್ಲಿ ನಂಬರ್ ಗೇಮ್ ರೀತಿ ಯಾವುದೂ ಇರುವುದಿಲ್ಲ. ಹೈಕಮಾಂಡ್ ನಾಯಕರ ವಿರುದ್ಧ ಮಾತನಾಡುವವರು ಯಾರಿದ್ದಾರೆ? ಹೈಕಮಾಂಡ್ ತೀರ್ಮಾನಿಸಿದರೆ ಯಾವುದೂ ಲೆಕ್ಕಕ್ಕೆ ಬರುವುದಿಲ್ಲ ಎಂದರು. ಡಿ.ಕೆ.ಶಿವಕುಮಾರ್ ಒಂದು ಬಾರಿಯಾದರೂ ಮುಖ್ಯಮಂತ್ರಿ ಆಗಿಯೇ ಆಗುತ್ತಾರೆ. ಅವರು ಸಿಎಂ ಆಗಬೇಕು ಅಂತ ಹಣೆಯಲ್ಲಿ ಬರೆದಿದ್ದರೆ ಆಗಿಯೇ ಆಗುತ್ತಾರೆ. ನಾನು ಹುಟ್ಟಾ ಕಾಂಗ್ರೆಸಿಗ. ಆದರೆ ಬಿಜೆಪಿಯಲ್ಲಿ ಸಚಿವನಾಗಬೇಕು ಎಂದು ಹಣೆಯಲ್ಲಿ ಬರೆದಿತ್ತು. ಅದರಂತೆ ಸಚಿವನಾದೆ. ಹಾಗೆಯೇ, ಡಿ.ಕೆ. ಶಿವಕುಮಾರ್ ಯಾವಾಗ ಸಿಎಂ ಆಗಬೇಕು ಎಂದು ಹಣೆಯಲ್ಲಿ ಬರೆದಿರುತ್ತೋ ಆಗ ಆಗುತ್ತಾರೆ ಎಂದು ಹೇಳಿದರು.
ಡಿಕೆಶಿ ಬಿಜೆಪಿಗೆ ಹೋಗಲ್ಲ
ಡಿ.ಕೆ.ಶಿವಕುಮಾರ್ ಬಿಜೆಪಿ ಹೋಗುತ್ತಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಎಸ್.ಟಿ. ಸೋಮಶೇಖರ್, ಅವರು ಯಾವುದೇ ಕಾರಣಕ್ಕೂ ಬಿಜೆಪಿಗೆ ಹೋಗುವುದಿಲ್ಲ. ಕಾಂಗ್ರೆಸ್‌ನಲ್ಲಿ ದುಡಿದಿದ್ದಾರೆ. ಇಲ್ಲಿ ಹೋರಾಟ ಮಾಡಿ, ಪಕ್ಷ ಕಟ್ಟಿದ್ದಾರೆ. ಇಲ್ಲಿಯೇ ಅವರಿಗೆ ಕೂಲಿ ಸಿಗುತ್ತದೆ. ಹಾಗೆಯೇ, ನಾಯಕತ್ವ ವಿಚಾರದಲ್ಲಿ ನನ್ನ ಬೆಂಬಲ ಯಾರೂ ಕೇಳಿಲ್ಲ. ಆದರೆ, ಬೆಂಬಲ ಕೇಳುವವರಿಗೆ ಬಹುಮತ ಇದೆ ಎಂದರು.
ಯತೀಂದ್ರ ಹೇಳಿಕೆ, ಹೈಕಮಾಂಡ್ ಮೌನ ಕುರಿತು ಮಾತನಾಡಿ, ಯತೀಂದ್ರ ಸಿದ್ದರಾಮಯ್ಯ ಅವರು ಹೈಕಮಾಂಡ್ ವಿರುದ್ಧ ಮಾತನಾಡುತ್ತಿದ್ದಾರೆ ಎನ್ನಲಾಗದು. ಅವರ ಅಪ್ಪ 5 ವರ್ಷ ಮುಖ್ಯಮಂತ್ರಿಯಾಗಿರಲಿ ಎಂದು ಅವರು ಹೇಳುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಇನ್ನು, ಈ ವಿಚಾರದಲ್ಲಿ ಹೈಕಮಾಂಡ್ ಮೌನವಾಗಿಲ್ಲ. ವಿಧಾನಮಂಡಲ ಅಧಿವೇಶನ ನಡೆಯುತ್ತಿರುವ ಕಾರಣಕ್ಕಾಗಿ ಸುಮ್ಮನಿರಬಹುದು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.


