ಮಂಡ್ಯ ಗಲಾಟೆ: ದಕ್ಷಿಣ ವಲಯ ಡಿಐಜಿ ಬೋರಲಿಂಗಯ್ಯ ಎತ್ತಂಗಡಿ, ಡಿಐಜಿ ಅಮಿತ್ ಸಿಂಗ್ ನೇಮಕ
ಮಂಡ್ಯ ಜಿಲ್ಲೆ ಕೆರಗೋಡು ಹನುಮ ಧ್ವಜ ಗಲಾಟೆ ಬೆನ್ನಲ್ಲೇ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ಬೆಂಗಳೂರು (ಫೆ.2): ಮಂಡ್ಯ ಜಿಲ್ಲೆ ಕೆರಗೋಡು ಹನುಮ ಧ್ವಜ ಗಲಾಟೆ ಬೆನ್ನಲ್ಲೇ ದಕ್ಷಿಣ ವಲಯ ಡಿಐಜಿ ಡಾ.ಎಂ.ಬಿ.ಬೋರಲಿಂಗಯ್ಯ ಅವರನ್ನು ದಿಢೀರ್ ವರ್ಗಾವಣೆಗೊಳಿಸಿ ರಾಜ್ಯ ಸರ್ಕಾರ ಗುರುವಾರ ಆದೇಶಿಸಿದೆ.
ದಕ್ಷಿಣ ವಲಯದಿಂದ ಪಶ್ಚಿಮ ವಲಯ (ಮಂಗಳೂರು)ಕ್ಕೆ ಬೋರಲಿಂಗಯ್ಯ ಅವರು ವರ್ಗವಾಗಿದ್ದು, ಅವರಿಂದ ತೆರವಾದ ಸ್ಥಾನಕ್ಕೆ ಪಶ್ಚಿಮ ವಲಯ ಡಿಐಜಿಯಾಗಿದ್ದ ಅಮಿತ್ ಸಿಂಗ್ ನೇಮಕಗೊಂಡಿದ್ದಾರೆ. ನಾಲ್ಕು ತಿಂಗಳ ಹಿಂದಷ್ಟೇ ಬೆಳಗಾವಿ ಆಯುಕ್ತರಾಗಿದ್ದ ಬೋರಲಿಂಗಯ್ಯ ಅವರು ದಕ್ಷಿಣ ವಲಯ ಡಿಐಜಿಯಾಗಿ ನಿಯೋಜಿತರಾಗಿದ್ದರು. ಈಗ ಕೆರೆಗೋಡು ಹನುಮತ ಧ್ವಜ ಗಲಾಟೆ ಬೆನ್ನಲ್ಲೇ ಡಿಐಜಿರವರ ವರ್ಗ ಸಹಜವಾಗಿ ಚರ್ಚೆ ಹುಟ್ಟು ಹಾಕಿದೆ. ಇನ್ನೊಂದೆಡೆ ಬೋರಲಿಂಗಯ್ಯ ಅವರು ಮಂಡ್ಯ ಜಿಲ್ಲೆ ಮದ್ದೂರು ತಾಲೂಕಿನ ಕೆಸ್ತೂರು ಗ್ರಾಮದವರಾಗಿದ್ದಾರೆ. ಹೀಗಾಗಿ ಲೋಕಸಭಾ ಚುನಾವಣೆ ಹಿನ್ನಲೆ ತವರು ಜಿಲ್ಲೆಯಿಂದ ಅವರನ್ನು ವರ್ಗಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬಂದಿವೆ.
ಕಾಂಗ್ರೆಸ್ ಹಿಂದಿನಿಂದಲೂ ದೇಶ ಒಡೆಯುವ ಕೆಲಸ ಮಾಡುತ್ತಿದೆ: ಈಶ್ವರಪ್ಪ ವಾಗ್ದಾಳಿ
ನಾಲ್ಕೇ ತಿಂಗಳಿಗೆ ಡಿಸಿಪಿ ವರ್ಗ:
ಐಪಿಎಸ್ ಅಧಿಕಾರಿ ಶಿವಪ್ರಕಾಶ್ ದೇವರಾಜ್ ಅವರಿಗೆ ನಾಲ್ಕು ತಿಂಗಳ ಅವಧಿಯಲ್ಲಿ ಮೂರನೇ ಬಾರಿ ವರ್ಗಾವಣೆಯಾಗಿದೆ. ಈ ಮೊದಲು ಬೆಂಗಳೂರು ಉತ್ತರ ವಿಭಾಗದ ಡಿಸಿಪಿಯಾಗಿದ್ದ ಅವರನ್ನು ಅಲ್ಲಿಂದ ಡಿಜಿಪಿ ಕಚೇರಿಗೆ ವರ್ಗ ಮಾಡಿದ ಸರ್ಕಾರ, ಕೆಲ ದಿನಗಳ ಬಳಿಕ ಬೆಂಗಳೂರು ದಕ್ಷಿಣ (ಸಂಚಾರ) ವಿಭಾಗಕ್ಕೆ ಎತ್ತಂಗಡಿ ಮಾಡಿತು. ಈಗ ಕಲಬುರಗಿ ಜಿಲ್ಲೆ ಎಸ್ಪಿಯಾಗಿ ಶಿವಪ್ರಕಾಶ್ ದೇವರಾಜ್ ಅವರನ್ನು ನಿಯೋಜಿಸಿ ಗುರುವಾರ ಸರ್ಕಾರ ಆದೇಶಿಸಿದೆ. ಕಲಬುರಗಿ ಎಸ್ಪಿಯಾಗಿದ್ದ ಶ್ರೀನಿವಾಸಲು ಅವರಿಗೆ ಬೆಂಗಳೂರು ದಕ್ಷಿಣ (ಸಂಚಾರ) ವಿಭಾಗದ ಡಿಸಿಪಿ ಹುದ್ದೆ ನೀಡಲಾಗಿದೆ.
ಮಂಡ್ಯದ ಹನುಮಧ್ವಜ ವಿವಾದಿತ ಕೆರಗೋಡು ಗ್ರಾಮಕ್ಕೆ ನಾನು ಬೇಕಂತಲೇ ಹೋಗಿಲ್ಲ; ಸಂಸದೆ ಸುಮಲತಾ
ಪಿಐ-ಡಿವೈಎಸ್ಪಿಗಳ ವರ್ಗಾವಣೆ:
ಮತ್ತೊಂದೆಡೆ 13 ಡಿವೈಎಸ್ಪಿಗಳು ಹಾಗೂ 30 ಇನ್ಸ್‌ಪೆಕ್ಟರ್‌ಗಳನ್ನು ಸಾಮಾನ್ಯ ವರ್ಗಾವಣೆ ಮಾಡಿದ ಡಿಜಿಪಿ ಅವರು, ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಪ್ರತ್ಯೇಕವಾಗಿ 187 ಇನ್ಸ್‌ಪೆಕ್ಟರ್‌ಗಳನ್ನು ಸಹ ವರ್ಗಾಯಿಸಿದ್ದಾರೆ.