Asianet Suvarna News Asianet Suvarna News

Mangalore ಕಾಸರಗೋಡು ಕನ್ನಡ ಶಾಲೆಗೆ ಮತ್ತೆ ಮಲಯಾಳಂ ಕಂಟಕ!

- ಕನ್ನಡ ಮಾಧ್ಯಮ ತರಗತಿಗಳಿಗೆ ಕನ್ನಡ ಬಾರದ ಮಲಯಾಳಂ ಶಿಕ್ಷಕರ ನೇಮಕ

- ಮಕ್ಕಳಿಗೆ ಮಲಯಾಳಂ ಬರಲ್ಲ, ಶಿಕ್ಷಕರಿಗೆ ಕನ್ನಡ ಗೊತ್ತಿಲ್ಲ!

- ಪರೀಕ್ಷೆ ಸಮೀಪಿಸುತ್ತಿರುವಾಗ ಕಂಟಕ: ಪೋಷಕರ ಆತಂಕ
 

Manglore News kasaragod kannada schools facing malayalam language teacher issue again san
Author
Bengaluru, First Published Mar 7, 2022, 2:39 AM IST

ಮಂಗಳೂರು (ಮಾ.7): ಮೂರು ವರ್ಷಗಳ ಹಿಂದೆ ಗಡಿ​ನಾಡು ಕಾಸ​ರ​ಗೋಡು (Kasaragod) ಜಿಲ್ಲೆಯ ಕನ್ನಡ ಶಾಲೆಗಳಿಗೆ (Kannada School) ಮಲ​ಯಾಳಂ ಶಿಕ್ಷ​ಕ​ರನ್ನು (Malayalam Teacher) ನೇಮಿಸಿ ತೀವ್ರ ವಿರೋಧ ಎದು​ರಿ​ಸಿದ್ದ ಕೇರಳ ಸರ್ಕಾರ (Kerala Governament) ಇದೀಗ ಮತ್ತೊಮ್ಮೆ ಅದೇ ರೀತಿಯ ಪ್ರಯ​ತ್ನಕ್ಕೆ ಮುಂದಾ​ಗಿ​ದೆ. ಕನ್ನ​ಡಿ​ಗರ ವಿರೋ​ಧದ ಬಳಿಕ ಅಂದು ತನ್ನ ನಿಲುವು ಬದ​ಲಿ​ಸಿದ್ದ ಸರ್ಕಾರ, ಇದೀಗ ಮತ್ತೆ ಕನ್ನಡ ಶಾಲೆ​ಗ​ಳಿಗೆ ಮಲ​ಯಾ​ಳಂ ಭಾಷಿಕ ಶಿಕ್ಷಕರನ್ನು ನೇಮಿಸುವ ಪ್ರಕ್ರಿಯೆ ಆರಂಭಿ​ಸಿದೆ.

ಮೂರು ವರ್ಷದ ಹಿಂದೆ ಕೇರಳ ಲೋಕಸೇವಾ ಆಯೋಗದ ಪರೀಕ್ಷೆಯಲ್ಲಿ (ಕೆಪಿಎಸ್‌ಸಿ 2014ನೇ ಬ್ಯಾಚ್‌​) ಆಯ್ಕೆಯಾದ 23 ಶಿಕ್ಷಕರ ಪೈಕಿ 8 ಮಲಯಾಳಂ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಿಸ​ಲಾ​ಗಿತ್ತು. ಈ ಶಿಕ್ಷಕರು ಪಾಠ ಮಾಡಬೇಕಾಗಿರುವುದು ಕನ್ನಡ ಮಾಧ್ಯಮ ತರಗತಿಗೆ. ಆದ​ರೆ, ಶಿಕ್ಷಕರಿಗೆ ಕನ್ನಡ ಬರುವುದಿಲ್ಲ, ವಿದ್ಯಾರ್ಥಿಗಳಿಗೆ ಮಲಯಾಳಂ ಅಕ್ಷರಜ್ಞಾನ ಇಲ್ಲ. ಈ ವಿಚಾರ ವಿವಾದಕ್ಕೆ ಕಾರಣವಾಗಿ ಭಾರೀ ಪ್ರತಿಭಟನೆಯೂ ನಡೆದಿತ್ತು.

ಆಗ ಕಾಸರಗೋಡು ಜಿಲ್ಲೆಯ ಮಂಗಲ್ಪಾಡಿ, ಉದುಮ, ಕುಂಜತ್ತೂರು, ಪೈವಳಿಕೆ, ಬದಿಯಡ್ಕ ಶಾಲೆಗಳಿಗೆ ಮಲಯಾಳಂ ಭಾಷಿಕ ಶಿಕ್ಷಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಗಡಿನಾಡ ಕನ್ನಡ ಸಂಘಟನೆಗಳು ಅಲ್ಲಿನ ಹೈಕೋರ್ಟ್‌ (Kerala High Court) ಮೆಟ್ಟಿಲೇರಿದ್ದವು. ವಿವಾದದ ಹಿನ್ನೆಲೆಯಲ್ಲಿ ಕೇರಳ ಸರ್ಕಾರ ಕೆಲ ಮಲಯಾಳಂ ಶಿಕ್ಷಕರನ್ನು ಎತ್ತಂಗಡಿ ಮಾಡಿದರೆ, ಇನ್ನೂ ಕೆಲವರನ್ನು ಮೈಸೂರಿನ ಪ್ರಾದೇಶಿಕ ಭಾಷಾ ಕೇಂದ್ರಕ್ಕೆ ಕನ್ನಡ ಕಲಿಕೆಗೆ ಕಳುಹಿಸಿತ್ತು. ಆ ಬಳಿಕ ಈ ವಿವಾದ ಬಹುತೇಕ ತಣ್ಣಗಾಗಿತ್ತು.

ಇದೀಗ 2014ರ ಕೇರಳ ಲೋಕಸೇವಾ ಆಯೋಗ (Kerala Public Service Commission)ಪರೀಕ್ಷೆಯಲ್ಲಿ ಉತ್ತೀರ್ಣಗೊಂಡು ಸಂದರ್ಶನ ಎದುರಿಸಿದ ಶಿಕ್ಷಕರ ನೇಮಕದ 2ನೇ ಹಂತ ನಡೆ​ಯು​ತ್ತಿದ್ದು, ಈ ಬಾರಿಯೂ ಮತ್ತೆ ಕನ್ನಡ ಶಾಲೆ​ಗ​ಳಿಗೆ ಮಲ​ಯಾಳಂ ಭಾಷಿಕ ಶಿಕ್ಷ​ಕ​ರನ್ನು ನೇಮಿ​ಸುವ ಕೆಲಸ ಸದ್ದಿ​ಲ್ಲ​ದೆ ಆರಂಭಿ​ಸ​ಲಾ​ಗಿ​ದೆ. ಅದ​ರಂತೆ ಸೀತಂಗೋಳಿ ಸಮೀಪದ ಅಂಗಡಿಮೊಗರು ಕನ್ನಡ ಮಾಧ್ಯಮ ಪ್ರೌಢಶಾಲೆಗೆ ಕೊಟ್ಟಾಯಂನಿಂದ ಮಲಯಾಳಂ ಭಾಷಿಕ ವಿಜ್ಞಾನ ಶಿಕ್ಷಕರು ಆಗಮಿಸುತ್ತಿದ್ದಾರೆ. ಫೆ.28ರಂದು ಇವರ ನೇಮಕಾತಿ ಆದೇಶ ಹೊರಡಿಸಲಾಗಿದೆ. ಇವರಿಗೆ ಕನ್ನಡ ಗೊತ್ತಿ​ಲ್ಲ, ವಿದ್ಯಾರ್ಥಿಗಳಿಗೆ ಮಲಯಾಳಂ ಬರ​ಲ್ಲ. ಈಗ ವಾರ್ಷಿಕ ಪರೀಕ್ಷೆ ಸಮೀಪಿಸುತ್ತಿರುವ ವೇಳೆಯೇ ಈ ನೇಮಕಕ್ಕೆ ಆದೇಶವಾಗಿರುವುದು ಕನ್ನಡಿಗ ವಿದ್ಯಾರ್ಥಿಗಳು ಹಾಗೂ ಪಾಲ​ಕರ ನಿದ್ದೆಗೆಡಿಸಿದೆ.

2014ರ ನೇಮಕ ಪ್ರಕ್ರಿ​ಯೆ ಕನ್ನ​ಡಿ​ಗ​ರಿಗೆ ತಲೆ​ನೋ​ವು: ಗಡಿನಾಡು ಕಾಸರಗೋಡಿಗೆ ಸಂವಿಧಾನಬದ್ಧ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಇರುವುದರಿಂದ ಕನ್ನಡಗೊತ್ತಿರುವ ಶಿಕ್ಷಕರನ್ನು ನೇಮಿಸ ಬೇಕೆಂದು 2016ರಲ್ಲಿ ಕೇರಳ ಹೈಕೋರ್ಟ್‌ ಆದೇಶಿಸಿದೆ. ಆದರೆ ಈಗ ಅನುಷ್ಠಾನಗೊಳ್ಳುತ್ತಿರುವುದು ಅದಕ್ಕೂ ಮೊದಲಿನ 2014ರ ಆಯ್ಕೆ ಪ್ರಕ್ರಿಯೆ. ಇದುವೇ ಗಡಿನಾಡ ಕನ್ನಡಿಗ ವಿದ್ಯಾರ್ಥಿಗಳ ಪಾಲಿಗೆ ಮುಳ್ಳಾಗಿ ಪರಿಣಮಿಸಿದೆ.

HM Mahesh Passed Away: ಸಂಗೀತಾ ಕ್ಯಾಸೆಟ್‌ ಮಾಂತ್ರಿಕ ಎಚ್‌.ಎಂ. ಮಹೇಶ್‌ ಇನ್ನಿಲ್ಲ
ಕೋರ್ಟ್‌ನಲ್ಲಿ ಮೂರು ಕೇಸು ಬಾಕಿ:
ಕಳೆದ ಬಾರಿ ಕನ್ನಡ ಮಾಧ್ಯಮ ಶಾಲೆಗಳಿಗೆ ಮಲಯಾಳಂ ಶಿಕ್ಷಕರ ನೇಮಿಸಿದ ವಿಚಾರ ಇನ್ನೂ ಕೇರಳ ಹೈಕೋರ್ಟ್‌ನಲ್ಲಿ ವಿಚಾರಣೆಗೆ ಬಾಕಿ ಇದೆ. ಮಲಯಾಳಂ ಶಿಕ್ಷಕರನ್ನು ಕನ್ನಡ ಮಾಧ್ಯಮ ಶಾಲೆಗಳಿಗೆ ನೇಮಿಸಬಾರದು, ಗಡಿನಾಡಿನ ಭಾಷಾ ಅಲ್ಪಸಂಖ್ಯಾತ ಕನ್ನಡಿಗರಿಗೆ ಸಾಂವಿಧಾನಿಕ ಸೌಲಭ್ಯಗಳಿಗೆ ತಡೆ ಹಾಕಬಾರದು ಎಂಬಿತ್ಯಾದಿ ಕಾರಣವೊಡ್ಡಿ ಮೂರು ಪ್ರತ್ಯೇಕ ಅರ್ಜಿಗಳನ್ನು ಕನ್ನಡ ಪರ ಸಂಘಟನೆಗಳು, ಶಿಕ್ಷಕರ ಸಂಘಟನೆಗಳು ಕೇರಳ ಹೈಕೋರ್ಟ್‌ಗೆ ಸಲ್ಲಿಸಿದ್ದವು. ಈ ಅರ್ಜಿ ವಿಚಾರಣೆ ಪೂರ್ತಿಯಾಗಿ ಆರಂಭವಾಗಿಲ್ಲ. ಇದರ ಮಧ್ಯೆಯೇ ಮತ್ತೆ ಕನ್ನಡ ಶಾಲೆಗಳಿಗೆ ಮಲಯಾಳಂ ಭಾಷಿಕ ಶಿಕ್ಷಕರ ನೇಮಿಸಿ​ರು​ವುದು ಕನ್ನಡ ಸಂಘಟನೆಗಳ ಕೆಂಗಣ್ಣಿಗೆ ಕಾರಣವಾಗಿದೆ.

Hijab Row: ಮಂಗ್ಳೂರಲ್ಲಿ ಮತ್ತೆ ಹಿಜಾಬ್‌ ವಿವಾದ: ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ತಡೆ
ಹೋರಾಟ ಆರಂಭಿಸುತ್ತೇವೆ
ಸಂವಿಧಾನದಲ್ಲಿ ಗಡಿನಾಡ ಕನ್ನಡಿಗರಿಗೆ ನೀಡಿದ ಭಾಷಾ ಅಲ್ಪಸಂಖ್ಯಾತ ಸ್ಥಾನಮಾನ ಉಳಿಸುವ ನಿಟ್ಟಿನಲ್ಲಿ ಕೇರಳ ಸರ್ಕಾರ ಹೆಜ್ಜೆ ಇರಿಸಬೇಕು. ಈಗಾಗಲೇ ಕೇರಳ ಹೈಕೋರ್ಟ್‌ನಲ್ಲಿ ಮೂರು ಕೇಸುಗಳಿದ್ದು, ಮತ್ತೆ ಮಲಯಾಳಂ ಶಿಕ್ಷಕರನ್ನು ಕನ್ನಡ ಶಾಲೆಗಳಿಗೆ ನೇಮಕ ಮಾಡುವುದನ್ನು ಮುಂದುವರಿಸಿದರೆ ಕೋರ್ಟ್‌ ಮೆಟ್ಟಿಲೇರಬೇಕಾಗುತ್ತದೆ. ತೀವ್ರ ಹೋರಾಟವನ್ನೂ ಆರಂಭಿ​ಸ​ಬೇ​ಕಾ​ಗು​ತ್ತ​ದೆ.
-ಎಸ್‌.ವಿ.ಭಟ್‌, ಅಧ್ಯಕ್ಷ, ಕನ್ನಡ ಸಾಹಿತ್ಯ ಪರಿಷತ್‌ ಕೇರಳ ಗಡಿನಾಡು ಘಟಕ


- ಗಡಿನಾಡು ಕಾಸರಗೋಡಿನಲ್ಲಿ ಸಾಕಷ್ಟುಕನ್ನಡ ಶಾಲೆಗಳಿವೆ

- ಕನ್ನಡ ಮಾಧ್ಯಮದಲ್ಲೇ ಶಾಲೆಗಳಲ್ಲಿ ಬೋಧನೆ ನಡೆಯುತ್ತಿದೆ

- ಈ ಶಾಲೆಗಳಿಗೆ ಕನ್ನಡ ಗೊತ್ತಿರುವ ಶಿಕ್ಷಕರ ನೇಮಕವಾಗಬೇಕು

- ಆದರೆ 3 ವರ್ಷದ ಹಿಂದೆ ಮಲಯಾಳಂ ಶಿಕ್ಷಕರ ನೇಮಕ ಆಗಿತ್ತು

- ತೀವ್ರ ವಿರೋಧ ಕಾರಣ ಶಿಕ್ಷಕರನ್ನು ಕೇರಳ ವಾಪಸ್‌ ಕರೆಸಿತ್ತು

- ಈಗ ಮತ್ತೆ ಕನ್ನಡ ಗೊತ್ತಿಲ್ಲದ ಶಿಕ್ಷಕರ ನೇಮಕ ಶುರುವಾಗಿದೆ

- ಮಕ್ಕಳಿಗೆ ಮಲಯಾಳಂ ಬರಲ್ಲ, ಶಿಕ್ಷಕರಿಗೆ ಕನ್ನಡ ಗೊತ್ತಿಲ್ಲ

- ಆತ್ಮಭೂಷಣ್‌

Follow Us:
Download App:
  • android
  • ios