ರಾಜ್ಯದಲ್ಲಿ ತೀವ್ರ ಮಳೆ ಕೊರತೆಯಿಂದ ಜಲಾಶಯಗಳು ಬರಿದಾಗಿದ್ದರೂ, ಕಾವೇರಿ ನೀರು ನಿಯಂತ್ರಣ ಸಮಿತಿಯು (CWRC) ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ಪ್ರತಿದಿನ 3,500 ಕ್ಯೂಸೆಕ್ ನೀರು ಹರಿಸುವಂತೆ ಕರ್ನಾಟಕಕ್ಕೆ ಶಿಫಾರಸು ಮಾಡಿದೆ. ಕರ್ನಾಟಕದ ವಾದವನ್ನು ಪರಿಗಣಿಸದ ಈ ಆದೇಶದಿಂದಾಗಿ ರಾಜ್ಯದ ರೈತರು ಹಾಗೂ ಬೆಂಗಳೂರು ಸೇರಿದಂತೆ ಹಲವು ನಗರಗಳ ಜನರಲ್ಲಿ ಆತಂಕ ಮೂಡಿದೆ.

ನವದೆಹಲಿ / ಬೆಂಗಳೂರು (ಜು.28): ರಾಜ್ಯದಲ್ಲಿ ಮಳೆ ಕೊರತೆಯಿಂದ ಕಾವೇರಿ ನದಿಯ ಕೆಆರ್‌ಎಸ್ ಜಲಾಶಯದಲ್ಲಿ ನೀರಿಲ್ಲದೇ ಬೆಂಗಳೂರು, ಮೈಸೂರು, ಮಂಡ್ಯ, ರಾಮನಗರ ಸೇರಿದಂತೆ ಹಲವು ಜಿಲ್ಲೆಗಳ ಜನರು ಪರದಾಡುತ್ತಿದ್ದಾರೆ. ಕರ್ನಾಟಕದಲ್ಲಿ ಮಳೆಯಿಲ್ಲದೇ ರೈತರು ಸಂಕಷ್ಟಕ್ಕೆ ಸಿಲುಕಿರುವಾಗ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,000 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.

ದೆಹಲಿಯಲ್ಲಿ ಮಂಗಳವಾರ ನಡೆದ ಕಾವೇರಿ ನೀರು ನಿಯಂತ್ರಣ ಸಮಿತಿಯ (Cauvery Water Regulation Committee - CWRC) ಮಹತ್ವದ ಸಭೆ ಮುಕ್ತಾಯಗೊಂಡಿದ್ದು, ನೆರೆ ರಾಜ್ಯ ತಮಿಳುನಾಡಿಗೆ (Tamil Nadu) ಮತ್ತೊಮ್ಮೆ ನೀರು ಹರಿಸುವಂತೆ ಕರ್ನಾಟಕಕ್ಕೆ ಆದೇಶ ನೀಡಲಾಗಿದೆ. ಮುಂದಿನ 15 ದಿನಗಳ ಕಾಲ ನಿರಂತರವಾಗಿ ದಿನಕ್ಕೆ 3,500 ಕ್ಯೂಸೆಕ್ ಕಾವೇರಿ ನೀರನ್ನು (Cusecs Water) ಬಿಡುಗಡೆ ಮಾಡುವಂತೆ ಸಮಿತಿಯು ಶಿಫಾರಸು ಮಾಡಿದೆ.

15 ದಿನಗಳ ಕಾಲ ನೀರು ಬಿಡಲು ಸೂಚನೆ:

ನವದೆಹಲಿಯಲ್ಲಿ ನಡೆದ ವೀಡಿಯೋ ಕಾನ್ಫರೆನ್ಸ್ ಸಭೆಯಲ್ಲಿ ಕಾವೇರಿ ಜಲಾನಯನ ಪ್ರದೇಶದ ಜಲಾಶಯಗಳ ನೀರಿನ ಲಭ್ಯತೆ, ಮಳೆಯ ಪ್ರಮಾಣ ಹಾಗೂ ಕುಡಿಯುವ ನೀರಿನ ಅಗತ್ಯತೆಯನ್ನು ಪರಾಮರ್ಶಿಸಿದ ಸಮಿತಿಯು, ತಮಿಳುನಾಡಿಗೆ ಇಂದಿನಿಂದಲೇ ಜಾರಿಗೆ ಬರುವಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ 3,500 ಕ್ಯೂಸೆಕ್ ನೀರು ಬಿಡಲು ನಿರ್ದೇಶನ ನೀಡಿದೆ.

ಕರ್ನಾಟಕದ ವಾದ ತಿರಸ್ಕೃತ?

ಸಭೆಯಲ್ಲಿ ಕರ್ನಾಟಕದ ಜಲಸಂಪನ್ಮೂಲ ಇಲಾಖೆಯ (Water Resources Dept) ಅಧಿಕಾರಿಗಳು ಮತ್ತು ತಜ್ಞರ ತಂಡವು ರಾಜ್ಯದಲ್ಲಿ ಎದುರಾಗಿರುವ ತೀವ್ರ ಮಳೆ ಕೊರತೆ ಹಾಗೂ ಜಲಾಶಯಗಳಲ್ಲಿನ ಕಡಿಮೆ ನೀರಿನ ಮಟ್ಟದ ಬಗ್ಗೆ ವಿವರವಾದ ಮಾಹಿತಿ ನೀಡಿದ್ದರು. ಹಾರಂಗಿ ಹೊರತುಪಡಿಸಿ ಕೆಆರ್‌ಎಸ್ (KRS Dam), ಕಬಿನಿ, ಹೇಮಾವತಿ ಜಲಾಶಯಗಳಲ್ಲಿ ನೀರಿನ ಸಂಗ್ರಹ ಕಡಿಮೆಯಾಗಿದ್ದು, ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳ ಕುಡಿಯುವ ನೀರಿಗೆ ಮತ್ತು ಸ್ಥಳೀಯ ರೈತರ ಬೆಳೆಗೆ ನೀರಿಲ್ಲ ಎಂದು ಬಲವಾಗಿ ವಾದ ಮಂಡಿಸಲಾಗಿತ್ತು. ಆದಾಗ್ಯೂ, ಸಮಿತಿಯು ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿರುವುದು ಕರ್ನಾಟಕದ ರೈತರಲ್ಲಿ ತೀವ್ರ ಕಳವಳ ಮೂಡಿಸಿದೆ.

ಪ್ರಾಧಿಕಾರಕ್ಕೆ ಮೇಲ್ಮನವಿ ಸಾಧ್ಯತೆ:

CWRC ನೀಡಿರುವ ಈ ಆದೇಶದಿಂದಾಗಿ ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದ ಜನರಿಗೆ ಮತ್ತೆ ನೀರಿನ್‌ ಅಭಾವ ಎದುರಾಗುವ ಭೀತಿ ಶುರುವಾಗಿದೆ. ಹೀಗಾಗಿ ಕಾವೇರಿ ನೀರು ನಿಯಂತ್ರಣ ಸಮಿತಿಯ ಈ ತೀರ್ಮಾನದ ವಿರುದ್ಧ ಕರ್ನಾಟಕ ಸರ್ಕಾರವು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೆ (CWMA) ಮೇಲ್ಮನವಿ ಸಲ್ಲಿಸುವ ಸಾಧ್ಯತೆಯಿದೆ.