Hijab Row: ಮಂಗ್ಳೂರಲ್ಲಿ ಮತ್ತೆ ಹಿಜಾಬ್ ವಿವಾದ: ವಿದ್ಯಾರ್ಥಿನಿಯರ ತರಗತಿ ಪ್ರವೇಶಕ್ಕೆ ತಡೆ
* ಡಾ.ದಯಾನಂದ ಪೈ, ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮತ್ತೆ ಹಿಜಾಬ್ ಸಂಘರ್ಷ
* ಸ್ಥಳಕ್ಕೆ ಪೊಲೀಸ್ ಕಮಿಷನರ್ ಭೇಟಿ
* ಮಾ. 12ರ ವರೆಗೆ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಮಂಗಳೂರು(ಮಾ.05): ಕೆಲವು ಸಮಯದಿಂದ ಸ್ವಲ್ಪ ತಣ್ಣಗಾಗಿದ್ದ ಹಿಜಾಬ್(Hijab) ವಿವಾದ ಮಂಗಳೂರಿನಲ್ಲಿ(Mangaluru) ಮತ್ತೆ ಕಾಣಿಸಿದೆ. ನಗರದ ರಥಬೀದಿಯ ಡಾ.ದಯಾನಂದ ಪೈ, ಸತೀಶ್ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರದಿಂದ ಹಿಜಾಬ್ ಸಂಘರ್ಷ ತಲೆದೋರಿದೆ.
ಹಿಜಾಬ್ ವಿಚಾರದಲ್ಲಿ ಗುರುವಾರವೇ ತುಸು ಗೊಂದಲ ಉಂಟಾಗಿತ್ತು. ಪ್ರಾಂಶುಪಾಲರ ಆದೇಶದಂತೆ ಮುಸ್ಲಿಂ ವಿದ್ಯಾರ್ಥಿನಿಯರು(Muslim Students) ಶುಕ್ರವಾರ ಹಿಜಾಬ್ ಧರಿಸದೆ ಸಮವಸ್ತ್ರದ ಶಾಲು ಹಾಕಿಕೊಂಡು ಪರೀಕ್ಷೆಗೆ ಹಾಜರಾಗಿದ್ದರು. ಇದಕ್ಕೆ ಕೆಲವು ವಿದ್ಯಾರ್ಥಿಗಳು ಆಕ್ಷೇಪ ವ್ಯಕ್ತಪಡಿಸಿದ್ದರು.
Dress Code: ಬಣ್ಣ ಬಣ್ಣ ಬೇಡ... ಸಮವಸ್ತ್ರವೇ ಬೆಸ್ಟ್ ಎಂದ ನಿವೃತ್ತ ವಿಸಿಗಳು!
ವಿದ್ಯಾರ್ಥಿಗಳ ಆಕ್ಷೇಪ ಹಿನ್ನೆಲೆಯಲ್ಲಿ ವಿದ್ಯಾರ್ಥಿನಿಯರನ್ನು ಪ್ರಾಂಶುಪಾಲರು ತರಗತಿಗೆ ಹಾಜರಾಗಲು ಅವಕಾಶ ನೀಡಲಿಲ್ಲ. ಇದೇ ವೇಳೆ ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ತರಗತಿ ಪ್ರವೇಶಕ್ಕೆ ಯತ್ನಿಸಿದ ಕಾರಣಕ್ಕೆ ಅಖಿಲ ಭಾತೀಯ ವಿದ್ಯಾರ್ಥಿ ಪರಿಷತ್‌ನ(ABVP) ವಿದ್ಯಾರ್ಥಿಗಳು ಕಿರುಕುಳ ನೀಡಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ(Campus Front of India) ಸಂಘಟನೆಯ ಮಂಗಳೂರು ನಗರ ಅಧ್ಯಕ್ಷ ಶರ್ಫುದ್ದೀನ್ ನಗರ ಪೊಲೀಸ್ ಕಮಿಷನರ್‌ಗೆ ಟ್ವೀಟ್ ಮಾಡಿ ಒತ್ತಾಯಿಸಿದ್ದಾರೆ.
ಪೊಲೀಸ್ ಕಮಿಷನರ್ ಭೇಟಿ:
ಹಿಜಾಬ್ ವಿವಾದ ತಲೆದೋರಿದ ಕಾಲೇಜಿಗೆ ಪೊಲೀಸ್ ಕಮಿಷನರ್ ಶಶಿಕುಮಾರ್ ಭೇಟಿ ನೀಡಿದ್ದು, ಪರಿಸ್ಥಿತಿ ಅವಲೋಕಿಸಿದ್ದಾರೆ. ಹಿಜಾಬ್ ಧರಿಸಿದ್ದನ್ನು ತರಗತಿಯ ಸಹಪಾಠಿಯೊಬ್ಬ ಪ್ರಶ್ನಿಸಿದ್ದಾನೆ. ಆತನ ವಿರುದ್ಧ ಹಿಜಾಬ್ ಧರಿಸಿದ ವಿದ್ಯಾರ್ಥಿನಿಯೊಬ್ಬರು ಬಂದರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇದೇ ವೇಳೆ ಹಿಜಾಬ್ ವಿದ್ಯಾರ್ಥಿನಿಯನ್ನು ತರಾಟೆಗೆ ತೆಗೆದುಕೊಂಡ ವಿದ್ಯಾರ್ಥಿಯ ಫೋಟೋ ಬಳಸಿ ಅವಾಚ್ಯ ಶಬ್ದಗಳನ್ನು ಜಾಲತಾಣದಲ್ಲಿ ಹರಿಯಬಿಡಲಾಗಿದ್ದು, ಆತನಿಗೆ ಜೀವ ಬೆದರಿಕೆ ಒಡ್ಡಿರುವುದಾಗಿ ವಿದ್ಯಾರ್ಥಿಯೊಬ್ಬರು ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಈ ಎರಡು ದೂರುಗಳನ್ನು ಕಾನೂನಿನಡಿಯಲ್ಲಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಅಲ್ಲದೆ ಹಿಜಾಬ್ ಧರಿಸಿಕೊಂಡು ಪರೀಕ್ಷೆಗೆ ಹಾಜರಾಗಲು ಪ್ರಾಂಶುಪಾಲರು ಒಪ್ಪಿಗೆ ಸೂಚಿಸಿದ್ದರು ಎಂದು ವಿದ್ಯಾರ್ಥಿನಿ ಹೇಳಿದ್ದಾಳೆ. ಆದರೆ ಪ್ರಾಂಶುಪಾಲರು ಅದನ್ನು ನಿರಾಕರಿಸಿದ್ದಾರೆ. ಈ ವಿಚಾರವನ್ನು ಕಾಲೇಜು ಶಿಕ್ಷಣ ಇಲಾಖೆಯ ಉನ್ನತ ಅಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಅವರೇ ಪ್ರಾಂಶುಪಾಲರ ಜತೆ ಮಾತನಾಡಲಿದ್ದಾರೆ. ಅಲ್ಲದೆ ಜಿಲ್ಲಾಧಿಕಾರಿಗಳ ಗಮನಕ್ಕೂ ತರಲಾಗಿದೆ ಎಂದು ಕಮಿಷನರ್ ಶಶಿಕುಮಾರ್(Shashikumar) ಸುದ್ದಿಗಾರರಿಗೆ ತಿಳಿಸಿದ್ದಾರೆ.
Hijab Row ಮುಸ್ಲಿಂ ವಿದ್ಯಾರ್ಥಿಗಳಿಗೊಂದು ಮನವಿ ಮಾಡಿದ ಚೈತ್ರಾ ಕುಂದಾಪುರ
ಹಳೆಯಂಗಡಿ ಕಾಲೇಜಿನಲ್ಲಿ ಮುಂದುವರಿದ ಹಿಜಾಬ್ ಗೊಂದಲ
ಮೂಲ್ಕಿ: ಮೂಲ್ಕಿ ತಾಲೂಕಿನ ಹಳೆಯಂಗಡಿಯ ಇಂದಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಫೆ.16ರಿಂದ ಆರಂಭಗೊಂಡ ಹಿಜಾಬ್ ವಿವಾದ ಶುಕ್ರವಾರವೂ ಮುಂದುವರಿದಿದ್ದು ಶುಕ್ರವಾರ ಕೂಡ ಹಿಜಾಬ್ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತರಗತಿಯೊಳಗೆ ಪ್ರವೇಶ ನಿರಾಕರಿಸಲಾಗಿದೆ. ಹಳೆಯಂಗಡಿಯ ಇಂದಿರಾ ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 20 ಮಂದಿಯಲ್ಲಿ 15 ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಧರಿಸಿ ಕಾಲೇಜಿಗೆ ಆಗಮಿಸಿದ್ದು ಉಳಿದ ವಿದ್ಯಾರ್ಥಿನಿಯರು ಗೈರು ಹಾಜರಾಗಿದ್ದರು. 15 ವಿದ್ಯಾರ್ಥಿನಿಯರು ಕಾಲೇಜಿಗೆ ಆಗಮಿಸಿ ತರಗತಿಗೆ ತೆರಳಿದ್ದು ಹಿಜಾಬ್ ಧರಿಸಿ ತರಗತಿ ಪ್ರವೇಶಿಸಲು ಕಾಲೇಜಿನಲ್ಲಿ ನಿರಾಕರಿಸಿದ್ದಾರೆ. ವಿದ್ಯಾರ್ಥಿನಿಯರು ಮಧ್ಯಾಹ್ನದವರೆಗೆ ತರಗತಿಯ ಹೊರಗಡೆ ಇದ್ದು ಮಧ್ಯಾಹ್ನದ ಬಳಿಕ ಮನೆಗೆ ತೆರಳಿದ್ದಾರೆ.
12ರ ವರೆಗೆ ಕಾಲೇಜು ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
ಉಡುಪಿ: ಜಿಲ್ಲೆಯಲ್ಲಿ ಹಿಜಾಬ್-ಕೇಸರಿ ಶಾಲು ವಿವಾದದ ಹಿನ್ನೆಲೆ, ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ಕಾನೂನು ಸುವ್ಯವಸ್ಥೆ ಹಾಗೂ ಸಾರ್ವಜನಿಕ ಹಿತವನ್ನು ಕಾಪಾಡುವ ದೃಷ್ಟಿಯಿಂದ ಹೊರಡಿಸಲಾಗಿದ್ದ ನಿಷೇಧಾಜ್ಞೆಯನ್ನು ಮಾ.12ರ ವರೆಗೆ ಮುಂದುವರಿಸಲಾಗಿದೆ. ಈ ಹಿಂದೆ ಮಾ.7ರ ವರೆಗೆ ಜಿಲ್ಲಾಧಿಕಾರಿ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ಆದರೆ ಹಿಜಾಬ್ ಬಗ್ಗೆ ನ್ಯಾಯಾಲಯದಿಂದ ಇನ್ನೂ ತೀರ್ಪು ಬಂದಿಲ್ಲ. ಆದ್ದರಿಂದ ಜಿಲ್ಲೆಯ ಎಲ್ಲ ಪದವಿ ಪೂರ್ವ, ಪಾಲಿಟೆಕ್ನಿಕ್ ಮತ್ತು ಪದವಿ ಕಾಲೇಜುಗಳ 200 ಮೀಟರ್ ವ್ಯಾಪ್ತಿಯಲ್ಲಿ ಕಲಂ 144 ರಂತೆ ನಿಷೇಧಾಜ್ಞೆ ಮುಂದುವರಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿದ್ದಾರೆ.