ಐಆರ್‌ಸಿ ಉಗ್ರ ಸಂಘಟನೆ ಹೊಣೆ, ಕದ್ರಿ ದೇಗುಲ ಗುರಿ? ಮಂಗಳೂರು ಕುಕ್ಕರ್‌ ಬಾಂಬ್‌ ಸ್ಫೋಟ ಡಾರ್ಕ್ ವೆಬ್‌ನಲ್ಲಿ ಹೊಸ ಉಗ್ರ ಸಂಘಟನೆಯ ಪತ್ರ ಬಿಡುಗಡೆ! ಇನ್ನಷ್ಟುದೇವಾಲಯಗಳು, ಆರೆಸ್ಸೆಸ್‌ ಕಚೇರಿ ಕೂಡ ಟಾರ್ಗೆಟ್‌?

ಮಂಗಳೂರು (ನ.25) : ಮಂಗಳೂರಿನ ನಾಗುರಿಯಲ್ಲಿ ನ.19ರಂದು ಚಲಿಸುತ್ತಿದ್ದ ರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟದ ಹೊಣೆಯನ್ನು ಇಸ್ಲಾಮಿಕ್‌ ರೆಸಿಸ್ಟೆನ್ಸ್‌ ಕೌನ್ಸಿಲ್‌ (ಐಆರ್‌ಸಿ) ಎನ್ನುವ ಹೊಸ ಸಂಘಟನೆಯೊಂದು ವಹಿಸಿಕೊಂಡಿದೆ. ಈ ಸಂಘಟನೆಯು ಡಾರ್ಕ್ ವೆಬ್‌ನ ಗ್ರೂಪ್‌ನಲ್ಲಿ ಪತ್ರವೊಂದನ್ನು ಬಿಡುಗಡೆ ಮಾಡಿದ್ದು, ಕದ್ರಿಯ ಇತಿಹಾಸ ಪ್ರಸಿದ್ಧ ಮಂಜುನಾಥ ದೇವಾಲಯವನ್ನು ಟಾರ್ಗೆಟ್‌ ಮಾಡಿದ್ದಾಗಿ ಹೇಳಿಕೊಂಡಿದೆ. ಈ ನಿಟ್ಟಿನಲ್ಲಿ ಕಾರ್ಯಾಚರಣೆ ಚುರುಕುಗೊಳಿಸಿರುವ ಎನ್‌ಐಎ ಮತ್ತು ಪೊಲೀಸರು, ಈ ಸಂಘಟನೆಯ ಪೂರ್ವಾಪರವೇನು? ಜಾಗತಿಕ ಉಗ್ರ ಸಂಘಟನೆಗಳ ಜತೆ ಇದರ ಸಂಪರ್ಕ ಇದೆಯೇ ಎಂಬಿತ್ಯಾದಿ ವಿಚಾರಗಳ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸ್‌ ಅಧಿಕಾರಿಗಳ ತಂಡ ದೇವಾಲಯಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ದೇವಾಲಯಕ್ಕೆ ಭದ್ರತೆ ಹೆಚ್ಚಿಸಲಾಗಿದೆ.

ಬಾಂಬ್‌ ಸ್ಫೋಟಿಸುವ 10 ದಿನಗಳ ಮೊದಲು ಶಂಕಿತ ಉಗ್ರ ಶಾರೀಕ್‌ ಕದ್ರಿ ದೇವಾಲಯ ಸೇರಿದಂತೆ ನಗರದ ಪ್ರಮುಖ ಸ್ಥಳಗಳಲ್ಲಿ ಓಡಾಟ ನಡೆಸಿದ್ದ ಎಂದು ತಿಳಿದು ಬಂದಿದೆ. ಹೀಗಾಗಿ, ಕದ್ರಿ ಮಾತ್ರವಲ್ಲದೆ, ಕುದ್ರೋಳಿ, ಮಂಗಳಾದೇವಿ ದೇವಾಲಯ, ನಗರದ ಇನ್ನಿತರ ಪ್ರಮುಖ ಸ್ಥಳಗಳನ್ನೂ ಕೂಡ ಶಾರೀಕ್‌ ಶಾರ್ಚ್‌ ಲಿಸ್ಟ್‌ ಮಾಡಿಕೊಂಡಿದ್ದನೇ ಎಂಬ ಶಂಕೆ ಉದ್ಭವವಾಗಿದೆ. ಅಲ್ಲದೆ, ಮೈಸೂರಿನಿಂದ ಪಡೀಲ್‌ಗೆ ಆತ ಬಸ್ಸಿನಲ್ಲಿ ಪ್ರಯಾಣಿಸುವ ವೇಳೆ ತನ್ನ ಮೊಬೈಲ್‌ನ ಗೂಗಲ್‌ ಮ್ಯಾಪ್‌ನಲ್ಲಿ ಆರ್‌ಎಸ್‌ಎಸ್‌ನ ಸಂಘನಿಕೇತನ ಕಚೇರಿ ಇರುವ ಮಣ್ಣಗುಡ್ಡೆ ಏರಿಯಾವನ್ನು ಹಲವು ಬಾರಿ ಸಚ್‌ರ್‍ ಮಾಡಿರುವುದು ಗೊತ್ತಾಗಿದೆ. ಹೀಗಾಗಿ, ನಗರದ ಈ ಪ್ರಮುಖ ಸ್ಥಳಗಳನ್ನು ಸ್ಫೋಟಕ್ಕೆ ಆಯ್ಕೆ ಮಾಡಿಕೊಂಡಿರಬಹುದೇ ಎನ್ನುವ ಅನುಮಾನ ಪೊಲೀಸರದ್ದು. ಸದ್ಯಕ್ಕೆ ಈತನ ಮೊಬೈಲ್‌ ಪೊಲೀಸರ ವಶದಲ್ಲಿದ್ದು, ಆತ ಎಲ್ಲೆಲ್ಲಿಗೆ ತೆರಳಿದ್ದ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

Mangaluru Blast Case: ಮಂಗಳೂರು ಬ್ಲಾಸ್ಟ್‌ಗೆ ಮುನ್ನ ಕರಾವಳಿಯಲ್ಲಿ ರಿಂಗಣಿಸಿದ ಸ್ಯಾಟಲೈಟ್ ಫೋನ್

ಐಆರ್‌ಸಿ ಪತ್ರದಲ್ಲಿ ಏನಿದೆ?:

ಐಆರ್‌ಸಿ ಸಂಘಟನೆಯ ಡಾರ್ಕ್ ವೆಬ್‌ನ ಗ್ರೂಪ್‌ನಲ್ಲಿ ಬಿಡುಗಡೆಯಾಗಿರುವ ಪತ್ರ ಈಗ ಪೊಲೀಸರ ಕೈಸೇರಿದೆ. ಅದರಲ್ಲಿ ‘ನಮ್ಮ ಮುಜಾಹಿದ್‌ ಸಹೋದರರಲ್ಲಿ ಒಬ್ಬನಾದ ಮೊಹಮ್ಮದ್‌ ಶಾರೀಕ್‌, ಕೇಸರಿ ಭಯೋತ್ಪಾದಕರ ಭದ್ರಕೋಟೆಯಾದ ಕದ್ರಿಯಲ್ಲಿರುವ ಹಿಂದುತ್ವ ದೇವಾಲಯದ ಮೇಲೆ ದಾಳಿಗೆ ಪ್ರಯತ್ನ ಮಾಡಿದ್ದ. ಆದರೆ, ಈ ಕಾರ್ಯಾಚರಣೆಯು ಅದರ ಉದ್ದೇಶಗಳನ್ನು ಪೂರೈಸದಿದ್ದರೂ (ಆಕಸ್ಮಿಕವಾಗಿ ಸ್ಫೋಟವಾಗಿದ್ದರೂ) ನಾವು ಇದನ್ನು ಯಶಸ್ವಿ ಕಾರ್ಯಾಚರಣೆ ಎಂದೇ ಕರೆಯುತ್ತೇವೆ. ‘ವಾಂಟೆಡ್‌’ ಆಗಿದ್ದುಕೊಂಡು ರಾಜ್ಯ ಮತ್ತು ಕೇಂದ್ರ ಗುಪ್ತಚರ ಏಜೆನ್ಸಿಗಳ ಕಣ್ಗಾವಲಿನಿಂದ ತಪ್ಪಿಕೊಂಡು ಯೋಜಿಸಿ ದಾಳಿಯನ್ನು ನಡೆಸಿದ್ದಾನೆ. ಬಾಂಬ್‌ನ ಅಕಾಲಿಕ ಸ್ಫೋಟದ ಕಾರಣದಿಂದ ಸಹೋದರನ ಬಂಧನ ಆಗಿದ್ದರೂ, ಇಂಥದ್ದೊಂದು ಕಾರ್ಯಾಚರಣೆಯ ಸಾಧ್ಯತೆ ಇದೆ ಎನ್ನುವುದು ಸಾಬೀತಾಗಿದೆ’ ಎಂದು ಬರೆಯಲಾಗಿದೆ.

ಎಡಿಜಿಪಿಗೆ ಬೆದರಿಕೆ:

‘ಸಹೋದರನ ಬಂಧನದಿಂದ ಸಂತೋಷಪಡುತ್ತಿರುವವರಿಗೆ ವಿಶೇಷವಾಗಿ, ಎಡಿಜಿಪಿ ಅಲೋಕ್‌ ಕುಮಾರ್‌ ಅಂಥವರಿಗೆ, ನಿಮ್ಮ ಸಂತೋಷ ಅಲ್ಪಕಾಲಿಕ. ನಿಮ್ಮ ದಬ್ಬಾಳಿಕೆಯ ಫಲ ಶೀಘ್ರದಲ್ಲೇ ಸಿಗಲಿದೆ ಎಂದು ನಾವು ಹೇಳುತ್ತೇವೆ, ನೀವು ನಮ್ಮ ದೃಷ್ಟಿಯಲ್ಲಿದ್ದೀರಿ’ ಎಂದೂ ಬೆದರಿಕೆಯೊಡ್ಡಲಾಗಿದೆ.

ದಬ್ಬಾಳಿಕೆಗೆ ಪ್ರತೀಕಾರ:

‘ನೀವು ಯಾಕೆ ದಾಳಿ ಮಾಡಿದ್ದೀರಿ ಎಂದು ಕೇಳುವವರಿಗೆ ನಾವು ಉತ್ತರಿಸಲು ಬಯಸುತ್ತೇವೆ. ನಮ್ಮನ್ನು ಹತ್ತಿಕ್ಕಲು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡಲು ದಬ್ಬಾಳಿಕೆಯ ಕಾನೂನುಗಳನ್ನು ಜಾರಿಗೆ ತಂದಿರುವುದರಿಂದ, ನಮ್ಮ ಅಮಾಯಕರು ಜೈಲುಗಳಲ್ಲಿ ಕೊಳೆಯುತ್ತಿರುವ ಕಾರಣ ನಾವು ಪ್ರತೀಕಾರ ತೀರಿಸಿಕೊಳ್ಳುತ್ತಿದ್ದೇವೆ. ಮುಸ್ಲಿಮರಾಗಿ ನಾವು ದಬ್ಬಾಳಿಕೆಯನ್ನು ಎದುರಿಸಿದಾಗ ಜಿಹಾದ್‌ ನಡೆಸಲು ಆದೇಶಿಸಲಾಗಿದೆ’ ಎಂದು ಪತ್ರದಲ್ಲಿ ಹೇಳಲಾಗಿದೆ.

ಸತ್ಯಾಸತ್ಯತೆ ತನಿಖೆ:

ಡಾರ್ಕ್ ವೆಬ್‌ನಲ್ಲಿ ಪ್ರಕಟವಾದ ಈ ಪತ್ರ ಕೈಸೇರುತ್ತಿದಂತೆ ಎನ್‌ಐಎ ಅಧಿಕಾರಿಗಳು ಇದರ ಸತ್ಯಾಸತ್ಯತೆಯ ತನಿಖೆಗೆ ಮುಂದಾಗಿದ್ದಾರೆ. ಉಗ್ರ ಸಂಘಟನೆಗಳ ರೀತಿಯಲ್ಲೇ ಘಟನೆಯ ಹೊಣೆ ಹೊತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಐಆರ್‌ಸಿ ಎನ್ನುವ ಸಂಘಟನೆ ಹೊಸದಾಗಿ ಹುಟ್ಟಿಕೊಂಡಿದ್ದೇ? ಅಥವಾ ಇದೊಂದು ಡಾರ್ಕ್ ವೆಬ್‌ನ ಗ್ರೂಪ್‌ ಮಾತ್ರವೇ? ಜಾಗತಿಕ ಉಗ್ರ ಸಂಘಟನೆಗಳ ಜತೆ ಇದಕ್ಕಿರುವ ಸಂಪರ್ಕ ಎಂಥದ್ದು? ಈ ಸಂಘಟನೆ ಜತೆ ಯಾರೆಲ್ಲ ಗುರುತಿಸಿಕೊಂಡಿದ್ದಾರೆ? ಶಾರೀಕ್‌ನ ಜತೆ ಈ ಹಿಂದೆ ಗುರುತಿಸಿಕೊಂಡಿರುವ ಇತರರೂ ಈ ಸಂಘಟನೆಯ ಸದಸ್ಯರೇ? ಇತ್ಯಾದಿ ಎಲ್ಲ ಅಂಶಗಳ ಬಗ್ಗೆಯೂ ಐಎನ್‌ಎ ತನಿಖೆ ಮುಂದುವರಿದಿದೆ.

ಸಂಘನಿಕೇತನ ಲೊಕೇಶನ್‌ ಸರ್ಚ್:

ಶಾರೀಕ್‌ ಮೈಸೂರಿನಿಂದ ಪಡೀಲ್‌ಗೆ ಬಸ್‌ನಲ್ಲಿ ಬರುವಾಗ ತನ್ನ ಮೊಬೈಲ್‌ನ ಗೂಗಲ್‌ ಮ್ಯಾಪ್‌ನಲ್ಲಿ ಮಣ್ಣಗುಡ್ಡೆ-ಗಾಂಧಿನಗರವನ್ನು ಹಲವು ಬಾರಿ ಸಚ್‌ರ್‍ ಮಾಡಿರುವುದು ಗೊತ್ತಾಗಿದೆ. ನ.19ರಂದು ಮಣ್ಣಗುಡ್ಡೆಯಲ್ಲಿರುವ ಆರೆಸ್ಸೆಸ್‌ನ ಸಂಘನಿಕೇತನದಲ್ಲಿ ಕನ್ನಡ ಶಾಲಾ ಮಕ್ಕಳ ಹಬ್ಬ ಆಚರಿಸಲಾಗಿತ್ತು. ಸಾವಿರಾರು ಮಕ್ಕಳು ಮಾತ್ರವಲ್ಲದೆ, ಬಿಜೆಪಿಯ ಹಲವು ಮುಖಂಡರು ಇದರಲ್ಲಿ ಭಾಗವಹಿಸಿದ್ದರು. ಈ ಹಿನ್ನೆಲೆಯಲ್ಲಿ ಆತ ಲೊಕೇಶನ್‌ ಸಚ್‌ರ್‍ ಮಾಡಿರುವ ಸಾಧ್ಯತೆ ಬಗ್ಗೆಯೂ ತನಿಖೆ ನಡೆದಿದೆ.

ಇದು ವಿಧಿ ವಿಚಿತ್ರ. ಆತನಿಗೆ ಯಾಕೆ ಈ ಮನಸ್ಥಿತಿ ಬಂತೋ ಗೊತ್ತಿಲ್ಲ. ಕದ್ರಿ ದೇವಾಲಯದಲ್ಲಿ ಸ್ಫೋಟ ಮಾಡಿರುತ್ತಿದ್ದರೆ ಸಾಕಷ್ಟುಅಮಾಯಕರಿಗೆ ತೊಂದರೆಯಾಗುತ್ತಿತ್ತು. ಮಂಜುನಾಥನ ಶಕ್ತಿ ಅವನ ಕೃತ್ಯಕ್ಕೆ ತಡೆ ನೀಡಿದೆ. ಕಾನೂನಿನ ಜತೆ ಸರ್ವಶಕ್ತ ಭಗವಂತನು ನಮ್ಮನ್ನು ಕಾಪಾಡಿದ್ದಾನೆ.

- ಪ್ರದೀಪ್‌ ಕುಮಾರ್‌ ಕಲ್ಕೂರ, ಕದ್ರಿ ದೇವಸ್ಥಾನ ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ

ಮುಸ್ಲಿಮರ ವ್ಯಾಪಾರ ನಿರ್ಬಂಧಕ್ಕೆ ಪ್ರತೀಕಾರ?

‘ನಮ್ಮ ಧರ್ಮದಲ್ಲಿ ನಡೆಸಲಾಗುತ್ತಿರುವ ಹಸ್ತಕ್ಷೇಪ ಮತ್ತು ದಬ್ಬಾಳಿಕೆಗೆ ಪ್ರತೀಕಾರ ತೀರಿಸಿಕೊಳ್ಳುತ್ತೇವೆ’ ಐಆರ್‌ಸಿ ಸಂಘಟನೆ ಹೇಳಿಕೊಂಡಿದೆ. ಈ ಹಿಂದೆ ಕರಾವಳಿಯಲ್ಲಿ ಅನೇಕ ಹಿಂದೂ ದೇಗುಲಗಳ ಜಾತ್ರೆಗಳಲ್ಲಿ ಮುಸ್ಲಿಮರಿಗೆ ವ್ಯಾಪಾರದ ಅವಕಾಶ ನಿರಾಕರಿಸಲಾಗಿತ್ತು. ಅದಕ್ಕೆ ಪ್ರತೀಕಾರ ತೀರಿಸಿಕೊಳ್ಳಲು ದೇಗುಲಗಳನ್ನು ಟಾರ್ಗೆಟ್‌ ಮಾಡಲಾಗಿದೆಯೇ ಎಂಬ ಶಂಕೆ ವ್ಯಕ್ತವಾಗಿದೆ.

ಸ್ಯಾಟಲೈಟ್‌ ಫೋನ್‌ ಬಳಸಿರುವುದು ಪತ್ತೆ

ಮಂಗಳೂರು: ಕುಕ್ಕರ್‌ ಬಾಂಬ್‌ ಸ್ಫೋಟದ ಹಿಂದಿನ ದಿನವಾದ ನ.18ರಂದು ಬಂಟ್ವಾಳದ ಕಕ್ಕಿಂಜೆ ಸೇರಿದಂತೆ 2 ಕಡೆ ಹಾಗೂ ಉಡುಪಿಯ ಒಂದು ಕಡೆ ನಿಷೇಧಿತ ಸ್ಯಾಟಲೈಟ್‌ ಫೋನ್‌ ಬಳಕೆಯಾಗಿರುವುದು ಪತ್ತೆಯಾಗಿದೆ. ಹೀಗಾಗಿ ಬಾಂಬ್‌ ಸ್ಫೋಟಕ್ಕೂ, ಸ್ಯಾಟಲೈಟ್‌ ಫೋನ್‌ಗೂ ಸಂಬಂಧ ಇದೆಯೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.

ಮಂಗಳೂರು ಸ್ಫೋಟ ಪ್ರಕರಣ: ಅಲೋಕ್‌ ಕುಮಾರ್‌ಗೆ ಐಆರ್​ಸಿ ಬೆದರಿಕೆ

ಯುಎಪಿಎ ಕಾಯ್ದೆ ಅಡಿ ಎನ್‌ಐಎ ತನಿಖೆ: ಆರಗ

ಬೆಂಗಳೂರು: ಮಂಗಳೂರಿನ ಆಟೋರಿಕ್ಷಾದಲ್ಲಿ ಸಂಭವಿಸಿದ ಕುಕ್ಕರ್‌ ಬಾಂಬ್‌ ಸ್ಫೋಟ ಪ್ರಕರಣದ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ)ಗೆ ವಹಿಸಿ ಗುರುವಾರ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ (ಯುಎಪಿಎ) ಅಡಿ ತನಿಖೆ ನಡೆಸಲು ಶಿಫಾರಸು ಮಾಡಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.